ಪ್ರಾಣ ತೆಗೆಯುವ ಬರೆಯೆಳೆಯುವ ‘ಚಿಕಿತ್ಸೆ’
ಒಡಿಶಾ: 6 ತಿಂಗಳುಗಳಲ್ಲಿ 5 ಮಕ್ಕಳು ಬಲಿ!
ಭುವನೇಶ್ವರ,ಜು.11: ಹೊಟ್ಟೆನೋವಿನಿಂದ ಬಳಲುತ್ತಿರುವ ಹಸುಳೆಯೊಂದನ್ನು ಗುಣಪಡಿಸಲು ಅಜ್ಜಿಯೊಬ್ಬಳು ನಾಟಿವೈದ್ಯ ನೊಬ್ಬನ ಮೊರೆಹೋದುದೇ ಆ ಮಗುವಿಗೆ ಮುಳುವಾಗಿ ಪರಿಣಮಿಸಿತು. ಇದೀಗ ಈ ಮಗುವು ನಬರಂಗ್ಪುರ್ನ ಸರಕಾರಿ ಆಸ್ಪತ್ರೆಯೊಂದರಲ್ಲಿ ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ಬುಡಕಟ್ಟು ಪ್ರದೇಶಗಳಲ್ಲಿ ಹೊಟ್ಟೆನೋವು ಸೇರಿದಂತೆ ವಿವಿಧ ರೋಗಗಳ ನಿವಾರಣೆಗಾಗಿ ಶಿಶುಗಳಿಗೆ ನಾಟಿ ವೈದ್ಯರುಗಳಿಂದ ಕಾದ ಕಬ್ಬಿಣದಿಂದ ಬರೆಹಾಕಿಸುವ ಕ್ರೂರಪದ್ಧತಿ ವ್ಯಾಪಕವಾಗಿದೆ. ಕಳೆದ ಆರು ತಿಂಗಳುಗಳಲ್ಲಿ ಬುಡಕಟ್ಟು ಪ್ರದೇಶಗಳ ಕನಿಷ್ಠ 40 ಶಿಶುಗಳಿಗೆ ಈ ರೀತಿ ನಾಟಿ ವೈದ್ಯರುಗಳಿಂದ ಬರೆ ಹಾಕಲಾಗಿದೆ. ಅವುಗಳಲ್ಲಿ 20 ಪ್ರಕರಣಗಳು ಒಡಿಶಾದ ನಬರಂಗ್ಪುರ್ ಜಿಲ್ಲೆಯಿಂದಲೇ ವರದಿಯಾಗಿದೆ.
ಕಳಪೆ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ವ್ಯವಸ್ಥೆ ಹಾಗೂ ಸರಕಾರದ ನಿರ್ಲಕ್ಷದ ಕಾರಣಗಳಿಂದಾಗಿ ಈ ಪ್ರದೇಶಗಳಲ್ಲಿ ನಾಟಿವೈದ್ಯರುಗಳು ಬಡಜನರ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿದ್ದಾರೆ.
ಕೃತ್ರಿಮ ಚಿಕಿತ್ಸೆಗಳು ಹಾಗೂ ಬರೆಯೆಳೆಯುವ ಪದ್ಧತಿಯಿಂದಾಗಿ ಕಳೆದ ಆರು ತಿಂಗಳುಗಳಲ್ಲಿ ಐದು ಮಕ್ಕಳು ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿವೆ.
ಒಡಿಶಾದ ಬುಡಕಟ್ಟು ಜಿಲ್ಲೆಗಳಲ್ಲಿ ಶಿಶುಗಳಿಗೆ ಬರೆಯಿಡುವ ಪ್ರಕರಣಗಳು ಪ್ರತಿವಾರವೂ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸ್ಥಳೀಯ ಅಧಿಕಾರಿಗಳು ಈ ಪದ್ಧತಿಯನ್ನು ನಿಷೇಧಿಸುವ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಅವರು ಯಾವುದೇ ಕಠಿಣ ಕ್ರಮಕ್ಕೆ ಮುಂದಾದಂತೆ ಕಂಡುಬರುತ್ತಿಲ್ಲ.
ಕಳೆದ ಬುಧವಾರ ಬೌಧ್ಪಟ್ಟಣದ ಸಮೀಪದ ಗ್ರಾಮವೊಂದರಲ್ಲಿ ನಾಟಿ ವೈದ್ಯರಿಂದ ಕಾದ ಕಬ್ಬಿಣದ ಬರೆಯೆಳೆಯಲ್ಪಟ್ಟ 13 ವರ್ಷದ ಬಾಲಕನೊಬ್ಬನನ್ನು ಚಿಂತಾಜನಕ ಸ್ಥಿತಿಯಲ್ಲಿ ಸಂಬಲ್ಪುರದ ವಿಎಸ್ಎಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತನಿಗೆ ಈವರೆಗೆ ಕನಿಷ್ಠ 30 ಬಾರಿ ಬರೆಯೆಳೆಯಲಾಗಿತ್ತೆನ್ನಲಾಗಿದೆ. ಕಳೆದ ಎಪ್ರಿಲ್ನಲ್ಲಿ ನ್ಯೂಮೋನಿಯಾ ರೋಗಕ್ಕೆ ಚಿಕಿತ್ಸೆ ನೀಡುವ ನೆಪದಲ್ಲಿ ನಾಟಿವೈದ್ಯನೊಬ್ಬ ಬಾಲಕನಿಗೆ ಕಾದ ಕಬ್ಬಿಣದಿಂದ ಬರೆಯೆಳೆದ ಘಟನೆ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು.ಮಾರ್ಚ್ನಲ್ಲಿ ಮಲ್ಕಾನ್ಗಿರಿಯಲ್ಲಿ ಜ್ವರಪೀಡಿತ ಬಾಲಕನಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಬರೆಯೆಳೆದ ಬಳಿಕ ಆತ ಮೃತಪಟ್ಟಿದ್ದ.
ಬರೆಯೆಳೆಯುವ ಪದ್ಧತಿಯು ಮಕ್ಕಳಿಗಷ್ಟೇ ಸೀಮಿತವಾಗಿಲ್ಲ. ಕಳೆದ ಡಿಸೆಂಬರ್ನಲ್ಲಿ ಮಲ್ಕಾನ್ಗಿರಿಯಲ್ಲಿ ಹೊಟ್ಟೆನೋವಿಗಾಗಿ ಚಿಕಿತ್ಸೆಗೆ ಬಂದ ಮಹಿಳೆಗೆ ನಾಟಿವೈದ್ಯನೊಬ್ಬ ಬರೆಯೆಳೆದಿದ್ದ. ಜೊತೆಗೆ ಆಕೆಯ ಉದರದ ಮೇಲೆ ಇಟ್ಟಿಗೆಯನ್ನು ಸಹ ಇರಿಸಿದ್ದ. ಇದರಿಂದ ಆಕೆಯ ದೇಹಪರಿಸ್ಥಿತಿ ಇನ್ನಷ್ಟು ವಿಷಮಗೊಂಡಿತ್ತೆಂದು ಸ್ಥಳೀಯರು ಹೇಳುತ್ತಾರೆ.
ಒಡಿಶಾದ ಆರೋಗ್ಯ ಮೂಲಸೌಕರ್ಯಗಳು ಅತ್ಯಂತ ಕಳಪೆಮಟ್ಟದಲ್ಲಿವೆಯೆಂದು ತಜ್ಞರು ಹೇಳುತ್ತಾರೆ. ಈ ರಾಜ್ಯದ ಸರಾಸರಿ ಶಿಶು ಮರಣ ಸಂಖ್ಯೆ 51 ಆಗಿದ್ದು, ಇದು ರಾಷ್ಟ್ರೀಯ ಸರಾಸರಿ(40)ಗಿಂತಲೂ ಹೆಚ್ಚೆಂದು ಅವರು ಹೇಳುತ್ತಾರೆ. ಈ ರಾಜ್ಯದಲ್ಲಿ ನೋಂದಾಯಿತ ವೈದ್ಯರ ತೀವ್ರ ಕೊರತೆಯಿರುವುದು ನಾಟಿ ವೈದ್ಯರ ಹಾವಳಿ ಹೆಚ್ಚಾಗಲು ಕಾರಣವಾಗಿದೆ.