ಲಾಟರಿ ಹಗರಣ ತನಿಖೆಗೆ ಮರುಜೀವ? ಮರೀನ್ ಡ್ರೈವ್‌ನ ತೆಂಡುಲ್ಕರ್ ಶಿಲ್ಪ ತೆರವು!
ಶಾಲೆಗಳಿಗೆ ಆರಂಭದಲ್ಲೇ ಶೈಕ್ಷಣಿಕ ವಸ್ತುಗಳ ವಿತರಣೆ
ಮುಂಬೈ ಮಹಾನಗರ ಪಾಲಿಕೆ ಆಡಳಿತವು ಮನಪಾ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡುತ್ತಿರುವ 27 ಶೈಕ್ಷಣಿಕ ವಸ್ತುಗಳು ಈ ಬಾರಿ ಶಾಲೆ ಆರಂಭವಾಗುವಾಗಲೇ ಮಕ್ಕಳಿಗೆ ಸಿಗುವಂತೆ ಹೆಚ್ಚಿನ ಗಮನ ಹರಿಸಿದೆ. ಪ್ರತೀ ವರ್ಷ ಈ 27 ಶೈಕ್ಷಣಿಕ ವಸ್ತುಗಳನ್ನು ಯಾವಾಗಲೋ ಮಕ್ಕಳಿಗೆ ನೀಡುವುದರಿಂದ (ಕೆಲವು ವಸ್ತುಗಳಂತೂ ವಿತರಣೆಯೇ ಆಗುತ್ತಿರಲಿಲ್ಲ.) ಹೆಚ್ಚಿನ ಪ್ರಯೋಜನ ಮಕ್ಕಳಿಗೆ ಆಗುತ್ತಿರಲಿಲ್ಲ. ಪ್ರತೀ ವರ್ಷ ಏನಾದರೂ ದೂರುಗಳು ಬಂದೇ ಬರುತ್ತಿತ್ತು. ಶಿಕ್ಷಣ ಸಮಿತಿ ಅಧ್ಯಕ್ಷೆ ಹೇಮಾಂಗೀ ವರ್ಲೀಕರ್ ಈ ಬಗ್ಗೆ ಅಧಿಕಾರಿಗಳಿಗೆ ಆದೇಶ ಕೂಡಾ ನೀಡಿದ್ದಾರೆ. ಹೀಗಾಗಿ ಅನೇಕ ಕಡೆ ಮೊನ್ನೆ ಜೂನ್ 15ರಂದು ಶಾಲೆ ಆರಂಭವಾಗು ತ್ತಲೇ ಮೇಯರ್ ಸ್ನೇಹಲ್ ಆಂಬೇಕರ್ ಕೈಯಲ್ಲಿ 27 ಶೈಕ್ಷಣಿಕ ವಸ್ತುಗಳನ್ನು ವಿತರಿಸಲಾಯಿತು. ವರ್ತಮಾನದಲ್ಲಿ ಮರಾಠಿ, ಹಿಂದಿ, ಉರ್ದು, ಗುಜರಾತಿ, ಇಂಗ್ಲಿಷ್, ತೆಲುಗು, ತಮಿಳು, ಕನ್ನಡ ಹೀಗೆ ಎಂಟು ಭಾಷಾ ಮಾಧ್ಯಮಗಳ ಮನಪಾ ಶಾಲೆಗಳಲ್ಲಿ 3,44,600 ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.
ಈ ಮಕ್ಕಳಿಗೆ ಶಾಲಾ ಯೂನಿಫಾರ್ಮ್, ಪೆನ್ಸಿಲ್, ರಬ್ಬರ್, ಟಿಫಿನ್ ಬಾಕ್ಸ್, ನೀರಿನ ಬಾಟಲಿ, ಪುಸ್ತಕ, ಚಪ್ಪಲಿ, ಕಂಪಾಸ್ ಬಾಕ್ಸ್, ಕೊಡೆ, ರೈನ್‌ಕೋಟ್... ಹೀಗೆ ಒಟ್ಟು 27 ಶೈಕ್ಷಣಿಕ ವಸ್ತುಗಳನ್ನು ಮನಪಾ ಉಚಿತವಾಗಿ ನೀಡುತ್ತಿದೆ. ಸುಮಾರು ಎಂಟು ವರ್ಷಗಳ ನಂತರ ಮನಪಾ ಶಿಕ್ಷಣ ಸಮಿತಿಯು ಈ ಬಾರಿ ಶಿವಸೇನೆಯ ಕೈಗೆ ಬಂದಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿರಿಸಿ ಶಿವಸೇನೆ ಈ ಬಾರಿ ಮನಪಾ ಶಾಲಾ ಮಕ್ಕಳಿಗೆ ಆರಂಭದಲ್ಲೇ ಈ 27 ಉಚಿತ ಶೈಕ್ಷಣಿಕ ವಸ್ತುಗಳನ್ನು ನೀಡುತ್ತಿದೆ.
ಮನಪಾ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಹೆಚ್ಚಿಸುವುದಕ್ಕಾಗಿ ಮನಪಾ ಈ ಶೈಕ್ಷಣಿಕ ವರ್ಷದಲ್ಲಿ ಮಿನಿ ಸೈನ್ಸ್ ಸೆಂಟರ್ ಕೂಡಾ ಸ್ಥಾಪಿಸಲು ಮುಂದಾಗಿದೆ. ಪ್ರಾಥಮಿಕ ವಿಭಾಗಕ್ಕಾಗಿ 150 ಮತ್ತು ಮಾಧ್ಯಮಿಕ ವಿಭಾಗಕ್ಕಾಗಿ 25 ಕಟ್ಟಡಗಳಲ್ಲಿ ಮಿನಿ ಸೈನ್ಸ್ ಸೆಂಟರ್ ಸ್ಥಾಪಿಸಲಿದೆ.
* * *
ಲಾಟರಿ ಹಗರಣ ತನಿಖೆಗೆ ಮರುಜೀವ ಸಿಗಬಹುದೇ?
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‌ಸಿಪಿ ಸರಕಾರದ ಆಡಳಿತ ಕಾಲದಲ್ಲಿ 2001 ರಿಂದ 2009ರ ನಡುವೆ ಸುಮಾರು 300 ಸಾವಿರ ಕೋಟಿ ರೂಪಾಯಿಯ ಆನ್‌ಲೈನ್ ಲಾಟರಿ ಹಗರಣದ ಸಂಗತಿ ಈಗ ತೀವ್ರ ಚರ್ಚೆಯಾಗುತ್ತಿದೆ. ಮುಖ್ಯ ಸಂಗತಿ ಏನೆಂದರೆ 2007ರಲ್ಲೇ ರಾಜ್ಯ ಸಿಐಡಿ, ಈ ಹಗರಣದ ವರದಿ ಆಗಿನ ಸರಕಾರಕ್ಕೆ ನೀಡಿತ್ತು! ಆಗ ವಿತ್ತ ಮಂತ್ರಿ ಆಗಿದ್ದ ಎನ್‌ಸಿಪಿಯ ನೇತಾ ಜಯಂತ್ ಪಾಟೀಲರು ಈ ಸಿಐಡಿ ತನಿಖಾ ವರದಿಯನ್ನು ಕೆಳಗಿರಿಸಿದ್ದರಂತೆ!
ಮಾಜಿ ಐಎಎಸ್ ಅಧಿಕಾರಿ ಆನಂದ ಕುಲಕರ್ಣಿ ಅವರು ಆಗಿನ ಮಂತ್ರಿ ಜಯಂತ್ ಪಾಟೀಲರ ಮೇಲೆ ಆರೋಪ ಹೊರಿಸುತ್ತಾ ಅವರ ಬೆಂಬಲದ ಕಾರಣವೇ ಈ ಹಗರಣ ನಡೆದಿದೆ ಹಾಗೂ ಅವರೇ ಈ ವರದಿ ಕೆಳತಳ್ಳಿದ್ದರು ಎಂದಿದ್ದಾರೆ. ಇದೀಗ ಕುಲಕರ್ಣಿಯವರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರಲ್ಲಿ ಭ್ರಷ್ಟಾಚಾರ ನಿಗ್ರಹ ಬ್ಯೂರೋದಿಂದ ಈ ಹಗರಣದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಲಾಟರಿ ಹಗರಣದಿಂದಾಗಿ ಪ್ರತೀವರ್ಷ ಸರಕಾರಕ್ಕೆ 25 ರಿಂದ 30 ಸಾವಿರ ಕೋಟಿ ರೂಪಾಯಿಯ ನಷ್ಟ ಉಂಟಾಗುತ್ತಿದೆಯಂತೆ. ಈ ಲೆಕ್ಕಾಚಾರದಲ್ಲಿ 9 ವರ್ಷಗಳಲ್ಲಿ ಈ ಸಂಖ್ಯೆ 300 ಸಾವಿರ ಕೋಟಿ ರೂಪಾಯಿ ತಲುಪಿದೆಯಂತೆ. ಆರೋಪದ ಕತೆಯ ಪ್ರಕಾರ ಮಹಾರಾಷ್ಟ್ರ ಸರಕಾರವು ಆನ್‌ಲೈನ್ ಲಾಟರಿಯನ್ನು ಸಂಚಾಲನೆಗೊಳಿಸುವುದಕ್ಕೆ ಟೆಂಡರ್ ಕರೆದಿತ್ತು. ಇದರಲ್ಲಿ ಚೆನ್ನೈಯ ಏಜನ್ಸಿಯೊಂದು ಮಾತ್ರ ಟೆಂಡರ್ ತುಂಬಿಸಿತ್ತು. ಹಾಗಾಗಿ ಎರಡು ಬಾರಿ ಟೆಂಡರ್ ಪ್ರಕ್ರಿಯೆಯ ಸೀಮೆ ವಿಸ್ತರಿಸಬೇಕಾಯಿತು. ಆದರೂ ಯಾರೂ ಆಸಕ್ತಿ ತೋರಿಸಲಿಲ್ಲ. ಆನಂತರ ಮೊದಲು ಬಂದ ಕಂಪೆನಿಗೇ ಗುತ್ತಿಗೆ ನೀಡಲಾಯಿತು. ಇಲ್ಲಿಯವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ ಈ ಕಂಪೆನಿಗೆ ಗುತ್ತಿಗೆ ಸಿಕ್ಕಿದ ನಂತರ ಲಾಟರಿ ಕಾನೂನನ್ನು ಉಲ್ಲಂಘಿಸಲು ಶುರುಮಾಡಿತು ಎನ್ನುವ ಆರೋಪ ಇದೆ. 1998 ರಲ್ಲಿ ಲಾಟರಿ ಕಾನೂನಿನಂತೆ ದೇಶಾದ್ಯಂತ ಒಂದಂಕಿ ಲಾಟರಿ ಮೇಲೆ ನಿಷೇಧ ಹೇರಿತ್ತು. ಹೀಗಾಗಿ ಈ ಏಜನ್ಸಿಗೆ ಎರಡಂಕಿ ಲಾಟರಿ ನಡೆಸಲು ಗುತ್ತಿಗೆ ನೀಡಲಾಗಿತ್ತು. ಆದರೆ ಏಜನ್ಸಿ ಎರಡಂಕಿ ಜಾಗದಲ್ಲಿ ಒಂದಂಕಿ ಲಾಟರಿಯನ್ನೇ ನಡೆಸಿದೆಯಂತೆ. ಅಷ್ಟೇ ಅಲ್ಲ ಆನ್‌ಲೈನ್ ಲಾಟರಿಯ ಸರ್ವರ್ ರಾಜ್ಯದಲ್ಲೇ ಇರುವುದು ಅನಿವಾರ್ಯವಿತ್ತು. ಆದರೆ ಈ ಕಂಪೆನಿ ತನ್ನ ಸರ್ವರ್ ಚೆನ್ನೈಯಲ್ಲೇ ಇರಿಸಿತ್ತು. ಅಲ್ಲಿಂದಲೇ ಲಾಟರಿ ಸಂಚಾಲನೆ ಮಾಡುತ್ತಿತ್ತು. ಜೊತೆಗೆ ಕಡಿಮೆ ಹಣ ಹಾಕಿದ್ದ ಲಾಟರಿ ನಂಬರ್‌ಗೇ ಫಲಿತಾಂಶ ಕಾಣಿಸಿ ರಾಜ್ಯದ ಜನರನ್ನು ವಂಚಿಸಿತ್ತು. ಆಗ ಈ ಹಗರಣದ ಕುರಿತಂತೆ ವಿಧಾನ ಸಭೆಯಲ್ಲೂ ಕೇಳಿ ಬಂದಿತ್ತು. ಆಗಿನ ಗೃಹಮಂತ್ರಿ ಎನ್‌ಸಿಪಿಯ ಆರ್.ಆರ್. ಪಾಟೀಲ್ (ಈಗ ದಿವಂಗತರು) ಇದರ ಸಿ.ಐ.ಡಿ. ತನಿಖೆಗೆ ಆದೇಶಿಸಿದ್ದರು. 2007ರಲ್ಲಿ ಸಿಐಡಿಯ ಹೆಚ್ಚುವರಿ ಮಹಾಸಂಚಾಲಕರು ವರದಿಯನ್ನು ಸರಕಾರಕ್ಕೆ ನೀಡಿದ್ದರು. ಆದರೆ ಇದು ಗೌಪ್ಯ ಎಂದು ಹೇಳಿ ಸರಕಾರ ಆ ವರದಿ ಬಹಿರಂಗಪಡಿಸಿರಲಿಲ್ಲ.
ಲಾಟರಿ ಸಂಚಾಲನಾಲಯ ವಿತ್ತ ಮಂತ್ರಾಲಯದ ಅಧೀನಕ್ಕೆ ಬರುತ್ತದೆ. ನಿಯಮ ಪ್ರಕಾರ ಪ್ರತೀದಿನ ಲಾಟರಿ ಒಂದೇ ಡ್ರಾಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಪ್ರತೀ 15 ನಿಮಿಷಕ್ಕೆ ಒಂದು ಡ್ರಾ ಮಾಡಿ ಅನಧಿಕೃತ ರೂಪದಲ್ಲಿ ಸಂಪಾದನೆ ಮಾಡುತ್ತಿತ್ತು.
* * *
ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್‌ನ ಬಳಕೆ!
ಮಹಾರಾಷ್ಟ್ರದಲ್ಲಿ ನಿರ್ಮಾಣವಾಗುವ ಡಾಮರ್ ರಸ್ತೆಗಳಲ್ಲಿ ಪ್ಲಾಸ್ಟಿಕ್‌ನ ಉಪಯೋಗ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಮತಿ ನೀಡಿವೆ. ಇದರಿಂದ ರಸ್ತೆ ನಿರ್ಮಾಣ ಕಾರ್ಯದಲ್ಲಿ ಪ್ಲಾಸ್ಟಿಕ್‌ನ ಉಪಯೋಗ ಮಾಡುವಲ್ಲಿನ ಬಿಕ್ಕಟ್ಟು ದೂರವಾದಂತಾಗಿದೆ.
ಡಾಮರ್‌ನ ರಸ್ತೆಯಲ್ಲಿ ಪ್ಲಾಸ್ಟಿಕ್‌ನ ಬಳಕೆಯಿಂದ ರಸ್ತೆಯ ಆಯುಷ್ಯ ಸುಮಾರು ಮೂರು ವರ್ಷ ಕಾಲ ಹೆಚ್ಚಲಿದೆಯಂತೆ. ಜೊತೆಗೆ ಮಳೆಗಾಲದಲ್ಲಿ ರಸ್ತೆಗಳಲ್ಲಿ ಹೊಂಡ ಕೂಡಾ ಬೀಳುವುದಿಲ್ಲವಂತೆ.
ನೂರು ಕಿಲೋ ಡಾಮರ್‌ನ ಜೊತೆ 6 ಕಿಲೋ ತನಕ ಪ್ಲಾಸ್ಟಿಕ್‌ನ ಬಳಕೆ ಮಾಡಬಹುದಾಗಿದೆ. ಆರ್ಥಿಕ ವರ್ಷದಲ್ಲಿ ಪ್ಲಾಸ್ಟಿಕ್‌ನಿಂದ ನೂರು ಕಿ.ಮೀ. ತನಕ ರಸ್ತೆ ನಿರ್ಮಾಣ ಮಾಡಲಾಗುವುದು. ಮುಂದಿನ ವರ್ಷ ಇದೇ ಫಾರ್ಮುಲಾದಲ್ಲಿ ಒಂದು ಸಾವಿರ ಕಿ.ಮೀ. ತನಕ ರಸ್ತೆ ನಿರ್ಮಾಣ ಮಾಡುವ ಗುರಿ ಸರಕಾರ ಹೊಂದಿದೆ. ಪ್ಲಾಸ್ಟಿಕ್‌ನ್ನು ಸಂಗ್ರಹಿಸಲು ಶಾಲಾ ಮಕ್ಕಳ ಸಹಯೋಗವನ್ನು ಪಡೆಯಲಾಗುವುದಂತೆ.
* * *
ಮರೀನ್ ಡ್ರೈವ್‌ನಲ್ಲಿ ಶಿಲ್ಪಸ್ಥಾಪನೆ ಬೇಡ
ದಕ್ಷಿಣ ಮುಂಬೈಯ ಮರೀನ್ ಡ್ರೈವ್‌ನಲ್ಲಿ ಕ್ರಿಕೆಟರ್ ಸಚಿನ್ ತೆಂಡುಲ್ಕರ್‌ರ ಶಿಲ್ಪವನ್ನು ಕೊನೆಗೂ ತೆಗೆದು ಹಾಕಲಾಗಿದೆ. ಈ ಕಾರ್ಯಾಚರಣೆಯನ್ನು ಮನಪಾ ನೋಟಿಸ್‌ನ ನಂತರ ಕೈಗೊಳ್ಳಲಾಯಿತು. ಆರ್‌ಪಿಜಿ ಆರ್ಟ್ ಫೌಂಡೇಶನ್‌ಗೆ ಮನಪಾ ನೋಟಿಸ್ ನೀಡಿತ್ತು.
ಆರ್‌ಪಿಜಿ ಎಂಟರ್‌ಪ್ರೈಸಸ್‌ನಲ್ಲಿ ಬ್ರ್ಯಾಂಡ್ ಆ್ಯಂಡ್ ಗ್ರೂಪ್ ಕಮ್ಯುನಿಕೇಶನ್ಸ್‌ನ ವರಿಷ್ಠ ಉಪಾಧ್ಯಕ್ಷ ಸುಮಿತ್ ಚಟರ್ಜಿ ಅವರು ಹೇಳುವಂತೆ ಅವಶ್ಯವಿರುವ ಎಲ್ಲಾ ದಾಖಲೆ ಪತ್ರ, ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸ್ಥಳೀಯ ಆಡಳಿತದ ಮಂಜೂರು ಪಡೆದ ನಂತರವೇ ಮರೀನ್ ಡ್ರೈವ್‌ನಲ್ಲಿ ಈ ಶಿಲ್ಪವನ್ನು ಸ್ಥಾಪನೆ ಮಾಡಲಾಗಿತ್ತು. ಆದರೆ ಈಗ ಮನಪಾ ನೋಟಿಸ್ ನೀಡಿದೆ. ಇದನ್ನು ಮನ್ನಿಸಿ ಅಲ್ಲಿಂದ ಶಿಲ್ಪವನ್ನು ತೆಗೆಯಲಾಗಿದೆ ಹಾಗೂ ಪರ್ಯಾಯ ಸ್ಥಳವನ್ನು ನೀಡುವಂತೆ ಆಡಳಿತವನ್ನು ವಿನಂತಿಸಲಾಗಿದೆ ಎಂದಿದ್ದಾರೆ. ಈ ಫೌಂಡೇಶನ್ ಮುಂಬೈಯ ಸಾರ್ವಜನಿಕ ಸ್ಥಳಗಳನ್ನು ಸುಂದರಗೊಳಿಸುವುದಕ್ಕಾಗಿ ಹಲವಾರು ಪ್ರತಿಮೆಗಳನ್ನು ಸ್ಥಾಪಿಸುತ್ತಿದೆ. ಇದನ್ನೂ ಪ್ರಖ್ಯಾತ ಕಲಾವಿದರು ನಿರ್ಮಿಸುತ್ತಾರೆ ಹಾಗೂ ನಗರಕ್ಕೆ ದಾನ ನೀಡುತ್ತಾರೆ.
ಆದರೆ ಮರೀನ್ ಡ್ರೈವ್‌ನಲ್ಲಿ ಅಳವಡಿಸಿದ ಸಚಿನ್‌ರ ಈ ಶಿಲ್ಪದ ಬಗ್ಗೆ ನಾಗರಿಕರು ಮತ್ತು ಜನಕಲ್ಯಾಣ ಸಮೂಹದವರು ಆಕ್ಷೇಪಿಸಿದ್ದರು. ಮರೀನ್ ಡ್ರೈವ್ ಕ್ಷೇತ್ರವನ್ನು ರಾಜ್ಯ ಮೇ, 2015ರಲ್ಲಿ ಯುನೆಸ್ಕೋ ವಿಶ್ವ-ಸ್ಮಾರಕದ ರೂಪದಲ್ಲಿ ಅಧಿಸೂಚಿತಗೊಳಿಸಿತ್ತು. ಅನಂತರ ಕೆಲವು ತಿಂಗಳಲ್ಲಿ ನರೀಮನ್ ಪಾಯಿಂಟ್ ಚರ್ಚ್‌ಗೇಟ್ ರೆಸಿಡೆಂಟ್ ಅಸೋಸಿಯೇಶನ್ ಸೆಪ್ಟ್ಟಂಬರ್, 2015ರಂದು ಮುಂಬೈ ಸ್ಮಾರಕ ಸಂರಕ್ಷಣಾ ಸಮಿತಿ, ಮಹಾನಗರ ಪಾಲಿಕೆಗೆ ಪತ್ರ ಬರೆದು ಈ ಕ್ಷೇತ್ರದಲ್ಲಿ ಯಾವುದೇ ಶಿಲ್ಪನಿರ್ಮಾಣದ ಸ್ಥಾಪನೆ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿತ್ತು. ಈ ಸ್ಥಳ ನಾಗರಿಕರಿಗೆ ಓಡಾಡಲು ಇರುವಂತದ್ದು. ಹಾಗೂ ಯಾವುದೇ ತೊಂದರೆಗಳಿಲ್ಲದೆ ಜನರು ಸಮುದ್ರದ ಸುಂದರ ರೂಪವನ್ನು ನೋಡಲು ಸಾಧ್ಯವಾಗುವಂತಿರಬೇಕು ಎಂದು ಅಸೋಸಿಯೇಶನ್ ಪತ್ರದಲ್ಲಿ ಆಗ್ರಹಿಸಿತ್ತು.
* * *
ಏರ್‌ಪೋರ್ಟ್ ಜಮೀನಿನ ಜೋಪಡಿಗಳಿಗೆ ಹೊಸ ನಿಯಮದಿಂದ ಸಂಚಕಾರ
ಮುಂಬೈ ವಿಮಾನ ನಿಲ್ದಾಣದ ಜಮೀನಿನಲ್ಲಿ ಇರುವ ಜೋಪಡಿ ನಿವಾಸಿಗಳಿಗೆ ಪುನರ್ವಸತಿ ಯೋಜನೆಯನ್ನು ಮಳೆಗಾಲದ ನಂತರ ಕೈಗೊಳ್ಳಲು ರಾಜ್ಯ ಸರಕಾರ ಮುಂದಾಗಿದೆ. ಈ ಜೋಪಡಿ ಕ್ಷೇತ್ರವು ಕುರ್ಲಾ, ಕಲೀನಾ ಮತ್ತು ಸಾಂತಾಕ್ರೂಜ್‌ನ ಸುಮಾರು ಐದು ಸಾವಿರ ಜೋಪಡಿ ದಾರರಿಗೆ ವಿದ್ಯಾವಿಹಾರ್‌ನಲ್ಲಿ ಫ್ಲ್ಯಾಟ್ ನೀಡಲಾಗುತ್ತದೆ. ಇದಕ್ಕಾಗಿ ಈ ತನಕದ ಪ್ರಚಲಿತ ಪುನರ್ವಸತಿಯ ಹಳೆಯ ನಿಯಮಾವಳಿಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಜೋಪಡಿ ನಿವಾಸಿಗಳಿಗೆ ಮನೆ ಸಿಗಬೇಕಾದರೆ ಅವರು ಜನವರಿ 2000ದ ಮೊದಲಿನ ಓಟರ್ ಕಾರ್ಡ್ ಅಥವಾ ವಿದ್ಯುತ್ ಬಿಲ್‌ನ್ನು ಒಪ್ಪಿಸಬೇಕಾಗುವುದು. ರೇಶನ್ ಕಾರ್ಡ್‌ನ್ನು ಒಂದು ವರ್ಷದ ಮೊದಲು ಸಾಕ್ಷಿಯಾಗಿ ಸ್ವೀಕರಿಸಲು ನಿರಾಕರಿಸಲಾಗಿದೆ. ತಾಜಾ ಬದಲಾವಣೆಯ ನಂತರ ಮಹಾನಗರ ಪಾಲಿಕೆಯ ನೋಟಿಸ್, ಸರಕಾರಿ ಸರ್ವೇ, ಜನ್ಮ-ಮೃತ್ಯು ಪ್ರಮಾಣ ಪತ್ರ, ಡ್ರೈವಿಂಗ್ ಲೈಸನ್ಸ್, ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್, ಬ್ಯಾಂಕ್ ಖಾತೆ ಇವುಗಳನ್ನೆಲ್ಲ ಪರಿಗಣಿಸಲಾಗುವುದಿಲ್ಲವಂತೆ. ಹೀಗಾಗಿ ಈ ವಿಷಯ ಮುಂದಿಟ್ಟು ವಿವಾದ ಹೆಚ್ಚುವ ಸಾಧ್ಯತೆಗಳು ಕಂಡು ಬಂದಿವೆ.
ಆದರೆ ಈಗ ಹೊಸ ನಿಯಮಗಳಿಗೆ ಸ್ಥಳೀಯ ಶಾಸಕರು, ಜನತೆ ವಿರೋಧಿಸಲು ಮುಂದಾಗಿದ್ದಾರೆ. ಬಡ ಜೋಪಡಿದಾರರಿಗೆ ತಮ್ಮ ಹಳೆಯ ದಾಖಲೆಗಳನ್ನು ಸಂಗ್ರಹಿಸಿಡಲು ಹೇಗೆ ಸಾಧ್ಯವಿದೆ? ಎನ್ನುವ ಪ್ರಶ್ನೆ ಹಾಕಿದ್ದಾರೆ.