ಈದ್ ಶಾಪಿಂಗ್ ಗೆ ಹೋಗಿ 2 ವರ್ಷದ ಮಗನನ್ನೇ ಕೊಂದು ಎಸೆದು ಬಂದ ದುಷ್ಟ ಅಪ್ಪ !
ಮುಂಬೈ, ಜು.8 : ತನ್ನ ಎರಡು ವರ್ಷದ ಮಗನನ್ನು ಈದ್ ಶಾಪಿಂಗ್ ಗೆಂದು ಮಂಗಳವಾರ ಸಂಜೆ ಕರೆದುಕೊಂಡು ಹೋದ ವ್ಯಕ್ತಿಯೊಬ್ಬ ಆತನನ್ನು ಸಾಯಿಸಿ ಮೃತ ದೇಹವನ್ನು ಬೈಕುಲ್ಲ ರೈಲ್ವೇ ನಿಲ್ದಾಣದ ಬಳಿಯ ಹಳಿಯಲ್ಲಿ ಎಸೆದ ಆಘಾತಕಾರಿ ಘಟನೆ ನಗರದಿಂದ ವರದಿಯಾಗಿದೆ. ಈದ್ ಆಚರಣೆಗೆ ಆರೋಪಿ ಖಾದಿರ್ ಮರಾಠವಾಡಾದ ಬೀಡ್ ಪಟ್ಟಣದಿಂದ ನಗರಕ್ಕೆ ಕಳೆದ ವಾರ ಆಗಮಿಸಿದ್ದ.
ಮೃತ ಮಗುವನ್ನು ಕೈಫ್ ಖಾನ್ ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಸುಮಾರು 7.30 ಕ್ಕೆ ತಂದೆಯೊಡನೆ ಆತ ಹೊರಟಿದ್ದ. ಆದರೆ ಆ ರಾತ್ರಿ ಅವರಿಬ್ಬರೂ ಮನೆಗೆ ಹಿಂದಿರುಗದೇ ಇದ್ದಾಗ ಬುಧವಾರ ಬೆಳಿಗ್ಗೆ ಕೈಫ್ ತಾಯಿ ಜೆಜೆ ಮಾಗರ್್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಪೊಲೀಸರು ಅವರಿಬ್ಬರನ್ನೂ ಹುಡುಕುತ್ತಿದ್ದಾಗ ಖಾದಿರ್ ತನ್ನ ಪತ್ನಿಗೆ ಕರೆ ಮಾಡಿ ``ನಿನ್ನ ಮಗನನ್ನು ಕೊಂದು ರೈಲ್ವೇ ಹಳಿಯಲ್ಲಿ ಎಸೆದಿದ್ದೇನೆ,''ಎಂದು ಹೇಳಿದ್ದ. ಅಂತೆಯೇ ಸಿಎಸ್ಟಿ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಲಾಗಿ ಸಂರ್ಧುಸ್ತ್ ರೋಡ್ ಹಾಗೂ ಬೈಕುಲ್ಲಾ ನಡುವಣ ಹಳಿಗಳಲ್ಲಿ ಕೈಫ್ ಮೃತ ದೇಹ ಪತ್ತೆಯಾಗಿತ್ತು.
ಆರೋಪಿ ಖಾದಿರ್ ನಿರುದ್ಯೋಗಿಯಾಗಿದ್ದು ಕಳೆದ ವಾರ ಮುಂಬೈನ ಭಿಂಡಿ ಬಾಜಾರ್ ನಲ್ಲಿರುವ ಸಂಬಂಧಿಯೊಬ್ಬರ ಮನೆಗೆ ಕುಟುಂಬ ಸಮೇತನಾಗಿ ಬಂದಿದ್ದ. ಪ್ರಾಥಮಿಕ ತನಿಖೆಯ ಪ್ರಕಾರ ಖಾದಿರ್ ತನ್ನ ಪುತ್ರನನ್ನು ಮುಳುಗಿಸಿ ಸಾಯಿಸಿದ್ದಾನೆಂದು ಅಂದಾಜಿಸಲಾಗಿದೆ.
ಆರೋಪಿ ನಾಪತ್ತೆಯಾಗಿದ್ದು ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರು ರೈಲ್ವೇ ನಿಲ್ದಾಣದಲ್ಲಿನ ಅಕ್ಕಪಕ್ಕದಲ್ಲಿನ ಸಿಸೀಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.