ಬಿಹಾರ: ಶಿಕ್ಷಣ ಇಲಾಖೆಯಿಂದ ನಕಲಿ ಸರ್ಟಿಫಿಕೇಟ್
ನೇಪಾಳದ 15 ಮಂದಿ ವೈದ್ಯರ ಬಂಧನ
ಬೀರ್ಗಂಜ್,ಜೂ.18: ಬಿಹಾರದ ಪದವಿಪೂರ್ವ ಪರೀಕ್ಷೆ ಹಗರಣದ ಕರಾಳ ನೆರಳು, ಗಡಿಯಾಚೆಗಿನ ಹಿಮಾಲಯ ರಾಷ್ಟ್ರವಾದ ನೇಪಾಳದ ಮೇಲೂ ಬಿದ್ದಿದೆ.
ಬಿಹಾರದಲ್ಲಿ ಪಡೆಯಲಾದ ನಕಲಿ ಮಾಧ್ಯಮಿಕ ಪರೀಕ್ಷಾ ಪ್ರಮಾಣಪತ್ರಗಳನ್ನು ಬಳಸಿಕೊಂಡು ಎಂಬಿಬಿಎಸ್ ಕೋರ್ಸ್ಗೆ ಪ್ರವೇಶ ಪಡೆದಿದ್ದ ಆರೋಪದಲ್ಲಿ , ಪೂರ್ವಚಂಪಾರಣ್ ಜಿಲ್ಲೆಯ ಗಡಿಯಲ್ಲಿರುವ ನೇಪಾಳದ ಬೀರ್ಗುಂಜ್ನಿಂದ 15 ಮಂದಿ ವೈದ್ಯರನ್ನು ನೇಪಾಳದ ಕೇಂದ್ರ ತನಿಖಾ ದಳ (ಸಿಐಬಿ)ದ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ವೈದ್ಯರ ಪೈಕಿ ಬಿರಾಟ್ನಗರದಿಂದ ಮೂವರು ಹಾಗೂ ಚಿತ್ವಾನ್ನಿಂದ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ವೈದ್ಯರುಗಳು ನೇಪಾಳ ಹಾಗೂ ಚೀನಾದ ಕಾಲೇಜುಗಳಲ್ಲಿ ಎಂಬಿಬಿಎಸ್ ಪದವಿಗಳನ್ನು ಪಡೆದ ಬಳಿಕ ಖಾಸಗಿಯಾಗಿ ವೈದ್ಯ ವೃತ್ತಿಯನ್ನು ನಡೆಸುತ್ತಿದ್ದರು.
ಬಿಹಾರದ ಮಾಧ್ಯಮಿಕ ಪರೀಕ್ಷಾ ಹಗರಣ ಬಯಲಿಗೆ ಬಂದ ಬಳಿಕ ಗಡಿಭಾಗದಲ್ಲಿರುವ ತನ್ನ ಪ್ರದೇಶಗಳ ಅನೇಕ ಮಂದಿಗೆ ಬಿಹಾರದಿಂದ ನೀಡಲಾದ 12ನೆ ತರಗತಿ ಹಾಗೂ ಹತ್ತನೆಯ ತರಗತಿಯಪ್ರಮಾಣ ಪತ್ರಗಳ ತನಿಖೆಯನ್ನು ನೇಪಾಳ ಸರಕಾರ ಆರಂಭಿಸಿತ್ತು. ಬಿಹಾರದಿಂದ ನೀಡಲಾದ ಅನೇಕ ಪ್ರಮಾಣಪತ್ರಗಳು ನಕಲಿಯೆಂಬುದು ಪತ್ತೆಯಾಗಿರುವುದಾಗಿ ನೇಪಾಳ ಸರಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಕಲಿ ಪ್ರಮಾಣಪತ್ರವನ್ನು ಹೊಂದಿದ ಆರೋಪದಲ್ಲಿ 15ಕ್ಕೂ ಅಧಿಕ ಮಂದಿ ವೈದ್ಯರನ್ನು ಬಂಧಿಸಿರುವುದನ್ನು ಪ್ರತಿಭಟಿಸಿ ನೂರಾರು ವೈದ್ಯರು ಇಂದು ಬೀರ್ಗುಂಜ್ನ ಪೊಲೀಸ್ ಠಾಣೆಯ ಮೇಲೆ ಮುತ್ತಿಗೆ ಹಾಕಿದರು. ಪೊಲೀಸರು ಹಾಗೂ ಸ್ಥಳೀಯಾಡಳಿತದ ವಿರುದ್ಧ ಘೋಷಣೆ ಕೂಗಿದ ಅವರು, ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.
ವೈದ್ಯರ ಬಂಧನಕ್ಕೆ ನೇಪಾಳ ವೈದ್ಯರ ಸಂಘ ಕೂಡಾ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಿಐಬಿಯು ವೈದ್ಯರನ್ನು ಉಗ್ರಗಾಮಿಗಳ ಹಾಗೆ ನೋಡುತ್ತಿದೆ. ಇದು ಸ್ವೀಕಾರಾರ್ಹವಲ್ಲವೆಂದು ಅದು ಹೇಳಿದೆ.