ಎತ್ತಿನಹೊಳೆ: ಪ್ರಮುಖರ ಸಭೆಗೆ ಸಂಸದ ಆಸ್ಕರ್ ಭರವಸೆ
ಮಂಗಳೂರು, ಜೂ.21: ಎತ್ತಿನಹೊಳೆ ಯೋಜ ನೆಗೆ ಸಂಬಂಧಿಸಿ ಸೂಕ್ತ ದಿನವೊಂದನ್ನು ನಿಗದಿಪಡಿಸಿ ಮುಖ್ಯಮಂತ್ರಿ, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು, ಯೋಜನೆ ವಿರೋಧಿ ಹೋರಾಟ ಗಾರರು, ತಜ್ಞರನ್ನು ಒಳಗೊಂಡ ಪ್ರಮುಖ ಸಭೆಯನ್ನು ಕರೆಯಲು ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ನ ಹಿರಿಯ ನಾಯಕ, ಸಂಸದ ಆಸ್ಕರ್ ಫೆರ್ನಾಂಡಿಸ್ ಭರವಸೆ ನೀಡಿದ್ದಾರೆ.
ನಗರದ ಸಹೋದಯ ಸಭಾಂಗಣದಲ್ಲಿ ಇಂದು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಆಶ್ರಯದಲ್ಲಿ ‘ನೇತ್ರಾವತಿ ಬಚಾವೊ’ ಎಂಬ ಜಿಲ್ಲೆಯ ಜನಪ್ರತಿನಿಧಿ ಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, ಶೀಘ್ರದಲ್ಲೇ ಸಭೆ ದಿನಾಂಕ ನಿಗದಿಪಡಿಸಿ, 15 ದಿನಗಳಿಗೆ ಮುಂಚಿತವಾಗಿ ತಿಳಿಸಲಾಗುವುದು ಎಂದರು.
ಎತ್ತಿನಹೊಳೆ ಯೋಜನೆ ಕುರಿತಂತೆ ಉಂಟಾಗಿರುವ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸಭೆ ಮಾಡಿದಾಗ ನಮ್ಮ ಪ್ರದೇಶದ ಜನರನ್ನು ಕರೆದು ಅವರ ಸಂದೇಹ, ಸೂಚನೆಗಳನ್ನು ಆಲಿಸಿ ಯೋಜನೆಯಲ್ಲಿ ಬದಲಾವಣೆ ತರಬಹುದು ಎಂದು ಮುಖ್ಯಮಂತ್ರಿಗೆ ಮನವರಿಕೆ ಮಾಡಲಾಗಿತ್ತು. ಇದಕ್ಕಾಗಿ ಮುಖ್ಯಮಂತ್ರಿಯವರು ಎರಡು ಬಾರಿ ಸಭೆ ನಿಗದಿ ಮಾಡಿದ್ದರೂ ಕಾರಣಾಂತರಗಳಿಂದ ಮುಂದೂಡಬೇಕಾಯಿತು. ಇದೀಗ ಮತ್ತೆ ನೀರಾವರಿ ಸಚಿವರೂ ಸಭೆ ಕರೆಯಲು ಒಪ್ಪಿದ್ದಾರೆ. ಆದ್ದರಿಂದ ಎಲ್ಲಿ ಸಭೆ ನಡೆಸಬೇಕು, ಯಾರೆಲ್ಲಾ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಬಗ್ಗೆ ಪಟ್ಟಿಯನ್ನು ನೀಡುವಂತೆ ಅವರು ಹೋರಾಟ ಸಮಿತಿಗೆ ಸಲಹೆ ನೀಡಿದರು. ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಜಲ ತಜ್ಞ ಪ್ರೊ. ಎಸ್.ಜಿ. ಮಯ್ಯ ಅವರು ಎತ್ತಿದ ಪ್ರಶ್ನೆಗಳು ಹಾಗೂ ಆತಂಕಗಳ ಬಗ್ಗೆ ಪ್ರತಿಕ್ರಿಯಿಸಿದ ಆಸ್ಕರ್ ಫೆರ್ನಾಂಡಿಸ್, ಆ ಪ್ರಶ್ನೆಗಳನ್ನು ಲಿಖಿತವಾಗಿ ತನಗೆ ನೀಡಿದ್ದಲ್ಲಿ ಅದಕ್ಕೆ ಮಾಹಿತಿ ಹಕ್ಕಿನಡಿ ಸೂಕ್ತ ಉತ್ತರವನ್ನು ಕೊಡಿಸುವ ಪ್ರಯತ್ನ ಮಾಡಲಿದ್ದೇನೆ ಎಂದರು.
ಎತ್ತಿನಹೊಳೆ ಯೋಜನೆಯಿಂದ ದೀರ್ಘಕಾಲೀನ ದುಷ್ಪರಿಣಾಮ: ಎಸ್.ಜಿ. ಮಯ್ಯ
ಎತ್ತಿನಹೊಳೆ ಯೋಜನೆಯಡಿ ಸರಕಾರ ಹೇಳಿಕೊಂಡಿರುವಂತೆ ಯಾವುದೇ ಕಾರಣಕ್ಕೂ 24 ಟಿಎಂಸಿ ನೀರು ಲಭ್ಯವಾಗಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಹಿರಿಯ ಜಲತಜ್ಞ ಪ್ರೊ.ಎಸ್.ಜಿ. ಮಯ್ಯ, ಸದ್ಯ ಈ ಯೋಜನೆಯಿಂದ ಯಾವುದೇ ತೊಂದರೆಯಾಗದಿದ್ದರೂ, ದೀರ್ಘಕಾಲೀನವಾಗಿ ಈ ಯೋಜನೆ ಪಶ್ಚಿಮಘಟ್ಟದ ತಪ್ಪಲಿನ ಎಲ್ಲಾ ಜಿಲ್ಲೆಗಳಿಗೂ ಮಾರಕವಾಗಿ ಪರಿಣಮಿಸಲಿದೆ ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಶಾಸಕ ಯೋಗೀಶ್ ಭಟ್ ಮಾತನಾಡಿ, ತುಂಬೆ ಕಿಂಡಿ ಅಣೆಕಟ್ಟಿನಂತೆ ಮತ್ತಷ್ಟು ಕಿಂಡಿ ಅಣೆಕಟ್ಟುಗಳ ರಚನೆಯ ಮೂಲಕ ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಿದೆ ಎಂದರು.
ಕರ್ನಾಟಕ ನದಿ ಜಲಾನಯನ ಪ್ರಾಧಿಕಾರ ರಚನೆಯಿಂದ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವೇ ಎಂದು ಸಭೆಯಲ್ಲಿ ಶಾಸಕ ಜೆ.ಆರ್. ಲೋಬೊ ಪ್ರಶ್ನಿಸಿದಾಗ, ಕರ್ನಾಟಕಕ್ಕೆ ಸಂಬಂಧಿಸಿ ಹಲವಾರು ಜಲನೀತಿ, ಪ್ರಾಧಿಕಾರಗಳಿವೆ. ಆದರೆ ಕರಾವಳಿಗೆ ಪ್ರತ್ಯೇಕವಾಗಿ ಜಲನೀತಿಯೊಂದೇ ಇಲ್ಲಿನ ಸಮಸ್ಯೆಗೆ ಪರಿಹಾರ ಎಂದು ಪ್ರೊ. ಮಯ್ಯ ಅಭಿಪ್ರಾಯಿಸಿದರು. ಸಂವಾದ ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನಿ ಮಠದ ಈಶ ವಿಠ್ಠಲದಾಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಾಜಿ ಸಚಿವ ಅಮರನಾಥ ಶೆಟ್ಟಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಬಾಲಕೃಷ್ಣ ಭಟ್ ಮೊದಲಾವದರು ಉಪಸ್ಥಿತರಿದ್ದರು. ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ವಿಜಯ ಕುಮಾರ್ ಶೆಟ್ಟಿ, ಎಂ.ಜಿ. ಹೆಗಡೆ, ದಿನಕರ ಶೆಟ್ಟಿ, ಪುರುಷೋತ್ತಮ ಚಿತ್ರಾಪುರ, ಸತ್ಯಜಿತ್ ಸುರತ್ಕಲ್, ದಿನೇಶ್ ಹೊಳ್ಳ, ಯೋಗೀಶ್ ಶೆಟ್ಟಿ ಜೆಪ್ಪು ಮೊದಲಾದವರು ಕಾರ್ಯಕ್ರಮ ಸಂಘಟಿಸಿದ್ದರು.
ಸಮುದ್ರಕ್ಕೆ ಸೇರುವ ಪ್ರವಾಹದ ನೀರು ವ್ಯರ್ಥವಲ್ಲ!
ಸಮುದ್ರಕ್ಕೆ ಪ್ರವಾಹದ ನೀರು ಸೇರುವುದು ವ್ಯರ್ಥ ಎಂಬ ಮಾತು ಅವೈಜ್ಞಾನಿಕವಾಗಿದ್ದು, ಈ ಪ್ರಕ್ರಿಯೆ ನಡೆಯದಿದ್ದರೆ ಸಮುದ್ರದ ನೀರಿಗೆ ಜೀವವಿಲ್ಲವಾಗುತ್ತದೆ. ಹಾಗಾಗಿ ಪ್ರವಾಹದ ನೀರು ವ್ಯರ್ಥ ಎಂಬ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸುವ ಜೊತೆಗೆ ಎತ್ತಿನಹೊಳೆ ಯೋಜನೆಯ ಕುರಿತಂತೆ ಇಲ್ಲಿನ ಮೀನುಗಾರರು, ರೈತರು ಹಾಗೂ ಪಶ್ಚಿಮ ಘಟ್ಟಕ್ಕೆ ಆಗುವ ತೊಂದರೆಗಳ ಬಗ್ಗೆ ಕರಾವಳಿ ಭಾಗದ ಜನಪ್ರತಿನಿಧಿಗಳು ಸದನದಲ್ಲಿ ಪ್ರಸ್ತಾಪಿಸುವ ಅಗತ್ಯವಿದೆ ಎಂದು ಪರಿಸರ ಸಂಬಂಧಿ ಸಾಕ್ಷಚಿತ್ರ ಛಾಯಾಚಿತ್ರಗ್ರಾಹಕರಾಗಿರುವ ಸುಧೀರ್ ಶೆಟ್ಟಿ ಅಭಿಪ್ರಾಯಿಸಿದರು.
ಎಲ್ಲಿ ಸಭೆ ನಡೆಸಿದರೂ ಭಾಗವಹಿಸಲು ಸಿದ್ಧ
ನೇತ್ರಾವತಿ ನದಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಎತ್ತಿನ ಹೊಳೆ ಯೋಜನೆಗೆ ಸಂಬಂಧಿಸಿ ಮುಖ್ಯಮಂತ್ರಿಯವರು, ಇತರ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಭೆಯನ್ನು ಎಲ್ಲಿ ನಡೆಸಿದರೂ ಅದರಲ್ಲಿ ಭಾಗವಹಿಸಲು ನಾವು ಸಿದ್ಧ ಎಂದು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಪರವಾಗಿ ಮುಖ್ಯಸ್ಥರಾದ ವಿಜಯ ಕುಮಾರ್ ಶೆಟ್ಟಿ ಪ್ರತಿಕ್ರಿಯಿಸಿದರು. ನಮ್ಮಲ್ಲಿ ಯಾವುದೇ ಹಠದ ಧೋರಣೆ ಇಲ್ಲ. ಸಭೆಯ ಬದಲಿಗೆ, ನಮ್ಮ ಜಿಲ್ಲೆಗೆ ಮಾರಕವಾಗಿರುವ ಯೋಜನೆಯನ್ನು ನಿಲ್ಲಿಸುವುದಾಗಿ ಹೇಳಿದರೆ ನಾವು ಮುಖ್ಯಮಂತ್ರಿಯನ್ನು ಹೃದಯ ತುಂಬಿ ಅಭಿನಂದಿಸಲಿದ್ದೇವೆ ಎಂದು ಅವರು ಹೇಳಿದರು.
ನೇತ್ರಾವತಿ ನೀರು ಬೆಂಗಳೂರಿಗೆ!
ನೇತ್ರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ದು, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಬೆಂಗಳೂರಿನ ಸಂಸ್ಕರಿಸಿದ ನೀರನ್ನು ಹರಿಸುವ ಉದ್ದೇಶ ಈ ಯೋಜನೆಯ ಗುಪ್ತ ಅಜೆಂಡಾ ಎಂದು ಪ್ರೊ. ಮಯ್ಯ ಆಪಾದಿಸಿದರು.