ಬೈಕ್ ಪಲ್ಟಿ: ಸಹಸವಾರ ಮೃತ್ಯು
ಹೆಬ್ರಿ, ಜು.12: ವರಂಗ ಗ್ರಾಮದ ಮುನಿಯಾಲು ದಿನೇಶ್ ಕ್ಯಾಶ್ಯೂ ಫ್ಯಾಕ್ಟರಿ ಸಮೀಪ ಕಾರ್ಕಳ-ಹೆಬ್ರಿ ರಸ್ತೆಯಲ್ಲಿ, ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಸಹ ಸವಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ವಿಶ್ವನಾಥ ಕುಲಾಲ್(20) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ 8:30ಕ್ಕೆ ಹರೀಶ್ ಕುಲಾಲ್ ಎಂಬವರು ತನ್ನ ಬೈಕ್ನಲ್ಲಿ ವಿಶ್ವನಾಥ ಕುಲಾಲ್ರನ್ನು ಹಿಂಬದಿಯಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿಶ್ವನಾಥ ಕುಲಾಲ್ ಮಂಗಳವಾರ ಬೆಳಗಿನ ಜಾವ 3:20ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story