ಶರಾವತಿ ನದಿಗೆ ತೂಗು ಸೇತುವೆ
ಶಾಶ್ವತ ಪರಿಹಾರದ ಸಂಭ್ರಮದಲ್ಲಿ ಜನತೆ
ಕಾರವಾರ, ಜು.17: ಕಳೆದ ಹಲವು ವರ್ಷಗಳಿಂದ ದೋಣಿಯನ್ನೇ ಅವಲಂಬಿಸಿ ನದಿದಾಟುತ್ತಿದ್ದ ಸುಮಾರು ಏಳು ಗ್ರಾಮದ ಜನರಿಗೆ ಶರಾವತಿ ತೂಗು ಸೇತುವೆ ಶಾಶ್ವತ ಪರಿಹಾರ ಕಲ್ಪಿಸಿದೆ. ಜನರ ಅಗತ್ಯತೆ ಬಗೆಹರಿಸಿಕೊಳ್ಳಲು ಆರೋಗ್ಯ ಸಮಸ್ಯೆ ಪರಿಹಾರಕ್ಕೆ, ಶಾಲಾ ಕಾಲೇಜುಗಳಿಗೆ ತೆರಳಬೇಕಾದರೆ ಮಳೆ-ಗಾಳಿ ಎನ್ನದೆ ದೋಣಿಗಳ ಮೂಲಕ ಸೂಕ್ತ ರಕ್ಷಣೆ ಇಲ್ಲದೆ ಸಾಗುತ್ತಿದ್ದರು. ಈಗ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಹೊನ್ನಾವರದ ಕುದ್ರಗಿ ಹಾಗೂ ಉಪ್ರೋಣಿ ಗ್ರಾಪಂಗಳಿಗೆ ಸಂಪರ್ಕ ಕಲ್ಪಿಸಲು ಶರಾವತಿ ನದಿಗೆ ನಿರ್ಮಾಣ ಮಾಡಿದ್ದ ತೂಗು ಸೇತುವೆಯನ್ನು ಸಚಿವ ಆರ್.ವಿ. ದೇಶಪಾಂಡೆ ಲೋಕಾರ್ಪಣೆಗೊಳಿಸಿದರು. ಇದು ಇಲ್ಲಿನ ಜನರಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.
ಸುಮಾರು ನಾಲ್ಕು ಗ್ರಾಪಂಗಳ 20 ಸಾವಿರ ಜನರಿಗೆ ಅನುಕೂಲವಾಗುವ ಜೊತೆಗೆ ಸೇತುವೆಯು ಪ್ರವಾಸೋದ್ಯಮಕ್ಕೂ ಹೆಚ್ಚಿನ ಸಹಕಾರಿಯಾಗಲಿದೆ. ಮಂಗಳೂರಿನ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಲಕ್ಷಿಸಲ್ಪಟ್ಟ ಶರಾವತಿ ನದಿಯ ತೂಗುಸೇತುವೆ ಮುಂದಿನ ದಿನದಲ್ಲಿ ಇಲ್ಲಿನ ಜನ ಜೀವ ಭಯವಿಲ್ಲದೆ ಸಂಚರಿಸಲು ಸುಲಲಿತವಾದ ಸಂಪರ್ಕ ಕಲ್ಪಿಸಿರುವುದು ಈ ಭಾಗ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಕಳೆದ ಹಲವಾರು ದಶಕಗಳಿಂದ ಮಾರುಕಟ್ಟೆಗಳಿಗೆ ತೆರಳುವಾಗ, ಆರೋಗ್ಯ ಚಿಕಿತ್ಸೆ ಪಡೆಯಲು ಹೊನ್ನಾವರಕ್ಕೆ ತೆರಳಬೇಕಾಗಿತ್ತು. ಈ ಸಂದರ್ಭ ಶರಾವತಿ ನದಿಯನ್ನು ದೋಣಿಯ ಮೂಲಕ ದಾಟುವುದು ಜನರಿಗೆ ಅನಿವಾರ್ಯವಾಗಿದ್ದರಿಂದ ಜೀವವನ್ನು ಅಂಗೈಯಲ್ಲಿಟ್ಟು ಕೊಂಡು ಸಾಗಬೇಕಾದ ಸ್ಥಿತಿ ಇತ್ತು. ಮಳೆಗಾಲದಲ್ಲಿ ನದಿ ತುಂಬಿ ಹರಿಯುವಾಗ, ಪ್ರವಾಹ ಬಂದ ವೇಳೆಯಲ್ಲಿ ದೋಣಿ ಮೂಲಕ ಸಾಗುವ ಸ್ಥಿತಿಯೂ ಇರಲಿಲ್ಲ. ನದಿ ದಾಟುವ ವೇಳೆ ಕೆಲವು ಅನಾಹುತಗಳಾಗಿ ಪ್ರಾಣಹಾನಿ ಸಂಭವಿಸಲು ಕಾರಣವಾಗಿತ್ತು.
ಗ್ರಾಮಸ್ಥರ ಮೊಗದಲ್ಲಿ ಹರ್ಷ :
ಕುದರಗಿ ಗ್ರಾಪಂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಕೇವಲ 10ನೆ ತರಗತಿವರೆಗೆ ಮಾತ್ರ ಅವಕಾಶವಿತ್ತು. ನಂತರ ವಿದ್ಯಾಭ್ಯಾಸ ಮಾಡಬೇಕೆಂದರೆ ದೋಣಿಯಲ್ಲಿ ಸಾಗುವ ದುಸ್ಥಿತಿ ಇತ್ತು. ಸಂಸಿ, ಕುದ್ರಿಗಿ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಒಂದೇ ಇದ್ದರಿಂದ ಹೆಚ್ಚಿನ ಚಿಕಿತ್ಸೆ ಪಡೆಯಬೇಕು ಎಂದರೆ ಸುಮಾರು 26 ಕಿ.ಮೀ. ದೂರದ ಆಸ್ಪತ್ರೆಗೆ ತೆರಳಲು ನದಿ ದಾಟಬೇಕಿತ್ತು. ಆದರೆ ಇದೀಗ ವಿದ್ಯಾರ್ಥಿಗಳು ಸೇರಿದಂತೆ ಜನಸಾಮಾನ್ಯರಿಗೆ ಅನುಕೂಲವಾಗಿದ್ದು ಜನರಲ್ಲಿ ಕೊಂಚ ಸಮಾಧಾನ ತಂದಿದೆ.
ನಾವು ದಿನನಿತ್ಯದ ವ್ಯವಹಾರಗಳನ್ನು ನಡೆಸಬೇಕಾದರೆ ಶರಾವತಿ ನದಿ ದಾಟುವಾಗ ಅಂಗೈಯಲ್ಲಿ ಜೀವ ಹಿಡಿದು ಸಾಗುವ ಪರಿಸ್ಥಿತಿ ಇತ್ತು. ಕೆಲವೊಮ್ಮೆ ಸೂಕ್ತ ಸಮಯದಲ್ಲಿ ದೋಣಿಗಳು ಸಿಗುತ್ತಿರಲಿಲ್ಲ. ಹಲವಾರು ವರ್ಷಗಳಿಂದ ನಾವು ಕಂಡ ಕನಸು ಸರಕಾರ ಈಡೇರಿಸಿದೆ. ತೂಗು ಸೇತುವೆ ನಿರ್ಮಾಣ ನಮಗೆಲ್ಲರಿಗೂ ಖುಷಿ ತಂದಿದೆ.
-ರಮೇಶ ನಾಯ್ಕ, ಸ್ಥಳೀಯ
ಕಳೆದ 15 ವರ್ಷಗಳ ಹಿಂದೆ ಈ ಪ್ರದೇಶಕ್ಕೆ ಬೇಟಿ ನೀಡಿದಾಗ ಇಲ್ಲಿನ ಗ್ರಾಮಸ್ಥರು ದೋಣಿ ಮೂಲಕ ದಾಟುವುದನ್ನು ನೋಡಿ ಆತಂಕವಾಗಿತ್ತು. ಇವರಿಗೆ ಯಾವುದಾದರೊಂದು ಶಾಶ್ವತ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವ ಪಣ ತೊಟ್ಟಿದ್ದೆ. ಅದು ಈಗ ನೇರವೆರಿದೆ. ಕೇವಲ ಏಳು ತಿಂಗಳಿನಲ್ಲಿ ತೂಗು ಸೇತುವೆ ನಿರ್ಮಾಣವಾಗಿದ್ದು, ಸೇತುವೆ ರಕ್ಷಣೆ ಜೊತೆ ಸಂಪೂರ್ಣ ಲಾಭಪಡೆದುಕೊಳ್ಳಬೇಕು.
-ನಿವೇದಿತ್ ಆಳ್ವ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ