ಆರೋಗ್ಯ ಆಶಯ-ಬಹು ಆಯಾಮಗಳ ಚರ್ಚೆ
ಜಾಗತಿಕವಾಗಿ ಆರೋಗ್ಯ ಕ್ಷೇತ್ರ ಹೇಗೆ ವಿವಿಧ ರಾಜಕೀಯ ಮತ್ತು ಆರ್ಥಿಕ ವಿಷವರ್ತುಲಗಳ ನಡುವೆ ಸಿಲುಕಿ ರೋಗಗ್ರಸ್ಥವಾಗಿದೆ ಎನ್ನುವುದನ್ನು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರ ‘ಆರೋಗ್ಯ ಆಶಯ’ ಎನ್ನುವ ಕೃತಿ ಅತ್ಯಂತ ಪರಿಣಾಮಕಾರಿಯಾಗಿ ತೆರೆದಿಡುತ್ತದೆ. ಬಹುಶಃ ಆರೋಗ್ಯ ಕ್ಷೇತ್ರವನ್ನು ಕನ್ನಡದಲ್ಲಿ ಭಿನ್ನವಾಗಿ ನೋಡಿದವರಲ್ಲಿ ಮೊದಲಿಗರು ಡಾ. ಬಿ. ಎಂ. ಹೆಗ್ಡೆ. ಇದಾದ ಬಳಿಕ ಈ ವಲಯವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟವರು ವೃತ್ತಿಯಲ್ಲಿ ವೈದ್ಯರೂ, ಪ್ರವೃತ್ತಿಯಲ್ಲಿ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಕಕ್ಕಿಲ್ಲಾಯ ಅವರು. ಇಲ್ಲಿಯ ಲೇಖನಗಳು ಕೇವಲ ಮನುಷ್ಯರ ರೋಗ ಮತ್ತು ಚಿಕಿತ್ಸೆಯ ಕುರಿತು ಮಾತ್ರ ಮಾತನಾಡುವುದಿಲ್ಲ. ಇಲ್ಲಿ ರೋಗದ ಕೇಂದ್ರ ದೇಹ ಮಾತ್ರವಲ್ಲ. ಒಂದು ವ್ಯವಸ್ಥೆಯೇ ಹೇಗೆ ವಿವಿಧ ರೋಗಗಳ ಜೊತೆಗೆ ಶಾಮೀಲಾಗಿ ಬಡ ರೋಗಿಗಳನ್ನು ಶೋಷಣೆಗೀಡು ಮಾಡಿವೆ ಎನ್ನುವುದನ್ನು ಹೇಳುತ್ತಾರೆ. ಆರೋಗ್ಯದ ಕುರಿತಂತೆ ಮಾತನಾಡುವಾಗ ಅದು ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ಎಂದೇ ನಾವು ಭಾವಿಸುತ್ತೇವೆ. ಆದರೆ ಸದ್ಯದ ದಿನಗಳಲ್ಲಿ ಸಮಾಜ, ಸಮಾಜದ ನಂಬಿಕೆಗಳು, ರಾಜಕೀಯ, ಆರ್ಥಿಕ, ಶೈಕ್ಷಣಿಕ ವ್ಯವಸ್ಥೆ ಒಂದು ದೇಶದ, ಸಮಾಜದ ಆರೋಗ್ಯ ವ್ಯವಸ್ಥೆಯನ್ನು ಹೇಗೆ ನಿರ್ಮಿಸುತ್ತವೆ, ನಿಯಂತ್ರಿಸುತ್ತವೆ ಎನ್ನುವುದನ್ನು ಈ ಕೃತಿ ಬೇರೆ ಬೇರೆ ಆಯಾಮಗಳಿಂದ ಚರ್ಚಿಸುತ್ತದೆ. ಆದುದರಿಂದ ಈ ಆರೋಗ್ಯ ಕುರಿತ ಕೃತಿಗೆ ಒಂದು ರಾಜಕೀಯ ಆಯಾಮವೂ ಇದೆ. ಇಲ್ಲಿ ಲೇಖಕರು ಒಟ್ಟು ಹತ್ತು ಆಶಯಗಳನ್ನು ತೆರೆದಿಡುತ್ತಾರೆ. ವೈದ್ಯರ ಆಯ್ಕೆ, ವೈದ್ಯಕೀಯ ಶಿಕ್ಷಣ ಸಂಸ್ಥೆ ಪರಿಷತ್ತುಗಳಲ್ಲಿ ಸ್ವೇಚ್ಛಾಚಾರ, ಆರೋಗ್ಯ ಸೇವೆಗಳ ವ್ಯಾಪಾರೀಕರಣ, ಆರೋಗ್ಯದ ಕುರಿತಂತೆ ಸರಕಾರದ ಧೋರಣೆಗಳು, ಆರೋಗ್ಯ-ಶಿಕ್ಷಣ-ಸುರಕ್ಷತೆ, ಆರೋಗ್ಯವನ್ನು ಸುತ್ತುವರಿದ ಸತ್ಸಂಗಿಗಳು, ರೋಗವಾಗಿ ಪರಿವರ್ತನೆಗೊಂಡಿರುವ ವೃದ್ಧಾಪ್ಯ ಇವುಗಳೇ ಅಲ್ಲದೆ ಬೇರೆ ಬೇರೆ ಮಾನವೀಯ ವಿಷಯಗಳ ಕುರಿತಂತೆ ಈ ಕೃತಿ ಚರ್ಚಿಸುತ್ತದೆ. ಈ ಮೂಲಕ ಆರೋಗ್ಯದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತಾರವಾಗಿ ಮತ್ತು ಸೂಕ್ಷ್ಮ ಕಣ್ಣಿನಲ್ಲಿ ನೋಡುತ್ತದೆ. ವೈಚಾರಿಕತೆ ಮತ್ತು ಆರೋಗ್ಯ ಹೇಗೆ ಪರಸ್ಪರ ಸಂಬಂಧವನ್ನು ಹೊಂದಿದೆ ಎನ್ನುವುದನ್ನೂ ಒತ್ತುಕೊಟ್ಟು ಕೃತಿ ಪ್ರತಿಪಾದಿಸುತ್ತದೆ. 360 ಪುಟಗಳ ಈ ಬೃಹತ್ ಕೃತಿ ಇಂದಿನ ದಿನಗಳಲ್ಲಿ ಪ್ರತೀ ಆರೋಗ್ಯವಂತರ ಮನೆಯಲ್ಲೂ ಜಾಗೃತಿಯ ಭಾಗವಾಗಿ ಇರಲೇಬೇಕಾಗಿದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 250 ರೂ. ಆಸಕ್ತರು 080-30578023 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.