ಶಂಕಿತರಿಗೆ ಕಾನೂನು ನೆರವಿನ ಕೊಡುಗೆ ಉವೈಸಿ ಬಂಧನಕ್ಕೆ ಬಿಜೆಪಿ ಆಗ್ರಹ
ಹೈದರಾಬಾದ್‌ಜು.3: ಐಸಿಸ್ ಜೊತೆ ನಂಟು ಹೊಂದಿರುವ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯಿಂದ ಬಂಧಿತರಾಗಿರುವ ನಗರದ ಐವರು ಯುವಕರಿಗೆ ತನ್ನ ಪಕ್ಷವು ಕಾನೂನು ನೆರವನ್ನು ಒದಗಿಸಲಿದೆ ಎಂದು ಘೋಷಿಸಿದ್ದಕ್ಕಾಗಿ ಸಂಸದ ಹಾಗೂ ಎಂಐಎಂ ವರಿಷ್ಠ ಅಸಾದುದ್ದೀನ ಉವೈಸಿ ಅವರನ್ನು ಬಂಧಿಸುವಂತೆ ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್(ಘೋಷಾಮಹಲ್) ಅವರು ರವಿವಾರ ಇಲ್ಲಿ ಆಗ್ರಹಿಸಿದರು.
ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಎಂಐಎಂ ಅನ್ನು ತೆಲಂಗಾಣದ ಆಡಳಿತ ಟಿಆರ್‌ಎಸ್ ಸರಕಾರವು ಬೆಂಬಲಿಸುತ್ತಿದೆ ಎಂದು ಆರೋಪಿಸಿದ ಸಿಂಗ್, ಉವೈಸಿ ಅವರ ಪಕ್ಷಕ್ಕೆ ನೀಡಿರುವ ಮಾನ್ಯತೆಯನ್ನು ಕೇಂದ್ರವು ರದ್ದುಗೊಳಿಸಬೇಕು ಎಂದೂ ಆಗ್ರಹಿಸಿದರು.
ಒಂದೆಡೆ ಪ್ರಧಾನಿ ನರೇಂದ್ರ ಮೋದಿಯವರು ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಬೆಂಬಲ ಕ್ರೋಢೀಕರಿಸಲು ಜಗತ್ತನ್ನು ಸುತ್ತಾಡುತ್ತಿದ್ದಾರೆ. ಇದೊಂದು ಒಳ್ಳೆಯ ಉಪಕ್ರಮವಾಗಿದೆ. ಇನ್ನೊಂದೆಡೆ ಭಯೋತ್ಪಾದಕರೊಂದಿಗೆ ಸ್ನೇಹ ಹೊಂದಿರುವ ಎಂಐಎಂ ಅನ್ನು ತೆಲಂಗಾಣ ಸರಕಾರವು ಬೆಂಬಲಿಸುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.