ದಾಭೋಲ್ಕರ್ ಹಂತಕ ‘ಕೇಸರಿ ಉಗ್ರ’ನ ಜಾತಕ
ಖ್ಯಾತ ಚಿಂತಕ ನರೇಂದ್ರ ದಾಭೋಲ್ಕರ್ ಅವರನ್ನು 2013ರಲ್ಲಿ ಹತ್ಯೆ ಮಾಡಿದ ಪ್ರಕರಣದಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿರುವ ಸಾರಂಗ್ ಅಕೋಲ್ಕರ್ ವೃತ್ತಿಯಲ್ಲಿ ಇಂಜಿನಿಯರ್. ಸನಾತನ ಸಂಸ್ಥೆಯ ಆಧ್ಯಾತ್ಮಿಕ ಗುರು ಜಯಂತ್ ಅಟಾವಳೆಯವರ ಬೋಧನೆಯಲ್ಲಿ ಇವರ ಕುಟುಂಬ ಇರಿಸಿದ್ದ ಅಚಲ ನಂಬಿಕೆಯನ್ನು ಅನುಸರಿಸುತ್ತಾ ಬಂದ ವ್ಯಕ್ತಿ.
ಸಿಬಿಐ ಅಧಿಕಾರಿಗಳ ಪ್ರಕಾರ, ಸನಾತನ ಸಂಸ್ಥೆಯ ಇತರ ಕಾರ್ಯ ಕರ್ತರ ಜೊತೆ ಸೇರಿ ಅಕೋಲ್ಕರ್, 2013ರ ಆಗಸ್ಟ್ 20ರಂದು ವಿಚಾರವಾದಿ, ಮೂಢನಂಬಿಕೆ ವಿರುದ್ಧ ಆಂದೋಲನ ಕೈಗೊಂಡಿದ್ದ ನರೇಂದ್ರ ದಾಭೋಲ್ಕರ್ ಅವರನ್ನು ಮುಂಜಾನೆ ವಾಯುವಿಹಾರಕ್ಕೆ ತೆರಳುತ್ತಿದ್ದಾಗ ಹತ್ಯೆ ಮಾಡಿದ್ದರು. ಪಾಯಿಂಟ್- ಬ್ಲ್ಯಾಂಕ್ ರೇಂಜ್ ರಿವಾಲ್ವರ್‌ನಿಂದ ಮೂರು ಗುಂಡು ಹಾರಿಸಿ, ಪಕ್ಕದಲ್ಲೇ ನಿಲ್ಲಿಸಿದ್ದ ಮೋಟರ್‌ಬೈಕ್‌ನಲ್ಲಿ ಪರಾರಿಯಾಗಿದ್ದರು. ತಲೆಗೆ ಗುಂಡು ತಗಲಿದ್ದ ದಾಭೋಲ್ಕರ್ ಸ್ಥಳದಲ್ಲೇ ಅಸು ನೀಗಿದ್ದರು.
ಅಕೋಲ್ಕರ್ ಶಾಮೀಲಾದದ್ದು ಇದೊಂದೇ ಪ್ರಕರಣದಲ್ಲಿ ಅಲ್ಲ. ಗೋವಾ ಹಾಗೂ ಪುಣೆಯಲ್ಲಿ ಸಂಭವಿಸಿದ ಸ್ಫೋಟದಲ್ಲೂ ಶಾಮೀಲಾದ ಆರೋಪ ಇತ್ತು.
ಆರಂಭಿಕ ವರ್ಷಗಳು
ಅಕೋಲ್ಕರ್ ಹುಟ್ಟಿದ್ದು 1981ರಲ್ಲಿ. ಬೆಳೆದದ್ದು, ಪುಣೆಯ ಶನಿವಾರಪೇಟೆ ಪರಿಸರದಲ್ಲಿ. ಇದು ತಲೆತಲಾಂತರದಿಂದ ಚಿತ್ಪಾವನ ಬ್ರಾಹ್ಮಣರ ವಸತಿ ಪ್ರದೇಶ. ಕಳೆದ ಶತಮಾನದ ಮೊದಲರ್ಧದಲ್ಲಿ, ಇದು ಹಿಂದೂ ಮಹಾಸಭಾ ಮುಖಂಡ ವಿ.ಡಿ.ಸಾವರ್ಕರ್ ಅವರ ಕರ್ಮಭೂಮಿ. ಎಪ್ಪತ್ತು ವರ್ಷಗಳ ಬಳಿಕ ಶನಿವಾರಪೇಟೆ ಮತ್ತೆ ಅಭಿನವ ಭಾರತ, ಸನಾತನ ಸಂಸ್ಥೆಯಂತಹ ಕೇಸರಿ ಉಗ್ರ ಸಂಘಟನೆಗಳ ಬೀಡಾಗಿದೆ.
ಜನರಿಗೆ ಆಧ್ಯಾತ್ಮದ ಹಿಂದಿನ ವಿಜ್ಞಾನವನ್ನು ಬೋಧಿಸುವುದು ತಮ್ಮ ಗುರಿ ಎಂದು ಸನಾತನ ಸಂಸ್ಥೆ ಹೇಳಿಕೊಂಡಿದೆ. ಆದರೆ ಇದೀಗ ಆ ಸಂಘಟನೆಯ ಸದಸ್ಯರು ಉಗ್ರಗಾಮಿ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿದ್ದಾರೆ.
ಸಾವರ್ಕರ್ ಅಭಿಮಾನಿಗಳಾಗಿದ್ದ ಅಕೋಲ್ಕರ್ ಕುಟುಂಬದ ಮೇಲೆ 1990ರ ದಶಕದಲ್ಲಿ ಸನಾತನ ಸಂಸ್ಥೆ ಗಾಢ ಪ್ರಭಾವ ಬೀರಿತು. ಹುಟ್ಟೂರಿನಲ್ಲಿ ಅಕೋಲ್ಕರ್ ಇಂಜಿನಿಯರಿಂಗ್ ಪದವಿ ಕಲಿಕೆ ಆರಂಭಿಸುವ ವೇಳೆಗೆ, ತಾಯಿ ಕಾಂಚನ ಅಕೋಲ್ಕರ್, ತಂಗಿ ಅಶ್ವಿನಿ ಕಪ್ಶೀಕರ್, ಆಕೆಯ ಪತಿ ಓಂಕಾರ್ ಕಪ್ಶೀಕರ್, ಸನಾತನ ಸಂಸ್ಥೆಯ ಸಕ್ರಿಯ ಸದಸ್ಯರಾಗಿದ್ದರು.
ಅಕೋಲ್ಕರ್ 2003ರಲ್ಲಿ ಭಾರತಿ ವಿದ್ಯಾಪೀಠದಲ್ಲಿ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಸತಾರ ಜಿಲ್ಲೆಯ ಶಿರವಾಳ ಎಂಬ ಪುಟ್ಟ ಪಟ್ಟಣದಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಆರಂಭಿಸಿದ. ಸ್ವಲ್ಪಸಮಯದಲ್ಲೇ ಉದ್ಯೋಗಕ್ಕೆ ಗುಡ್‌ಬೈ ಹೇಳಿ, ಸನಾತನ ಸಂಸ್ಥೆ ಚಟುವಟಿಕೆಗಳಲ್ಲೇ ಹೆಚ್ಚು ಸಕ್ರಿಯನಾದ. ಸನಾತನ ಸಂಸ್ಥೆಯ ಅರೆಕಾಲಿಕ ಸದಸ್ಯನಾಗಿದ್ದ ಈತ 2005ರಲ್ಲಿ ಸಾಧಕ (ಪೂರ್ಣಾವಧಿ ಸದಸ್ಯ) ಎನಿಸಿಕೊಂಡ.
ಆನಂತರ ಸನಾತನದ ಸಹಸಂಸ್ಥೆಯಾದ ‘ಹಿಂದೂ ಜನಜಾಗೃತಿ ಸಮಿತಿ’ಯ ಪುಣೆ ಜಿಲ್ಲಾ ಸಂಚಾಲಕರಾಗಿ ನಿಯುಕ್ತಿ.
ಬಳಿಕ ಹಿಂದೂ ವಿರೋಧಿಗಳು ಎಂದು ಸಂಸ್ಥೆ ಬಿಂಬಿಸುವವರ ವಿರುದ್ಧ ಹಲವು ಪ್ರಚಾರ ಆಂದೋಲನಗಳಲ್ಲೂ ಸಕ್ರಿಯನಾಗಿದ್ದ. 2009ರಲ್ಲಿ ಆಸ್ಕರ್ ವಿಜೇತ ಚಿತ್ರ ‘ಸ್ಲಂಡಾಗ್ ಮಿಲಿಯನೇರ್’ ವಿರುದ್ಧದ ಚಳವಳಿ ಅವುಗಳಲ್ಲೊಂದು. ಹಿಂದೂಗಳನ್ನು ಈ ಚಿತ್ರ ಕೆಟ್ಟದಾಗಿ ಚಿತ್ರಿಸಿದೆ ಎನ್ನುವುದು ಸನಾತನ ಸಂಸ್ಥೆಯ ಆರೋಪ.
ಗೋವಾ ದಾಳಿ
ಗೋವಾದಲ್ಲಿ ನಡೆದ ಮಡಗಾಂವ್ ಸ್ಫೋಟ ಪ್ರಕರಣದಲ್ಲಿ ಮೊದಲ ಬಾರಿಗೆ ಅಕೋಲ್ಕರ್ ಪೊಲೀಸರ ಹದ್ದಿನ ಕಣ್ಣಿಗೆ ಬಿದ್ದ. ಸನಾತನ ಸಂಸ್ಥೆಯ ಮಲಗೊಂಡ ಪಾಟೀಲ ಹಾಗೂ ಯೋಗೀಶ್ ನಾಯಕ್ ಎಂಬವರು 2009ರಲ್ಲಿ ನಡೆದ ಈ ಸ್ಫೋಟದಲ್ಲಿ ಸಾವಿಗೀಡಾಗಿದ್ದರು. ಇವರಿಬ್ಬರು ಸ್ಕೂಟರ್‌ನಲ್ಲಿ ಸ್ಫೋಟಕ ಒಯ್ಯುತ್ತಿದ್ದಾಗ, ಅದು ಮಡಗಾಂವ್‌ನಲ್ಲಿ ಸ್ಫೋಟಿಸಿತು ಎಂದು ಹೇಳಲಾಗಿದೆ. ಗೋವಾದಲ್ಲಿ ದೀಪಾವಳಿ ಹಿಂದಿನ ದಿನ ಆಚರಿಸಲಾಗುವ ನರಕಾಸುರ ಹಬ್ಬ ಸಮಾರಂಭಕ್ಕೆ ಅಡ್ಡಿಪಡಿಸಲು ಈ ಸ್ಫೋಟಕ ಒಯ್ಯಲಾಗುತ್ತಿತ್ತು ಎನ್ನಲಾಗಿದೆ. ನರಕಾಸುರನನ್ನು ದಹಿಸುವುದು ಈ ಹಬ್ಬದ ಭಾಗವಾಗಿರುವ ಹಿನ್ನೆಲೆಯಲ್ಲಿ ಈ ಹಬ್ಬ ಹಿಂದೂ ವಿರೋಧಿ ಎಂದು ಸನಾತನ ಸಂಸ್ಥೆ ಪರಿಗಣಿಸಿತ್ತು.
ಈ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ 2010ರಲ್ಲಿ, ಅಕೋಲ್ಕರ್ ಹಾಗೂ ಇತರ 11 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು.
ತಲೆಮರೆಸಿಕೊಂಡಿದ್ದರೂ ಸಕ್ರಿಯ
ಮಡಗಾಂವ್ ಸ್ಫೋಟ ಬಳಿಕ ಸಾರಂಗ್ ತಲೆ ಮರೆಸಿ ಕೊಂಡಿದ್ದರೂ, ಆತನ ಚಟುವಟಿಕೆಗಳೇನೂ ನಿಂತಿರಲಿಲ್ಲ. 2014ರ ಜುಲೈ 10ರಂದು ಪುಣೆಯ ಪರ್ಹಾಸ್‌ಖಾನಾ ಪೊಲೀಸ್ ಠಾಣೆಯ ವಾಹನ ನಿಲುಗಡೆ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲೂ ಈತನ ಕೈವಾಡ ಇದೆಯೆಂದು ಶಂಕಿಸಲಾಗಿದೆ. ಕದ್ದ ಮೋಟರ್‌ಬೈಕ್‌ನಲ್ಲಿ ಇರಿಸಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಿದ್ದು ಈ ದುರ್ಘಟನೆಗೆ ಕಾರಣ.
ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆ ಸದಸ್ಯ ವೀರೇಂದ್ರ ತಾವಡೆಯನ್ನು ಸಿಬಿಐ ಜೂನ್ 10ರಂದು ಬಂಧಿಸಿದ ಬಳಿಕ, ತಾವಡೆ ಹಾಗೂ ಅಕೋಲ್ಕರ್ ನಡುವೆ ನಡೆದ ಇ-ಮೇಲ್ ಸಂವಾದಗಳನ್ನು ಪರಿಶೀಲಿಸಿದರು. ಈ ಇಬ್ಬರೂ ಸೇರಿ ‘ದುರ್ಜನರು ಹಾಗೂ ಹಿಂದೂ ವಿರೋಧಿ’ಗಳನ್ನು ಸದೆಬಡಿಯಲು 15 ಸಾವಿರ ಸೈನಿಕರನ್ನು ಸಜ್ಜುಗೊಳಿಸಲು ಯೋಜನೆ ರೂಪಿಸಿರುವುದು ಇದರಿಂದ ಬಹಿರಂಗವಾಗಿದೆ. ಅಂತಿಮವಾಗಿ ಹಿಂದೂರಾಷ್ಟ್ರ ಪ್ರತಿಷ್ಠಾಪನೆ ಇವರ ಗುರಿ. ತಾವಡೆಯನ್ನು ತನ್ನ ಮಾರ್ಗದರ್ಶಕ ಎಂದು ಸಾರಂಗ್ ಪರಿಗಣಿಸಿದ್ದ. ಇಬ್ಬರೂ ಬಂದೂಕು ತಯಾರಿಕಾ ಘಟಕ ಆರಂಭಿಸುವ ಬಗ್ಗೆಯೂ ಚಿಂತನೆ ನಡೆಸಿದ್ದರು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.
ಕೃಪೆ: scroll.in