ಗುರು ಗ್ರಹ ಶೋಧಕ ‘ಜುನೊ’ ಕಕ್ಷೆಗೆ ನಾಸಾ ವಿಜ್ಞಾನಿಗಳ ಅಮೋಘ ಸಾಹಸಗಾಥೆ
ಪ್ಯಾಸಡೀನ, ಜು. 5: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ (ನ್ಯಾಶನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್- ಎನ್‌ಎಎಸ್‌ಎ) ಕಳುಹಿಸಿರುವ ಬಾಹ್ಯಾಕಾಶ ನೌಕೆಯು ಐದು ವರ್ಷಗಳ ಸುದೀರ್ಘ ಪ್ರಯಾಣದ ಬಳಿಕ ಸೋಮವಾರ ಗುರು ಗ್ರಹವನ್ನು ತಲುಪಿದೆ.
ತಾನು ಗುರುವಿನ ಧ್ರುವಗಳ ಸುತ್ತ ಪ್ರದಕ್ಷಿಣೆ ಬರುತ್ತಿರುವುದಾಗಿ ಸೌರಶಕ್ತಿ ಚಾಲಿತ ಬಾಹ್ಯಾಕಾಶ ನೌಕೆ ‘ಜುನೊ’ ಸಂದೇಶ ಕಳುಹಿಸಿದಾಗ ನಾಸಾ ಜೆಟ್ ಪ್ರೊಪಲ್ಶನ್ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭೂ ನಿಯಂತ್ರಕರು ಸಂತೋಷದಿಂದ ಕರತಾಡನಗೈದರು.
ಜುನೊ ತನ್ನ ಗುರಿಯನ್ನು ತಲುಪುತ್ತಿದ್ದಂತೆಯೇ ತನ್ನ ವೇಗವನ್ನು ಕಡಿಮೆ ಮಾಡಲು ರಾಕೆಟೊಂದನ್ನು ಉಡಾಯಿಸಿತು ಹಾಗೂ ನಿಧಾನವಾಗಿ ಗುರುವಿನ ಕಕ್ಷೆಯಲ್ಲಿ ಸೇರಿಕೊಂಡಿತು. ಅದು ಇನ್ನು ಗ್ರಹಗಳ ರಾಜನ ಶೋಧ ಕಾರ್ಯಗಳನ್ನು ನಡೆಸಲಿದೆ.
ಗುರು ಮತ್ತು ಭೂಮಿಗಳ ನಡುವಿನ ಸಂದೇಶ ವಿನಿಮಯದ ಸಮಯ ವ್ಯತ್ಯಾಸದ ಹಿನ್ನೆಲೆಯಲ್ಲಿ, ನೌಕೆಯು ಗುರು ಗ್ರಹದ ಕಕ್ಷೆಯನ್ನು ಸೇರುವ ಸಮಯದಲ್ಲಿ ಅದನ್ನು ಸ್ವಯಂ ಚಾಲನೆ (ಆಟೊ ಪೈಲಟ್) ಸ್ಥಿತಿಯಲ್ಲಿ ಇಡಲಾಗಿತ್ತು.
1.1 ಬಿಲಿಯ ಡಾಲರ್ (ಸುಮಾರು 7,469 ಕೋಟಿ ರೂಪಾಯಿ) ವೆಚ್ಚದ ಯೋಜನೆ ಇದಾಗಿದ್ದು, ಜುನೊ ಮುಂದಿನ 20 ತಿಂಗಳುಗಳಲ್ಲಿ ಗುರು ಗ್ರಹದ ನಿಕಟ ಚಿತ್ರಗಳನ್ನು ಭೂಮಿಗೆ ಕಳುಹಿಸಲಿದೆ.
ಸೂರ್ಯನಿಂದ ಐದನೆ ಸ್ಥಾನದಲ್ಲಿರುವ ಗುರು ಗ್ರಹ, ಸೌರವ್ಯೆಹದ ಅತ್ಯಂತ ದೊಡ್ಡ ಗ್ರಹವಾಗಿದೆ. ಇದು ಅನಿಲ ಗ್ರಹವಾಗಿದ್ದು, ಕಲ್ಲು ಮಣ್ಣಿನ ಭೂಮಿ ಮತ್ತು ಮಂಗಳನಂತಲ್ಲ.
ರೋಮನ್ ಪುರಾಣದಲ್ಲಿ ಬರುವ ಜುಪಿಟರ್ (ಗುರು ಗ್ರಹ)ನ ಮೋಡಗಳನ್ನು ಕೊರೆಯುವ ಪತ್ನಿ ಜುನೊ ಹೆಸರನ್ನು ಈ ಬಾಹ್ಯಾಕಾಶ ನೌಕೆಗೆ ಇಟ್ಟಿರುವುದನ್ನು ಸ್ಮರಿಸಬಹುದಾಗಿದೆ.
ಇದು ಗುರು ಗ್ರಹಕ್ಕೆ ಸಂಬಂಧಿಸಿದ ಎರಡನೆ ಬಾಹ್ಯಾಕಾಶ ಯೋಜನೆಯಾಗಿದೆ. 1989ರಲ್ಲಿ ಹಾರಿಸಲಾದ ಗಲೀಲಿಯೊ ಸುಮಾರು ಒಂದು ದಶಕದ ಕಾಲ ಗುರು ಗ್ರಹಕ್ಕೆ ಪ್ರದಕ್ಷಿಣೆ ಬಂದಿತ್ತು.
ಒಳಗೆ ಬಾಕ್ಸ್
ಜುನೊವಿನ ಗುರಿ ಏನು?
ಗುರು ಗ್ರಹದ ಮೋಡಾಚ್ಛಾದಿತ ವಾತಾವರಣದೊಳಗೆ ಇಣುಕಿ ಧ್ರುವಗಳ ಮೇಲಿನ ಒಂದು ವಿಶೇಷ ಕೋನದಿಂದ ಗ್ರಹದ ಒಳಭಾಗವನ್ನು ಪರಿಶೀಲಿಸುವುದು. ಗ್ರಹದಲ್ಲಿ ಎಷ್ಟು ನೀರು ಇದೆ? ಅಲ್ಲಿ ಘನ ವಸ್ತುವೇನಾದರೂ ಇದೆಯೇ? ಗುರು ಗ್ರಹದ ದಕ್ಷಿಣ ಮತ್ತು ಉತ್ತರದ ಬೆಳಕು ಸೌರವ್ಯೆಹದಲ್ಲೇ ಅತ್ಯಂತ ಪ್ರಕಾಶಮಾನ ಯಾಕೆ?- ಮುಂತಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಜುನೊ ಪ್ರಯತ್ನಿಸಲಿದೆ.