ಮನ್ನಣೆಯ ದಾಹ
ಡಿವಿಜಿ ಮಂಕುತಿಮ್ಮನ ಕಗ್ಗ ಯಾಕೆ ಬರೆದರು? ಉಲ್ಲೇಖಿಸುವುದಕ್ಕೆ ಸದಾ ಸಿದ್ಧ ಅಡುಗೆಯ ಉಣಿಸಿರಲಿ ಎಂಬ ಕಾರಣಕ್ಕೆ. ಡಿವಿಜಿಯವರಿಗೆ ಇದಕ್ಕಿಂತ ಒಳ್ಳೆಯ ಹೊಗಳಿಕೆ ಬೇರೆ ಇರಲಿಕ್ಕಿಲ್ಲ. ಇದಕ್ಕೆ ಉದಾಹರಣೆಯಾಗಿ ಕನ್ನಡದ ಮಾಧ್ಯಮಗಳಲ್ಲಿ ಬರುವ ಬಹುತೇಕ ಲೇಖನಗಳು, ಸಂಪಾದಕೀಯಗಳು, ವರದಿಯಾಗುವ ಭಾಷಣಗಳ, ಉಪನ್ಯಾಸಗಳ ಉಲ್ಲೇಖಗಳೇ ಸಾಕ್ಷಿ. ಬಹುತೇಕ ಲೇಖನಗಳಲ್ಲಿ ಕಗ್ಗವನ್ನು ಉದಾಹರಿಸಿ ಅದರ ತಾತ್ಪರ್ಯವನ್ನೂ ಹೇಳದೆ (ಹೇಳಿದರೂ ಚುಟುಕಾಗಿ ಮಾತ್ರ!) ಮುಂದೆ ನಡೆಯುವವರಿದ್ದಾರೆ. ಕಗ್ಗದಲ್ಲಿ ಹಳೆಯ ಕಾವ್ಯಗಳಲ್ಲಿ ಕಾಣುವ ವಿವರಗಳಿಲ್ಲವೆಂಬುದು ಸತ್ಯ. ಅವು ಸೂತ್ರಪ್ರಾಯ ವಾಕ್ಯಗಳಂತಿರುವುದರಿಂದ ಅವನ್ನು ಕಾವ್ಯವೆಂದು ಪರಿಗಣಿಸದಿರುವ ಒಂದು ಗುಂಪೂ ಇದೆ. ಅಭಿಜಾತ ವಿಮರ್ಶಕರಾದ ಕುರ್ತಕೋಟಿಯವರೂ ಕಗ್ಗದ ಕಾವ್ಯಾಂಶದ ಕುರಿತು ಸಂದೇಹವನ್ನು ವ್ಯಕ್ತಪಡಿಸಿದ್ದಾರೆ. ಆದರೂ ಕಗ್ಗದ ಜನಪ್ರಿಯತೆ, ಜನಪರತೆ ಹೆಚ್ಚುತ್ತಲೇ ಇದೆ. ಅದಕ್ಕೊಂದು ಪೌರಾಣಿಕ ಸತ್ಯದ ಸ್ಥಾನ (ಭಗವದ್ಗೀತೆ, ಬೈಬಲ್, ಕುರ್‌ಆನ್‌ನಂತೆ) ಪ್ರಾಪ್ತಿಯಾಗುವ ಸಾಧ್ಯತೆಯೂ ಇದೆ. ಈ ಕೃತಿ ಸದಾ ಇರಲಿ ಎಂಬಂತೆ ಒಂದು ಕೃತಿಯನ್ನು ಹೆಸರಿಸಿ ಎಂದಾಗ ನಾನು ಪ್ರೀತಿಸುವ ಅನೇಕ ಆಪ್ತ ಕೃತಿಗಳ ಸುತ್ತ ಗಿರಕಿ ಹೊಡೆದೂ ಕೊನೆಗೆ ನನಗುಳಿದದ್ದು ಮಂಕುತಿಮ್ಮನ ಕಗ್ಗ. ಇಲ್ಲಿ ನಾನು ಪ್ರಾಸಂಗಿಕವಾಗಿ ಉದಾಹರಿಸುತ್ತಿರುವುದು ಈ ಲೇಖನದ ಶೀರ್ಷಿಕೆಯ ಪದಗಳನ್ನೊಳಗೊಂಡ ಒಂದು ಕಗ್ಗವನ್ನು. ಅದು ಹೀಗಿದೆ:
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ
ಚಿನ್ನದಾತುರಕಿಂತ ಹೆಣ್ಣುಗಂಡೊಲವು॥
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ
ತಿನ್ನುವುದದಾತ್ಮವನೆ-ಮಂಕುತಿಮ್ಮ॥
ಇದರ ತಾತ್ಪರ್ಯ ಸರಳವಾಗಿದೆ. ಏಕೆಂದರೆ ಇದು ಡಿವಿಜಿಯವರ ಬಹುತೇಕ ಕಗ್ಗಗಳಂತೆ ಹೇಳಿಕೆಯ ರೂಪದಲ್ಲಿದೆ ಮತ್ತು ಮೊದಲ ಓದಿಗೆ ಬಿಟ್ಟುಕೊಡದ ಅಥವಾ ಹೊಸ ಅರ್ಥಗಳನ್ನು ಹೊಳಪಿಸಬಲ್ಲ ಸಾಧ್ಯತೆಗಳನ್ನು ಹೊಂದಿಲ್ಲದಂತಿದೆ. ಆದರೆ ಇವನ್ನು ವಿವರಿಸುತ್ತಾ ಹೋದರೆ ಕತೆ-ಉಪಕತೆಗಳನ್ನು ಸೃಷ್ಟಿಸಿಕೊಂಡು ಒಂದು ಹರಿಕತೆಯನ್ನೇ ಮಾಡಬಹುದು. ನನ್ನ ಟೀಕೆಗೆ ನಾನೇ ಉತ್ತರಿಸುವಂತೆ ವಿವರಿಸುತ್ತೇನೆ:
ಮನುಷ್ಯ ಅಂತಲ್ಲ ಲೋಕದ ಎಲ್ಲ ಜೀವಿಗಳಿಗೂ ಹಸಿವು ಮೊದಲ ಅರಿವು. ಹುಟ್ಟಿದ ಮಗು ಜಗತ್ತನ್ನು ಕಂಡು ಬೆದರಿ ಅಳುವುದಿಲ್ಲ. ಹಸಿವೆಯಾಗಿ ಅಳುತ್ತದೆ. ಅಳು ಎನ್ನುವುದು ಎಲ್ಲಾ ತರದ ಬೇಡಿಕೆಯ, ಅಪೇಕ್ಷೆಯ ಸಂಕೇತ. ಮುಷ್ಕರ ಮಾಡಿ, ಗಲಾಟೆ ಮಾಡಿ, ಹಿಂಸೆ ನೀಡಿ ತಮ್ಮ ಬೇಡಿಕೆ, ಅಪೇಕ್ಷೆಗಳನ್ನು ತೀರಿಸಿಕೊಳ್ಳುವ ಕಠಿನತಮ ಹಾದಿಗಳ ಮೊದಲ ಹೆಜ್ಜೆ. ಕೆಲವರು (ಪ್ರಾಯಃ ಮಹಿಳೆಯರು) ಅಳುವನ್ನು ಬದುಕಿನ ಯಶಸ್ಸಿಗೆ ಒಂದು ಅಸ್ತ್ರವಾಗಿ ಬಳಸುತ್ತಿದ್ದಾರೆಂಬ ಆರೋಪವೂ ಇದೆ! ಆದರೆ ಇವೆಲ್ಲದರ ಹಿಂದೆ ಇರುವ ಮಗುವಿನ ಆತುರ ಹಸಿವಿನದ್ದು. ಹಸಿದವನಿಗೆ ಹೊಟ್ಟೆ ತುಂಬಿದಾಗ ಆಗುವ ತೃಪ್ತಿ ಅವರ್ಣನೀಯ; ಅನಿರ್ವಚನೀಯ. ಪುರಾಣದಲ್ಲಿ ಬರುವ ರಾಜಾ ರಂತಿದೇವನಿಂದ ಕವಿ ಹೇಳಿಸಿದ ಮಾತುಗಳಿವು:
ನತ್ವಹಂ ಕಾಮಯೇ ರಾಜ್ಯಂ
ನ ಸ್ವರ್ಗಂ ನ ಪುನರ್ಭವಂ
ಕಾಮಯೇ ದುಃಖ ತಪ್ತಾನಾಂ
ಪ್ರಾಣಿನಾಂ ಆರ್ತಿನಾಶನಂ॥
ಅಂದರೆ- ‘‘ನನಗೆ ರಾಜ್ಯದ ಆಸೆಗಳಿಲ್ಲ (ಅಥವಾ) ರಾಜ್ಯ ಬೇಡ, ಸ್ವರ್ಗದಾಸೆಗಳಿಲ್ಲ, ಸ್ವರ್ಗ ಬೇಡ, ದುಃಖಿತರ ದುಃಖವನ್ನು ಪರಿಹರಿಸುವ ಮತ್ತು ಪ್ರಾಣಿಗಳ ಹಸಿವೆಯನ್ನು ಹಿಂಗಿಸುವ ಶಕ್ತಿಯನ್ನು/ವರವನ್ನು ಕೊಡು.’’
ಇದರ ಸಂದರ್ಭ ಹೀಗಿದೆ: ರಾಜಾ ರಂತಿದೇವ ಸೂರ್ಯವಂಶದ ಒಬ್ಬ ಚಕ್ರವರ್ತಿ. ಒಮ್ಮೆ ಆತನ ರಾಜ್ಯದಲ್ಲಿ ಬರಗಾಲ ಬಂತು. ಪ್ರಜೆಗಳು, ಮತ್ತಿತರ ಜೀವಿಗಳು ನಶಿಸಿದವು, ಇಲ್ಲವೇ ವಲಸೆಹೋದವು. ಕೊನೆಗೆ ರಾಜನೂ ತನ್ನ ಪತ್ನಿಪುತ್ರರೊಂದಿಗೆ ನಿರಾಶ್ರಿತನಾಗಿ ವಲಸೆಹೋಗಬೇಕಾಯಿತು. ಇದ್ದ ಅಲ್ಪಸ್ವಲ್ಪಆಹಾರವನ್ನು ಕಟ್ಟಿಕೊಂಡು ಹೋದರೂ ಅದೂ ಮುಗಿದು ಇನ್ನೇನು ಕೊನೆಯ ರೊಟ್ಟಿಯನ್ನು ತುಂಡು ಮಾಡಿ ಅದರ ಬಹುಭಾಗವನ್ನು ತನ್ನ ಪತ್ನಿಪುತ್ರರಿಗೆ ನೀಡಿ ತಾನು ಉಳಿದ ಒಂದು ತುಂಡನ್ನು ತಿನ್ನಬೇಕಾದರೆ ಅಲ್ಲಿ ಒಂದು ಹಸಿದ ನಾಯಿ ಬಂದು ನಾಲಿಗೆ ಚಾಚಿ ನಿಂತಿತು. ಅದರ ಆರ್ತತೆಯನ್ನು ಕಂಡು ರಂತಿದೇವ ಕರಗಿದ. ತಾನು ಹಸಿದು ಕಂಗಾಲಾಗಿದ್ದರೂ ತನ್ನಲ್ಲಿದ್ದ ರೊಟ್ಟಿ ತುಂಡನ್ನು ಅದಕ್ಕೆ ಹಾಕಿದ. ಇದ್ದಕ್ಕಿದ್ದಂತೆಯೇ ಆ ನಾಯಿ ಅದೃಶ್ಯವಾಗಿ ಅಲ್ಲೊಬ್ಬ ಯಕ್ಷನೋ ಗಂಧರ್ವನೋ ದೇವತೆಯೋ ಅಥವಾ ದೇವರೋ ಎಂಬ ಹಾಗೆ ಒಬ್ಬ ದಿವ್ಯಭವ್ಯ ವ್ಯಕ್ತಿ ಪ್ರತ್ಯಕ್ಷನಾಗಿ ರಂತಿದೇವನ ದಾನಶೀಲತೆಯನ್ನು ಕೊಂಡಾಡಿ ಬೇಕಾದ ವರವನ್ನು ಬೇಡುವಂತೆ ಹೇಳಿದ. ಆಗ ರಂತಿದೇವ ಈ ಉತ್ತರ ಕೊಟ್ಟನೆಂದು ಪ್ರತೀತಿ.
ಹೇಗೂ ಇರಲಿ, ಹಸಿವಿನ ದಯನೀಯ ಸ್ಥಿತಿಯನ್ನು ಈ ಕತೆ ಹೇಳುತ್ತದೆ. ವಿಕ್ಟರ್ ಹ್ಯೂಗೋನ ‘ಲೇ ಮಿಸರೇಬಲ್ಸ್’ ಕಾದಂಬರಿಯ ನಾಯಕ ಹಸಿದು ಬ್ರೆಡ್ಡೊಂದನ್ನು ಕದ್ದು ತಿಂದು ಪಡಬಾರದ ಯಾತನೆಯನ್ನು ಅನುಭವಿಸುತ್ತಾನೆ. ಬಹುತೇಕ ದುರಂತಗಳು ಹಸಿವಿನಿಂದಲೇ ನಡೆಯುತ್ತವೆ. ಮನುಷ್ಯರೆಲ್ಲರೂ ಸಮಾನರೇ ಆದರೂ ವ್ಯವಸ್ಥಿತ ಸಮಾಜದ ಪೂರ್ವಾಗ್ರಹಗಳು ಬಡವರನ್ನು ದಮನಿಸುತ್ತವೆ. ಹೀಗೆ ಈ ಅನ್ನದ ಹಸಿವು ಮನುಷ್ಯನ ಮತ್ತು ಇತರ ಜೀವಿಗಳ ಗುಣಗಳನ್ನು ರೂಪಿಸುತ್ತದೆ. ಪುಣ್ಯಕೋಟಿ ಎಂಬ ಗೋವಿನ ಕತೆಯನ್ನು ಹೇಳಿ ಕೊಂಡಾಡುವವರು ಅಬ್ಬರಿಸಿ ಹಸಿಹಸಿದು ಬೆಟ್ಟದ ಕಿಬ್ಬಿಯಲ್ಲಿದ್ದ ಅರ್ಬುದಾನೆಂಬ ವ್ಯಾಘ್ರದ ತ್ಯಾಗವನ್ನು ಮರೆಯುತ್ತಾರೆ. ತಾನು ಹಸಿದಿದ್ದರೂ ತನಗೆ ಸಹಜವಾಗಿ ಆಹಾರವಾಗಬೇಕಾಗಿದ್ದ ಗೋವನ್ನು ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ನೀಡಿದ, ಮತ್ತು ಕೊಟ್ಟ ಮಾತಿಗೆ ತಪ್ಪದೆ ಮರಳಿ ಬಂದ ಗೋವಿನ ಸತ್ಯಸಂಧತೆಯನ್ನು ಮೆಚ್ಚಿ ಮರುಗಿ, ಪ್ರಪಾತಕ್ಕೆ ಹಾರಿ ಪ್ರಾಣಕೊಟ್ಟ ವ್ಯಾಘ್ರನ ತ್ಯಾಗ ಒಂದು ಹಂತದಲ್ಲಿ ಗೋವಿಗಿಂತಲೂ ಶ್ರೇಷ್ಠವಾಗಿದೆ. ಅನ್ನದ ಹಸಿವು ತೀಕ್ಷ್ಣ. ಅದು ಹಸಿದವನಿಗೇ ಗೊತ್ತು. ಈ ದೇಶದಲ್ಲೂ ಅಷ್ಟೇ: ಹೊಟ್ಟೆ ತುಂಬಿದವನಿಗೆ ಹಸಿದವನ ಕಷ್ಟ ಗೊತ್ತಿಲ್ಲ. ಗೊತ್ತಾಗುವಾಗಲೂ ಸಾಕಷ್ಟು ತಡವಾಗುತ್ತದೆ. ಮುಂದಿನ ಹೆಜ್ಜೆಯಲ್ಲಿ ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣವೆಂದು ಹೇಳಲಾಗಿದೆ. ಚಿನ್ನ ಎಂದರೆ ಚಿನ್ನವಷ್ಟೇ ಅಲ್ಲ, ಎಲ್ಲ ಬಗೆಯ ಭೌತಿಕ ಸುಖದ ವಸ್ತುಗಳು. ಅದು ಹಣವಿರಬಹುದು, ಅಥವಾ ಯಾವುದೇ ಬಗೆಯ ಸ್ಥಿರ-ಚರಾಸ್ತಿಗಳಿರಬಹುದು. ಇದರ ಹಸಿವನ್ನು ತಣಿಸಲು ಸಾಧ್ಯವಿಲ್ಲ; ಏಕೆಂದರೆ ಅದರ ದುರಾಸೆ ಮತ್ತು ದುರಾಗ್ರಹಗಳಿಗೆ ಮಿತಿಯಿಲ್ಲ. ಹೊಟ್ಟೆಯ ಹಾಗೆ ಕಾಲದ, ದೇಶಾವಕಾಶದ ಮಿತಿಯಿಲ್ಲ. ತುಂಬಿದ ಹೊಟ್ಟೆ ಶಾಶ್ವತವಲ್ಲ. ಮತ್ತೆ ಹಸಿವಾಗುತ್ತದೆ. ಹಾಗೆಯೇ ಧನಕನಕವಸ್ತು ವಾಹನಗಳ್ಯಾವುವೂ ಶಾಶ್ವತವಲ್ಲವೆಂದು ಗೊತ್ತಿದ್ದರೂ ಮನುಷ್ಯನು ಇವುಗಳಿಗಾಗಿಯೇ ಆಸೆಪಡುತ್ತಿರುತ್ತಾನೆ. ಆಸೆಯೇ ದುಃಖಕ್ಕೆ ಕಾರಣವೆಂಬುದನ್ನು ಸಮರ್ಥಿಸುತ್ತಾನೆ; ದು:ಖಿಸುತ್ತಾನೆ.
ಚಿನ್ನದಾತುರಕಿಂತಲೂ ತೀಕ್ಷ್ಣ ಹೆಣ್ಣುಗಂಡೊಲವು. ರಾಧಾಕೃಷ್ಣರ ಪ್ರಣಯನಿಧಾನದಿಂದ ವಾತ್ಸ್ಯಾಯನರ ಕಾಮಸೂತ್ರದ ಸುರತದ ವರೆಗೆ ಈ ಪ್ರೇಮ-ಕಾಮದ ತೀವ್ರತೆ ಹೆಚ್ಚುತ್ತದೆ. ಪುರಾಣ ಮತ್ತು ಇತಿಹಾಸದ ಉದಾಹರಣೆಗಳು ಸಾಲದೆಂಬಂತೆ ದಿನನಿತ್ಯ ಈ ಒಲವಿನ ಸೌಂದರ್ಯದ ಅನಭೂತಿಯೊಂದಿಗೇ ಅದರ ಭೀಕರ ಪರಿಣಾಮಗಳನ್ನು ನಾವು ನೋಡುತ್ತೇವೆ. ಪ್ರೀತಿಯ ಹರಿತವಾದ ಅಲಗು ದೇಹ ಮತ್ತು ಮನಸ್ಸನ್ನು ರಕ್ತಸಹಿತ ಇಲ್ಲವೇ ರಕ್ತರಹಿತವಾಗಿ ಕತ್ತರಿಸಿಹಾಕುವುದನ್ನು ನೋಡಿಯೂ ಮನುಷ್ಯನೆಂಬ ಪ್ರಾಣಿ ಪಾಠ ಕಲಿತಂತಿಲ್ಲ. ಇವೆಲ್ಲವುಗಳಿಗಿಂತ ತೀಕ್ಷ್ಣ ಮನ್ನಣೆಯ ದಾಹವೆನ್ನುತ್ತಾರೆ ಕಗ್ಗದ ಕವಿ. ಒಂದು ಕಾಲದಲ್ಲಿ ಭೂಮಂಡಲವೇ ವಿಶ್ವದ ಕೇಂದ್ರವಾಗಿತ್ತು. ಆಗ ಮನುಷ್ಯನಿಗೆ ಭೂಪತಿಯಾಗುವ ಆಸೆಯಿತ್ತು; ಕೆಲವರು ಆದರು ಕೂಡಾ. ಆಗ ವಿಶ್ವವೆಂದರೆ ತಮ್ಮ ಆಡಳಿತಕ್ಕೆ ಒಳಪಟ್ಟ ಭೂಭಾಗವೇ ಆಗಿದ್ದರೂ ಹೇಳುವಾಗ ಅದನ್ನು ಇಡೀ ಭೂಮಂಡಲವೇ ಎನ್ನುವಂತೆ ಹೇಳಲಾಗುತ್ತಿತ್ತು. ಈ ಎಲ್ಲ ಚಕ್ರೇಶ್ವರರಿಗೆ ತಮ್ಮ ಧವಳಕೀರ್ತಿಯನ್ನು ಸೂರ್ಯಚಂದ್ರರಿರುವ ವರೆಗೆ ಶಾಶ್ವತವಾಗಿಸುವ ಆಸೆಯಿತ್ತು. ಇದಕ್ಕಾಗಿ ವಂದಿಮಾಗಧರ ಸ್ವಸ್ತಿಸ್ತುತಿಯಿಂದ ಆರಂಭವಾಗಿ ಶಿಲಾ ಶಾಸನದ ವರೆಗೆ ತಮ್ಮ ಸಾಧನೆಯನ್ನು ಕೆತ್ತಲಾಗುತ್ತಿತ್ತು. ಗೆದ್ದಲ್ಲಿ ವಿಜಯಧ್ವಜವನ್ನು ಊರಲಾಗುತ್ತಿತ್ತು. ಪಂಪನ ಆದಿಪುರಾಣದಲ್ಲಿ ಭರತನು ದಿಗ್ವಿಜಯದ ಕಾಲದಲ್ಲಿ ಎತ್ತರವಾದೊಂದು ಭೂಭಾಗದ ಮೇಲೆ ತನ್ನ ಧ್ವಜವನ್ನೂರಲು ಆದೇಶಿಸಿದಾಗ ದೂತರು ಬಂದು ಅಲ್ಲಿ ಈಗಾಗಲೇ ಊರಿದ ಹಲವು ಧ್ವಜಗಳಿದ್ದು, ಈಗ ಊರಲು ಜಾಗವಿಲ್ಲವೆಂದು ಹೇಳಿದರೆಂದು ಚಿತ್ರಿಸಲಾಗಿದೆ. ಕ್ಷಣಭಂಗುರವಾದ ಈ ಕೀರ್ತಿಪತಾಕೆಯನ್ನು ನಂಬದಿರಲು ಮನುಷ್ಯ ಯಾವ ಯತ್ನವನ್ನೂ ಮಾಡಿಲ್ಲ. ಇಂತಹ ಕೀರ್ತಿಪಿಪಾಸೆಯ ಕುರಿತ (ಮುನ್ನ ಶತಕೋಟಿ ರಾಯರುಗಳಾಳಿದ ನೆಲವ ತನ್ನದೆಂದೆಣಿಸುತ್ತ ಶಾಸನವ ಬರೆದು) ದಾಸರ ಪದವೂ ಇದೆ. ವಿಶ್ವದ ಕೇಂದ್ರ ಭೂಮಿಯಲ್ಲವೆಂದು ಗೊತ್ತಾದ ನಂತರವೂ ಮನುಷ್ಯನು ಈ ಕಾಮನೆಯನ್ನು ಬಿಟ್ಟಿಲ್ಲ. ಎಲ್ಲಿ ಸಾಧ್ಯವೋ ಅಲ್ಲಿ ಮನ್ನಣೆಯನ್ನು ಗಳಿಸಲು ಪ್ರಯತ್ನಿಸಿದ್ದಾನೆ. ಇದಕ್ಕೆ ಸಾವಿರ ದಾರಿಗಳನ್ನೂ ಹುಡುಕಿಕೊಂಡಿದ್ದಾನೆ. ವರ್ತಮಾನದ ಪರಿಸ್ಥಿತಿ ಈ ದಾಹದ ಕೊನೆಯ ಕೊಂಡಿಯಂತೆ ಕೆಲಸಮಾಡುತ್ತಿದೆ. ಇನ್ನೇನೂ ಉಳಿಯುವಂತಿಲ್ಲ. ನಿತ್ಯ ಮಾಧ್ಯಮಗಳೆದುರು ನಿಲ್ಲುವುದು, ಭಾವಚಿತ್ರವಾಗುವುದು, ಅವನ್ನು ಪ್ರದರ್ಶಿಸುವುದು, ಅವುಗಳ ಆಧಾರದಲ್ಲಿ ನಿಲುವುಗನ್ನಡಿಯೆದುರು ತನ್ನ ಗಾತ್ರವನ್ನು ಅಳೆಯುವುದು ಇವೆಲ್ಲ ಸಾಮಾನ್ಯವೆನ್ನಿಸಿದೆ. ಕನ್ನಡದ ಆಧುನಿಕ ಯುಗದಲ್ಲಿ ನವ್ಯ ಸಾಹಿತ್ಯವು ಆತ್ಮ ರತಿಯ ಮೊದಲ ಮೆಟ್ಟಿಲೆನಿಸಿದರೆ, ಈಗೀಗ ಸಾಹಿತ್ಯ, ಕಲೆ ಹೀಗೆ ಎಲ್ಲ ಅಮೂರ್ತಗಳನ್ನು ಮಾರುಕಟ್ಟೆಯ ಸಾಮಗ್ರಿಗಳಂತೆ ಮಾರುವ ಮೂಲಕ ಮನ್ನಣೆ ಸಿಗುತ್ತದೆಂಬ ಭ್ರಾಂತಿಗೆ ವಿದ್ಯಾವಂತರೂ ಬಲಿಯಾಗಿದ್ದಾರೆ. ಅನ್ನ ಹಳಸಿತ್ತು ನಾಯಿ ಹಸಿದಿತ್ತು ಎಂಬಂತೆ ಈ ದೌರ್ಬಲ್ಯಗಳನ್ನು ಬಂಡವಾಳವಾಗಿಸಿ ನಿಮ್ಮನ್ನು ಒಂದೇ ದಿನದಲ್ಲಿ (ಮತ್ತು ಒಂದು ದಿನಕ್ಕೆ ಮಾತ್ರ!) ಜಗತ್ಪ್ರಸಿದ್ಧರಾಗಿಸುವ ಮಾಧ್ಯಮಗಳೂ ಇವೆ.
ಈ ಮನ್ನಣೆಯ ದಾಹದ ದೋಷವನ್ನು ಕವಿ ಅದು ‘‘ತಿನ್ನುವುದದಾತ್ಮವನೆ’’ ಎನ್ನುತ್ತಾರೆ. ಆತ್ಮಸಾಕ್ಷಿಯನ್ನೇ ಕೊಲ್ಲುವ ಈ ದಾಹಕ್ಕೆ ಆತ್ಮವಂಚನೆಯಲ್ಲದೆ ಬೇರೆ ಆಹಾರವೇನಿದೆ? ಪ್ರಚಾರವನ್ನು ಪ್ರಸಾರವೆಂದು ತಿಳಿಯುವುದು, ಪ್ರಸಿದ್ಧಿಯನ್ನು ಪ್ರತಿಷ್ಠೆಗಾಗಿ ಬಳಸುವುದು, ಪದವಿ-ಪ್ರಶಸ್ತಿಗಳನ್ನು ಹೆಸರಿನ ಮೊದಲು ಕಾಣಿಸಿಕೊಂಡು ಹೊಗಳಿಕೆಯ ಹೊನ್ನ ಶೂಲದಲ್ಲಿ ಶೋಭಿಸುವುದು ಇವೆಲ್ಲ ಎಲ್ಲಿಗೆ ಮನುಕುಲವನ್ನು ತಲುಪಿಸುತ್ತದೆಯೋ ಗೊತ್ತಿಲ್ಲ. ಮಹಾಭಾರತದಲ್ಲಿ ವಿಷ್ಣುವನ್ನು ಅಮಾನೀ ಎಂದರೆ ಗೌರವವನ್ನು, ಮಾನವನ್ನು ಬಯಸದವನು ಎಂದಿದ್ದಾರೆ. ಪ್ರಾಯಃ ಪೂರ್ಣತೆಯನ್ನು ಹೀಗೆ ಸೌಜನ್ಯದಿಂದ, ವಿನಯದಿಂದ ಗುರುತಿಸಿದ್ದಾರೆಂದು ಕಾಣಿಸುತ್ತದೆ. ಈ ದಾಹವನ್ನು ತಣಿಸಲು ಸಾಧ್ಯವಿಲ್ಲ. ಅದಾಗಿ ತಣಿಯಬೇಕು. ಅಂತಹ ಮನಸ್ಥಿತಿಯನ್ನು ಪಡೆಯಲು, ತಲುಪಲು ಸಾಧ್ಯವಿದ್ದರೆ ಜನ್ಮ ಸಾರ್ಥಕ.