ಸಂಪುಟ ವಿಸ್ತರಣೆಯ ಗೊಜಲುಗಳು ಸರಿಯಾದೀತೇ?
ಮಾನ್ಯರೆ,
ಸಂಪುಟ ವಿಸ್ತರಣೆ, ಪುನಾರಚನೆ ಜೇನುಗೂಡಿಗೆ ಕೈ ಹಾಕಿದಂತೆ ಎನ್ನುವ ಹಳೆ ಮಾತು ಇನ್ನೊಮ್ಮೆ ರುಜುವಾತಾಗಿದೆ. ಹೈಕಮಾಂಡ್ ಎನ್ನುವ ಗುಮ್ಮ ಮತ್ತು ಪಕ್ಷದ ಶಿಸ್ತಿನ ಹೆಸರಿನಲ್ಲಿ, ಭಿನ್ನಮತವು ಒಂದೆರಡು ದಿನಗಳಲ್ಲಿ ತಣ್ಣಗಾಗಬಹುದು ಎನ್ನುವ ಸಿದ್ದರಾಮಯ್ಯನವರ ಅನುಭವದ ಆಧಾರದ ಮೇಲಿನ ನಿರೀಕ್ಷೆ ಸುಳ್ಳಾದಂತೆ ಕಾಣುತ್ತಿದೆ.ಎಲ್ಲವನ್ನೂ ಹೈಕಮಾಂಡ್ ಹೆಸರಿನಲ್ಲಿ ನಿಭಾಯಿಸಬಹುದು ಎನ್ನುವ ಅವರ ಆತ್ಮ ವಿಶ್ವಾಸ ನೆಲ ಕಚ್ಚಿದೆ. ಪಕ್ಷದ ಹೈಕಮಾಂಡ್ ಮೇಲೆಯೇ ಪಕ್ಷದ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ರೊಚ್ಚಿಗೆದ್ದದ್ದು, ಅವರನ್ನು ದಿಗ್ಭ್ರಮೆಗೊಳಿಸಿದೆ. ಕಾಂಗ್ರೆಸ್ಸಿಗರು ‘‘ಯಾವ ಪುಡ್ಪೋಸಿ ಹೈಕಮಾಂಡ್’’ ಎಂಬ ಪದಪುಂಜ ವನ್ನು ತಮ್ಮ ಹೈಕಮಾಂಡ್ ವಿರುದ್ಧ ಬಳಸುವುದು ಕಾಂಗ್ರೆಸ್ ಪಕ್ಷದಲ್ಲಿ ಒಂದು ಆತಂಕಕಾರಿ ಬೆಳವಣಿಗೆ ಎನ್ನಬಹುದು. ‘‘ಗೂಳಿ ಆಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು’’ ಎನ್ನುವಂತೆ, ಅತೃಪ್ತರೆಲ್ಲ ಪಕ್ಷದ ಮೇಲೆ ಕಲ್ಲು ಬೀಸುತ್ತಿದ್ದಾರೆ.
ಹಿರಿಯರು, ಕಿರಿಯರು, ಅನುಭವಿಗಳು, ಜಾತಿ, ಧರ್ಮ ಮತ್ತು ಪ್ರದೇಶಗಳನ್ನು ಸಂತೃಪ್ತಿ ಪಡಿಸಿ ಸಂಪುಟ ರಚನೆ, ವಿಸ್ತರಣೆ ಮತ್ತು ಪುನಾರಚನೆ ಒಂಟಿ ತಂತಿಯ ಮೇಲಿನ ನಡಿಗೆಯಷ್ಟು ಕ್ಲಿಷ್ಟಕರ. ಇದಕ್ಕೆ ತುಂಬಾ ಆಳವಾದ, ಚಾಕಚಕ್ಯತೆ, ಅನುಭವ ಮತ್ತು ಡಿಪ್ಲೊಮೆಸಿಯ ಅಗತ್ಯ ಇರುತ್ತದೆ. ಭಾರತದ ರಾಜಕೀಯ ವ್ಯವಸ್ಥೆಯ ವಿಚಿತ್ರವೆಂದರೆ ಒಮ್ಮೆ ಮಂತ್ರಿಯಾದರೆ, ಆತ ಯಾವಾಗಲೂ ಮಂತ್ರಿಯೇ? ನಂತರ ಅನುಭವದ ಆಧಾರದ ಮೇಲೆ ಅವರು ಖಾಯಂ ಮಂತ್ರಿಗಳಾಗುತ್ತಾರೆ. ಅವರ ಪಕ್ಷ ಅಧಿಕಾರಕ್ಕೆ ಬಂದರೆ, ಕಾಲನ ಕರೆ ಬರುವವರೆಗೂ ಗದ್ದುಗೆ ಬಿಡುವುದಿಲ್ಲ. ರಾಮಕೃಷ್ಣ ಹೆಗಡೆಯವರು ಹೇಳುತ್ತಿದ್ದಂತೆ, ರಾಜಕಾರಣಿಗಳ ಶಬ್ದಕೋಶದಲ್ಲಿ ‘ನಿವೃತ್ತಿ’ ಶಬ್ದವೇ ಇರುವುದಿಲ್ಲ. ಅವಕಾಶ ನೀಡಿದರೆ ಕೊನೆಯ ಉಸಿರು ಇರುವತನಕ ‘ದೇಶ ಸೇವೆ’ ಮಾಡುವ ಹಂಬಲ ಅವರಿಗೆ ಇರುತ್ತದೆ. ಪ್ರತಿಯೊಬ್ಬರಿಗೂ ಸಕಲ ಸರಕಾರಿ ಸೌಲಭ್ಯಗಳು ಕೊನೆಯವರೆಗೂ ಬೇಕು. ಕೊನೆಗಾಲದಲ್ಲಿ ಕೂಡಾ ‘ತಮ್ಮವರನ್ನು’ ಗದ್ದುಗೆಯಲ್ಲಿ ನೋಡಿಯೇ ದಾರಿ ಬಿಡುತ್ತಾರೆ. ತಂದೆಯ ‘ಅನುಭವದ ಸಾರ’ದಲ್ಲಿ ಮಗ/ಮಗಳು ಇನ್ನೂ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಈ ಪ್ರಹಸನಕ್ಕೆ ವೈಭವೀಕೃತ ಹೇಳಿಕೆ ಕೊಡುತ್ತಾರೆ.
ಮಂತ್ರಿಗಳ ಅಧಿಕಾರ ಅವಧಿಯನ್ನು ಎರಡು ವರ್ಷಗಳಿಗೆ ಸೀಮಿತ ಮಾಡಿದ್ದರೆ ಪ್ರತಿಯೊಬ್ಬರಿಗೂ ‘ಮಂತ್ರಿ’ ಕುರ್ಚಿ ದೊರೆತು, ಇಂತಹ ಸಮಸ್ಯೆಗಳು ಉದ್ಭವ ವಾಗುತ್ತಿರಲಿಲ್ಲ. ಅದರೆ, ತಾನು ಅಧಿಕಾರ ಅನುಭವಿಸಿದ್ದೇನೆ, ಇನ್ನೊಬ್ಬರೂ ಅನುಭವಿಸಲಿ ಎನ್ನುವ ಹೃದಯ ವೈಶಾಲ್ಯ ಯಾರಿಗೂ ಇರದಿರುವುದು ಈ ಸಮಸ್ಯೆ ಬ್ರಹ್ಮಾಂಡವಾಗಿ ಬೆಳೆಯಲು ಕಾರಣ. ತಾನೊಬ್ಬನೇ ಮಂತ್ರಿ ಪದವಿಗೆ ಅರ್ಹ. ತನ್ನ ನಂತರ ತನ್ನವರು, ತನ್ನ ಬಂಧು ಬಾಂಧವರು, ಜಾತಿಯವರು, ಪ್ರದೇಶದವರು ಎನ್ನುವ ಸಂಕುಚಿತ ಭಾವನೆಗಳು ಇರುವ ತನಕ ಈ ಸಮಸ್ಯೆಗೆ ಪರಿಹಾರವಿಲ್ಲ.