ಯಾವ ಪ್ರಶ್ನೆಗೆ ಏನು ಉತ್ತರ ಕೊಡಬೇಕು ಎಂದು ಸಾಕ್ಷಿಗೆ ತನಿಖಾಧಿಕಾರಿಯಿಂದಲೇ ಕೋಚಿಂಗ್ !
ಇಶ್ರತ್ ಜಹಾನ್ ದಾಖಲೆ ನಾಪತ್ತೆ ಪ್ರಕರಣ
ನೀವು ಆ ಪೇಪರ್ ನೋಡಿದ್ದೀರೇನು? ಎಂದು ನಾನು ಕೇಳುತ್ತೇನೆ. ಆಗ ನೀವು ಆ ಪೇಪರ್ ನೋಡಿಲ್ಲವೆಂದು ಹೇಳಬೇಕು. ಇದು ಅಷ್ಟೇ ಸರಳ...
(ಪ್ರಕರಣದ ಸಾಕ್ಷಿ, ಗೃಹ ಸಚಿವಾಲಯದ ಮಾಜಿ ಕಾರ್ಯದರ್ಶಿ ಅಶೋಕ್ ಕುಮಾರ್‌ಗೆ, ಗೃಹ ಖಾತೆಯ ಹೆಚ್ಚುವರಿ ಕಾರ್ಯದರ್ಶಿ ಬಿ.ಕೆ. ಪ್ರಸಾದ್ ಫೋನ್ ಸಂಭಾಷಣೆಯಲ್ಲಿ ಹೀಗೆ ಸೂಚನೆ ನೀಡಿದ್ದರು.)
ಹೊಸದಿಲ್ಲಿ, ಜೂ.16: ಇಶ್ರತ್ ಜಹಾನ್ ಎನ್ ಕೌಂಟರ್ ಪ್ರಕರಣದ ‘‘ನಾಪತ್ತೆ ದಾಖಲೆಗಳ’’ ಪ್ರಕರಣದ ವಿಚಾರಣೆಯ ನೇತೃತ್ವ ವಹಿಸಿದ್ದ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿ ಬಿ.ಕೆ.ಪ್ರಸಾದ್, ಸಾಕ್ಷಿಯೊಬ್ಬನಿಗೆ ತಾನು ಕೇಳುವ ಪ್ರಶ್ನೆಗಳ ಬಗ್ಗೆ ಮೊದಲೇ ವಿವರಿಸಿ ಅವುಗಳಿಗೆ ಯಾವ ಉತ್ತರ ಕೊಡಬೇಕೆಂಬ ಸಲಹೆಯನ್ನೂ ನೀಡಿದ್ದರೆಂದು ಇಂಡಿಯನ್ ಎಕ್ಸ್‌ಪ್ರೆಸ್ ತನಿಖಾ ವರದಿಯೊಂದು ತಿಳಿಸಿದೆ.
ಈ ಮಾಹಿತಿಯಿಂದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮಾರ್ಚ್ 10ರಂದು ಲೋಕಸಭೆಯಲ್ಲಿ ಈ ವಿಚಾರವಾಗಿ ತನಿಖೆ ನಡೆಸಿರುವುದಾಗಿ ಘೋಷಿಸಿದ್ದರೂ ಈ ತನಿಖೆಯ ಪ್ರಾಮಾಣಿಕತೆಯ ಬಗ್ಗೆಯೇ ಶಂಕೆ ಮೂಡಿದೆ. ಯುಪಿಎ ಸರಕಾರ ಈ ಎನ್‌ಕೌಂಟರ್ ಪ್ರಕರಣದಲ್ಲಿ ಇಶ್ರತ್‌ಳ ಶಂಕಿತ ಲಷ್ಕರ್ ಸಂಬಂಧಗಳ ಬಗೆಗಿನ ವಿಚಾರವನ್ನು ಕೈಬಿಟ್ಟಿದ್ದ ಹಾಗೂ ಜೂನ್ 15, 2004 ರಲ್ಲಿ ನಡೆದ ಈ ಘಟನೆಯ ಸಿಬಿಐ ತನಿಖೆಗೆ ಅನುಮತಿಸಿ ಸಲ್ಲಿಸಿದ್ದ ಎರಡನೆ ಅಫಿಡವಿಟ್ ವಿಚಾರವಾಗಿ ವಿಚಾರಣೆ ನಡೆಯುತ್ತಿತ್ತು.
ಪ್ರಸಾದ್ ಅವರು ಇಂದು ಸಲ್ಲಿಸಿರುವ ವರದಿಯು ನಾಪತ್ತೆ ದಾಖಲೆಗಳ ಬಗ್ಗೆ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಆದರೆ ಇಂಡಿಯನ್ ಎಕ್ಸ್‌ಪ್ರೆಸ್ ಎಪ್ರಿಲ್ 25 ರಂದು ಪ್ರಸಾದ್ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿದ್ದಾಗ ಈ ಕರೆಯನ್ನು ಹೋಲ್ಡ್ ಮಾಡಿ ನಾಪತ್ತೆ ಕಡತಗಳ ಬಗ್ಗೆ ಇನ್ನೊಬ್ಬರೊಂದಿಗೆ ಮಾತನಾಡಿದ್ದನ್ನೂ ಇಂಡಿನ್ ಎಕ್ಸ್ ಪ್ರೆಸ್ ತಾನು ರೆಕಾರ್ಡ್ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದೆ.
ಆ ಇನ್ನೊಂದು ಕರೆಯಲ್ಲಿ ಪ್ರಸಾದ್ ಅವರು ಮರುದಿನ ತನಿಖೆಯ ಭಾಗವಾಗಿ ಹೇಳಿಕೆ ನೀಡಲಿದ್ದ ವಾಣಿಜ್ಯ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿ(ಸಂಸತ್ತು ಹಿಂದಿ ವಿಭಾಗ, ಕೋರ್ಟ್ ಕೇಸುಗಳಿಗೆ ನೋಡಲ್ ಅಧಿಕಾರಿಯಾಗಿದ್ದ) ಅಶೋಕ್ ಕುಮಾರ್ ಜತೆ ಮಾತನಾಡುತ್ತಿದ್ದರೆಂದು ಇಂಡಿಯನ್ ಎಕ್ಸ್ ಪ್ರೆಸ್ ದೃಢಪಡಿಸಿದೆ.
ಇಶ್ರತ್ ಜಹಾನ್ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಗೃಹ ಸಚಿವಾಲಯದ ಆಂತರಿಕ ಸುರಕ್ಷತಾ ವಿಭಾಗದ ನಿರ್ದೇಶಕರಾಗಿ ಕುಮಾರ್ ಮಾರ್ಚ್ 1, 2011 ಹಾಗೂ ಡಿಸೆಂಬರ್ 23, 2011ರ ನಡುವೆ ಕಾರ್ಯನಿರ್ವಹಿಸುತ್ತಿದ್ದರು.
‘‘ನೀವು ಆ ಪೇಪರ್ ನೋಡಿದ್ದೀರೇನು?’’ಎಂದು ಆ ಅಧಿಕಾರಿಗೆ ಕೇಳಿದ ಪ್ರಸಾದ್ ‘‘ನೀವು ಆ ಪೇಪರ್ ನೋಡಿಲ್ಲವೆಂದು ಹೇಳಬೇಕು. ಇದು ಅಷ್ಟೇ ಸರಳ,’’ ಎಂದಿದ್ದರು.
ಹೀಗೆ ವಿಭಿನ್ನ ಉತ್ತರ ನೀಡುವುದರಿಂದ ಕಡತಗಳ ನಾಪತ್ತೆ ವಿಚಾರವಾಗಿ ಅಧಿಕಾರಿಯ ಪಾತ್ರದ ಬಗ್ಗೆ ಸಂಶಯಗಳೇಳುವುದು ಎಂದೂ ಪ್ರಸಾದ್ ಕುಮಾರ್ ಅವರಿಗೆ ಫೋನಿನಲ್ಲಿ ವಿವರಿಸಿದ್ದರೆನ್ನಲಾಗಿದೆ.
‘‘ನೀವು ಆ ಫೈಲನ್ನು ನಿಮ್ಮ ಜೀವಮಾನದಲ್ಲೇ ನೋಡಿಲ್ಲ ಅಥವಾ ಅದನ್ನು ನೋಡುವ ಅವಕಾಶವೇ ಇರಲಿಲ್ಲವೆಂದು ಹೇಳಬೇಕು,’’ ಎಂದು ಹೇಳಿದರಲ್ಲದೆ ‘‘ಈ ದಾಖಲೆಗಳನ್ನು ಪ್ರತ್ಯೇಕವಾಗಿಡಬೇಕೆಂದು ಹೇಳಿ ಅದನ್ನು ಯಾರಾದರೂ ನಿಮಗೆ ನೀಡಿದ್ದರೇನು ಎಂಬ ಇನ್ನೊಂದು ಪ್ರಶ್ನೆ ಕೇಳಲಾಗುವುದು’’ ಎಂದು ಪ್ರಸಾದ್ ಹೇಳಿದ್ದರಲ್ಲದೆ ‘‘ನೀವು, ಇಲ್ಲ ನನಗೆ ಯಾರೂ ಅದನ್ನು ನೀಡಿಲ್ಲ ಎಂದು ಹೇಳಬೇಕು,’’ ಎಂಬ ಉತ್ತರ ನೀಡಬೇಕೆಂದೂ ಹೇಳಿದ್ದಾರೆ.
ಈ ಬಗ್ಗೆ ಕುಮಾರ್ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ, ಪ್ರಸಾದ್ ತಮಗೆ ವಿಚಾರಣೆ ಸಂಬಂಧ ಕರೆ ಮಾಡಿದ್ದರು ಎಂದು ಹೇಳಿದರೂ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಇಮೇಲ್ ಮುಖಾಂತರ ಪ್ರಸಾದ್ ಅವರನ್ನು ಪ್ರಶ್ನಿಸಿದಾಗ ‘‘ನಾನು ಆಗಿನ ಜಂಟಿ ಕಾರ್ಯದರ್ಶಿ ದೀಪ್ತಿವಿಲಾಸ ಅವರಿಗೆ ಪ್ರಶ್ನಾವಳಿಯನ್ನು 25-04-2016 ರಂದು ಕಳುಹಿಸಿದ್ದೆ ಹಾಗೂ ಆ ದಿನಾಂಕದ ನಂತರ ನಾನು ಕೇವಲ ಆಗಿನ ಜಂಟಿ ಕಾರ್ಯದರ್ಶಿಗಳಾಗಿದ್ದ ಧರ್ಮೇಂದ್ರ ಶರ್ಮ, ರಾಕೇಶ್ ಸಿಂಗ್ ಹಾಗೂ ನಿರ್ದೇಶಕ ಅಶೋಕ್ ಕುಮಾರ್ ಅವರನ್ನು ವಿಚಾರಣೆ ನಡೆಸಿದ್ದೆ ಹಾಗೂ ನೀವು ತಿಳಿಸಿರುವ ಪ್ರಶ್ನೆಗಳನ್ನು ನಾನು ಯಾವುದೇ ಅಧಿಕಾರಿಗೆ ಆ ದಿನಾಂಕದ ನಂತರ ಕೇಳಿಲ್ಲ. ಆದರೆ ವಿಚಾರಣೆ ಸಂದರ್ಭ ನಾನು ಹಲವಾರು ಅಧಿಕಾರಿಗಳನ್ನು ದೂರವಾಣಿ ಮೂಲಕ ಹಾಗೂ ವೈಯಕ್ತಿಕವಾಗಿ ಭೇಟಿಯಾಗಿದ್ದೇನೆ. ನಾನು ನಿಷ್ಪಕ್ಷಪಾತ ತನಿಖೆ ನಡೆಸಿದ್ದೇನೆ ಹಾಗೂ ಎಲ್ಲಾ ಅಧಿಕಾರಿಗಳಿಗೆ ಅವರಿಗೆ ಹೇಗೆ ಬೇಕೋ ಹಾಗೆ ಉತ್ತರ ನೀಡುವ ಸ್ವಾತಂತ್ರ್ಯ ನೀಡಿದ್ದೇನೆ,’’ಎಂದು ವಿವರಣೆ ನೀಡಿದ್ದಾರೆ.
ತಮಿಳುನಾಡಿನ 1983ನೆ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಪ್ರಸಾದ್ ಎನ್‌ಜಿಒಗಳ ವಿರುದ್ಧ ನಡೆದ ಕಾರ್ಯಾಚರಣೆಯ ನೇತೃತ್ವವನ್ನೂ ವಹಿಸಿದವರಾಗಿದ್ದರು. ಅವರು ಮೇ 31 ರಂದು ನಿವೃತ್ತರಾಗಬೇಕಿದ್ದರೂ ಜುಲೈ 31 ರವರೆಗೆ ಅವರ ಸೇವಾವಧಿಯನ್ನು ಎರಡು ತಿಂಗಳುಗಳ ಕಾಲ ವಿಸ್ತರಿಸಲಾಗಿದೆ.