ಬರ ಬೇಗುದಿ ವೃದ್ಧರ ಪಾಲಿಗೆ ನರಕ ದರ್ಶನ
ಜೀವಿಬೆನ್ ಹಾಗೂ ದೇವಿಬೆನ್ ಅವರ ಚರ್ಮ ಸುಕ್ಕುಗಟ್ಟಿದೆ; ಬೆನ್ನು ಬಾಗಿದೆ; ಕಿವಿ ಕೇಳಿಸುತ್ತಿಲ್ಲ. ಇಬ್ಬರಿಗೂ ಸರಿಸುಮಾರು 80ರ ವಯಸ್ಸು. ಇಬ್ಬರೂ ಅಕ್ಕಪಕ್ಕದಲ್ಲಿ ವಾಸ. ಒಂದೇ ತೆರನಾದ ಗುಡಿಸಲಲ್ಲಿ ಒಂಟಿ ಬಾಳು. ಗುಜರಾತ್‌ನ ಬರಪೀಡಿತ ಜಾಮ್‌ನಗರ ಜಿಲ್ಲೆಯ ವಿಜಾರ್ಖಿ ಗ್ರಾಮದ ಮೂಲೆಯಲ್ಲಿ ವಾಸ.ಇಬ್ಬರು ದಲಿತ ವಿಧವೆಯರ ಸಾಮ್ಯತೆ ಅಷ್ಟಕ್ಕೇ ಸೀಮಿತವಲ್ಲ. ದೇವಿಬೆನ್‌ನ ಮೂವರು ಹಾಗೂ ಜೀವಿಬೆನ್‌ನ ಇಬ್ಬರು ಗಂಡು ಮಕ್ಕಳು, ತಮಗೆ ಸ್ವಂತ ಜಮೀನು ಇಲ್ಲದ ಕಾರಣ 2012ರವರೆಗೂ ಇತರ ಗ್ರಾಮಸ್ಥರ ಹೊಲಗಳಲ್ಲಿ ದುಡಿಯುತ್ತಿದ್ದರು. ಆ ಬಳಿಕ ಇಡೀ ವರ್ಷ ಸರಿಯಾಗಿ ಮಳೆ ಬೀಳದೆ ಇಡೀ ಗ್ರಾಮದಲ್ಲಿ ಬೆಳೆ ಒಣಗಿ ಹೋಯಿತು. ರೈತರು ಸಾಲದ ಶೂಲದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಎಲ್ಲೂ ಕೃಷಿ ಕೆಲಸ ಇಲ್ಲ. ವಿಜಾರ್ಖಿ ಗ್ರಾಮದ ಯುವಕರು ಅಕ್ಕಪಕ್ಕದ ನಗರಗಳಿಗೆ ವಲಸೆ ಹೋದರು. 2013ರ ಚಳಿಗಾಲದಲ್ಲಿ ತಮ್ಮ ಹೆಂಡತಿ ಮಕ್ಕಳೊಂದಿಗೆ ಗ್ರಾಮದಿಂದ ವಲಸೆ ಹೋದವರಲ್ಲಿ ದೇವಿಬೆನ್ ಹಾಗೂ ಜೀವಿಬೆನ್ ಅವರ ಮಕ್ಕಳೂ ಸೇರಿದ್ದಾರೆ. ಗ್ರಾಮದಲ್ಲಿ ಉಳಿದ ವೃದ್ಧ ತಾಯಂದಿರ ಪಾಡು ದಯನೀಯ.
‘‘ನನ್ನ ಮಕ್ಕಳು ಎಲ್ಲಿದ್ದಾರೆ ಎಂದು ಗೊತ್ತಿಲ್ಲ. ಆದರೆ ಅವರು ಕಲ್ಲು ಒಡೆಯುವ ಕೆಲಸ ಮಾಡುತ್ತಿರಬಹುದು’’ ಎನ್ನುವುದು ದೇವಿಬೆನ್ ಕಂಥಿಯಾವಾಡಿ (ಗುಜರಾತಿಯ ಉಪಭಾಷೆ) ಭಾಷೆಯಲ್ಲಿ ವಿವರಿಸು ತ್ತಾರೆ. ‘‘ಅವರು ಆಗೊಮ್ಮೆ ಈಗೊಮ್ಮೆ ಒಂದಷ್ಟು ಹಣ ಕಳುಹಿಸುವು ದರಿಂದ ಊಟಕ್ಕೆ ತೊಂದರೆ ಇಲ್ಲ. ಸುಮಾರು ಮೂರು ವರ್ಷದಿಂದ ಅಡುಗೆ, ಸ್ವಚ್ಛತೆ ಎಲ್ಲವೂ ನನ್ನದೇ. ಬೇರೆ ಯಾರಿದ್ದಾರೆ?’’ ಎಂದು ಹತಾಶರಾಗಿ ಹೇಳುತ್ತಾರೆ.
ಆದರೆ ಜೀವಿಬೆನ್ ಇದನ್ನು ಒಪ್ಪುವುದಿಲ್ಲ. ‘‘ಗ್ರಾಮದಲ್ಲಿ ನೀರು ಇಲ್ಲದಿರುವುದರಿಂದ ಅಡುಗೆ ಹಾಗೂ ಸ್ವಚ್ಛತೆ ಕೂಡಾ ಕಷ್ಟಕರವಾಗಿದೆ’’ ಎನ್ನುವುದು ಅವರ ಹೇಳಿಕೆ. ‘‘ಮೂರು ದಿನಕ್ಕೊಮ್ಮೆ ನೀರಿನ ಟ್ಯಾಂಕರ್ ಬರುತ್ತದೆ. ಗ್ರಾಮದ ಕೆಲ ಹುಡುಗರು ನಮಗೆ ಕೆಲ ಕ್ಯಾನ್‌ಗಳಲ್ಲಿ ನೀರು ತುಂಬಿಸಿಕೊಳ್ಳಲು ನೆರವಾಗುತ್ತಾರೆ. ಆದ್ದರಿಂದ ನಾವು ದಿನಾ ಅಡುಗೆ ಪಾತ್ರೆಗಳನ್ನು ತೊಳೆಯುವುದಿಲ್ಲ. 15 ದಿನಕ್ಕೊಮ್ಮೆ ಸ್ನಾನ’’ ಎಂದು ಅವರು ಪರಿಸ್ಥಿತಿ ವಿವರಿಸುತ್ತಾರೆ.
ವೃದ್ಧರ ಹಳ್ಳಿ
ದೇವಿಬೆನ್ ಹಾಗೂ ಜೀವಿಬೆನ್ ಅವರ ಪರಿಸ್ಥಿತಿ ಅವರ ಜಾತಿಗೆ, ಗ್ರಾಮಕ್ಕೆ ಮಾತ್ರ ಸೀಮಿತವಲ್ಲ. ಸತತ ಮೂರು ವರ್ಷಗಳ ಕಾಲ ಅನಾವೃಷ್ಟಿ ಯಿಂದಾಗಿ ಇಡೀ ಪಶ್ಚಿಮ ಗುಜರಾತ್‌ನಲ್ಲಿ ಜಲಾಶಯಗಳು ಬತ್ತಿದ್ದು, ಕರಾಳ ಕ್ಷಾಮದ ಪರಿಸ್ಥಿತಿ ತಲೆದೋರಿದೆ. ರಾಜ್ಯದ 623 ಗ್ರಾಮಗಳಲ್ಲಿ ನೀರಿನ ಅಭಾವ ಇದೆ ಎಂದು ಸರಕಾರ ಕಳೆದ ಎಪ್ರಿಲ್‌ನಲ್ಲಿ ಘೋಷಿ ಸಿತ್ತು. ಈ ಗ್ರಾಮಗಳ ಸಂಖ್ಯೆ ಇದೀಗ 1,100ಕ್ಕೆ ಏರಿದೆ. ಆದರೆ ಇದು ಅರೆ ಅಭಾವ ಸ್ಥಿತಿ. ಬರಗಾಲ ಎಂದು ಘೋಷಿಸುವಷ್ಟು ಅಭಾವ ಹಳ್ಳಿಗಳಲ್ಲಿಲ್ಲ ಎನ್ನುವುದು ಅಧಿಕಾರಿಗಳ ಸಮರ್ಥನೆ.
ಆದಾಗ್ಯೂ ಸೌರಾಷ್ಟ್ರ ಪ್ರದೇಶದ ಗ್ರಾಮಗಳಲ್ಲಿ, ಸತತ ಮೂರನೆ ವರ್ಷ ದಿಂದ ಬರ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಹೊಲಗಳು ಬರಡಾಗಿವೆ. ಜಾನುವಾರುಗಳು ಅಸುನೀಗುತ್ತಿವೆ. ಕುಡಿಯುವ ನೀರಿನ ಲಭ್ಯತೆ ಇಲ್ಲ. ಆಹಾರ ಹಾಗೂ ಮೇವಿಗೆ ಪಡಿತರ ವ್ಯವಸ್ಥೆ. ಜತೆಗೆ ಗ್ರಾಮಗಳ ಯುವಕರು ಉದ್ಯೋಗ ಅರಸಿಕೊಂಡು ವಲಸೆ ಹೋಗಿದ್ದು, ಗ್ರಾಮಗಳಲ್ಲಿ ನೂರಾರು ಮಂದಿ ವೃದ್ಧರಷ್ಟೇ ಉಳಿದಿದ್ದಾರೆ ಎನ್ನುವ ವಾಸ್ತವ ಗ್ರಾಮಸ್ಥರ ಹೇಳಿಕೆಯನ್ನು ಸಮರ್ಥಿಸುತ್ತದೆ.
‘‘ನಮ್ಮ ಗ್ರಾಮದಲ್ಲಿ ಸುಮಾರು 3,000 ಮಂದಿ ಇದ್ದಾರೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚು ಮಂದಿ ವೃದ್ಧರು. ಅವರು ಕೆಲಸಕ್ಕಾಗಿ ನಗರಗಳಿಗೆ ಹೋಗುವ ಸ್ಥಿತಿಯಲ್ಲಿಲ್ಲ’’ ಎನ್ನುತ್ತಾರೆ ವಿಜಾರ್ಖಿಯ ಹತ್ತಿ ಬೆಳೆಗಾರ ಮಹೇಶ್‌ಭಾಯ್ ಅಹೀರ್.
ಜಾಮ್‌ನಗರ ಮತ್ತು ದ್ವಾರಕ ಜಿಲ್ಲೆಗಳಾದ್ಯಂತ, ಹಲವು ಗ್ರಾಮ ಗಳಲ್ಲಿ ವಿಭಿನ್ನ ಅಂಕಿ ಅಂಶಗಳನ್ನು ನೀಡುತ್ತಾರೆ. ಆದರೆ ಒಟ್ಟಾರೆ ಚಿತ್ರಣ ಒಂದೆ. ಯುವಕರು ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಕೆಲಸಕ್ಕಾಗಿ ವಲಸೆ ಹೋಗಿದ್ದಾರೆ. ಕೆಲ ಗ್ರಾಮಸ್ಥರ ಹೇಳಿಕೆಯ ಪ್ರಕಾರ, ಶೇ.30ರಷ್ಟು ಮಂದಿ ವಲಸೆ ಹೋಗಿದ್ದಾರೆ. ಶೇ.60ರಷ್ಟು ಯುವಕರು ಉದ್ಯೋಗ ಅರಸುತ್ತಾ ಊರು ತೊರೆದಿದ್ದಾರೆ ಎಂದು ಹೇಳುತ್ತಾರೆ. ವಿವಾಹ ಅಥವಾ ಇತರ ಸಮಾರಂಭಗಳು ನಿಂತಿವೆ. ‘‘ಗ್ರಾಮಗಳಲ್ಲಿ ನೀರು ಇಲ್ಲದಿ ರುವುದರಿಂದ ಯಾರೂ ತಮ್ಮ ಹೆಣ್ಣುಮಕ್ಕಳನ್ನು ಹಳ್ಳಿಗೆ ಕಳುಹಿಸುವ ಸ್ಥಿತಿಯಲ್ಲಿಲ್ಲ. ತಮ್ಮ ಹೆಣ್ಣುಮಕ್ಕಳು ಜೀವನವಿಡೀ ನೀರಿಗಾಗಿ ಹೆಣಗಾ ಡುವುದು ಯಾರಿಗೂ ಬೇಕಾಗಿಲ್ಲ’’ ಎಂದು ಜಾಮ್‌ನಗರ ಜಿಲ್ಲೆಯ ಭೆಲ್ಸನ್ ಗ್ರಾಮದ ರೈತ ನಂಥಾಭಾಯ್ ಲೋಖಿಲ್ ವಿವರಿಸುತ್ತಾರೆ.
ಕೆಲಸಕ್ಕಾಗಿ ವಲಸೆ
ಬಹುತೇಕ ಗ್ರಾಮಸ್ಥರು ಗುಜರಾತ್‌ನಲ್ಲೇ ರಾಜ್‌ಕೋಟ್, ಸೂರತ್, ಅಹ್ಮದಾಬಾದ್‌ನಂಥ ದೊಡ್ಡ ನಗರಗಳಿಗೆ ಉದ್ಯೋಗ ಅರಸುತ್ತಾ ವಲಸೆ ಹೋಗಿದ್ದಾರೆ. ಬಹಳಷ್ಟು ಮಂದಿ ಟ್ರಕ್ ಚಾಲಕರಾಗಿ, ಕಟ್ಟಡ ಕಾರ್ಮಿಕರಾಗಿ ಅಥವಾ ಸಣ್ಣ ಕೈಗಾರಿಕೆಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಲೋಖಿಲ್ ಹೇಳುತ್ತಾರೆ.
ಆದರೆ ತೊಂದರೆಗೀಡಾದ ಬಹಳಷ್ಟು ಮಂದಿ ತಮ್ಮ ಮನೆಗೆ ಹತ್ತಿರವಾದ ಜಾಮ್‌ನಗರ ಪಟ್ಟಣದಲ್ಲೇ ಉದ್ಯೋಗಕ್ಕಾಗಿ ಅಲೆದಾ ಡುತ್ತಿದ್ದಾರೆ. ಈ ನಗರದಲ್ಲಿ ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮದ ಹಿತ್ತಾಳೆ ಘಟಕಗಳು, ಎಸ್ಸಾರ್ ಹಾಗೂ ರಿಲಯನ್ಸ್‌ನ ದೊಡ್ಡ ಪೆಟ್ರೋ ಕೆಮಿಕಲ್ ಘಟಕಗಳು ಇಲ್ಲಿವೆ. ‘‘ಈ ಕಂಪೆನಿಗಳು ಹೊಸ ಹೊಸ ಯೋಜ ನೆಗಳನ್ನು ತೆಗೆದುಕೊಳ್ಳುವುದರಿಂದ ಅವರಿಗೆ ಅರೆ ಕೌಶಲ ಹೊಂದಿದ ಕೂಲಿಗಳ ಅಗತ್ಯತೆ ವ್ಯಾಪಕವಾಗಿ ಇರುತ್ತದೆ. ಆದ್ದರಿಂದ ಜನ ಕಡಿಮೆ ವೇತನಕ್ಕಾದರೂ ಉದ್ಯೋಗಕ್ಕಾಗಿ ಅಲ್ಲಿಗೆ ಧಾವಿಸುತ್ತಾರೆ’’ ಎಂದು ದ್ವಾರಕ ಜಿಲ್ಲೆಯ ವಡಾತ್ರಾ ಗ್ರಾಮದ ಸರಪಂಚ ರಮ್‌ಶಿಭಾಯ್ ಚೌಡ ಹೇಳುತ್ತಾರೆ. ‘‘ದೊಡ್ಡ ಕಂಪೆನಿಗಳಲ್ಲಿ ನಮ್ಮ ಹುಡುಗರು ಮಾಸಿಕ 2,000 ರೂಪಾಯಿ ಆದಾಯ ಗಳಿಸುತ್ತಾರೆ. ಹಿತ್ತಾಳೆ ಘಟಕಗಳಲ್ಲಿ ದಿನಕ್ಕೆ 125ರಿಂದ 150 ರೂಪಾಯಿ ಸಂಬಳ ನೀಡುತ್ತಾರೆ’’ ಎಂದು ಅವರು ವಿವರಿಸುತ್ತಾರೆ.
ವರ್ಷದ ಲೋಖಿಲ್ ಇನ್ನೂ ಕಟ್ಟುಮಸ್ತಾಗಿದ್ದಾರೆ ಮತ್ತು ಸಕ್ರಿಯವಾ ಗಿದ್ದಾರೆ. ಕೆಲಸಕ್ಕಾಗಿ ವಲಸೆ ಹೋಗಲೂ ಬಯಸುತ್ತಾರೆ. ಆದರೆ ನನ್ನ ವಯಸ್ಸಿಗೆ ಯಾವ ಕೈಗಾರಿಕೆಯವರೂ ಕೆಲಸ ಕೊಡುವುದಿಲ್ಲ ಎನ್ನುವುದುಅವರ ಅಳಲು. ‘‘ನೀರು ಹುಡುಕುತ್ತಾ ತಿರುಗಾಡುವುದು ಮತ್ತು ಗ್ರಾಮ ದಲ್ಲಿ ಅಲೆದಾಡಿ ಮೇವು ಸಂಗ್ರಹಿಸುವುದರಲ್ಲೇ ನನ್ನ ದಿನ ಕಳೆದು ಹೋಗುತ್ತದೆ. ಕಳೆದ ಎರಡು ವರ್ಷಗಳಲ್ಲಿ ಸ್ಥಳೀಯ ಪಂಚಾಯತ್‌ನಲ್ಲಿ ನಾನು ನರೇಗಾ ಕೆಲಸಕ್ಕೆ ಹಲವು ಬಾರಿ ಮನವಿ ಮಾಡಿದ್ದೇನೆ. ಆದರೆ ಪ್ರತಿಬಾರಿಯೂ ಕೆಲಸ ಇಲ್ಲ ಎಂಬ ಉತ್ತರವೇ ಬರುತ್ತದೆ’’
ಸಾಲದ ಶೂಲ
ಸೌರಾಷ್ಟ್ರದ ಬರಪೀಡಿತ ಜನರಿಗೆ ಉದ್ಯೋಗ ಖಾತ್ರಿ ಕೆಲಸವಾಗಲಿ, ಫ್ಯಾಕ್ಟರಿಗಳ ಕಾರ್ಮಿಕ ಕೆಲಸವಾಗಲಿ, ಜೀವನಾಧಾರ ಒದಗಿಸಲು ವಿಫಲ ವಾಗಿವೆ. ಏಕೆಂದರೆ ಬಹುತೇಕ ಮಂದಿಯ ಸಣ್ಣ ಆದಾಯ ಆಹಾರ, ನೀರು, ಮೇವಿಗಾಗಿ ಖರ್ಚಾಗುತ್ತದೆ. ಎಲ್ಲ ಖರ್ಚು ನೀಗಿದರೂ, ಕಳೆದ ಮೂರು ವರ್ಷಗಳ ನಿರಂತರ ಬರದಿಂದಾಗಿ ಬೆಳೆಯುತ್ತಿರುವ ಸಾಲವನ್ನು ತೀರಿಸಲು ಸ್ವಲ್ಪಹಣವೂ ಉಳಿಯುವುದಿಲ್ಲ.
‘‘ಅಕ್ಷರಶಃ ಈ ಪ್ರದೇಶದ ಗ್ರಾಮಗಳಲ್ಲಿ ಪ್ರತಿಯೊಬ್ಬರೂ ಸಾಲದ ಶೂಲದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇದರಲ್ಲಿ ಬ್ಯಾಂಕ್ ಸಾಲ ಹಾಗೂ ಲೇವಾದೇವಿದಾರರಿಂದ ಪಡೆದ ಸಾಲವೂ ಸೇರಿದೆ’’ ಎಂದು ದ್ವಾರಕ ಜಿಲ್ಲೆಯ ಪಟೇಲ್ಕಾ ಗ್ರಾಮದ ಶೇಂಗಾ ಬೆಳೆಗಾರ ಲಖಮನ್‌ಭಾಯ್ ಕರಾಂಜಿಯಾ ಹೇಳುತ್ತಾರೆ. ‘‘ನನ್ನ ಸಾಲವೇ 10 ಲಕ್ಷ ರೂಪಾಯಿ ಇದೆ. ಇದರಲ್ಲಿ 1.3 ಲಕ್ಷ ರೂಪಾಯಿ ಬ್ಯಾಂಕ್ ಸಾಲ’’
ರೈತರು ಸಾಮಾನ್ಯವಾಗಿ ಪ್ರತೀ ಬಿತ್ತನೆ ಹಂಗಾಮಿನ ಸಂದರ್ಭದಲ್ಲಿ ಕೃಷಿ ಪರಿಕರಗಳಾದ ಬಿತ್ತನೆಬೀಜ ಮತ್ತು ರಸಗೊಬ್ಬರಕ್ಕಾಗಿ ಕೃಷಿ ಸಾಲ ಪಡೆಯುತ್ತಾರೆ. ಬೆಳೆಗಳನ್ನು ಮಾರಾಟ ಮಾಡಿದ ಬಳಿಕ ಇವುಗಳನ್ನು ತೀರಿಸುತ್ತಾರೆ. ಹಲವು ರಾಜ್ಯಗಳಲ್ಲಿ ಭೀಕರ ಬರಗಾಲ ಇರುವ ಹಿನ್ನೆಲೆಯಲ್ಲಿ, ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡುವ ಬದಲು ಅಧಿಕ ಬೆಳೆಹಾನಿ ಆಗಿರುವ ರೈತರಿಗೆ ಪರಿಹಾರ ನೀಡಬೇಕಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
‘‘ಮೂರು ಹಂಗಾಮುಗಳಲ್ಲಿ ಸತತವಾಗಿ ಬೆಳೆ ವಿಫಲವಾದರೂ, ನಮಗೆ ಒಂದು ನಯಾಪೈಸೆಯಷ್ಟೂ ಪರಿಹಾರ ಸಿಕ್ಕಿಲ್ಲ’’ ಎನ್ನುವುದು ಕರಿಂಜಿಯಾ ಅವರ ಆರೋಪ. ‘‘ಸರಕಾರ ಕೂಡಾ ಯಾವ ಬ್ಯಾಂಕ್ ಸಾಲವನ್ನೂ ಮನ್ನಾ ಮಾಡಿಲ್ಲ. ಇಷ್ಟು ಸಾಲದು ಎನ್ನುವಂತೆ ಬ್ಯಾಂಕುಗಳು ಇವುಗಳ ಮೇಲೆ ಬಡ್ಡಿ ವಿಧಿಸುತ್ತಿವೆ’’ ಎಂದು ಅವರು ಅಳಲು ತೋಡಿಕೊಳ್ಳುತ್ತಾರೆ.
ಹೊಸ ಹಂಗಾಮು ತಯಾರಿ
‘ಬ್ಯಾಂಕ್ ಸಾಲ ಮರುಪಾವತಿ ಮಾಡಲು ವಿಫಲವಾದಲ್ಲಿ ನಮ್ಮ ಜಮೀನನ್ನು ಹರಾಜು ಹಾಕುವುದಾಗಿ ಬ್ಯಾಂಕುಗಳು ಎಚ್ಚರಿಕೆ ನೋಟಿಸ್ ಕಳುಹಿಸುತ್ತಲೇ ಇವೆ ಎನ್ನುವುದು ಗ್ರಾಮಸ್ಥರ ದೂರು. ಈ ಬೆದರಿಕೆಯ ನಡುವೆಯೂ ರೈತರು, ಮುಂದಿನ ಬಿತ್ತನೆ ಹಂಗಾಮಿಗಾಗಿ ಹೊಲಗಳನ್ನು ಹಸನು ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಈ ವರ್ಷ ಉತ್ತಮ ಮುಂಗಾರು ಮಳೆ ಬೀಳಲಿದೆ ಎಂಬ ಮುನ್ಸೂಚನೆಯ ಹಿನ್ನೆಲೆಯಲ್ಲಿ ಅವರ ನಿರೀಕ್ಷೆ ಗರಿಗೆದರಿದೆ.
ಸುತ್ತಮುತ್ತಲೂ ಇದ್ದ ಹಲವು ಮಂದಿ ರೈತರಂತೆ ಕರಂಜಿಯಾ ಕೂಡಾ ಈ ವರ್ಷ ಬೀಜ ಹಾಗೂ ಗೊಬ್ಬರದ ವೆಚ್ಚಕ್ಕೆ ಹಣ ಹೊಂದಿ ಸುವ ಸಲುವಾಗಿ ಕುಟುಂಬದ ಚಿನ್ನವನ್ನು ಒತ್ತೆ ಒಟ್ಟು ಸಾಲ ಪಡೆಯಲು ಮುಂದಾಗಿದ್ದಾರೆ. ಇತರ ಹಲವು ಮಂದಿ ಲೇವಾ ದೇವಿದಾರರ ಮೊರೆಹೋಗಿದ್ದರೆ, ಮತ್ತೆ ಕೆಲವರು ತಮ್ಮ ಭೂಮಿಯ ಒಂದು ಭಾಗವನ್ನು ಮಾರಾಟ ಮಾಡಿ ಬೀಜ ಗೊಬ್ಬರ ಖರೀದಿಗೆ ನಿರ್ಧರಿಸಿದ್ದಾರೆ. ‘‘ಕನಿಷ್ಠ 10 ಎಕರೆ ಕೃಷಿ ಭೂಮಿಯನ್ನು ಇತ್ತೀಚೆಗೆ ನಮ್ಮ ಗ್ರಾಮದಲ್ಲೇ ಕೈಗಾರಿಕೆ ಅಥವಾ ಬಿಲ್ಡರ್‌ಗಳಿಗೆ ಮಾರಾಟ ಮಾಡಲಾಗಿದೆ’’ ಎಂದು ಮುಂಗ್ರಾ ಹೇಳುತ್ತಾರೆ. ಯಾವ ದರ ಸಿಕ್ಕಿದರೂ ತಮ್ಮ ಹೊಲ ಮಾರಾಟ ಮಾಡಲು ರೈತರು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಅವರು ವಿವರಿಸುತ್ತಾರೆ.
ಕಳೆದ ನಾಲ್ಕು ವರ್ಷದಲ್ಲಿ ಶೇಕಡ 71ರಷ್ಟು ಏರಿಕೆ ಕಂಡಿದ್ದು, 50 ಕೆ.ಜಿ. ರಸಗೊಬ್ಬರದ ಬೆಲೆ 800 ರೂಪಾಯಿಯಿಂದ 1375 ರೂಪಾಯಿಗೆ ಹೆಚ್ಚಿದೆ. ಆದ್ದರಿಂದ ಜಮೀನು ಮಾರಾಟ ಮಾಡದೇ ಬೇರೆ ವಿಧಿ ಇಲ್ಲ ಎನ್ನುವುದು ಅವರ ಅಸಹಾಯಕ ಸ್ಥಿತಿಯನ್ನು ವಿವರಿಸುತ್ತದೆ. ಹೊಸ ಸಾಲ ನೀಡಲು ಬ್ಯಾಂಕ್‌ಗಳು ನಿರಾಕರಿಸುತ್ತಿದ್ದು, ಹಲವು ಬ್ಯಾಂಕುಗಳಲ್ಲಿ ರೈತರು ಒಳಕ್ಕೆ ಹೋಗಲು ಕೂಡಾ ಅವಕಾಶ ನೀಡುತ್ತಿಲ್ಲ. ಅಷ್ಟಾಗಿಯೂ ಜಾಮ್‌ನಗರ ಕ್ಷೇತ್ರ ಅಭಿವೃದ್ಧಿ ಅಧಿಕಾರಿ ಕಚೇರಿಯಲ್ಲಿ ಈ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೆ, ಹೊಸ ಬಿತ್ತನೆ ಹಂಗಾಮಿಗೆ ಸಾಲ ಪಡೆಯಲು ರೈತರು ಬ್ಯಾಂಕುಗಳನ್ನು ಏಕೆ ಸಂಪರ್ಕಿಸುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ ಎಂಬ ಉತ್ತರ ನೀಡುತ್ತಾರೆ. ನನಗೆ ತಿಳಿದಂತೆ ಯಾವ ಬ್ಯಾಂಕ್‌ಗಳು ಕೂಡಾ ಹೊಸ ಕೃಷಿ ಸಾಲ ನೀಡಲು ನಿರಾಕರಿಸಿಲ್ಲ ಎನ್ನುವುದು ಉಪ ಕ್ಷೇತ್ರ ಅಭಿವೃದ್ಧಿ ಅಧಿಕಾರಿ ಕೀರ್ತ್ ಸಾಂಘ್ವಿಯವರ ಸಮರ್ಥನೆ. ರೈತರು ಹಳೆಯ ಸಾಲವನ್ನು ಮರುಪಾವತಿ ಮಾಡಿದರೆ, ಖಂಡಿತವಾಗಿಯೂ ಹೊಸ ಸಾಲಕ್ಕೆ ಅರ್ಹರಾಗುತ್ತಾರೆ
ಕೃಪೆ: scroll.in