ಆಸ್ತಿ ವಿವರಗಳನ್ನು ನೀಡುವ ಆಸಕ್ತಿಯಿಲ್ಲ, ಕೈದಿಗಳನ್ನು ನಿಯಂತ್ರಿಸಲು ಇಸ್ರೇಲ್ ಶೈಲಿ!
ಆಸ್ತಿಯ ವಿವರ ನೀಡದ ಮನಪಾ ಅಧಿಕಾರಿಗಳು, ನೌಕರರು!
ರಾಜ್ಯ ಸರಕಾರದ ಆದೇಶದ ಮೇರೆಗೆ ಮಹಾನಗರ ಪಾಲಿಕೆಯ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ತಮ್ಮ ಚರಾಸ್ತಿ- ಸ್ಥಿರಾಸ್ತಿಗಳ ಮಾಹಿತಿಯನ್ನು ನೀಡುವುದು ಅಗತ್ಯವಿದೆ. ಹಾಗಾಗಿ ಯಾರು ಈ ತನಕ ತಮ್ಮ ಆಸ್ತಿಯ ವಿವರ ನೀಡಿಲ್ಲವೋ ಅವರು ಮನಪಾಕ್ಕೆ ಶೀಘ್ರವೇ ಮಾಹಿತಿಯನ್ನು ನೀಡಬೇಕು ಎಂದು ನವಿ ಮುಂಬಯಿಯ ಮಹಾನಗರದ ಪಾಲಿಕೆ ಆಯುಕ್ತರಾದ ತುಕಾರಾಮ ಮುಂಢೆ ಆದೇಶ ಜಾರಿಗೊಳಿಸಿದ್ದಾರೆ. ಇದರಿಂದಾಗಿ ನವಿಮುಂಬೈ ಮನಪಾ ನೌಕರರಲ್ಲಿ ಭಯ ಉಂಟಾಗಿದೆ. ನವಿಮುಂಬೈ ಮನಪಾದಲ್ಲಿ 2,200ರಷ್ಟು ನೌಕರರಿದ್ದಾರೆ. ರಾಜ್ಯ ಸರಕಾರದ ನಿಯಮಾನುಸಾರ ಈ ಮೊದಲು ಐದು ವರ್ಷಕ್ಕೊಮ್ಮೆ ಆಸ್ತಿಯ ವಿವರ ಘೋಷಣೆ ಮಾಡಬೇಕಿತ್ತು. ಆ ನಂತರ ಈ ಅವಧಿ ಕಡಿತಗೊಂಡು ಎರಡು ವರ್ಷ ಮಾಡಲಾಯಿತು. ಆದರೆ ಈಗ ಪ್ರತೀ ವರ್ಷ ಸರಕಾರಿ ನೌಕರರು ತಮ್ಮ ಸ್ಥಿರ-ಚರ ಆಸ್ತಿಗಳ ವಿವರ ನೀಡುವುದು ಅನಿವಾರ್ಯವಾಗಿದೆ. ಎಲ್ಲ ಸರಕಾರಿ ಮತ್ತು ಅರೆ ಸರಕಾರಿ ಅಧಿಕಾರಿಗಳು - ನೌಕರರು ತಮ್ಮ ಆಸ್ತಿಯ ಜೊತೆ ಪರಿವಾರದ ಸದಸ್ಯರ ಬಗ್ಗೆಯೂ ಎಲ್ಲ ಮಾಹಿತಿ ನೀಡಬೇಕಾಗಿದೆ.
ನವಿಮುಂಬೈ ಮನಪಾದ ಕೆಲವು ಅಧಿಕಾರಿಗಳು ಮತ್ತು ನೌಕರರ ಬಳಿ ಅಧಿಕ ಸಂಪತ್ತು ಇರುವ ಆರೋಪಗಳಿವೆ. ಕೆಲವು ಅಧಿಕಾರಿಗಳು ಬಿಲ್ಡರ್ ಜೊತೆ ಪಾಲುದಾರರೂ ಆಗಿದ್ದಾರೆ. ಕೆಲವು ಅಧಿಕಾರಿ, ನೌಕರರು ತಮ್ಮದೇ ಸ್ವಂತ ಅಂಗಡಿಗಳನ್ನೂ ಹೊಂದಿದ್ದಾರೆ.
ಆದರೆ ನವಿಮುಂಬೈ ಮನಪಾದ ಅನೇಕ ಅಧಿಕಾರಿ - ನೌಕರರಿಗೆ ತಮ್ಮ ಆಸ್ತಿಪಾಸ್ತಿಯ ವಿವರ ನೀಡುವಲ್ಲಿ ಯಾವುದೇ ಆಸಕ್ತಿಯೂ ಇಲ್ಲವಂತೆ. ನೀಡದಿರುವುದಕ್ಕೆ ಭಯವೂ ಇಲ್ಲವಂತೆ.
* * *
ಲೋಕಲ್ ರೈಲು ದುರ್ಘಟನೆಗಳು:
ರೈಲ್ವೆ ಬೋರ್ಡ್‌ನ ಬೈಠಕ್
ಮುಂಬೈ ಮಹಾನಗರದ ಪಶ್ಚಿಮ ರೈಲ್ವೆ ಮತ್ತು ಮಧ್ಯರೈಲ್ವೆಯಲ್ಲಿ ಇತ್ತೀಚೆಗೆ ನಡೆದ ಹಲವಾರು ದುರ್ಘಟನೆಗಳಿಂದ ಚಿಂತೆಗೀಡಾಗಿರುವ ರೈಲ್ವೆ ಬೋರ್ಡ್ ಈ ವಿಷಯವನ್ನು ಗಂಭೀರವಾಗಿ ಸ್ವೀಕರಿಸಿದ್ದು, ರೈಲ್ವೆ ಬೋರ್ಡ್ ಬೈಠಕ್ ನಡೆಸಿ ವಿಚಾರ ವಿಮರ್ಶೆ ನಡೆಸಿದೆ. ರೈಲ್ವೆ ಪ್ರಬಂಧಕರ ಜೊತೆಗಿನ ಈ ಬೈಠಕ್‌ನಲ್ಲಿ ಅನೇಕ ಸಂಗತಿಗಳ ಬಗ್ಗೆ ಚರ್ಚೆ ನಡೆಯಿತು. ಮಹಾಪ್ರಬಂಧಕ ಜಿ.ಸಿ. ಅಗರ್‌ವಾಲ್ ಅವರು ಪತ್ರಕರ್ತರಿಗೆ ತಿಳಿಸಿದಂತೆ ಲೋವರ್ ಪರೇಲ್, ವಸಾಯಿ ರೋಡ್, ವಿಕ್ರೋಲಿ..... ಮೊದಲಾದೆಡೆ ನಡೆದ ಘಟನೆಗಳ ಕುರಿತಂತೆ ವಿಭಿನ್ನ ಮಗ್ಗಲುಗಳಲ್ಲಿ ಚರ್ಚೆ ನಡೆಸಲಾಗಿದೆ ಎಂದರು.
ರೈಲ್ವೆ ಬೋರ್ಡ್‌ನ ಹೆಚ್ಚುವರಿ ಸದಸ್ಯ ಗಿರೀಶ್ ಪಿಳ್ಳೈಅವರು ಸ್ಲಂಗಳ ಕಾರಣದಿಂದ ದುರ್ಘಟನೆಗಳು ಹೆಚ್ಚುತ್ತಿವೆ ಎಂದಿದ್ದಾರೆ. ಇಂತಹ ಕೆಲವು ಸ್ಥಳಗಳನ್ನು ಗುರುತಿಸಿ ವಿಶೇಷ ಅಭಿಯಾನ ನಡೆಸಲಾಗುವುದು. ರೈಲ್ವೆ ಟ್ರ್ಯಾಕ್‌ನಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಕೆಲವೆಡೆ ಸಿಗ್ನಲ್ ಕ್ಷೇತ್ರದ ಪಕ್ಕ ತ್ಯಾಜ್ಯವನ್ನು ಸುಡುವುದರಿಂದಲೂ ಕೇಬಲ್ ಹಾನಿಗೀಡಾಗುತ್ತಿದೆ. ಈ ನಡುವೆ ಪಶ್ಚಿಮ ರೈಲ್ವೆಯ ಜೋಗೇಶ್ವರಿ ಯಾರ್ಡ್ ಲೈನ್‌ನಲ್ಲಿ (ಗ್ಯಾರೇಜ್) ನಿಲ್ಲಿಸಿದ ಓವರ್ ಹೆಡ್ ಉಪಕರಣಗಳ ರಿಪೇರಿಗಾಗಿ ವಯರಿಂಗ್ ಸ್ಪೆಶಲ್ ರೈಲಿನಲ್ಲೂ ಕಳ್ಳತನ ನಡೆದ ಘಟನೆ ವರದಿಯಾಗಿದೆ. ಈ ವಯರಿಂಗ್ ಸ್ಪೆಶಲ್ ರೈಲ್‌ನ ಬಾಗಿಲು ಮುರಿದು ಒಳಗಿದ್ದ ಗನ್ ಮೆಟಲ್, 33 ಕಿಲೋ ಭಾರದ ತಾಮ್ರದ ತಂತಿಗಳನ್ನು ಕಳ್ಳರು ಅಪಹರಿಸಿದ್ದಾರೆ. ಇದೀಗ ಓವರ್ ಹೆಡ್ ಉಪಕರಣಗಳ ರಿಪೇರಿಯ ಗುತ್ತಿಗೆದಾರರ ಕೆಲಸಗಾರರನ್ನು ಬಂಧಿಸಿ ತನಿಖೆ ನಡೆಯುತ್ತಿದೆ.
* * *
ಆರೋಪಿಗಳ ಸುಸೈಡ್ ಇಫೆಕ್ಟ್! ಜೈಲ್‌ಗಳ ಶೌಚಾಲಯಗಳಿಗೆ ಹೊಸ ನಿಯಮ!
ಪೊಲೀಸ್ ಕಸ್ಟಡಿಯ ಸಮಯ ಆರೋಪಿಗಳು ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಯಾಗಲಿ, ಅಥವಾ ಆರೋಪಿಯೊಬ್ಬ ಶೌಚಾಲಯದಲ್ಲಿ ಸಾವನ್ನಪ್ಪುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಮಹಾ ಸಂಚಾಲಕರು ಇದೀಗ ಲಾಕಪ್‌ನಲ್ಲಿ ನಿರ್ಮಾಣವಾಗುವ ಶೌಚಾಲಯದಲ್ಲಿ ಹೊಸ ನಿಯಮಗಳನ್ನು ಅನ್ವಯಿಸಿದ್ದಾರೆ.
ಈ ಹೊಸ ನಿಯಮದಂತೆ ಇನ್ನು ಮುಂದೆ ಶೌಚಾಲಯಗಳಲ್ಲಿ ಪೂರ್ಣ ಬಾಗಿಲು ಇರುವುದಿಲ್ಲ. ಆರೋಪಿಗಳು ಅಧಿಕ ಸಮಯ ಶೌಚಾಲಯದಲ್ಲಿ ಇರುವಂತಿಲ್ಲ. ಅಧಿಕ ಸಮಯ ಕುಳಿತುಕೊಂಡರೆ ಡ್ಯೂಟಿ ಪೊಲೀಸ್ ಈ ಬಗ್ಗೆ ತಕ್ಷಣ ಮಾಹಿತಿ ಪಡೆಯಲಿದ್ದಾರೆ.
ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ದೀಕ್ಷಿತ್, ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಹಾಗೂ ತಮ್ಮ ವರಿಷ್ಠ ಅಧಿಕಾರಿಗಳಿಗೆ ಈ ಆದೇಶ ನೀಡಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ಆರೋಪಿಗಳು ಪೊಲೀಸರ ನಿರ್ಲಕ್ಷ್ಯದಿಂದ ಸಾವನ್ನಪ್ಪುತ್ತಿದ್ದಾರೆ. ಆರೋಪಿ ಶೌಚಾಲಯಕ್ಕೆ ತೆರಳಿದರೆಂದರೆ ಯಾವನೇ ಪೊಲೀಸ್ ಅತ್ತ ಗಮನ ಕೊಡುವುದಿಲ್ಲ. ಹೀಗಾಗಿ ಮಾನಸಿಕವಾಗಿ ದುರ್ಬಲವಾಗಿರುವ ಆರೋಪಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದರ ಹೊಣೆ ಪೊಲೀಸರ ಮೇಲೆ ಬೀಳುತ್ತದೆ. ಹೀಗಾಗಿ ಪೊಲೀಸರು ತಮ್ಮ ಡ್ಯೂಟಿಯ ಸಮಯ ಲಾಕಪ್‌ನಲ್ಲಿ ಕೈದಿಯಾಗಿರುವ ಆರೋಪಿಯನ್ನು ಒಂದು ನಿಮಿಷವೂ ಬಹಿರಂಗವಾಗಿ ಬಿಡುವಂತಿಲ್ಲ. ಹೀಗಾಗಿ ಲಾಕಪ್‌ನಲ್ಲೂ ಶೌಚಾಲಯದ ಬಾಗಿಲು ಇನ್ನು ಪೂರ್ತಿ ಇರುವುದಿಲ್ಲ. ಅರ್ಧ ಬಾಗಿಲು ಮಾತ್ರ ಇರುವುದು. ಬಾಗಿಲನ್ನು ಒಳಗಿನಿಂದ ಆರೋಪಿ ಹಾಕದಂತೆ ಒಳಗೆ ಚಿಲಕವೂ ಇರುವುದಿಲ್ಲ. ಶೌಚಾಲಯಕ್ಕೆ ಆರೋಪಿ ಹೋದಾಗ ಹೊರಗಡೆ ಪೊಲೀಸ್ ಸಿಬ್ಬಂದಿ ಕಾವಲು ಕಾಯುತ್ತಿದ್ದಾರಂತೆ. ಶೌಚಾಲಯದ ಕಿಟಕಿಗಳಲ್ಲೂ ಕಬ್ಬಿಣದ ಸರಳಿನ ಬದಲಿಗೆ ಜಾಲರಿ ಹಾಕಲಾಗಿದೆಯಂತೆ.
* * *
ಬಾಲ ಸುಧಾರ್ ಗೃಹಗಳ ಸಮೀಕ್ಷೆಗೆ ಎನ್‌ಜಿಒ ಪ್ರತಿನಿಧಿಗಳ ಸಮಿತಿ
ಮುಂಬೈ ಸಹಿತ ಮಹಾರಾಷ್ಟ್ರದ ಬಾಲ ಸುಧಾರ್‌ಗೃಹಗಳ ಸ್ಥಿತಿ ಬಹಳಷ್ಟು ಹದಗೆಟ್ಟಿದ್ದು ಅವುಗಳು ಅಪರಾಧ ಸ್ಥಳಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಇದನ್ನು ಗಮನಿಸಿದ ಬಾಂಬೆ ಹೈಕೋರ್ಟ್ ಎನ್‌ಜಿಒ ಪ್ರತಿನಿಧಿಗಳ ಒಂದು ಸಮಿತಿ ರಚಿಸಿದೆ. ಈ ಸಮಿತಿ ಮುಂಬೈಯ ಎರಡು ಬಾಲಸುಧಾರ್ ಗೃಹಗಳಿಗೆ ಭೇಟಿ ನೀಡಿ ಅಲ್ಲಿನ ಭೋಜನದ ಗುಣಮಟ್ಟ ಹಾಗೂ ಸ್ವಚ್ಛತೆ ಮತ್ತಿತರ ಸೌಲಭ್ಯಗಳನ್ನು ಪರಿಶೀಲನೆ ನಡೆಸಲಿದೆ. ಜ. ಅಭಯ್ ಓಕ್ ಮತ್ತು ಪಿ.ಡಿ. ನಾಯ್ಕಿ ಅವರು ಪತ್ರಿಕಾ ವರದಿಯನ್ನು ಜನಹಿತ ಅರ್ಜಿಯನ್ನಾಗಿ ಸ್ವೀಕರಿಸಿ ಈ ಸಮಿತಿಯನ್ನು ಪರಿಶೀಲನೆಗೆ ಕಳುಹಿಸಿದ್ದಾರೆ.
ಟಾಟಾ ಸಮಾಜ ವಿಜ್ಞಾನ ಸಂಸ್ಥಾನದ ನಿರ್ದೇಶಕರಾದ ಡಾ. ಕೆ.ಪಿ.ಆಶಾಮುಕುಂದನ್ ಈ ಸಮಿತಿಯ ಪ್ರಮುಖರಾಗಿದ್ದಾರೆ. ಅನ್ಯ ಎನ್‌ಜಿಒಗಳಾದ ಆಡಿಯನ್ಸ್ ಆಫ್ ವನ್ ಫೌಂಡೇಶನ್, ಪ್ರೊಜೆಕ್ಟ್ ಆಶಿಯಾನಾ, ಓಜಸ್ ಮೆಡಿಕಲ್ ಇನ್‌ಸ್ಟಿಟ್ಯೂಟ್... ಮೊದಲಾದವರು ಸದಸ್ಯರಾಗಿರುವರು. ಈ ಪ್ಯಾನೆಲ್ ಉಮರ್‌ಖಾಡಿ ಅಬ್ಸರ್‌ವೇಶನ್ ಹೋಮ್ ಮತ್ತು ಡೊಂಗ್ರಿ ಚಿಲ್ಡ್ರನ್ಸ್ ಹೋಮ್‌ಗೆ ನಿಯಮಿತ ರೂಪದಲ್ಲಿ ಭೇಟಿ ನೀಡಲಿದೆ. ಈ ಸಮಿತಿ ಪ್ರತೀ ತಿಂಗಳು ಯಾವ ಮುನ್ಸೂಚನೆಯನ್ನೂ ನೀಡದೆ ತಿಂಗಳಲ್ಲಿ ಕನಿಷ್ಠ ಎರಡು ಬಾರಿ ಬಾಲಸುಧಾರ್ ಗೃಹಕ್ಕೆ ಭೇಟಿ ನೀಡಲಿದೆ. ಕೋರ್ಟ್‌ನ ಮಿತ್ರರ ರೂಪದಲ್ಲಿರುವ ವಕೀಲ ರಾಜೀವ್ ಪಾಟೀಲ್‌ರು ಕೋರ್ಟ್‌ಗೆ ತಿಳಿಸುತ್ತಾ ಈ ಮಕ್ಕಳಿಗೆ ಮಾನ್‌ಖುರ್ದ್‌ನ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ (ಐ.ಟಿ.ಐ)ನಲ್ಲಿ ಟ್ರೈನಿಂಗ್ ನೀಡಲಾಗುತ್ತದೆ. ಆದರೆ ಸದ್ಯ ಈ ಸಂಸ್ಥೆ ಬಾಗಿಲು ಮುಚ್ಚಿದೆ ಎಂದಿದ್ದಾರೆ.
* * *
ಮುಂಬೈಯ 72 ಪೊಲೀಸ್ ಠಾಣೆಗಳು ಅನಧಿಕೃತವೆ?
ತನ್ನ ಹೇಳಿಕೆಗಳಿಂದ ಸದಾ ವಿವಾದ ಸೃಷ್ಟಿಸುತ್ತಿರುವ ಕಾಂಗ್ರೆಸ್‌ನ ಶಾಸಕ ನಿತೇಶ್ ರಾಣೆ ಈಗ ಮತ್ತೊಂದು ವಿವಾದ ಎಬ್ಬಿಸಿದ್ದಾರೆ. ಮುಂಬೈಯ 94 ಪೊಲೀಸ್ ಠಾಣೆಗಳಲ್ಲಿ 72 ಠಾಣೆಗಳು ಅನಧಿಕೃತವಂತೆ!. ಈ ಪೊಲೀಸ್ ಠಾಣೆಗಳ ಹೆಸರಲ್ಲಿ ವಿದ್ಯುತ್, ನೀರು, ಟೆಲಿಫೋನ್ ಕನೆಕ್ಷನ್‌ಗಳೇ ಇಲ್ಲವಂತೆ. ಮೂಲಭೂತ ಸೌಕರ್ಯಗಳ ಅಭಾವ ಇರುವಾಗ ಪೊಲೀಸರು ಅಪರಾಧಿಗಳನ್ನು ಬಂಧಿಸುವುದಾದರೂ ಹೇಗೆ? ಕಳೆದ ವಾರ ಪತ್ರಕರ್ತರ ಜೊತೆ ಮಾತನಾಡಿದ ನಿತೇಶ್ ರಾಣೆಯವರು ತಾನು ನಾಲ್ಕು ತಿಂಗಳ ವಿಚಾರ ವಿಮರ್ಶೆ ಮಾಡಿದ ನಂತರ ಪೊಲೀಸ್ ಕಾರ್ಮಿಕರಿಗೆ ಸಂಘಟನೆ ಇರುವ ಅಗತ್ಯವಿದೆ ಎಂದು ತನಗೆ ಮನವರಿಕೆಯಾಯಿತು ಎಂದಿದ್ದಾರೆ. ಜನಸಾಮಾನ್ಯರ ದೂರು ಕೇಳುವ ಪೊಲೀಸರ ಕಷ್ಟಗಳ ದೂರನ್ನು ಕೇಳಲು ಗೃಹವಿಭಾಗದ ಬಳಿ ಸಮಯವಿಲ್ಲ ಎಂದು ಟೀಕಿಸಿದ್ದಾರೆ.
ಪೊಲೀಸ್ ಠಾಣೆಗಳ ವಿದ್ಯುತ್ ಬಿಲ್ ಕಟ್ಟಲು ರಾಜ್ಯ ಸರಕಾರದ ಬಳಿ ಯಾವುದೇ ನಿಯಮ ಉಲ್ಲೇಖವಿಲ್ಲ. ಹೀಗಾಗಿ ಸೀನಿಯರ್ ಪೊಲೀಸ್ ಇನ್‌ಸ್ಪೆಕ್ಟರ್‌ಗಳೇ ಅದರ ಜವಾಬ್ದಾರಿ ಹೊರಬೇಕಾಗಿದೆ ಎಂದವರು ಆರೋಪಿಸಿದ್ದಾರೆ.
* * *
ಕೈದಿಗಳನ್ನು ಎದುರಿಸಲು ಇಸ್ರೇಲ್ ಶೈಲಿ!
ಆರ್ಥರ್ ರೋಡ್ ಜೈಲ್‌ನಲ್ಲಿ ಇತ್ತೀಚೆಗೆ ಕೈದಿಗಳ ಮಾರಾಮಾರಿ ಘಟನೆಯ ನಂತರ ಅಲ್ಯೂಮಿನಿಯಂ ತಟ್ಟೆ ಬ್ಯಾನ್ ಮಾಡಿ ಫೈಬರ್ ತಟ್ಟೆಗಳನ್ನು ನೀಡುವ ಪ್ರಸ್ತಾವದ ಜೊತೆಗೆ ಸರಕಾರ ಇದೀಗ ಮತ್ತೊಂದು ಹೆಜ್ಜೆ ಇಡಲು ಮುಂದಾಗಿದೆ.
ಗೃಹ ವಿಭಾಗವು ಇದೀಗ ಇಸ್ರೇಲ್ ಶೈಲಿ ಅನುಸರಿಸುವ ಸಿದ್ಧತೆಯಲ್ಲಿದೆ. ಕೈದಿಗಳು ತಮ್ಮಳಗೆ ಜಗಳ ಮಾಡಿದಾಗ ಅದನ್ನು ನಿಯಂತ್ರಿಸಲು ಗೃಹವಿಭಾಗ, ಈಗ ಜೈಲುಗಳಲ್ಲಿ ಪೊಲೀಸರಿಗೆ ಪ್ಲಾಸ್ಟಿಕ್ ಬುಲೆಟ್‌ನ್ನು ಬಳಸಲು ಸೂಚಿಸಿದೆ. ಅರ್ಥಾತ್ ಇಸ್ರೇಲ್‌ನ ಜೈಲುಗಳಲ್ಲಿ ಬಳಸಿದಂತೆ. ಕೈದಿಗಳು ತಮ್ಮಿಳಗಿನ ಜಗಳದಲ್ಲಿ ಅಲ್ಯೂಮಿನಿಯಂ ತಟ್ಟೆಯನ್ನೇ ಬಳಸಿದ ನಂತರ ಅಲ್ಯೂಮಿನಿಯಂ ತಟ್ಟೆ ನಿಷೇಧಿಸಲು ಮುಂದಾಯಿತು. ಇದೀಗ ಜೈಲ್‌ಗಳಲ್ಲಿ ಕೈದಿಗಳ ಜಗಳ ಸಂದರ್ಭದಲ್ಲಿ ಪ್ಲಾಸ್ಟಿಕ್ ಬುಲೆಟ್ ಬಳಸಲು ನಿರ್ಣಯಿಸಲಾಗಿದೆ ಎಂದು ಗೃಹ ವಿಭಾಗದ ಪ್ರಿನ್ಸಿಪಲ್ ಕಾರ್ಯದರ್ಶಿ ವಿಜಯ್ ಸತ್‌ಬೀರ್ ಸಿಂಗ್ ತಿಳಿಸಿದ್ದಾರೆ.
ಮುಂದಿನ ಎರಡು ತಿಂಗಳ ಒಳಗೆ ಜೈಲುಗಳಲ್ಲಿ ಪ್ಲಾಸ್ಟಿಕ್ ಬುಲೆಟ್ ಬಳಸಲಾಗುವುದಂತೆ. ಇದಕ್ಕಾಗಿ ಜೈಲು ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದಂತೆ.