ವಿಶ್ವದ ಈ ಅತಿದೊಡ್ಡ ಟೆಲಿಸ್ಕೋಪ್ ಮೂವತ್ತು ಫುಟ್‌ಬಾಲ್ ಸ್ಟೇಡಿಯಂಗಳಷ್ಟು ದೊಡ್ಡದು!
ಚೀನಾ ವಿಶ್ವದ ಅತೀ ದೊಡ್ಡ ರೇಡಿಯೋ ಟೆಲಿಸ್ಕೋಪ್‌ನ ಅಂತಿಮ ರೂಪುರೇಷೆಯನ್ನು ಸಿದ್ಧಪಡಿಸಿದೆ. 500 ಮೀಟರ್ ಅಪರ್ಚರ್ ಸ್ಫೆರಿಕಲ್ ಟೆಲಿಸ್ಕೋಪ್ ಗಾತ್ರವು 30 ಫುಟ್‌ಬಾಲ್ ಮೈದಾನಗಳಷ್ಟಿದೆ. ಗುಯ್ಝಹೌನ ನೈರುತ್ಯ ಪರ್ವತಗಳ ಮೇಲೆ ಇದನ್ನು ಸ್ಥಾಪಿಸಲಾಗಿದೆ.
ಬ್ರಹ್ಮಾಂಡದ ಮೂಲವನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ವಿಶಿಷ್ಟ ಆಕಾಶಕಾಯಗಳನ್ನು ಹುಡುಕಲು ಈ ಯೋಜನೆ ಸಮರ್ಥವಾಗಿದೆ. ಆ ಮೂಲಕ ಬಾಹ್ಯಾಕಾಶ ಜೀವನದ ಕುರಿತ ಜಾಗತಿಕ ಹುಡುಕಾಟಕ್ಕೆ ಹೊಸ ಚೇತನ ನೀಡಬಹುದು ಎಂದು ಈ ಟೆಲಿಸ್ಕೋಪ್ ನಿರ್ಮಿಸಿರುವ ಚೀನೀ ಅಕಾಡೆಮಿ ಆಫ್ ಸೈನ್ಸ್‌ನ ರಾಷ್ಟ್ರೀಯ ಬಾಹ್ಯಾಕಾಶ ಅವಲೋಕದ ಮುಖ್ಯಸ್ಥ ಝೆಂಗ್ ಕ್ಸಿಯೋನಿಯಾನ್ ಹೇಳಿದ್ದಾರೆ.
180ಮಿಲಿಯ ಡಾಲರ್ ರೇಟಿಯೋ ಟೆಲಿಸ್ಕೋಪ್ ಮುಂದಿನ ಎರಡು ವರ್ಷಗಳಲ್ಲಿ ಜಾಗತಿಕ ಬಾಹ್ಯಾಕಾಶ ನಾಯಕನಾಗಲಿದೆ ಎಂದು ಕ್ಸಿಯೋನಿಯನ್ ಹೇಳಿದ್ದಾರೆ. ಅಂತಿಮ ಸಿದ್ಧತೆಗೆ ಮುನ್ನ ಹಲವು ಪ್ರಾಯೋಗಿಕ ಪರೀಕ್ಷೆಗಳನ್ನು ಮಾಡಲಾಗಿದೆ. ಟೆಲಿಸ್ಕೋಪ್ ನಿರ್ಮಾಣಕ್ಕೆ ಐದು ವರ್ಷಗಳು ಹಿಡಿದಿದ್ದು, ಸೆಪ್ಟೆಂಬರ್‌ನಿಂದ ಕಾರ್ಯಾರಂಭಿಸಲಿದೆ. ದೇಶವು ಬಾಹ್ಯಾಕಾಶ ಶಕ್ತಿಯಾಗಿ ರೂಪುಗೊಳ್ಳಬೇಕು ಎಂದು ಕರೆನೀಡಿರುವ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಚೀನಾದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಹೆಚ್ಚು ಆದ್ಯತೆ ಕೊಡುತ್ತಿದ್ದಾರೆ. ಬೀಜಿಂಗ್ ಮಹತ್ವಾಕಾಂಕ್ಷೆಗಳಲ್ಲಿ 2036ರಲ್ಲಿ ಚಂದ್ರನಲ್ಲಿಗೆ ಮನುಷ್ಯನನ್ನು ಕಳುಹಿಸುವುದು ಮತ್ತು ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವುದೂ ಸೇರಿದೆ. ಅದಕ್ಕಾಗಿ ಕೆಲಸ ಈಗಾಗಲೇ ಆರಂಭಗೊಂಡಿದೆ.
ಚೀನಾ ತನ್ನ ಬಾಹ್ಯಾಕಾಶ ಕಾರ್ಯಕ್ರಮಗಳು ಶಾಂತಿಯ ಉದ್ದೇಶ ಹೊಂದಿದೆ ಎನ್ನುತ್ತದೆ. ಆದರೆ ಬೀಜಿಂಗ್ ತನ್ನ ಬಾಹ್ಯಾಕಾಶ ಸಾಮರ್ಥ್ಯಗಳ ಮೂಲಕ ಬಿಕ್ಕಟ್ಟಿನ ಸಂದರ್ಭದಲ್ಲಿ ಬಾಹ್ಯಾಕಾಶದ ಅಸ್ತ್ರಗಳ ನೆರವು ಪಡೆದುಕೊಳ್ಳುವ ಉದ್ದೇಶವನ್ನು ಹೊಂದಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯು ಹೇಳಿದೆ.
ಕೃಪೆ: www.aljazeera.com