ಸಚಿವ ಜಾರ್ಜ್ ರಾಜೀನಾಮೆ ನೀಡಬೇಕು: ಜನಾರ್ದನ ಪೂಜಾರಿ
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ
ಮಂಗಳೂರು, ಜು. 9; ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು, ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಬೇಕು ಮತ್ತು ಆರೋಪವಿರುವ ಅಧಿಕಾರಿಗಳನ್ನು ತನಿಖೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿರುವುದು ಸರಿಯಲ್ಲ. ಸಿಐಡಿ ಇಲಾಖೆ ಮುಖ್ಯಮಂತ್ರಿಗಳ ಅಧೀನದಲ್ಲಿಯೇ ಇರುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ. ಸಿಬಿಐ ತನಿಖೆ ನಡೆದು ಪ್ರಕರಣದ ನೈಜಾಂಶ ಹೊರಬರಬೇಕು. ಕೆ.ಜೆ. ಜಾರ್ಜ್ ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿಗಳು ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷವು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಂದೊಡ್ಡಿದ್ದಾರೆ. ಇನ್ನು ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳುವುದು ಮಾತ್ರ ಬಾಕಿ ಇದೆ. ಮುಖ್ಯಮಂತ್ರಿಗಳದ್ದು ಕಾಂಗ್ರೆಸ್ ಸಂಸ್ಕೃತಿಯಲ್ಲ. ಅವರು ಇನ್ನು ಹದಿನೈದು ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಲಿ ಎಂದು ಬಯಸಿದ್ದ ನಾನು ಪಶ್ಚಾತಾಪ ಪಡುತ್ತಿದ್ದೇನೆ ಎಂದು ಹೇಳಿದರು.
ಒಬ್ಬ ವ್ಯಕ್ತಿಗೋಸ್ಕರ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಗೃಹ ಸಚಿವ ಪರಮೇಶ್ವರ್ ಅವರು ಈ ಬಗ್ಗೆ ಹೈಕಮಾಂಡ್ ಗೆ ಸರಿಯಾದ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದರು. ಸರಕಾರ ಕೂಡಲೆ ಗಣಪತಿಯವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ನೀಡಿದ ಹೇಳಿಕೆಯ ಆಧಾರ ಮೇಲೆ ಎಫ್ಐಆರ್ ಮಾಡಲಿ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸುಧೀರ್ ಟಿ.ಕೆ, ಕಳ್ಳಿಗೆ ತಾರನಾಥ ಶೆಟ್ಟಿ, ಕರುಣಾಕರ್ ಶೆಟ್ಟಿ, ಮುಹಮ್ಮದ್ ನವಾಝ್, ನೀರಜ್ ಪಾಲ್, ದೀಪಕ್ ಕುಮಾರ್ ಉಪಸ್ಥಿತರಿದ್ದರು.