ದೇಶಪ್ರೇಮದ ಭೂತದ ಸುತ್ತ
‘ಇದೆಂಥಾ ದೇಶಪ್ರೇಮ ರೀ?’ ಯುವ ರಂಗಕರ್ಮಿ ಎಸ್. ಶಿಶಿರಂಜನ್ ಅವರು ಬರೆದಿರುವ ನಾಟಕ. ದೇಶಭಕ್ತಿ, ರಾಷ್ಟ್ರೀಯತೆಯಂತಹ ಜನಪ್ರಿಯ ಆದರ್ಶಗಳ ತಳಹದಿಯ ಮೇಲೆ ನಿಂತಿರುವ ಈ ನಾಟಕದ ವಸ್ತು ಚಿರಪರಿಚಿತವಾದುದು. ಇತಿಹಾಸ ಮತ್ತು ವರ್ತಮಾನಗಳ ಮುಖಾಮುಖಿಯೂ ಈ ನಾಟಕದಲ್ಲಿದೆ. ಇತಿಹಾಸದ ಪ್ರಸಂಗವೊಂದನ್ನು ಮುಂದಿಟ್ಟುಕೊಂಡು ಇಂದಿನ ಭಾರತೀಯರ ಮನಸ್ಥಿತಿಯನ್ನು ವ್ಯಂಗ್ಯವಾಡುವ ಪ್ರಯತ್ನವನ್ನು ನಾಟಕಕಾರರು ಈ ಕೃತಿಯಲ್ಲಿ ಮಾಡಿದ್ದಾರೆ. ಚಿತ್ರದಲ್ಲಿ ಇತಿಹಾಸದ ಒಂದು ಸಣ್ಣ ಎಳೆಯಿದೆ. ತನ್ನ ಗಂಡ ದೇಶದ್ರೋಹವನ್ನು ಮಾಡಿ ಶತ್ರುಗಳ ಜೊತೆ ಕೈ ಜೋಡಿಸಿದಾಗ, ಪತ್ನಿ ಹೊನ್ನವ್ವ ಆತನ ಊಟದಲ್ಲಿ ವಿಷ ಇಕ್ಕಿ, ತಾನೂ ವಿಷ ಉಂಡು ಸಾಯುವುದು. ಈ ದೇಶಪ್ರೇಮದ ಕತೆಯನ್ನು ಮುಂದಿಟ್ಟುಕೊಂಡು ಇಂದಿನ ದೇಶದ ವರ್ತಮಾನವನ್ನು ಚರ್ಚಿಸುವುದು.
ನಾಟಕದ ಒಟ್ಟು ಆಶಯ, ಸದ್ಯದ ಬಲಪಂಥೀಯ ಆದರ್ಶಗಳೊಂದಿಗೆ ತಳಕು ಹಾಕುತ್ತದೆ. ರಾಷ್ಟ್ರೀಯತೆಯ ಆಶಯವೂ ಇದರಲ್ಲಿದೆ. ಅಂತೆಯೇ ಪ್ರಜಾಪ್ರಭುತ್ವವನ್ನು ಅಲ್ಲಲ್ಲಿ ವ್ಯಂಗ್ಯ ಮಾಡುತ್ತದೆ. ಸುಭಾಶ್ ಚಂದ್ರಬೋಸ್, ಭಗತ್ ಸಿಂಗ್‌ರಂತಹ ವ್ಯಕ್ತಿತ್ವಕ್ಕಾಗಿ ನಾಟಕಕಾರರು ಹಪಹಪಿಸುತ್ತಾರೆ. ಆದರೆ ಈ ದೇಶದ ಮೂಲಭೂತ ಸಾಮಾಜಿಕ ಸಮಸ್ಯೆಗಳ ಕಡೆಗೆ ಕಣ್ಣಾಯಿಸುವುದಿಲ್ಲ. ಆದುದರಿಂದ ಇದೊಂದು ರೀತಿಯ ರಾಜಕೀಯ ನಾಟಕವೇ ಸರಿ. ಜಾತೀಯತೆ, ರೈತರ ಸಮಸ್ಯೆ, ಕೃಷಿಯ ಪತನ, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಸೋಗಲಾಡಿತನ ಇವುಗಳೆಲ್ಲವೂ ದೇಶಪ್ರೇಮಕ್ಕಿರುವ ಅಡೆತಡೆಗಳು ಎನ್ನುವ ಆಳದ ನೋಟ ಈ ನಾಟಕದಲ್ಲಿಲ್ಲ. ಭಾವಾವೇಶಕ್ಕೊಳಗಾಗಿರುವ ಜನಪ್ರಿಯ ಆದರ್ಶವೇ ನಾಟಕಕಾರರ ಮುಖ್ಯ ಉದ್ದೇಶವಾಗಿದೆ. ಅದೇನೇ ಇರಲಿ, ಸ್ವಾರ್ಥವನ್ನು ಬಿಟ್ಟು ಜನಸೇವೆ, ದೇಶಸೇವೆ ಮಾಡಬೇಕು ಅನ್ನೋ ಉತ್ಕಟವಾದ, ಶ್ರೇಷ್ಠವಾದ, ಮನೋಭಾವವೊಂದನ್ನು ಈ ನಾಟಕದ ಮೂಲಕ ಕೃತಿಕಾರರು ನಿರೀಕ್ಷಿಸುತ್ತಾರೆ.
ಸುಮಾರು 11 ಪಾತ್ರಗಳಿರುವ ಈ ನಾಟಕ ರಂಗಪ್ರಯೋಗಕ್ಕೆ, ರಂಗಚಲನೆಗೆ ಪೂರಕವಾಗಿದೆ. ಸ್ಕಂದ ಪ್ರಕಾಶನ ಮೈಸೂರು ಹೊರತಂದಿರುವ ಈ ಕೃತಿಯ ಮುಖಬೆಲೆ 80 ರೂ. ಆಸಕ್ತರು 9535802512 ದೂರವಾಣಿಯನ್ನು ಸಂಪರ್ಕಿಸಬಹುದು.