ಎರಡು ಭಾರತದಲ್ಲಿ ಮುಖಾಮುಖಿ
ದೇಶದಲ್ಲಿ ಈಗ ಎರಡು ಭಾರತಗಳು ಮುಖಾಮುಖಿಯಾಗಿ ನಿಂತಿವೆ. ಎರಡು ಭಾರತಗಳ ನಡುವಿನ ಸಂಘರ್ಷ ಈಗ ತಾರ್ಕಿಕ ಹಂತಕ್ಕೆ ತಲುಪಿದೆ. ಇವುಗಳಲ್ಲಿ ಒಂದು ಬಾಬಾ ಸಾಹೇಬ್ ಅಂಬೇಡ್ಕರ್ ದಲಿತ ಶೋಷಿತ ಭಾರತವಾದರೆ, ಇನ್ನೊಂದು ಸಾವರ್ಕರ್, ಹೆಡ್ಗೆವಾರರ ಶೋಷಕ, ಮನುವಾದಿ ಭಾರತ. ಬುದ್ಧ, ಬಸವಣ್ಣನವರ ಹಿನ್ನೆಲೆ ಹೊಂದಿದ ಅಂಬೇಡ್ಕರ್ ಭಾರತದಲ್ಲಿ ಭಗತ್‌ಸಿಂಗ್, ಗಾಂಧಿ, ಲೋಹಿಯಾ, ಮಾರ್ಕ್ಸ್‌ಹೀಗೆ ಎಲ್ಲಾ ಮಾನವಪರ ಚೇತನಗಳಿವೆ. ಸಾವರ್ಕರ್, ಗೋಳ್ವಾಲ್ಕರ್ ಭಾರತದಲ್ಲಿ ಮನು, ದ್ರೋಣಾಚಾರ್ಯ ಮುಂತಾದವರು ಇದ್ದಾರೆ. ಸಮಾನತೆಯತ್ತ ಸಾಗಬೇಕಿದ್ದ ಜಾತ್ಯತೀತ ಭಾರತವನ್ನು ಅಸಮಾನತೆಯ ಕಂದಕಕ್ಕೆ ತಳ್ಳಿ ವರ್ಣಾಶ್ರಮ ಪದ್ಧತಿಯನ್ನು ಮತ್ತೆ ದೇಶದ ಮೇಲೆ ಹೇರಲು ಹೊರಟಿರುವ ಕೋಮುವಾದಿ ಶಕ್ತಿಗಳು ಮೋದಿ ಅಧಿಕಾರಕ್ಕೆ ಬಂದ ನಂತರ ಹೆಚ್ಚು ಆಕ್ರಮಣಶೀಲ ಆಗಿವೆ. ಅಂತಲೇ ಈ ಎರಡೂ ಭಾರತಗಳ ನಡುವಿನ ಸಂಘರ್ಷ ತೀವ್ರಗೊಂಡಿದೆ.
ಬಹುಧರ್ಮೀಯ, ಬಹುಜನಾಂಗೀಯ, ಬಹುಸಂಸ್ಕೃತಿಗಳ ತವರುಭೂಮಿಯಾದ ಭಾರತ ಸೆಕ್ಯುಲರ್ ಆಗಿದ್ದರೆ ಮಾತ್ರ ಸುರಕ್ಷಿತವಾಗಿರುತ್ತದೆ ಎಂದು ಬಾಬಾ ಸಾಹೇಬರು ನಮ್ಮ ದೇಶಕ್ಕೆ, ಅದರ ಮುನ್ನಡೆಗೆ ಸಂವಿಧಾನದ ಬೆಳಕನ್ನು ನೀಡಿದರು. ಈ ಸಂವಿಧಾನ ಬೆಳಕನ್ನು ಸಹಿಸಲು ಕತ್ತಲುಪ್ರಿಯ ಶಕ್ತಿಗಳಿಗೆ ಸಾಧ್ಯವಾಗುತ್ತಿಲ್ಲ. ದೇಶವನ್ನು ಮತ್ತೆ ಸಾವಿರಾರು ವರ್ಷಗಳ ಹಿಂದಿನ ಗುಲಾಮಗಿರಿ ಕೂಪಕ್ಕೆ ತಳ್ಳುವುದು ಇವರ ರಹಸ್ಯ ಕಾರ್ಯಸೂಚಿಯಾಗಿದೆ. ಅದಕ್ಕಾಗಿ ಹಿಂದೂ ರಾಷ್ಟ್ರ ಸ್ಥಾಪನೆ ಮಾತನ್ನು ಇವರು ಆಡುತ್ತಿದ್ದಾರೆ. ಇದರ ಅಪಾಯವನ್ನು 75 ವರ್ಷಗಳ ಹಿಂದೆ ಅರಿತಿದ್ದ ಬಾಬಾ ಸಾಹೇಬರು ಭಾರತ ಒಂದು ವೇಳೆ ಹಿಂದೂ ರಾಷ್ಟ್ರವಾದರೆ ನಾಶವಾಗಿ ಹೋಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ತಮ್ಮ ಬದುಕಿನುದ್ದಕ್ಕೂ ಇದನ್ನು ವಿರೋಧಿಸಿ ಹೋರಾಡಿದರು. ಹಿಂದೂ ಕೋಮುವಾದಿ ಸಂಟನೆಗಳನ್ನು ದೂರವಿಟ್ಟಿದ್ದರು.
ಮನುವಾದಿ ಹಿಂದೂ ರಾಷ್ಟ್ರ ಸ್ಥಾಪನೆಗೆ ಗಾಂಧಿ, ನೆಹರೂ ಅಂತಹ ಅಡ್ಡಿ ಆತಂಕಗಳನ್ನು ಪಕ್ಕಕ್ಕೆ ಸರಿಸಿದ ಸಂಘ ಪರಿವಾರಕ್ಕೆ ಅಂಬೇಡ್ಕರ್ ಎಂಬ ಬಂಡೆಗಲ್ಲನ್ನು ಸರಿಸಲು ಸಾಧ್ಯವಾಗುತ್ತಿಲ್ಲ. ಅಂತಲೇ ಹೇಗಾದರೂ ಮಾಡಿ, ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ಕಿತ್ತೊಗೆಯಲು ಹುನ್ನಾರ ನಡೆಸಿದ ಈ ಶಕ್ತಿಗಳು ಬಾಬಾ ಸಾಹೇಬರ ತೇಜೋವಧೆ ಮಾಡುತ್ತಿವೆ. ಇತ್ತೀಚೆಗೆ ಎಬಿವಿಪಿ ಮಾಜಿ ನಾಯಕ, ಸಂಘ ಪರಿವಾರದ ಕಟ್ಟಾ ಕಾರ್ಯಕರ್ತ ರಾವ್ ಬಹದ್ದೂರ್ ಹೇಳಿಕೆಯೊಂದನ್ನು ನೀಡಿ ಸಂವಿಧಾನದ ಕರಡು ಪ್ರತಿಯನ್ನು ಅಂಬೇಡ್ಕರ್ ಬರೆದಿಲ್ಲ ಎಂದು ವಿವಾದ ಉಂಟು ಮಾಡಿದ್ದಾರೆ. ಇದು ಆತ ನೀಡಿದ ಆಕಸ್ಮಿಕ ಹೇಳಿಕೆಯಲ್ಲ. ಈತನ ಮೂಲಕ ಸಂಘ ಪರಿವಾರ ಹೇಳಿಕೆ ನೀಡಿಸಿದೆ. ಅಂಬೇಡ್ಕರ್ ಬದುಕಿದ್ದಾಗಲೂ ಈ ಕರಾಳ ಶಕ್ತಿಗಳು ಅವರಿಗೆ ಇದೇ ರೀತಿ ಕಿರಿಕಿರಿ ನೀಡಿದ್ದವು. ಆಸ್ತಿ ಹಕ್ಕಿನಲ್ಲಿ ಮಹಿಳೆಗೆ ಪಾಲು ನೀಡುವ ಹಿಂದೂ ಕೋಡ್ ಬಿಲ್ಲನ್ನು ತರಲು ಬಾಬಾ ಸಾಹೇಬರು ವಿಧೇಯಕ ಮಂಡಿಸಿದಾಗ, ಇದೇ ಮನುವಾದಿ ಶಕ್ತಿಗಳು ಅಡ್ಡಗಾಲು ಹಾಕಿದ್ದವು. ಜನಸಂಘದ ಸಂಸ್ಥಾಪಕರಾದ ಶ್ಯಾಮಪ್ರಸಾದ ಮುಖರ್ಜಿ ಆಗ ಅಂಬೇಡ್ಕರ್ ಅವರನ್ನು ಕಟುವಾಗಿ ಟೀಕಿಸಿದ್ದರು.
ಸ್ವಾತಂತ್ರ್ಯ ನಂತರ ಅಂಬೇಡ್ಕರ್ ವಿರುದ್ಧ ಸಂಘ ಪರಿವಾರದ ಮಸಲತ್ತು ನಿಲ್ಲಲಿಲ್ಲ. ಆರೆಸ್ಸೆಸ್ ಸಿದ್ಧಾಂತಿ ಅರುಣ್ ಶೌರಿ ಅಂಬೇಡ್ಕರ್ ಅವರನ್ನು ತೇಜೋವಧೆ ಮಾಡುವ ಪುಸ್ತಕವನ್ನು ಬರೆದರು. ಅದನ್ನು ಸಂಘ ಪರಿವಾರವೇ ದೇಶದೆಲ್ಲೆಡೆ ಮಾರಾಟ ಮಾಡಿತು. ಆದರೆ ದಲಿತ, ಪ್ರಗತಿಪರ ಸಂಘಟನೆಗಳಿಂದ ತೀವ್ರ ಪ್ರತಿರೋಧ ಬಂದ ನಂತರ ಆರೆಸ್ಸೆಸ್ ಜಾರಿಕೊಂಡಿತು. ಈಗಲೂ ರಾವ್ ಬಹದ್ದೂರ್ ಮೂಲಕ ಹೇಳಿಕೆ ನೀಡಿಸಿ, ಅದಕ್ಕೆ ತೀವ್ರ ವಿರೋಧ ಬಂದ ನಂತರ ಅದು ಅವರ ವೈಯಕ್ತಿಕ ಅಭಿಪ್ರಾಯವೆಂದು ಆರೆಸೆಸ್ಸ್ ಜಾರಿಕೊಳ್ಳುತ್ತಿದೆ. ಅಂಬೇಡ್ಕರ್ ತೇಜೋವಧೆಗೆ ಯಾರಿಂದಲೂ ಪ್ರತಿರೋಧ ಬರೆದಿದ್ದರೆ, ಈಗ ಗಾಂಧಿ, ನೆಹರೂ ತೇಜೋವಧೆ ಮುಂದುವರಿಸಿದಂತೆ ಅಂಬೇಡ್ಕರ್ ಅವರ ತೇಜೋವಧೆ ಮುಂದುವರಿಸಿ ಸಮಾನತೆ ಕನಸು ನುಚ್ಚುನೂರು ಮಾಡುವುದು ಅದರ ಉದ್ದೇಶವಾಗಿದೆ.
ಸಂಘ ಪರಿವಾರದ ದಲಿತ ದ್ವೇಷ ಈಗ ಗುಟ್ಟಾಗಿ ಉಳಿದಿಲ್ಲ. ಹೈದರಾಬಾದ್ ವಿಶ್ವವಿದ್ಯಾನಿಲಯದ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ, ದಿಲ್ಲಿಯ ಜೆಎನ್‌ಯು ವಿಶ್ವವಿದ್ಯಾನಿಲಯದ ಕನ್ಹಯ್ಯಾಕುಮಾರ್ ವಿರುದ್ಧ ನಡೆದ ಪಿತೂರಿ ಇವೆಲ್ಲ ಇಡೀ ದಲಿತ ಮತ್ತು ಪ್ರಗತಿಪರ ಚಳವಳಿಯನ್ನು ನಾಶ ಮಾಡುವ ಸಂಚಿನ ಭಾಗಗಳಾಗಿವೆ. ರೋಹಿತ್ ವೇಮುಲಾ ಪ್ರಕರಣದಲ್ಲಿ ಆತನ ಸಾವಿಗೆ ಕಾರಣವಾದ ಅಪ್ಪಾರಾವ್‌ನನ್ನು ರಕ್ಷಿಸುತ್ತ ಬಂದ ಮೋದಿ ಸರಕಾರ ಇದೀಗ ಆತನನ್ನು ಬದಲಿಸಿ ಆತನಿಗಿಂತಲೂ ದಲಿತ ವಿರೋಧಿ ಶ್ರೀವಾಸ್ತವ ಎಂಬ ಮನುವಾದಿಯನ್ನು ಕುಲಪತಿಯಾಗಿ ಹೈದರಾಬಾದ್‌ವಿವಿ ಮೇಲೆ ಹೇರಿದೆ. ಈತ ಅಪ್ಪಾರಾವ್‌ಗಿಂತ ಕುಖ್ಯಾತ ವ್ಯಕ್ತಿ. 2008ರಲ್ಲಿ ಸೆಂಥಿಲ್‌ಕುಮಾರ್ ಎಂಬ ದಲಿತ ವಿದ್ಯಾರ್ಥಿಯ ಸಾವಿಗೆ ಕಾರಣನಾದ ಪಾತಕಿ ಈತ. ಇಂತಹವನನ್ನು ನೇಮಕ ಮಾಡಿ, ರೋಹಿತ್ ಸಾವಿನ ಗಾಯಕ್ಕೆ ಬರೆ ಎಳೆದಿದೆ.
ಕಾರ್ಪೊರೇಟ್ ಬಂಡವಾಳಶಾಹಿಯ ಪಾದಸೇವೆ ಮಾಡುವ ಮೋದಿ ಸರಕಾರ ತನ್ನ ಎರಡು ವರ್ಷಗಳ ಆಡಳಿತದಲ್ಲಿ ಯಾವ ಸಾಧನೆಯೂ ಮಾಡದೇ ಸಂಪೂರ್ಣ ವಿಫಲಗೊಂಡಿದೆ. ತನ್ನ ವೈಫಲ್ಯ ಮುಚ್ಚಿಕೊಳ್ಳಲು ಭಾರತೀಯರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಹುನ್ನಾರ ನಡೆಸಿದೆ. ಒಂದೆಡೆ ಅಭಿವೃದ್ಧಿಯ ಮಾತನಾಡುತ್ತ, ಇನ್ನೊಂದೆಡೆ ಸಾಕ್ಷಿ ಮಹಾರಾಜ್, ಮಹಾಂತ ಆದಿತ್ಯನಾಥ, ಪ್ರವೀಣ್ ತೊಗಾಡಿಯಾ ಇಂತಹವರಿಗೆ ಜನಾಂಗ ದ್ವೇಷದ ವಿಷ ಬೀಜ ಬಿತ್ತಲು ಪ್ರಚೋದನೆ ನೀಡುತ್ತಿದೆ. ಪ್ರವೀಣ್ ತೊಗಾಡಿಯಾ ಅಂತಹವರು ಮುಸಲ್ಮಾನರ ಜೊತೆ ಹೊಡೆದಾಡಲು ಹಿಂದೂಗಳು ಹೆಚ್ಚು ಮಕ್ಕಳು ಹಡೆಯಬೇಕೆಂದು ಬಹಿರಂಗವಾಗಿ ಕರೆ ಕೊಡುತ್ತಿದ್ದಾರೆ. ಇಂತಹವರಿಗೆ ಚಿಕಿತ್ಸೆ ನೀಡಲು ದೇಶದಲ್ಲಿ ತುರ್ತಾಗಿ ಅಲ್ಲಲ್ಲಿ ಮನೋವೈದ್ಯಕೀಯ ಆಸ್ಪತ್ರೆ ಆರಂಭಿಸಬೇಕಿದೆ.
ಈ ಫ್ಯಾಶಿಸ್ಟ್ ಶಕ್ತಿಗಳು ಬರೀ ಹೇಳಿಕೆ ಮಾತ್ರ ನೀಡುತ್ತಿಲ್ಲ. ತನ್ನ ಅಭಿಪ್ರಾಯಗಳನ್ನು ವಿರೋಧಿಸುವ ಚಿಂತನಶೀಲರನ್ನು ಮುಗಿಸಲು ಕಾರ್ಯಾಚರಣೆಗೆ ಇಳಿದಿವೆ. ನರೇಂದ್ರ ದಾಭೋಳ್ಕರ್, ಗೋವಿಂದ್ ಪನ್ಸಾರೆ, ಡಾ. ಎಂ.ಎಂ.ಕಲಬುರ್ಗಿಯವರಂತಹ ಲೇಖಕರನ್ನು ಈ ಶಕ್ತಿಗಳು ಬಲಿ ತೆಗೆದುಕೊಂಡಿವೆ. ದಾಭೋಳ್ಕರ್ ಹತ್ಯೆ ಸಂಚಿನಲ್ಲಿ ಪಾಲ್ಗೊಂಡಿದ್ದ ಹಿಂದೂ ಜನಜಾಗೃತಿ ಸಮಿತಿ ಸದಸ್ಯ ವೀರೇಂದ್ರ ಸಿಂಗ್ ತಾವಡೆ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಮೋದಿ ಸರಕಾರ ಸಿಬಿಐ ಮೇಲೆ ಒತ್ತಡ ತಂದು ಈತನನ್ನು ಬಿಡಿಸಿದರೆ, ಅಚ್ಚರಿಪಡಬೇಕಿಲ್ಲ.
ಇದು ಇಂದಿನ ಭಾರತದ ಸ್ಥಿತಿ. ಮುಂಬರುವ ದಿನಗಳಲ್ಲಿ ಭಾರತ ಎತ್ತ ಹೋಗಬೇಕು ಎಂಬುದು ತೀರ್ಮಾನಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ದೇಶಕ್ಕೆ ಅಂಬೇಡ್ಕರ್ ತೋರಿಸಿದ ಬೆಳಕಿನ ದಾರಿ ಕಣ್ಣ ಮುಂದಿದೆ. ಇನ್ನೊಂದೆಡೆ ಶತಮಾನಗಳ ಹಿಂದೆ ದೇಶವನ್ನು ಕೊಂಡೊಯ್ಯುವ, ಶತಮಾನಗಳ ಹಿಂದಿನ ಕತ್ತಲ ಕೂಪಕ್ಕೆ ದೇಶವನ್ನು ತಳ್ಳುವ ಅಂಧಕಾರದ ದಾರಿ ಇದೆ. ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಅರಿವಿನ ಬೆಳಕಿಗೆ ಸದಾ ಗೆಲುವು ಇದ್ದೇ ಇರುತ್ತದೆ ಎಂಬದನ್ನು ನಾವು ಮರೆಯಬಾರದು.