ಮೂಡುಬಿದಿರೆ: ಕೆಸರುಗದ್ದೆಯಲ್ಲಿ ಗಮನ ಸೆಳೆದ ಕಬಡ್ಡಿ ಪಂಗಾ !
ಕಲ್ಲಮುಂಡ್ಕೂರಿನಲ್ಲಿ ವರ್ಷದ ಕೆಸರ್ದ ಕಂಡೊಡು ಆಟಿಡ್ ಒಂಜಿ ದಿನ
ಮೂಡುಬಿದಿರೆ, ಜು.17: ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಕ್ರೀಡೆಯು ರಾಷ್ಟ್ರಮಟ್ಟದ ಮಾನ್ಯತೆಯನ್ನು ಪಡೆದು ಇದೀಗ ರಾಜ್ಯದಲ್ಲಿ ನಡೆಯುತ್ತಿರುವ ಪ್ರೊ. ಕಬಡ್ಡಿಯ ಜ್ವರವು ಎಲ್ಲಾ ಕಡೆಯೂ ಪಸರಿಸಿದೆ. ಅದರಂತೆ ಗ್ರಾಮೀಣ ಪ್ರದೇಶವಾಗಿರುವ ಕಲ್ಲಮುಂಡ್ಕೂರಿನ ಕೆಸರುಗದ್ದೆಯಲ್ಲಿ ಸುಮಾರು 17 ತಂಡಗಳು ಕಬಡ್ಡಿಯಲ್ಲಿ ಸ್ಪರ್ಧಿಸುವ ಮೂಲಕ ವಿಶೇಷವಾಗಿ ಗಮನ ಸೆಳೆದಿದೆ.
ಕಲ್ಪಸಿರಿ ಶಟಲ್ ಕ್ಲಬ್ ಕಲ್ಲಮುಂಡ್ಕೂರು, ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ, ಗ್ರಾಮ ಪಂಚಾಯತ್ ಕಲ್ಲಮುಂಡ್ಕೂರು ಹಾಗೂ ಓಂಕಾರ್ ಸ್ಪೋರ್ಟ್ಸ್ ಕ್ಲಬ್ ಕಲ್ಲಮುಂಡ್ಕೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಕಲ್ಲಮುಂಡ್ಕೂರು ಗ್ರಾಮದ ಮಾಣಿಲ ಮನೆಯ ಬಾಕಿಮಾರು ಗದ್ದೆಯಲ್ಲಿ ನಡೆದ 2ನೆ ವರ್ಷದ ಕೆಸರ್ದ ಕಂಡೊಡು ಆಟಿಡ್ ಒಂಜಿ ದಿನ ಕಾರ್ಯಕ್ರಮದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ನಡೆದ ವಿವಿಧ ಗ್ರಾಮೀಣ ಕ್ರೀಡಾ ಸ್ಪರ್ಧೆಗಳಲ್ಲಿ ಪಿರಮಿಡ್ ಸಹಿತ ಕಬಡ್ಡಿ ಕ್ರೀಡೆಯು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಕಬಡ್ಡಿ ಕ್ರೀಡೆಯನ್ನು ಸಾಮಾನ್ಯವಾಗಿ ಮಣ್ಣಿನ ನೆಲದ ಮೇಲೆಯೇ ಆಡುತ್ತಾರೆ. ಆದರೆ ಕಲ್ಲಮುಂಡ್ಕೂರಿನಲ್ಲಿ ವಿಶೇಷವೆಂಬಂತೆ ಕೆಸರುಗದ್ದೆಯಲ್ಲಿ ಆಡಿದ್ದಾರೆ. ಅಲ್ಲದೆ ಕಬಡ್ಡಿ ಸ್ಪರ್ಧೆಯು ಆರಂಭವಾಗುತ್ತಿದ್ದಂತೆ ಸೇರಿದ್ದ ಜನರೆಲ್ಲರೂ ಕಬಡ್ಡಿ ಸ್ಪರ್ಧೆಯನ್ನು ವೀಕ್ಷಿಸಲು ಕಬಡ್ಡಿ ಕೋರ್ಟ್ನ ಸುತ್ತಲೂ ಮಕ್ಕಳು ಸಹಿತ ಮಹಿಳೆಯರೂ ಸೇರಿರುವುದು ಗ್ರಾಮೀಣ ಕ್ರೀಡೆ ಕಬಡ್ಡಿಯ ಬಗ್ಗೆ ಇರುವ ಒಲವನ್ನು ತೋರಿಸುತ್ತಿತ್ತು.
ಪುರುಷರಿಗೆ ಮಡಿಕೆ ಒಡೆಯುವುದು, ನಿಧಿ ಹುಡುಕುವುದು, ಕಬಡ್ಡಿ, ವಾಲಿಬಾಲ್, ಪಿರಮಿಡ್, ಓಟ ಮತ್ತು ಹಗ್ಗಜಗ್ಗಾಟ (ಮಹಿಳೆಯರಿಗೆ ಮತ್ತು ಪುರುಷರಿಗೆ), ತ್ರೋಬಾಲ್ (ಮಹಿಳೆಯರಿಗೆ) ಹಾಗೂ ಲಿಂಬೆ ಚಮಚ ಓಟ(ಮಹಿಳೆಯರಿಗೆ ಮತ್ತು ಮಕ್ಕಳಿಗೆ) ಸ್ಪರ್ಧೆಗಳಲ್ಲಿ ಊರವರು ಭಾಗವಹಿಸುವ ಮೂಲಕ ಗಮನ ಸೆಳೆದವು.