ಕಾದಂಬರಿ
ಧಾರಾವಾಹಿ-7
-- ಅಪರಿಚಿತ ಯುವಕನ ಕಣ್ಣೇಟು --
ಅವರ ನೋಟವನ್ನು ಎದುರಿಸಲಾರದೆ ಅವಳು ತಲೆ ತಗ್ಗಿಸಿ
‘‘ನಾನು ಹಾಗೆ ಹೇಳಿದ್ದಲ್ಲ, ಆ ಹುಡುಗಿಯನ್ನು ನೋಡುವಾಗ ಅಯ್ಯೋ ಅನಿಸುತ್ತೆ. ಅದಕ್ಕೆ ಹೇಳಿದ್ದು’’ ಐಸುಗೆ ತಾನು ಹಾಗೆ ಹೇಳಬಾರದಿತ್ತು ಅನಿಸಿತು. ಅಜ್ಜಿ ಈಗ ತಲೆ ಕೆಳಗೆ ಹಾಕಿ ಉಣ್ಣತೊಡಗಿದರು. ಐಸು ಮತ್ತೆ ಮಾತನಾಡದೆ ಹೊರನಡೆದಳು.
ಬಟ್ಟೆಗಳನ್ನೆಲ್ಲಾ ಬ್ಯಾಗ್‌ಗೆ ಜೋಡಿಸಿದ ತಾಹಿರಾ, ‘‘ಅಜ್ಜಿಗೆ ಹೇಳಿದಿರಾ ಮಾಮಿ’’ ಎಂದು ಕೇಳಿದಳು.
‘‘ಹಾಂ... ಹೇಳಿದೆ’’
‘‘ಏನು ಹೇಳಿದರು’’
‘‘ಏನೂ ಹೇಳಲಿಲ್ಲ’’
ತಾಹಿರಾಳ ಮುಖ ಸಪ್ಪೆಯಾಗಿದ್ದನ್ನು ಕಂಡು ‘‘ನೀನು ಬೇಸರ ಮಾಡಿಕೊಳ್ಳಬೇಡ. ಹೊರಡುವಾಗ ಅವರ ಕೋಣೆಗೆ ಹೋಗಿ ‘ಹೋಗ್ತೇನೇಂತ’ ಹೇಳು, ಉತ್ತರಕ್ಕೆ ಕಾಯಬೇಡ. ಅವರು ಮಾತನಾಡೋದಿಲ್ಲಾಂತ ನನಗೆ ಗೊತ್ತು. ಅದಕ್ಕೆ ಹೇಳ್ತಾ ಇದ್ದೇನೆ’’ ಎಂದಳು ಐಸು.
ಮಂಗಳೂರು ಬಸ್ ನಿಲ್ದಾಣಕ್ಕೆ ಬಿಡಲೆಂದು ಪರಿಚಯದ ಆಟೋದವನನ್ನು ಗೊತ್ತುಪಡಿಸಿದ್ದಳು ಐಸು. ರಾತ್ರಿಯಾಗುತ್ತಿದ್ದಂತೆಯೇ ಆಟೋ ಬಂದು ಮನೆಯ ಮುಂದೆ ನಿಂತಿತ್ತು. ಊಟ ಮುಗಿಸಿದ ತಾಹಿರಾಳನ್ನು ಅಜ್ಜಿಯ ಕೋಣೆಗೆ ಕಳುಹಿಸಿ ತಾನು ಹೊರಗೇ ನಿಂತಳು ಐಸು.
ಕೋಣೆ ತುಂಬಾ ತುಂಬಿದ್ದ ಸಾಂಬ್ರಾಣಿ ಹೊಗೆಗೆ ಒಮ್ಮೆ ಉಸಿರು ಕಟ್ಟಿದಂತಾಗಿ ಸಾವರಿಸಿಕೊಂಡ ತಾಹಿರಾ ಅಜ್ಜಿಯನ್ನೇ ನೋಡಿದಳು. ತಾನು ಒಳಗೆ ಹೊಕ್ಕ ಪರಿವೆಯೇ ಇಲ್ಲದ ಅವರು ಕಿಟಕಿಯ ಪಕ್ಕ ಕುಳಿತು ಹೊರಗೆ ನಿಂತ ಆಟೋವನ್ನೇ ನೋಡುತ್ತಿದ್ದರು.
‘‘ಅಜ್ಜೀ...’’ ತಾಹಿರಾ ಕರೆದಳು.
ಒಮ್ಮೆಲೇ ಬೆಚ್ಚಿ ಬಿದ್ದವರಂತೆ ಎದ್ದ ಅಜ್ಜಿ ತಿರುಗಿ ನಿಂತರು.
‘‘ಅಜ್ಜಿ ನಾನು ಹೋಗ್ತೇನೆ’’
ಅಜ್ಜಿ ತುಟಿ ಬಿಚ್ಚಲಿಲ್ಲ. ಮುಖವನ್ನೂ ನೋಡಲಿಲ್ಲ.
‘‘ಯಾಕಜ್ಜೀ ನನ್ನ ಮೇಲೆ ಇಷ್ಟು ಕೋಪ, ನಾನೇನು ತಪ್ಪು ಮಾಡಿದ್ದೇನೆ?’’
‘‘................’’
ತಾಹಿರಾ ಮತ್ತೂ ಅಜ್ಜಿಯ ಹತ್ತಿರ ಹೋದಳು.
ಅಜ್ಜಿ ಕಂಬದಂತೆ ಗೋಡೆಗೆ ಮುಖ ಮಾಡಿ ನಿಂತಿದ್ದರು. ತಾಹಿರಾಳಿಗೆ ಮತ್ತೆ ಆ ಮೌನವನ್ನು ಸಹಿಸಲಾಗಲಿಲ್ಲ. ಅಜ್ಜಿಯ ಕೈಯನ್ನು ತನ್ನ ಕೈಗೆ ತೆೆಗೆದುಕೊಂಡವಳೇ ‘‘ಅಜ್ಜಿ, ನಾನು ಹೋಗ್ತೇನೆ’’ ಎಂದಳು.
ಅಜ್ಜಿಯ ಬಾಯಿಗೆ ಬೀಗ ಹಾಕಿತ್ತು.
ಅವರ ಕೈಯನ್ನು ಎತ್ತಿ ಕಣ್ಣಿಗೊತ್ತಿಕೊಂಡವಳಿಗೆ ಗಂಟಲು ಉಬ್ಬಿ ಬಂತು.
‘‘ಯಾಕಜ್ಜಿ ನನ್ನಲ್ಲಿ ಮಾತನಾಡೋಲ್ಲ. ನಾನೇನು ತಪ್ಪು ಮಾಡಿದ್ದೇನೆ?’’ ಎನ್ನುತ್ತಾ ಅತ್ತೇ ಬಿಟ್ಟಳು. ಕಣ್ಣೀರಿನಿಂದ ತೋಯ್ದ ಅವರ ಕೈಗಳೀಗ ಮೆಲ್ಲನೆ ಅದುರತೊಡಗಿದವು. ಆ ಕೈ ಅವಳ ಬೆನ್ನನ್ನು ತಡವುತ್ತಾ ತಲೆ ಸವರಿತು. ಕಣ್ಣೀರು ಒರೆಸಿತು. ಅವಳೀಗ ಅವರ ಬೆನ್ನ ಹಿಂದಿನಿಂದಲೇ ಅಪ್ಪಿಹಿಡಿದು ‘‘ಅಜ್ಜಿ ನಾನು ಹೋಗ್ತೇನೆ ಅಜ್ಜಿ. ಹತ್ತು ದಿನ ಬಿಟ್ಟು ಬರ್ತೇನೆ’’ ಎಂದಳು.
ಅಜ್ಜಿ ಈಗಲೂ ಮಾತನಾಡಲಿಲ್ಲ.
ಮತ್ತೆ ಅಲ್ಲಿ ನಿಲ್ಲಲಾರದೆ ಹೊರಬಂದವಳು ಅಲ್ಲೇ ನಿಂತಿದ್ದ ಐಸುಳನ್ನು ತಬ್ಬಿ ಹಿಡಿದು ಬಿಕ್ಕತೊಡಗಿದಳು. ‘‘ಅಳಬೇಡಮ್ಮಾ... ನನ್ನ ಮಗಳು ಅಳಬಾರದು... ನೀನು ಹೋಗಿ ಬಾ... ಎಲ್ಲ ಸರಿಯಾಗುತ್ತೆ’’ ಎನ್ನುತ್ತಾ ಅವಳನ್ನು ತಬ್ಬಿಕೊಂಡೇ ಆಟೋದತ್ತ ಕರೆದೊಯ್ದಳು. ತನ್ನ ಬ್ಯಾಗನ್ನು ಆಟೋದಲ್ಲಿಟ್ಟು ಹತ್ತುವುದಕ್ಕಿಂತ ಮೊದಲೊಮ್ಮೆ ತಿರುಗಿ ನೋಡಿದಳು. ಕಿಟಕಿಯಲ್ಲಿ ಅಜ್ಜಿ ಕಣ್ಣೊರೆಸಿಕೊಳ್ಳುತ್ತಿದ್ದುದು ಕಾಣಿಸಿತು. ಮುಖದಲ್ಲಿ ಬಲವಂತದ ನಗು ತಂದುಕೊಂಡು ಅಜ್ಜಿಗೆ ಕೈ ಬೀಸಿದಳು. ಅಜ್ಜಿ ಪ್ರತಿಕ್ರಿಯಿಸಲಿಲ್ಲ. ಬಿಟ್ಟ ಕಣ್ಣಿನಿಂದ ಅವಳನ್ನೇ ದಿಟ್ಟಿಸಿ ನೋಡುತ್ತಿದ್ದರು. ತಾಹಿರಾಳನ್ನು ಹೊತ್ತ ಆಟೋ ಹೊರಟಿತು.
***
ಅಜ್ಜಿ ಮನೆಯಿಂದ ಮರಳಿದ ತಾಹಿರಾಳಿಗೆ ಒಂಟಿತನ ಹಿಂದೆಂದಿಗಿಂತಲೂ ಹೆಚ್ಚಾಗಿ ಕಾಡತೊಡಗಿತ್ತು. ಒಂದೊಂದು ದಿನವೂ ಒಂದೊಂದು ಯುಗದಂತೆ ಭಾಸವಾಗತೊಡಗಿದವು. ಒಂದು ವಾರದಲ್ಲೇ ಅವಳು ಮತ್ತೆ ಅಜ್ಜಿಯ ಮನೆಗೆ ಹೊರಟು ನಿಂತಳು. ಒಂದು ಬೆಳ್ಳಂಬೆಳಗ್ಗೆ ಅಜ್ಜಿ ಮನೆಯ ಮುಂದೆ ಆಟೋದಿಂದಿಳಿದವಳೇ ಕರೆಗಂಟೆ ಒತ್ತಿದಳು. ಒಂದೇ ಕ್ಷಣದಲ್ಲಿ ಬಾಗಿಲು ತೆರೆದುಕೊಂಡಿತು. ಐಸುವನ್ನು ಅಲ್ಲಿ ನಿರೀಕ್ಷಿಸಿದ್ದ ಅವಳಿಗೆ ಅವಳ ಬದಲಿಗೆ ಒಬ್ಬ ಯುವಕ ಬಾಗಿಲಿಗಡ್ಡವಾಗಿ ನಿಂತಿದ್ದು ಕಂಡು ಆಶ್ಚರ್ಯವಾಯಿತು. ಅವಳು ಕಣ್ಣು ಪಿಳಿಪಿಳಿ ಮಾಡುತ್ತಾ ಅವನನ್ನೇ ನೋಡಿದಳು. ರಾತ್ರಿಯುಡುಗೆಯಲ್ಲಿದ್ದ ಸುಂದರವಾದ ಯುವಕ ಅವಳನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ. ಅವಳಿಗೆ ನಾಚಿಕೆಯಾಯಿತು.
‘‘ಯಾರು ಬೇಕು?’’ ಆತ ಕೇಳಿದ
‘‘ನೀವು ಯಾರು?’’ ಅವಳು ಕೇಳಿದಳು.
ತಿಳಿ ಗುಲಾಬಿ ಬಣ್ಣದ ಚೂಡಿದಾರ ಧರಿಸಿ ಅದರ ಶಾಲನ್ನು ಮೈತುಂಬಾ ಹೊದ್ದುಕೊಂಡಿದ್ದ ಅವಳ ಬೊಗಸೆ ಕಂಗಳಲ್ಲಿರುವ ಕುತೂಹಲ ಕಂಡು ಅವನಿಗೆ ನಗುಬಂತು. ಯಾರಿರಬಹುದು ಈ ಸುಂದರಿ, ಎಲ್ಲಿಯಾದರೂ ದಾರಿ ತಪ್ಪಿಬಂದಿರಬಹುದೇ ಎಂದು ಯೋಚಿಸುತ್ತಲೇ ‘‘ನನ್ನ ಮನೆಗೆ ಬಂದು ನನ್ನನ್ನೇ ಯಾರು ಎಂದು ಕೇಳುತ್ತಿದ್ದೀರಲ್ಲಾ’’ ಎಂದು ಹುಸಿ ಕೋಪ ತೋರಿಸಿದ. ತಾಹಿರಾಳಿಗೆ ಒಂದು ಕ್ಷಣ ಗಲಿಬಿಲಿಯಾಯಿತು. ತಾನೆಲ್ಲಾದರೂ ತಪ್ಪಿ ಈ ಮನೆಗೆ ಬಂದಿರಬಹುದೇ ಎಂದು ಸುತ್ತಲೂ ನೋಡಿದಳು.
‘‘ನಿಮಗೆ ಯಾರು ಬೇಕು? ಯಾರ ಮನೆಗೆ ಬಂದಿದ್ದೀರಿ?’’ ಅವಳ ಸೌಂದರ್ಯವನ್ನು ಕಣ್ತುಂಬಾ ತುಂಬಿಕೊಳ್ಳುತ್ತಾ ಆತ ಮತ್ತೆ ಕೇಳಿದ.
‘‘ಐಸು ಮಾಮಿ...’’
‘‘ಐಸು ಮಾಮಿ...!’’ ಅವನ ಕುತೂಹಲ ಇನ್ನಷ್ಟು ಹೆಚ್ಚಾಯಿತು. ‘‘ನೀವು ಎಲ್ಲಿಂದ ಬಂದಿದ್ದು?’’
‘‘ಬೆಂಗಳೂರಿನಿಂದ’’
‘‘ನಿಮಗೆ ಯಾರ ಮನೆ ಬೇಕು?’’
‘‘ಅಜ್ಜಿ ಮನೆ’’
ಅವನ ತಲೆ ಹಾಳಾಗಿತ್ತು. ಯಾರಪ್ಪ ಇದು, ಬೆಂಗಳೂರಿನಿಂದ ಈ ಮನೆಗೆ ಬಂದ ಹೊಸ ಹುಡುಗಿ ಎಂದು ಅವಳನ್ನೇ ನುಂಗುವಂತೆ ನೋಡುತ್ತಾ ‘‘ಅಮ್ಮಾ’’ ಎಂದು ಕರೆದ.
‘‘ಏನೋ...’’ ಎಂದು ಸೆರಗಿನಿಂದ ಕೈಯೊರೆಸಿ ಕೊಳ್ಳುತ್ತಾ ಬಂದ ಐಸು ಬಾಗಿಲಲ್ಲಿ ನಿಂತ ತಾಹಿರಾಳನ್ನು ಕಂಡು ಚಕಿತಳಾದಳು.
‘‘ಯಾಕೆ ಅವಳನ್ನು ಹೊರಗೆ ನಿಲ್ಲಿಸಿದ್ದಿಯಾ?’’ ಎಂದು ಅವನನ್ನು ಗದರಿಸಿದವಳು ‘‘ಬಾಮ್ಮಾ ಒಳಗೆ, ಯಾಕೆ ಹೊರಗೆ ನಿಂತಿದ್ದಿಯಾ’’ ಎನ್ನುತ್ತಾ ಹೋಗಿ ಅವಳನ್ನು ತಬ್ಬಿಕೊಂಡಳು. ಬ್ಯಾಗ್ ಎತ್ತಲು ಹೋದ ಅವಳನ್ನು ‘‘ಬಿಡಮ್ಮಾ, ಅದನ್ನು ಅವನು ತರ್ತಾನೆ’’ ಎಂದು ಅವಳನ್ನು ಒಳಗೆ ಕರೆತಂದಳು. ಐಸುಳ ಬೆನ್ನಿಗೆ ಅಂಟಿಕೊಂಡು ಒಳಬಂದ ತಾಹಿರಾ ತಿರುಗಿತಿರುಗಿ ಅವನನ್ನೇ ನೋಡುತ್ತಿದ್ದಳು. ನುಂಗುವಂತೆ ತನ್ನನ್ನೇ ನೋಡುತ್ತಿದ್ದ ಅವನನ್ನು ಕಂಡು ಸಂಕೋಚದಿಂದ ಐಸುಳ ಕಿವಿಯಲ್ಲಿ ಮೆಲ್ಲ ಕೇಳಿದಳು ‘‘ಯಾರು ಮಾಮಿ ಅದು?’’
ಐಸು ಒಂದು ಕ್ಷಣ ನಿಂತು ತಿರುಗಿದವಳು ನಕ್ಕು, ‘‘ಇವನಾ, ಬಾ ಹೇಳ್ತೇನೆ’’ ಎಂದು ‘‘ಯಾಕೋ ಗೊಮ್ಮಟನ ಹಾಗೆ ನಿಂತಿದ್ದಿಯಾ, ಹೋಗಿ ಆ ಬ್ಯಾಗ್ ಒಳಗೆ ತಂದು ಕೋಣೆಯಲ್ಲಿಡು’’ ಎಂದು ಆಜ್ಞೆ ಮಾಡಿ ತಾಹಿರಾಳನ್ನು ಕೋಣೆಗೆ ಕರೆದುಕೊಂಡು ಹೋದಳು.
‘‘ನಾನು... ಬ್ಯಾಗ್ ಒಳಗಿಡ ಬೇಕಾ?! ಯಾರಪ್ಪಾಇದು ಅಷ್ಟು ದೊಡ್ಡ ಜನ. ಬೆಂಗಳೂರಿನಿಂದ ಬಂದಿದ್ದೇನೆ ಎನ್ನುತ್ತಿದ್ದಾಳೆ. ನಾನು ಈ ತನಕ ನೋಡದ ಈ ಚೆಲುವೆ ಯಾರಿರಬಹುದು?’’ ಎಂದು ಯೋಚಿಸುತ್ತಾ ಬ್ಯಾಗನ್ನು ಎಳೆದುಕೊಂಡು ಕೋಣೆಗೆ ಬಂದ.
ಅವಳನ್ನು ಇನ್ನೂ ತಬ್ಬಿಕೊಂಡೇ ಇದ್ದ ಐಸುಳ ಸಂಭ್ರಮವನ್ನು ಕಂಡು ಅವನ ಕುತೂಹಲ ಇಮ್ಮಡಿ ಯಾಗಿತ್ತು. ಯಾರಿರಬಹುದು ಎಂದು ಯೋಚಿಸುತ್ತಾ, ಅವಳ ಸೌಂದರ್ಯವನ್ನು ನೋಡುತ್ತಾ ನಿಂತ ಅವನ ನೋಟವನ್ನು ಎದುರಿಸಲಾರದೆ ತಾಹಿರಾ ಮತ್ತೆ ಐಸುಳ ಬೆನ್ನ ಹಿಂದೆ ಅಡಗಿಕೊಳ್ಳಲು ಹೆಣಗಾಡುತ್ತಾ, ‘‘ಮಾಮಿ, ಆತ ಯಾರು ಮಾಮಿ, ನೋಡಿ ಹೇಗೆ ನುಂಗುವಂತೆ ನೋಡ್ತಾ ಇದ್ದಾನೆ’’ ಎಂದು ಮೆಲ್ಲನೆ ಐಸುಳ ಕಿವಿಯಲ್ಲಿ ಪಿಸುಗುಟ್ಟಿದಳು.
‘‘ಇವನಾ...? ಇವನು ನನ್ನ ಮಗ...’’ ಎನ್ನುತ್ತಾ ಅವನನ್ನು ಹತ್ತಿರ ಕರೆದಳು. ‘‘ಮಗನಾ...?’’ ಅವಳು ಮಾಮಿಯ ಬೆನ್ನ ಹಿಂದೆ ಮತ್ತಷ್ಟು ಮುದುಡಿಕೊಂಡಳು.
‘‘ಏನೋ ಹಾಗೆ ಅವಳನ್ನು ನುಂಗುವಂತೆ ನೋಡ್ತಿ ದ್ದಿಯಾ? ನೀನೇನು ಹೆಣ್ಣು ಮಕ್ಕಳನ್ನು ನೋಡಿಯೇ ಇಲ್ಲವಾ?’’ ಐಸು ಮಗನನ್ನು ಗದರಿಸಿದಳು.
‘‘ಹಾಗಲ್ಲಮ್ಮಾ, ನಿನಗೆ ಇಷ್ಟೊಂದು ಆಪ್ತವಾಗಿರುವ, ನಾನು ಈತನಕ ನೋಡಿರದ ಈ ಹುಡುಗಿ ಯಾರೂಂತ ಯೋಚಿಸುತ್ತಿದ್ದೆ’’ ಎನ್ನುತ್ತಾ ಅವಳನ್ನು ಕದ್ದು ಕದ್ದು ನೋಡತೊಡಗಿದ.
‘‘ಅಜ್ಜಿಯ ಕಿರಿಯ ಮಗಳು ರೊಹರಾ ಇದ್ದಾಳಲ್ಲ, ಅವಳ ಮಗಳು ಇವಳು. ತಾಹಿರಾಂತ ಹೆಸರು. ಬೆಂಗಳೂರಿನಲ್ಲಿರುವುದು. ಇದಕ್ಕೂ ಮೊದಲು ಒಮ್ಮೆ ಇಲ್ಲಿಗೆ ಬಂದಿದ್ದಳು. ಒಂದು ವಾರ ಇಲ್ಲಿದ್ದು ಹೋಗಿದ್ದಳು’’
‘‘ಇವ ನನ್ನ ಒಬ್ಬನೇ ಮಗ. ಹೆಸರು ನಾಸರ್ ಅಂತ. ಇಂಜಿನಿಯರ್. ಮೈಸೂರಿನಲ್ಲಿ ಕೆಲಸದಲ್ಲಿದ್ದಾನೆ. ಎರಡು ದಿನ ಆಯಿತು ಬಂದು. ಇಂದು ಮಧ್ಯಾಹ್ನ ಹೋಗುತ್ತಾನೆ’’
ತಾಹಿರಾ ಮೆಲ್ಲ ಕಣ್ಣೆತ್ತಿ ಅವನತ್ತ ನೋಡಿದಳು. ಅವನ ಮುಖದ ತುಂಬಾ ಬೆಳದಿಂಗಳು ಸುರಿಯುತ್ತಿತ್ತು.
ಅವನು ಮತ್ತೆ ಮತ್ತೆ ತಿರುಗಿ ನೋಡುತ್ತಾ ಕೋಣೆಯಿಂದ ಹೊರನಡೆದ.
‘‘ಮಾಮಿ, ನಿಮಗೊಬ್ಬ ಮಗ ಇರುವ ಬಗ್ಗೆ ನೀವು ನನಗೆ ಹೇಳಲೇ ಇಲ್ಲ’’
‘‘ನಿನ್ನ ನೋಡಿದ ಖುಷಿಯಲ್ಲಿ ಎಲ್ಲ ಮರೆತೇ ಬಿಟ್ಟಿದ್ದೆ. ಈಗ ಗೊತ್ತಾಯಿತಲ್ಲಾ’’
‘‘ನಿಮಗೆ ಎಷ್ಟು ಮಕ್ಕಳು?’’
‘‘ಇವನೊಬ್ಬನೇ’’
‘‘ಅಜ್ಜಿ ಹೇಗಿದ್ದಾರೆ ಮಾಮಿ?’’
‘‘ನೀನು ಹೋದ ಮೇಲೆ ನಿನ್ನದೇ ಮಾತು. ಪ್ರತಿದಿನ ರಾತ್ರಿ ಅಜ್ಜನ ಜೊತೆ ಜಗಳ ಆಗ್ತಾ ಇತ್ತು. ನಿನ್ನೆ ಮಧ್ಯಾಹ್ನ ನೀನು ಯಾವಾಗ ಬರ್ತಿ ಅಂತ ಕೇಳಿದರು. ನಿನ್ನ ನೆನಪಾದಾಗಲೆಲ್ಲ ಮಂಕಾಗಿರ್ತಾರೆ’’
‘‘ಈಗ ನಾನು ಬಂದದ್ದು ಗೊತ್ತಾ?’’
‘‘ಇಲ್ಲ. ಎರಡು ದಿನದಿಂದ ಸ್ವಲ್ಪಜ್ವರ ಬರ್ತಾ ಇದೆ. ಮಲಗಿದ್ದಾರೆ’’
‘‘ಮದ್ದು ತರಲಿಲ್ಲವಾ?’’
‘‘ನಾಸರ್ ನಿನ್ನೆ ತಂದಿದ್ದಾನೆ. ಶೀತ ಜ್ವರ. ಸ್ವಲ್ಪ ಕಡಿಮೆ ಇದೆ. ಬಿಸಿ ನೀರಿದೆ ನೀನು ಸ್ನಾನ ಮಾಡಿ ಬಟ್ಟೆ ಬದಲಿಸು. ನಾನು ಅಜ್ಜಿಗೆ ತಿಂಡಿ ಕೊಟ್ಟು ಮದ್ದು ಕುಡಿಸಿ ಬರ್ತೇನೆ. ಆಮೇಲೆ ನಾವು ಒಟ್ಟಿಗೆ ತಿಂಡಿ ತಿನ್ನುವಾ ಆಯಿತಾ’’ ಎಂದು ಹೇಳಿ ಹೊರಟಳು ಐಸು.
ಸ್ನಾನ ಮಾಡಿ ಬಂದು ಬಟ್ಟೆ ಬದಲಿಸಿದ ಮೇಲೂ ತಾಹಿರಾಳಿಗೆ ಕೋಣೆಯಿಂದ ಹೊರಬರಲು ಎಲ್ಲಿ ಅವನು ಎದುರಾಗಿ ಬಿಡುತ್ತಾನೋ ಎಂಬ ಮುಜುಗರ. ಒಂದೆರಡು ಸಲ ಬಾಗಿಲವರೆಗೆ ಬಂದವಳು ಅಡುಗೆ ಮನೆಯಲ್ಲಿ ತಾಯಿ-ಮಗನ ಮಾತು ಕೇಳಿ ಮತ್ತೆ ಬಂದು ಮಂಚದ ಮೇಲೆ ಬಿದ್ದುಕೊಂಡಳು. ಐಸು ಕೋಣೆಗೆ ಬಂದಾಗ ತಾಹಿರಾಳಿಗೆ ಗಟ್ಟಿ ನಿದ್ದೆ. ರಾತ್ರಿಯೆಲ್ಲ ನಿದ್ದೆ ಬಿಟ್ಟು ಪ್ರಯಾಣ ಮಾಡಿ ಬಂದಿದ್ದಾಳೆ. ಸ್ವಲ್ಪಹೊತ್ತು ಮಲಗಲಿ ಎಂದು ಬಾಗಿಲು ಸರಿಸಿ ಬಂದವಳಿಗೆ ಹನ್ನೊಂದು ಗಂಟೆಯಾ ದರೂ ತಾಹಿರಾ ಏಳದಿದ್ದಾಗ ಮತ್ತೆ ಹೋಗಿ ಅವಳ ಪಕ್ಕ ಕುಳಿತು ‘‘ತಾಹಿರಾ... ಮೋಳೇ...’’ ಎಂದು ತಲೆ ಸವರಿದಳು.
ದಡಕ್ಕನೆ ಎದ್ದು ಕುಳಿತ ತಾಹಿರಾ ಕಣ್ಣು ಪಿಳಿಪಿಳಿ ಮಾಡುವುದನ್ನು ಕಂಡು ‘‘ಗಂಟೆ ಹನ್ನೊಂದಾಯಿತು. ತಿಂಡಿ ತಿನ್ನು ಬಾ’’ ಎಂದಾಗಲೇ ಅವಳು ವಾಸ್ತವ ಲೋಕಕ್ಕೆ ಮರಳಿದ್ದು.
‘‘ನಾನು ಎಷ್ಟು ಹೊತ್ತು ಮಲಗಿಬಿಟ್ಟೆ ಮಾಮಿ. ನೀವಿನ್ನೂ ತಿಂಡಿ ತಿಂದಿಲ್ಲವಾ?’’ ಕೇಳಿದಳು.
‘‘ಇಲ್ಲ, ನೀನು ಏಳಲೀಂತ ಕಾಯ್ತ ಇದ್ದೆ’’
‘‘ಅಜ್ಜೀ...?’’
‘‘ಇನ್ನೂ ನಿದ್ದೆಯಲ್ಲೇ ಇದ್ದಾರೆ. ಅವರಾಗಿಯೇ ಏಳಲೀಂತ ಎಬ್ಬಿಸಲಿಲ್ಲ’’
(ರವಿವಾರದ ಸಂಚಿಕೆಗೆ)