ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಮತ್ತೊಂದು ಮೊಳೆ
ಪಂಚಾಯತ್ ರಾಜ್ಯ ಸಚಿವಾಲಯವನ್ನು ಶಾಶ್ವತವಾಗಿ ಮುಚ್ಚಿ ಅದನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕೈಕೆಳಗಿನ ಇಲಾಖೆಯಾಗಿ ಪರಿವರ್ತಿಸಲು ಹೊರಟಿರುವ ಮೋದಿ ಸರಕಾರ ಅಂತಿಮವಾಗಿ ಮಾಡಹೊರಟಿರುವುದು ಪ್ರಜಾಪ್ರಭುತ್ವದ ಶವಯಾತ್ರೆಯನ್ನು. ಸರಕಾರದ ಈ ಹೆಜ್ಜೆಯ ಹಿಂದೆಯೂ ಆರೆಸ್ಸೆಸ್ ಸಿದ್ಧಾಂತ ಕೆಲಸ ಮಾಡಿರುವ ಕುರಿತು ಯಾವ ಸಂಶಯವೂ ಇರಬೇಕಾಗಿಲ್ಲ. 1925ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಿದ ಹೆಡ್ಗೆವಾರ್, ಮೂಂಜೆ ಮುಂತಾದವರು ಅಂದು ಇಟೆಲಿ, ಜರ್ಮನಿಗಳಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಫ್ಯಾಸಿಸ್ಟ್ ಸಿದ್ಧಾಂತದಿಂದ ವಿಶೇಷವಾಗಿ ಪ್ರಭಾವಿತರಾಗಿದ್ದವರು. ಮೂಂಜೆಯಂತೂ ಖುದ್ದು ಮುಸೊಲಿನಿಯನ್ನು ಭೇಟಿಯಾಗಿ, ಅಲ್ಲಿನ ಫ್ಯಾಸಿಸ್ಟ್ ಪ್ರಭುತ್ವದ ನಾನಾ ಕುಟಿಲ ಕಾರ್ಯತಂತ್ರಗಳನ್ನು ಅಭ್ಯಸಿಸಿದಾತ. ಆ ಜ್ಞಾನವನ್ನೆಲ್ಲ ಬಳಸಿಕೊಂಡ ಆರೆಸ್ಸೆಸ್ ನೂರು ವರ್ಷಗಳೊಳಗಾಗಿ ಭಾರತವನ್ನೊಂದು ಹಿಂದೂ ರಾಷ್ಟ್ರ ಅರ್ಥಾತ್ ಸರ್ವಾಧಿಕಾರಿ ಫ್ಯಾಸಿಸ್ಟ್ ಪ್ರಭುತ್ವವಾಗಿ ಮಾರ್ಪಡಿಸುವ ಶಪಥ ಮಾಡಿದೆ. ಆ ಕ್ಷಣದಿಂದಲೇ ಅದು ತನ್ನ ಕಾರ್ಯಾಚರಣೆಯನ್ನು ವ್ಯವಸ್ಥಿತವಾದ ರೀತಿಯಲ್ಲಿ ಪ್ರಾರಂಭ ಮಾಡಿದೆ. ಗಾಂಧೀಜಿಯ ಅಹಿಂಸಾತ್ಮಕ ಸ್ವಾತಂತ್ರ್ಯ ಚಳವಳಿಯಲ್ಲಿ ಅಪ್ಪಿತಪ್ಪಿಯಾದರೂ ಭಾಗವಹಿಸದೆ ತನ್ನದೇ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಸ್ವಾತಂತ್ರ್ಯಾನಂತರದಲ್ಲಿ ಸಂಘದ ಚಟುವಟಿಕೆಗಳು ಇನ್ನಷ್ಟು ಚುರುಕುಗೊಂಡಿವೆ. ದೇಶದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಗುಪ್ತಚರ ಇಲಾಖೆ, ಪೊಲೀಸ್ ವ್ಯವಸ್ಥೆ, ಮಾಧ್ಯಮ ಮತ್ತು ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಸಾಂವಿಧಾನಿಕ ಸಂಸ್ಥೆಗಳೊಳಗೆ ಸಂಘ ಪರಿವಾರಿಗರನ್ನು ತೂರಿಸುವ ಕೆಲಸ ಪ್ರಾರಂಭವಾಗಿದೆ. ಮುಂದೆ ವಾಜಪೇಯಿ ನೇತೃತ್ವದ ಸರಕಾರದ ಕಾಲದಲ್ಲಿ ಶಿಕ್ಷಣ ವ್ಯವಸ್ಥೆ ಸೇರಿದಂತೆ ಕೆಲವೊಂದು ಪ್ರಮುಖ ಕ್ಷೇತ್ರಗಳನ್ನು ಕೇಸರೀಕರಣಗೊಳಿಸುವ ಯತ್ನಗಳು ಭಾಗಶಃ ಯಶಸ್ವಿಯಾಗಿವೆ.
ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗಲೂ ಆರೆಸ್ಸೆಸ್‌ನ ಗುಪ್ತ ಕಾರ್ಯಾಚರಣೆಗಳು ಮುಂದುವರಿದಿರುವುದು ವಿಪರ್ಯಾಸವಷ್ಟೆ ಅಲ್ಲ ದೊಡ್ಡ ದುರಂತವೂ ಹೌದು. ತಿಳಿದೊ ತಿಳಿಯದೆಯೋ ಅದು ಮಾಡಿರುವ ಈ ತಪ್ಪು ಅಕ್ಷಮ್ಯವಾದುದು. ಆರೆಸ್ಸೆಸ್ ಈ ಹೊತ್ತು ಜೊಂಡಿನಂತೆ ಇಡೀ ದೇಶವನ್ನು ವ್ಯಾಪಿಸಿರುವುದಕ್ಕೆ ಕಾಂಗ್ರೆಸ್ ಸರಕಾರಗಳ ಉದ್ದೇಶಪೂರ್ವಕ ಅಥವಾ ಅನುದ್ದೇಶಪೂರ್ವಕ ಅಸಡ್ಡೆಯೇ ಒಂದು ಮುಖ್ಯ ಕಾರಣ ಎನ್ನಬಹುದು. 2014ರಲ್ಲಿ ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಂತೂ ಪ್ರಜಾಪ್ರಭುತ್ವದ ಬುಡಕ್ಕೆ ಬೀಳುವ ಪ್ರಹಾರಗಳ ಸಂಖ್ಯೆ ಹಾಗೂ ರಭಸ ಎರಡರಲ್ಲೂ ತೀವ್ರ ಏರಿಕೆಯಾಗಿದೆ. ಪರಿವಾರದ ವತಿಯಿಂದ ಪ್ರತಿದಿನವೆಂಬಂತೆ ನಡೆಯುತ್ತಿರುವ ಕ್ಷಿಪಣಿ ವೇಗದ ಕಾರ್ಯಾಚರಣೆಗಳಿಂದ ಪ್ರಗತಿಪರ ವಲಯಗಳು ತತ್ತರಿಸಿಹೋಗಿವೆ. ಕಳೆದೆರಡು ವರ್ಷಗಳ ಅವಧಿಯಲ್ಲಿ ಈಗಾಗಲೆ ಪ್ರಮುಖ ಸಾಂಸ್ಕೃತಿಕ, ಶೈಕ್ಷಣಿಕ, ಸಂಶೋಧನಾ ಸಂಸ್ಥೆಗಳ ಮುಖ್ಯಸ್ಥರ ಸ್ಥಾನಗಳು ಹಿಂದೂತ್ವವಾದಿಗಳ ಪಾಲಾಗಿವೆ; ಭಿನ್ನಾಭಿಪ್ರಾಯಗಳಿಗೆ ಹಿಂದೆಂದೂ ಇರದಷ್ಟು ಅಸಹಿಷ್ಣುತೆ ತೋರಲಾಗುತ್ತಿದೆ; ವಿಶೇಷವಾಗಿ ಪ್ರಗತಿಪರರ ವಾಕ್‌ಸ್ವಾತಂತ್ರ್ಯ ಮೊಟಕುಗೊಳ್ಳುತ್ತ ಬರುತ್ತಿವೆ; ಇದೇ ವೇಳೆ ಹಿಂದೂತ್ವವಾದಿಗಳ ಎಗ್ಗಿಲ್ಲದ ದ್ವೇಷಪೂರಿತ, ಭಯೋತ್ಪಾದಕ ಹೇಳಿಕೆಗಳ ಸಮೀಪ ಯಾವ ಸೆನ್ಸಾರ್ ಕತ್ತರಿಯೂ ಸುಳಿಯುತ್ತಿಲ್ಲ; ಮೋದಿ ಸರಕಾರವನ್ನು ಟೀಕಿಸುವವರು ದೇಶಪ್ರೇಮಿಗಳಲ್ಲ ಎಂದಾಗಿದೆ. ಟ್ವಿಟರ್, ಫೇಸ್‌ಬುಕ್‌ಗಳಲ್ಲಿ ಮೋದಿಯನ್ನು ಟೀಕಿಸಿದ ಕನಿಷ್ಠ 18 ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ; ಎಡಪಂಥೀಯ, ಅಂಬೇಡ್ಕರ್‌ವಾದಿ ವಿದ್ಯಾರ್ಥಿ ಚಳವಳಿಗಳ ಮೇಲೆ ಕಾಕದೃಷ್ಟಿ ಬೀರಲಾಗಿದೆ; ಭಾರತ್ ಮಾತಾ ಕಿ ಜೈ ಎನ್ನದವರಿಗೆ ದೇಶವಿರೋಧಿ ಎಂಬ ಹಣೆಪಟ್ಟಿ ಹಚ್ಚಲಾಗುತ್ತಿದೆ; ಪರಿಸರವಾದಿ ಮತ್ತು ಅಲ್ಪಸಂಖ್ಯಾತ ಪರ ಎನ್‌ಜಿಒಗಳ ಕೊರಳು ಕುಯ್ಯಲಾಗುತ್ತಿದೆ; ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್, ಹಾಸ್ಟೆಲ್ ಸೌಕರ್ಯಗಳಲ್ಲಿ ಭಾರಿ ಕಡಿತವಾಗಿದೆ; ಆದಿವಾಸಿ ಗಳ ಅರಣ್ಯಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ; ನರೆಗಾ ಕಾರ್ಯಕ್ರಮಗಳಿಗಾಗಿ ಮೀಸಲಿಡುವ ಅನುದಾನದ ಮೊತ್ತ ತುಂಬಾ ಕಡಿಮೆಯಾಗಿದೆ; ದುರಂತವೆಂದರೆ ಪ್ರಜಾಪ್ರಭುತ್ವದ ಕೊನೆಯ ಆಸರೆಯಾದ ನ್ಯಾಯಾಂಗದ ಪರಿಸ್ಥಿತಿಯೂ ಕೆಡಲಾರಂಭಿಸಿದಂತೆ ತೋರುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೆಲವೊಂದು ನ್ಯಾಯಾಧೀಶರು ತಮ್ಮ ಪೂರ್ವಾಗ್ರಹ, ಒಲವು ಮತ್ತು ನಿಲುವುಗಳನ್ನು ಸಾರ್ವಜನಿಕವಾಗಿ ಪ್ರಕಟಿಸತೊಡಗಿದ್ದಾರೆ. ಇಂದಿರಾ ಗಾಂಧಿಯನ್ನು ಕುರ್ಚಿಯಿಂದ ಕೆಳಗಿಳಿಸಿದ ಖ್ಯಾತಿಯ ಅಲಹಾಬಾದ್ ಹೈಕೋರ್ಟಿನ ಘನ ನ್ಯಾಯಾಧೀಶರೊಬ್ಬರು ಇತ್ತೀಚೆಗೆ ಒಡೆಯನಿಗೆ ಸ್ವಾಮಿನಿಷ್ಠೆ ತೋರ್ಪಡಿಸುವ ಊಳಿಗದವನ ಹಾಗೆ ಮೋದಿಯ ಕಾಲು ಮುಟ್ಟಿ ನಮಸ್ಕರಿಸಿದ ಘಟನೆ ನಡೆದಿದೆ; ಖುದ್ದು ನಮ್ಮದೇ ರಾಜ್ಯದ ಹೈಕೋರ್ಟಿನ ಸನ್ಮಾನ್ಯ ಮುಖ್ಯನ್ಯಾಯಮೂರ್ತಿಯವರು ವಿಹಿಂಪದ ಪೇಜಾವರ ಸ್ವಾಮಿಯವರ ಕೈಯಿಂದ ಅದೆಂಥದೊ ಪ್ರಶಸ್ತಿ ಸ್ವೀಕರಿಸುತ್ತ ರಾಮ ಮಂದಿರ ಸ್ಥಾಪನೆ ಆಗಬೇಕೆಂದು ಬಹಿರಂಗ ಸಭೆಯಲ್ಲಿ ಕರೆಕೊಟ್ಟ ವಿದ್ಯಮಾನವೂ ಜರಗಿದೆ...... ಇಂತಹ ನೂರಾರು ಘಟನೆಗಳ ಸಾಲಿಗೆ ಇತ್ತೀಚಿನ ಸೇರ್ಪಡೆಯೆಂದರೆ ಪಂಚಾಯತ್ ರಾಜ್ಯ ವ್ಯವಸ್ಥೆಯ ದುರ್ಬಲೀಕರಣ. ಮೋದಿ ಸರಕಾರವೀಗ ಪಂಚಾಯತ್ ರಾಜ್ಯ ಸಚಿವಾಲಯವನ್ನು ಶಾಶ್ವತವಾಗಿ ಮುಚ್ಚಲು ಸಕಲ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಸಚಿವಾಲಯವನ್ನು ಬಂದ್ ಮಾಡಿ ಅದನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕೈಕೆಳಗಿನ ಒಂದು ಮಾಮೂಲಿ ಇಲಾಖೆಯಾಗಿ ಪರಿವರ್ತಿಸುವ ದುರಾಲೋಚನೆ ಅದರದ್ದಾಗಿದೆ.
ಅದಕ್ಕೆ ಮುನ್ನ ಅದನ್ನು ಅಪ್ರಸ್ತುತವಾಗಿಸುವ ಯೋಜನೆಯ ಭಾಗವಾಗಿ ಬಜೆಟ್ ಅನುದಾನಕ್ಕೆ ದೊಡ್ಡ ಕತ್ತರಿ ಪ್ರಯೋಗ ಆಗಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ಪಂಚಾಯತ್ ವ್ಯವಸ್ಥೆಗೆಂದಿರುವ ಅನುದಾನವನ್ನು 7,000 ಕೋಟಿ ರೂಪಾಯಿಗಳಿಂದ 96 ಕೋಟಿ ರೂಪಾಯಿಗಳಿಗೆ ಇಳಿಸಲಾಗಿದೆ! ಇಲ್ಲಿಯ ತನಕ ಪಂಚಾಯತ್‌ಗಳಿಗೆ ಸಾಕಷ್ಟು ಸಂಪನ್ಮೂಲ ದೊರೆಯುತ್ತಿದ್ದ ಕಾರಣ ಹತ್ತುಹಲವು ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿದೆ. ಆದರೂ ಮಾಡಬೇಕಾದದ್ದು ಬೆಟ್ಟದಷ್ಟಿದೆ. ಚಿಕ್ಕದೊಂದು ನಿದರ್ಶನವನ್ನು ಕೊಡುವುದಾದರೆ ದೇಶಾದ್ಯಂತ ಸುಮಾರು 58,000 ಪಂಚಾಯತ್‌ಗಳಿಗೆ ಇದು ವರೆಗೂ ಸ್ವಂತ ಕಚೇರಿ ಎಂಬುದೆ ಇಲ್ಲ. ಮೋದಿ ಸರಕಾರ ಮಾಡಿರುವ ಬೃಹತ್ತಾದ ಕಡಿತದಿಂದಾಗಿ ಸಚಿವಾಲಯವನ್ನು ಉಪವಾಸ ಕೆಡವಿದಂತಾಗಿದೆ. ಅದೂ ಸಾಲದೆಂಬಂತೆ ಕೇಂದ್ರದಿಂದ ರಾಜ್ಯಗಳಿಗೆ ನಿಧಿ ವರ್ಗಾವಣೆಯ ವಿಷಯದಲ್ಲಿಯೂ ವಿಳಂಬ ಧೋರಣೆ ಶುರುವಾಗಿದೆ. ಸ್ವಾಭಾವಿಕವಾಗಿ ಹಣದ ಕೊರತೆ ಎದುರಿಸಲಾರಂಭಿಸಿರುವ ಪಂಚಾಯತ್‌ಗಳು ಸ್ವಚ್ಛ ಭಾರತ ಕೋಶ ಮತ್ತಿತರ ಯಾವುದೇ ಕಾಮಗಾರಿಗಳನ್ನು ಎತ್ತಿಕೊಳ್ಳಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದುಳಿದ ಪ್ರದೇಶಗಳ ಅನುದಾನ ನಿಧಿ (Backward Regions Grants Fund) ಮತ್ತು ‘ರಾಜೀವ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನ’ ಎಂಬ ಎರಡು ಮುಖ್ಯ ಕಾರ್ಯಕ್ರಮಗಳಿಗೆ ಎಳ್ಳುನೀರು ಬಿಡಲಾಗಿದೆ. ಈ ವರ್ಷ ರಾಜೀವ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನದ ಹೆಸರು ಬದಲಾಯಿಸಿ ‘ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ’ ಎಂದು ಮರುನಾಮಕರಣ ಮಾಡಿದ ನಂತರವೆ ರೂ 655 ಕೋಟಿ ಬಿಡುಗಡೆಯಾಗಿದೆ!
ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ಸಂಸತ್ತಿನ ಅನುಮೋದನೆ ಪಡೆದೇ ಜಾರಿಗೆ ತರಲಾಗಿದೆ. ಇದಕ್ಕೆ ಸಂಬಂಧಿಸಿದ ಸಂವಿಧಾನದ 73ನೆ ತಿದ್ದುಪಡಿಯನ್ನು 1992ರ ಡಿಸೆಂಬರ್‌ನಲ್ಲಿ ಹೆಚ್ಚುಕಡಿಮೆ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಅದನ್ನು ಜಾರಿಗೊಳಿಸುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಜಂಟಿ ಜವಾಬ್ದಾರಿಯಾಗಿದೆ. ಪಂಚಾಯತ್ ರಾಜ್ಯ ಸಚಿವಖಾತೆಯ ಚಟುವಟಿಕೆಗಳೆಂದರೆ: ಪ್ರಗತಿ ಪರಿಶೀಲನೆ, ಶೈಕ್ಷಣಿಕ ಕ್ಷೇತ್ರದ ತಜ್ಞರು ಮತ್ತು ಎನ್‌ಜಿಒಗಳನ್ನು ಒಟ್ಟು ಸೇರಿಸುವುದು, ಚುನಾಯಿತ ಸದಸ್ಯರ ಪ್ರತಿಕ್ರಿಯೆ ಪಡೆಯುವುದು, ಅವರು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು, ಮಹಿಳಾ ಪ್ರತಿನಿಧಿಗಳು, ದಲಿತರು, ಆದಿವಾಸಿಗಳ ವಿಶೇಷ ಹಿತಾಸಕ್ತಿಗಳ ಮೇಲುಸ್ತುವಾರಿ ನಡೆಸುವುದು, ದಾಖಲೆ ಇರಿಸುವುದು, ತಜ್ಞರಿಂದ ಅಧ್ಯಯನಗಳನ್ನು ನಡೆಸುವುದು, ವಾರ್ಷಿಕ ವರದಿಗಳನ್ನು ತಯಾರಿಸುವುದು ಇತ್ಯಾದಿ. ಇನ್ನು ಪಂಚಾಯತ್‌ಗಳಿಗೆ ಬಂದರೆ ಸಂವಿಧಾನವು ಪಂಚಾಯತ್‌ಗಳ ಹೆಗಲಿಗೆ ಬಹಳಷ್ಟು ಹೊಣೆಗಾರಿಕೆಗಳನ್ನು ವಹಿಸಿದೆ: ಕೃಷಿ, ಹೈನುಗಾರಿಕೆ, ಜಾನುವಾರು ಸಾಕಣೆ, ಮೀನುಗಾರಿಕೆ, ಸಣ್ಣ ನೀರಾವರಿ, ಸಾಮಾಜಿಕ ಮತ್ತು ಕೃಷಿ ಅರಣ್ಯಗಳು, ಲಘು ಅರಣ್ಯ ಉತ್ಪತ್ತಿ, ನೈರ್ಮಲ್ಯ, ಖಾದಿ ಗ್ರಾಮೋದ್ಯೋಗ, ಆಹಾರವಸ್ತುಗಳ ಸಂಸ್ಕರಣೆಯಂತಹ ಚಿಕ್ಕ ಉದ್ದಿಮೆಗಳು, ಕುಟುಂಬ ಕಲ್ಯಾಣ, ಆರೋಗ್ಯ ಸೇವೆ, ಸಮಗ್ರ ಶಿಶು ಅಭಿವೃದ್ಧಿ, ಶಿಕ್ಷಣ, ಗ್ರಂಥಾಲಯ, ಸಾಂಸ್ಕೃತಿಕ ಚಟುವಟಿಕೆಗಳು, ದುರ್ಬಲ ವರ್ಗಗಳ, ದಲಿತರ, ಆದಿವಾಸಿಗಳ ಕಲ್ಯಾಣ, ಸಾರ್ವಜನಿಕ ಆಹಾರಧಾನ್ಯ ವಿತರಣಾ ವ್ಯವಸ್ಥೆ ಇತ್ಯಾದಿ ಇತ್ಯಾದಿ. ಇಷ್ಟೆಲ್ಲಾ ಜವಾಬ್ದಾರಿಗಳಿರುವ ಸಚಿವಾಲಯವನ್ನು ಮುಚ್ಚಿ ಇಲಾಖೆಯಾಗಿ ಪರಿವರ್ತಿಸಿ ಗ್ರಾಮೀಣಾಭಿವೃದ್ಧಿ ಸಚಿವಾಲಯದೊಂದಿಗೆ ವಿಲೀನಗೊಳಿಸುವುದೆಂದರೆ ಅದು ಸಂವಿಧಾನಕ್ಕೆ ಬಗೆಯುವ ಘೋರ ಅಪಚಾರ. ಪಂಚಾಯತ್‌ಗಳೆಂದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳನ್ನು ಅನುಷ್ಠಾನಗೊಳಿಸಲೆಂದು ಸ್ಥಾಪಿಸಿರುವ ಸಂಸ್ಥೆಗಳಲ್ಲ. ಅಧಿಕಾರವನ್ನು ವಿಕೇಂದ್ರೀಕರಣಗೊಳಿಸಿ ಗ್ರಾಮ ಮತ್ತು ಸ್ಥಳೀಯ ಮಟ್ಟಗಳಲ್ಲಿ ಜನ ತಾವೇ ಸ್ವತಂತ್ರ ಆಡಳಿತ ನಡೆಸುವಂತಾಗಬೇಕು ಎನ್ನುವ ಇರಾದೆಯಿಂದ ಪಂಚಾಯತ್ ರಾಜ್ಯ ವ್ಯವಸ್ಥೆ ರೂಪು ತಾಳಿದೆ. ಹೀಗೆ ಒಂದು ಮೌನ ಕ್ರಾಂತಿಯನ್ನು ಸಾಧಿಸುವ ದಿಕ್ಕಿನಲ್ಲಿ ಕಳೆದ ಸುಮಾರು 25 ವರ್ಷಗಳ ಅವಧಿಯಲ್ಲಿ ಕೆಲವು ಹೆಜ್ಜೆಗಳನ್ನು ಇರಿಸಲಾಗಿದೆ.
ಹೀಗಿರುವಾಗ ಪ್ರತ್ಯೇಕ ಸಚಿವಾಲಯವೇ ಇಲ್ಲವಾದಲ್ಲಿ ಇದುವರೆಗೆ ಮಾಡಿರುವ ಸಾಧನೆಗಳೆಲ್ಲ ನೀರಲ್ಲಿ ಮಾಡಿದ ಹೋಮದಂತಾಗಲಿದೆ. ಸ್ಥಳೀಯ ಸ್ವಯಮಾಡಳಿತದ ಪ್ರಜಾಸತ್ತಾತ್ಮಕ ಚೌಕಟ್ಟು ತೆಳುಗೊಳ್ಳುತ್ತಾ ಸಾಗಿ ಕಣ್ಮರೆಯಾಗುವ ದಿನಗಳು ದೂರವಿಲ್ಲ. ಆಡಳಿತದಲ್ಲಿ ಹಂತಹಂತವಾಗಿ ವಿಕೇಂದ್ರೀಕರಣ ಮಾಡಿ ಪಂಚಾಯತ್‌ಗಳ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಹಲವಾರು ರಾಜ್ಯಗಳು ಪ್ರಗತಿ ತೋರಲಾರಂಭಿಸಿದರೆ ಅತ್ತ ಗುಜರಾತ್ ಮಾತ್ರ ಏನೂ ಮಾಡಿಲ್ಲ. ಗುಜರಾತ್‌ನಲ್ಲಿ ಪಂಚಾಯತ್ ವ್ಯವಸ್ಥೆ ಜಾರಿಗೆ ಬಂದ ಸಂದರ್ಭದಲ್ಲಿ ನರೇಂದ್ರ ಮೋದಿಯೇ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಧರ್ಮಾಧರಿತ ಸರ್ವಾಧಿಕಾರ ವ್ಯವಸ್ಥೆಯಾದ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಕಂಕಣಬದ್ಧನಾಗಿರುವ ಮೋದಿಗೆ ಸಹಜವಾಗಿ ಗ್ರಾಮ ಮಟ್ಟದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ರೂಪುಗೊಳ್ಳುವುದು ಬೇಕಿರಲಿಲ್ಲ. ಹೀಗಾಗಿ ಗುಜರಾತ್‌ನಲ್ಲಿ ಪಂಚಾಯತ್ ವ್ಯವಸ್ಥೆ ಕೇವಲ ನಾಮಮಾತ್ರಕ್ಕಷ್ಟೆ ಇತ್ತು ಹೊರತು ಅವುಗಳಿಗೆ ನೈಜ ಅಧಿಕಾರ ಇರಲೇ ಇಲ್ಲ. ವಾಸ್ತವವಾಗಿ ಚುನಾವಣೆ ಇಲ್ಲದೆ ಅಸ್ತಿತ್ವಕ್ಕೆ ಬಂದ ಪಂಚಾಯತ್‌ಗಳಿಗೆ ವಿವಿಧ ನಾನಾ ವಿಧದಲ್ಲಿ ಪ್ರೋತ್ಸಾಹ ನೀಡಲಾಯಿತು. ಆದುದರಿಂದಲೆ ಕೇಂದ್ರ ಸಚಿವರು ಪ್ರಗತಿ ಪರಿಶೀಲನೆಗೋಸ್ಕರ ಗುಜರಾತಿಗೆ ಭೇಟಿ ನೀಡಬಯಸಿದಾಗ ಅನುಮತಿ ನಿರಾಕರಿಸಲಾಯಿತು. ಬಿಜೆಪಿ ಆಡಳಿತದ ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ಇನ್ನೊಂದು ವಿಧದ ಹುನ್ನಾರ ನಡೆಯುತ್ತಿದೆ. ಅಲ್ಲಿ ಇತ್ತೀಚೆಗೆ ಕನಿಷ್ಠ ವಿದ್ಯಾರ್ಹತೆ ನಿಯಮ ಜಾರಿಗೊಳಿಸುವ ಮೂಲಕ ದಲಿತ, ಆದಿವಾಸಿ, ಬಡ ಉಮೇದುವಾರರನ್ನು ಪಂಚಾಯತ್ ಚುನಾವಣೆಗಳಿಂದ ಹೊರಗುಳಿಯುವಂತೆ ಮಾಡಲಾಗಿದೆ. ಮೊನ್ನೆಮೊನ್ನೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ - ಸೂರಂಟೆ ಸಂಪರ್ಕ ರಸ್ತೆ ಮತ್ತು ಸೇತುವೆಯನ್ನು ಸ್ಥಳೀಯ ಬಿಜೆಪಿ ಶಾಸಕ ಅಲ್ಲಿನ ಗ್ರಾಮ ಪಂಚಾಯತ್‌ನ ಗಮನಕ್ಕೆ ತಾರದೆ ಉದ್ಘಾಟಿಸಿದ ಘಟನೆಯೂ ಇದೇ ಸಾಲಿಗೆ ಸೇರುತ್ತದೆ.
ಈ ಕ್ರಮಗಳೆಲ್ಲವೂ ಸಂಘ ಪರಿವಾರದ ಕಾರ್ಯಸೂಚಿಯ ಪ್ರಧಾನ ಅಂಶವಾದ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ರಮದ ಭಾಗವೆ ಆಗಿವೆ. ಯಾರೇನೇ ಹೇಳಲಿ, 2014ರ ಮೇ ನಂತರದ ವಿದ್ಯಮಾನಗಳನ್ನು ಗಮನವಿಟ್ಟು ನೋಡಿದಾಗ ಒಟ್ಟಾರೆಯಾಗಿ ಅವೆಲ್ಲವೂ ಹಿಂದೂ ರಾಷ್ಟ್ರ ಎಂಬ ಒಂದೇ ಗುರಿಯ ಕಡೆಗೆ ಮುಖ ಮಾಡಿರುವುದು ಸ್ಫಟಿಕದಷ್ಟು ಸ್ಫುಟವಿದೆ. ಆ ಗುರಿಸಾಧನೆಯ ನಿಟ್ಟಿನಲ್ಲಿ ಭಾರತದ ಪ್ರಜಾತಾಂತ್ರಿಕ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನೆಲ್ಲಾ ಒಂದೊಂದಾಗಿ ದುರ್ಬಲಗೊಳಿಸುತ್ತಾ ಬರಲಾಗುತ್ತಿದೆ. ಇನ್ನೊಂದು ವಿಧದಲ್ಲಿ ಹೇಳುವುದಾದರೆ ಭಾರತದ ಪ್ರಜಾತಾಂತ್ರಿಕ, ಗಣತಂತ್ರ ವ್ಯವಸ್ಥೆಯನ್ನು ಬುಡಮೇಲುಗೊಳಿಸಿ, ಶವಪೆಟ್ಟಿಗೆಯೊಳಗೆ ತುಂಬಿಸಿ, ಆಳದಲ್ಲಿ ಹೂಳಲು ಭರದ ಸಿದ್ಧತೆ ನಡೆದಿದೆ.
***
(ಆಧಾರ: 30.6.2016ರ ದ ಹಿಂದೂನಲ್ಲಿ ಮಣಿ ಶಂಕರ್ ಅಯ್ಯರ್‌ರ ಲೇಖನ ಮತ್ತು ಇತರ ವರದಿಗಳು)