ಉಡ್ತಾ ಪಂಜಾಬ್ ಪ್ರಯಾಸಕರ ಯುದ್ಧದಲ್ಲಿ ಸಣ್ಣದೊಂದು ಗೆಲುವಷ್ಟೇ
ಶಹೀದ್ ಕಪೂರ್ ಅಭಿನಯದ ಉಡ್ತಾ ಪಂಜಾಬ್ ಸಿನೆಮಾವನ್ನು ನಿರ್ಮಾಪಕ ಅನುರಾಗ್ ಕಶ್ಯಪ್ ಹೆಚ್ಚಿನ ಕತ್ತರಿ ಪ್ರಯೋಗವಿಲ್ಲದೆ ಬಿಡುಗಡೆಯಾಗುವಂತೆ ನೋಡುವಲ್ಲಿ ಸಫಲರಾದರು. ಬೆಂಗಳೂರಿನ ನನ್ನ ನಿವಾಸಕ್ಕೆ ಆರು ವೃತ್ತ ಪತ್ರಿಕೆಗಳು ಬರುತ್ತವೆ. ಕಳೆದ ಮಂಗಳವಾರ ಜೂನ್ 14ರಂದು ಎಲ್ಲ ಆರು ಪತ್ರಿಕೆಗಳ ಮುಖಪುಟದಲ್ಲಿ ಉಡ್ತಾ ಪಂಜಾಬ್ ಸಿನೆಮಾದ ಬಗ್ಗೆ ಬಾಂಬೆ ಉಚ್ಚನ್ಯಾಯಾಲಯ ಹಿಂದಿನ ದಿನ ನೀಡಿದ ತೀರ್ಪಿನ ಸುದ್ದಿಯನ್ನು ಹೊಂದಿದ್ದವು. ಕೇಂದ್ರ ಚಲನಚಿತ್ರ ಪ್ರಮಾಣೀಕರನ ಮಂಡಳಿಯು ಈ ಚಿತ್ರದಲ್ಲಿ 89 ದೃಶ್ಯಗಳನ್ನು ತೆಗೆದುಹಾಕುವಂತೆ ಸೂಚಿಸಿತ್ತು. ಬಾಂಬೆ ಉಚ್ಚ ನ್ಯಾಯಾಲಯ ಕೇವಲ ಒಂದು ದೃಶ್ಯಕ್ಕೆ ಕತ್ತರಿ ಪ್ರಯೋಗ ಮಾಡಿ ಸಿನಿಮಾಕ್ಕೆ ಹಸಿರು ನಿಶಾನೆ ತೋರಿಸಿತ್ತು. ‘‘ಒಬ್ಬ ಚಿತ್ರನಿರ್ದೇಶಕ ಸಿನೆಮಾವನ್ನು ಹೇಗೆ ಮಾಡಬೇಕು ಮತ್ತು ಹೇಗೆ ಶಬ್ದಗಳನ್ನು ಬಳಸಬೇಕು ಎಂಬುದನ್ನು ಯಾರಿಂದಲೂ ಆಗ್ರಹಿಸಲು ಸಾಧ್ಯವಿಲ್ಲ; ಸಿನೆಮಾಗಳನ್ನು ಸೆನ್ಸಾರ್ ಮಾಡುವ ಅಗತ್ಯವಿಲ್ಲ’’ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿತ್ತು. ತೀರ್ಪನ್ನು ನಿಟ್ಟುಸಿರು ಬಿಡುವ ಮೂಲಕ ಮತ್ತು ಆಚರಿಸುವ ಮೂಲಕ ಸ್ವಾಗತಿಸಲಾಯಿತು. ಸೆನ್ಸಾರ್ ಮಂಡಳಿಯು ಈ ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಬೇಕು ಎಂದು ಸೂಚಿಸಿದ್ದರ ಹಿಂದೆ ಸ್ಪಷ್ಟವಾಗಿ ರಾಜಕೀಯ ಉದ್ದೇಶವಿತ್ತು. ಮುಖ್ಯವಾಗಿ ಪಂಜಾಬ್‌ನಲ್ಲಿ ಮಾದಕದ್ರವ್ಯ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸೋಮಾರಿತನವನ್ನು ಪ್ರದರ್ಶಿಸುತ್ತಿರುವ ಅಕಾಲಿ ದಳ-ಬಿಜೆಪಿ ಸರಕಾರವನ್ನು ಮತ್ತಷ್ಟು ಕೆಟ್ಟ ಪ್ರಚಾರದಿಂದ ರಕ್ಷಿಸುವ ಉದ್ದೇಶ ಇದರ ಹಿಂದಿತ್ತು.
ಓರ್ವ ಲೇಖಕನಾಗಿ ವೃತ್ತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪೂರ್ವಷರತ್ತಾಗಿ ಅಳವಡಿಸಿಕೊಂಡಿರುವ ನಾನು ಈ ಆಚರಣೆಯಲ್ಲಿ ಭಾಗಿಯಾಗಲು ಸಂತೋಷಪಟ್ಟೆ. ಆದರೆ ನನ್ನ ಸಂತೋಷವನ್ನು ಒಂದು ಪತ್ರಿಕೆಯ ಒಳಪುಟಗಳಲ್ಲಿದ್ದ ಸುದ್ದಿಯೊಂದು ಕಸಿದುಕೊಂಡಿತು. ನ್ಯಾಯಾಲಯದ ಮೂಲಕ ಉಡ್ತಾ ಪಂಜಾಬ್ ಸಿನೆಮಾ ನಿಟ್ಟುಸಿರು ಬಿಡುವಂತಾದರೆ ಗುಜರಾತ್‌ನ ನಿರ್ದೇಶಕರೊಬ್ಬರಿಗೆ ತನ್ನ ಸಿನೆಮಾದಲ್ಲಿ ನೂರು ದೃಶ್ಯಗಳಿಗೆ ಕತ್ತರಿ ಪ್ರಯೋಗಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿರುವ ವಿಚಾರ ತಿಳಿದುಬಂತು.
‘ಸಲಗ್ತೊ ಸವಾಲ್ ಅನಾಮತ್’ ಎಂಬ ಈ ಸಿನೆಮಾವು ಗುಜರಾತ್‌ನಲ್ಲಿ ಹಾರ್ದಿಕ್ ಪಟೇಲ್ ಮುನ್ನಡೆಸಿದ ಪಾಟಿದಾರ್ ಸಮುದಾಯದ ಪ್ರತಿಭಟನೆಯಿಂದ ಉಂಟಾದ ಮೀಸಲಾತಿ ಕುರಿತ ಚರ್ಚೆಯ ಕಥಾಹಂದರವನ್ನು ಹೊಂದಿತ್ತು. ಇತರ ಹಲವುಗಳ ಜೊತೆಗೆ ‘ಪಟೇಲ್’,‘ಪಾಟಿದಾರ್’ ಮತ್ತು ‘ಬಿ.ಆರ್. ಅಂಬೇಡ್ಕರ್’ ಮುಂತಾದ ಪದಗಳನ್ನೂ ಸಿನೆಮಾದಿಂದ ತೆಗೆದುಹಾಕಬೇಕೆಂದು ಸೂಚಿಸಿತ್ತು. ವ್ಯತ್ಯಾಸ ತಿಳುವಳಿಕೆಗೆ ನಿಲುಕುವಂಥದ್ದಾಗಿತ್ತು. ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾವ ರೀತಿ ಬೆದರಿಸಲಾಗುತ್ತಿದೆ ಮತ್ತು ಅದನ್ನು ಯಾವ ರೀತಿ ಎದುರಿಸಬಹುದು ಎಂಬ ಬಗ್ಗೆಯಿರುವ ಮೂಲಭೂತ ಅಸಮಾನತೆಯತ್ತ ಇದು ಬೊಟ್ಟು ಮಾಡುತ್ತದೆ. ಒಂದು ವೇಳೆ, ಉಡ್ತಾ ಪಂಜಾಬ್ ಸಿನೆಮಾವನ್ನು ಬಾಲಿವುಡ್‌ನ ಪ್ರಖ್ಯಾತ ನಿರ್ಮಾಪಕ ನಿರ್ಮಿಸದೆ ಇರದಿದ್ದರೆ ಮತ್ತು ಅದರಲ್ಲಿ ಪ್ರಸಿದ್ಧ ನಟರು ನಟಿಸದೆ ಇರುತ್ತಿದ್ದರೆ ಬಹುಶಃ ರಾಷ್ಟ್ರೀಯ ಮಾಧ್ಯಮಗಳು ಈ ವಿಷಯವನ್ನು ಇಷ್ಟೊಂದು ಹುರುಪಿನಿಂದ ಪ್ರಸಾರ ಮಾಡುತ್ತಿರಲಿಲ್ಲ. ಒಮ್ಮೆ ಅನುರಾಗ್ ಕಶ್ಯಪ್ ಮತ್ತು ಮಹೇಶ್ ಭಟ್ ಮಾತನಾಡಿದ್ದೇ ಇಲ್ಲಿ ಒಂದು ಒಳ್ಳೆ ಸುದ್ದಿ ಸಿಗುತ್ತಿದೆ ಎಂದು ಗ್ರಹಿಸಿದ ಮಾಧ್ಯಮಗಳು ಅದರ ಹಿಂದೆ ಓಡಲು ಆರಂಭಿಸಿದವು. ಕಶ್ಯಪ್ ಆಮ್ ಆದ್ಮಿ ಪಕ್ಷದಿಂದ ಹಣ ಪಡೆದಿದ್ದಾರೆ ಎಂಬ ಸೆನ್ಸಾರ್ ಮಂಡಳಿ ಮುಖ್ಯಸ್ಥ ಪಹಲಾಜ್ ನಿಹಲಾನಿಯ ಆರೋಪ ಮತ್ತು ನಾನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚಮಚ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ನಿಹಲಾನಿ ಹೇಳಿಕೆ ನೀಡಿದಾಗ ಮಾಧ್ಯಮಗಳ ಈ ನಿರ್ಧಾರ ದೃಢೀಕರಿಸಲ್ಪಟ್ಟಿತ್ತು.
ಈಗ ಚರ್ಚೆಯು ತೀವ್ರತೆಯನ್ನು ಪಡೆದಿತ್ತು ಮತ್ತು ಪ್ರತೀ ನಿಮಿಷವೂ ಸೆನ್ಸಾರ್ ಮಂಡಳಿಯ ಮುಖಕ್ಕೆ ಮತ್ತಷ್ಟು ಶಾಯಿಗಳು ಬೀಳುತ್ತಲೇ ಇದ್ದವು. ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ದೂರುಗಳನ್ನು ಸಂಪೂರ್ಣವಾಗಿ ಅವರಿಗೆ ಒಪ್ಪಿಸಲಾಗಿರುವ ಸಾಕ್ಷ್ಯಾಧಾರಗಳ ಆಧಾರದಲ್ಲಿ ವಿಚಾರಣೆ ನಡೆಸುತ್ತಾರೆ ಎಂಬುದು ನನಗೆ ಗೊತ್ತು, ಆದರೆ ನ್ಯಾಯಾಲಯದಲ್ಲಿ ದೂರುದಾರರನ್ನು ಆಲಿಸಿದವರು ಪತ್ರಿಕೆಗಳಲ್ಲಿ ಈ ಬಗ್ಗೆ ಓದದೆ ಅಥವಾ ದೃಶ್ಯಮಾಧ್ಯಮಗಳಲ್ಲಿ ನೋಡದೆ ಇರಲಾರರು ತಾನೆ. ನನಗೀಗ ತಿಳಿಯಿತು, ಧನ್ಯವಾದಗಳು ಉಡ್ತಾ ಪಂಜಾಬ್‌ಗೆ ಮತ್ತು ಗುಜರಾತ್ ಸಿನೆಮಾ ಮತ್ತು ನಿರ್ದೇಶಕನ ಕಷ್ಟಗಳ ಬಗ್ಗೆ ತಿಳಿಸಿದ ಅಹ್ಮದಾಬಾದ್‌ನ ವರದಿಗಾರನಿಗೂ ಕೂಡಾ. ಈ ಸಿನೆಮಾದಲ್ಲಿ ಸೆನ್ಸಾರ್ ಮಂಡಳಿಯು ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಲು ಸೂಚಿಸಿರುವ ಹಿಂದೆ ಪಕ್ಷಪಾತ ರಾಜಕೀಯ ಕೂಡಾ ಇದೆ. ಆದರೆ ಈ ವಿಷಯ ಯಾವುದಾದರೂ ಮಾಧ್ಯಮದಲ್ಲಿ ಮುಖ್ಯಸುದ್ದಿಯಾಗುವ ಸಾಧ್ಯತೆಯಿದೆಯೇ? ನನಗೆ ಸಂಶಯವಿದೆ. ಹಿಂದಿ ಸಿನೆಮಾ ತಮಿಳು, ಕನ್ನಡ, ಗುಜರಾತಿ ಮತ್ತು ಒರಿಯಾ ಚಿತ್ರರಂಗಗಳಿಗೆ ಇಲ್ಲದ ಒಂದು ಪ್ರಭೆಯನ್ನು ಹೊಂದಿದೆ. ಹಾಗಾಗಿ ತಮ್ಮನ್ನು ರಾಷ್ಟ್ರೀಯ ಎಂದು ಕರೆಸಿಕೊಳ್ಳುವ ಮಾಧ್ಯಮಗಳು ಹಿಂದಿ ಸಿನೆಮಾದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿವೆ ಮತ್ತು ಅಲ್ಲಿನ ನಟರು ಮತ್ತು ನಿರ್ಮಾಪಕರ ಒಲವನ್ನು ಪಡೆಯಲು ಪ್ರಯತ್ನಿಸುತ್ತವೆ. ಇನ್ನು ಆಂಗ್ಲ ಭಾಷೆಯ ಲೇಖಕರಿಗೆ ಭಾರತೀಯ ಭಾಷೆಯ ಲೇಖಕರಿಗಿಂತ ಹೆಚ್ಚಿನ ಲಾಭವಿದೆ. ಅವರಿಗೆ ಹೆಚ್ಚಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಅಧಿಕಾರವಿದೆ ಮತ್ತು ದೈಹಿಕ ದಾಳಿಗಳಿಂದಲೂ ಹೆಚ್ಚು ರಕ್ಷಣೆ ಒದಗುತ್ತದೆ. ನನ್ನ ಯೋಚನೆಗೆ ಹೋಗುವ ವಿಷಯವೆಂದರೆ ಇತ್ತೀಚೆಗೆ ಹತ್ಯೆಗೀಡಾದ ಮೂರು ಪ್ರಸಿದ್ಧ ಲೇಖಕರು- ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಮತ್ತು ಎಂ.ಎಂ. ಕಲಬುರ್ಗಿಯವರಲ್ಲಿ ಎರಡು ಅಂಶಗಳು ಸಾಮಾನ್ಯವಾಗಿದ್ದವು. ಮೊದಲನೆಯದ್ದು ಎಲ್ಲರಿಗೂ ತಿಳಿದಿರುವಂತೆ ಮೂವರೂ ಕೂಡಾ ಧರ್ಮಾಂಧತೆ ಮತ್ತು ಮೂಲಭೂತವಾದವನ್ನು ಬಲವಾಗಿ ವಿರೋಧಿಸುತ್ತಿದ್ದರು ಮತ್ತು ಎರಡನೆಯದಾಗಿ ಮತ್ತು ಕಡಿಮೆ ಜನರಿಗೆ ತಿಳಿದಿರುವ ಹಾಗೆ ಇವರಲ್ಲಿ ಯಾರೂ ಕೂಡಾ ಇಂಗ್ಲಿಷ್‌ನಲ್ಲಿ ಬರೆಯುತ್ತಿರಲಿಲ್ಲ.
ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಹಳೆಕಾಲದ ಕಾನೂನಿನ ಹೊರೆಯತ್ತ ಕಾನೂನುತಜ್ಞರು ಬೊಟ್ಟು ಮಾಡುತ್ತಲೇ ಇದ್ದಾರೆ. ಆದರೆ ಅದಕ್ಕೆ ಸಮಾನವಾದ ಅಥವಾ ಹೆಚ್ಚಿನ ಬೆದರಿಕೆಯು ನಮ್ಮ ಮಾತಿನಲ್ಲಿ ‘ಪ್ರಜಾಪ್ರಭುತ್ವವಾದಿ’ ಮತ್ತು ಹೆಮ್ಮೆಯಿಂದ ‘ರಾಷ್ಟ್ರವಾದಿ’ಯಾಗಿರುವ ರಾಜಕಾರಣಿಗಳಿಂದ ಎದುರಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಯಾವ ಪಕ್ಷದ ಯಾವ ರಾಜಕಾರಣಿ ಕೂಡಾ ಬಲವಾಗಿ ವಾದಿಸಲೇ ಇಲ್ಲ. ಇದಕ್ಕೆ ವಿರುದ್ಧವೆಂಬಂತೆ ಇವರು ಹಲವು ಬಾರಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೇ ಬೆದರಿಕೆ ಹಾಕಿದ್ದೂ ಇದೆ. ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ‘ಫನಾ’ ಹಿಂದಿ ಸಿನೆಮಾವನ್ನು ಅನೌಪಚಾರಿಕವಾಗಿ ನಿಷೇಧಿಸಲಾಯಿತು, ಗಾಂಧಿ ಮತ್ತು ಜಿನ್ನಾ ಬಗೆಗಿನ ಪುಸ್ತಕಗಳನ್ನು ಔಪಚಾರಿಕವಾಗಿ ನಿಷೇಧಿಸಲಾಯಿತು ಮತ್ತು ಹಲವು ಕಲಾ ಪ್ರದರ್ಶನಗಳನ್ನು ಪೊಲೀಸರ ಕಣ್ಣ ಮುಂದೆಯೇ ಧ್ವಂಸಗೊಳಿಸಲಾಯಿತು. ದಿಲ್ಲಿಯತ್ತ ಪ್ರಯಾಣಿಸಲು ಮೋದಿ ಇತರ ದಾರಿಗಳನ್ನೂ ಬಳಸಬಹುದಿತ್ತು ಆದರೆ ಕಲಾ ಸ್ವಾತಂತ್ರ್ಯಕ್ಕೆ ನೂತನ ಬದ್ಧತೆಯನ್ನು ನೀಡುವುದು ಅದರಲ್ಲಿ ಒಂದಾಗಿರಲಿಕ್ಕಿಲ್ಲ.
ಇನ್ನು ಕಾಂಗ್ರೆಸ್‌ನ ದಾಖಲೆ (ಸಲ್ಮಾನ್ ರಶ್ದಿಯವರ ಸಟಾನಿಕ್ ವರ್ಸಸ್ ಅನ್ನು ನಿಷೇಧಿಸಿತ್ತು ಮತ್ತು ಎಂ.ಎಫ್. ಹುಸೈನ್‌ರನ್ನು ಜೈಲಿನಲ್ಲಿ ಕೊಳೆಯಲು ಬಿಟ್ಟಿತ್ತು) ಮತ್ತು ಎಡಪಂಥೀಯರ (ಇವರು ತಸ್ಲೀಮ ನಸ್ರೀನ್ ಅವರ ಪುಸ್ತಕಗಳಿಗೆ ನಿಷೇಧ ಹೇರಿದ್ದರು ಮತ್ತು ಆಕೆಯನ್ನು ಪಶ್ಚಿಮ ಬಂಗಾಳದಿಂದ ಹೊರಗೆ ಕಳುಹಿಸಿದ್ದರು) ನಡೆ ಕೂಡಾ ನಾಚಿಕೆಗೇಡಿನದ್ದೇ ಆಗಿದೆ. ಇನ್ನು ಪ್ರಾದೇಶಿಕ ಪಕ್ಷಗಳ ಬಗ್ಗೆ ಹೇಳುವುದಾದರೆ ಅವುಗಳು ಇದಕ್ಕಿಂತಲೂ ಕೆಟ್ಟದ್ದು. ಕಲಾವಿದರ, ಲೇಖಕರ, ಸಿನೆಮಾ ನಿರ್ಮಾಪಕರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯದೆ (ಕೆಲವೊಮ್ಮೆ ಪ್ರೋತ್ಸಾಹಿಸುವ) ಇರುವ ಜೊತೆಗೆ ಭಾರತಾದ್ಯಂತದ ಎಲ್ಲಾ ಮುಖ್ಯಮಂತ್ರಿಗಳು, ಪಕ್ಷ ಯಾವುದೇ ಇರಲಿ, ತಮ್ಮ ಯೋಜನೆಗಳನ್ನು ಟೀಕಿಸಿ ಬರೆಯುವ ಪತ್ರಿಕೆಗಳಿಗೆ ನೀಡುವ ಸರಕಾರಿ ಜಾಹೀರಾತುಗಳನ್ನು ಹಿಡಿದಿಡುವ ಮೂಲಕ ಮಾಧ್ಯಮ ಸ್ವಾತಂತ್ರ್ಯವನ್ನು ಚಿವುಟಿ ಹಾಕುತ್ತಾರೆ. ಕೆಲವೊಮ್ಮೆ ಇವರು ಈ ಪತ್ರಿಕೆಗಳ ಮೇಲೆ ತೆರಿಗೆ ದಾಳಿ ನಡೆಸುತ್ತಾರೆ ಮತ್ತು ಪೊಲೀಸ್ ದೂರುಗಳನ್ನು ನೀಡುತ್ತಾರೆ. ಆ ಮೂಲಕ ಮತ್ತಷ್ಟು ಆರ್ಥಿಕ ಸಮಸ್ಯೆ ಅಥವಾ ಅವಮಾನಿತಗೊಳಿಸುತ್ತಾರೆ.
ಕಲಾತ್ಮಕ ಮತ್ತು ಬೌದ್ಧಿಕ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟಂತೆ ಭಾರತ ದೇಶ ಮತ್ತು ರಾಜ್ಯಗಳ ದಾಖಲೆಯಲ್ಲಿ ವ್ಯತ್ಯಾಸವೇನಿಲ್ಲ. ಹಾಗಾಗಿ ಬಾಂಬೆ ಉಚ್ಚನ್ಯಾಯಾಲಯದ ತೀರ್ಪನ್ನು ಸ್ವಾಗತಿಸಬೇಕು, ಆದರೆ ಎಚ್ಚರಿಕೆಯಿಂದ ಮತ್ತು ಸಮೃದ್ಧವಾಗಿಯಲ್ಲ, ಮುಂದೆ ಇದಕ್ಕಿಂತಲೂ ಕಠಿಣವಾದ ಹಲವು ಯುದ್ಧಗಳು ಎದುರಾಗಲಿವೆ ಎಂಬ ಜ್ಞಾನದೊಂದಿಗೆ.