ಭಯೋತ್ಪಾದನೆಯ ಬೇರುಗಳು
ವಿಶ್ವದ ನಾಯಕರೆಲ್ಲರೂ ಒಂದೇ ಅಭಿಪ್ರಾಯ ಹೊಂದಿದ್ದರೆ ಅದು ಸಹನೆ ಮತ್ತು ಶಾಂತಿಯ ಅಗತ್ಯ ಮತ್ತು ಅನಿವಾರ್ಯತೆ ಹಾಗೂ ಭಯೋತ್ಪಾದನೆ ಸೃಷ್ಟಿಸಿದ ಆತಂಕಗಳ ಕುರಿತು ಮಾತ್ರ. ವಿಶೇಷವೆಂದರೆ ಸಹನೆಯೇ ಇಲ್ಲದವರೂ, ಶಾಂತಿಯನ್ನು ಆಚರಿಸದವರೂ, ಭಯೋತ್ಪಾದನೆಯನ್ನು ಪರೋಕ್ಷವಾಗಿ ಬೆಂಬಲಿಸುವವರೂ/ಪ್ರೋತ್ಸಾಹಿಸುವವರೂ ತೋರಿಕೆಗಾಗಿಯಾದರೂ ಇಂತಹ ಅಭಿಪ್ರಾಯವನ್ನು ಹೇಳುತ್ತಿರುತ್ತಾರೆ. ಸಿಐಎಯ ಮೂಲಕ ಅಮೆರಿಕವು ವಿಶ್ವದ ಅನೇಕ ಭಾಗಗಳಲ್ಲಿ ಅಸ್ಥಿರತೆಯನ್ನು ಉಂಟುಮಾಡುತ್ತಲೇ ಶಾಂತಿದೂತನಂತೆ ವರ್ತಿಸುತ್ತಿದೆ; ಉತ್ತರ ಕೊರಿಯಾದಂತಹ ಏಕಸ್ವಾಮ್ಯ ಸರ್ವಾಧಿಕಾರ ದೇಶವು ತನ್ನ ಪ್ರಜೆಗಳ ಬದುಕಿಗೆ ಯಾವುದೇ ಬೆಲೆಯಿಲ್ಲದಂತೆ ನಿರ್ಬಂಧಿಸಿದರೂ ಸ್ವಾತಂತ್ರ್ಯ-ಸಮಾನತೆಯ ಮಾತುಗಳನ್ನಾಡುತ್ತಿದೆ. ಹಿಂಸೆಯೆಂಬುದು ಎಲ್ಲರಿಗೂ ಶಾಂತಿಯ ಹಾದಿಯಾಗಿರುವುದು ವರ್ತಮಾನದ ವ್ಯಂಗ್ಯ.
ಆದರೆ ಈ ಭಯೋತ್ಪಾದನೆಯ ಕಾರ್ಯ-ಕಾರಣಗಳು ಮತಾಂಧತೆಯಲ್ಲೇ ಇವೆಯೇನೋ ಎಂಬ ಸಂಶಯವು ಬರುತ್ತಿದೆ. ಇದಕ್ಕೆ ಕಾರಣಗಳನ್ನು ಬೇರೆಬೇರೆ ಮೂಲಗಳಿಂದ ಶೋಧಿಸಬಹುದು:
ವಿಶ್ವಕ್ಕೀಗ ಇರುವ ಮುಖ್ಯ ಪ್ರಾಕೃತಿಕ ಆತಂಕಗಳು ನೀರಿನ ಅಭಾವ ಮತ್ತು ವಾತಾವರಣದ ಉಷ್ಣಾಂಶದ ಏರಿಕೆ. ಇವೆರಡು ಮನುಷ್ಯನ ಮತ್ತು ಇತರ ಜೀವಿಗಳ ಬದುಕನ್ನು ಹಾಳುಗೆಡವಲು ಶಕ್ತವಾಗಿವೆ. ಈ ದುರಂತಕ್ಕೆ ಮುಖ್ಯಕಾರಣ ಮನುಷ್ಯನೇ ಎಂಬುದು ನಿರ್ವಿವಾದ. ಕ್ಲೀಶೆಯಾದರೂ ಪುನರುಚ್ಚರಿಸುವ ಉಕ್ತಿಯೆಂದರೆ ಭೂಮಿಯಲ್ಲಿ ಮನುಷ್ಯನ ಅಗತ್ಯಗಳಿಗೆ ಬೇಕಷ್ಟಿದೆ, ಆದರೆ ಆತನ ದುರಾಸೆಗೆ ಬೇಕಾದಷ್ಟಿಲ್ಲ. ಜನಸಂಖ್ಯೆಯನ್ನು ಏರಿಸುವ, ಭೂಮಿಯ ಪ್ರಾಕೃತಿಕ ಸಮತೋಲವನ್ನು ಕೆಡಿಸಬಲ್ಲ, ತನ್ನ ಸ್ಪರ್ಧಿಗಳೆಂಬಂತೆ ಇತರ ಪ್ರಾಣಿ-ಪಕ್ಷಿ ಸಮೂಹವನ್ನು ಮತ್ತು ಇತರ ಎಲ್ಲ ಜೀವನೆಲೆ-ಸೆಲೆಗಳನ್ನು ನಾಶ ಮಾಡಬಲ್ಲ ಯೋಗ್ಯತೆ ಮನುಷ್ಯನಿಗೆ ಮಾತ್ರವಿರುವುದನ್ನು ಕಾಣುತ್ತೇವೆ. ತನ್ನ ಉಳಿವನ್ನು ಮಾತ್ರ ಕಾಣುವವನಿಗೆ ಇತರರ ಅಗತ್ಯಗಳು, ಉಳಿವು ಮಹತ್ವದ್ದಾಗಿ ಕಾಣಿಸುವುದಿಲ್ಲ. ಹೀಗಾಗಿ ಎಲ್ಲವನ್ನೂ ನಿರ್ಣಯಿಸುವುದು ತತ್ಕಾಲೀನ ಅಗತ್ಯಗಳು ಮಾತ್ರ. ನಮ್ಮ ಮಕ್ಕಳಿಗೆ ಬೇಕಾಗಿರುವುದನ್ನೂ ನಾವಿಂದು ಉಳಿಸಿಡಲು ಸಿದ್ಧರಿಲ್ಲ. ನಮಗೆ ಬೇಕು; ನಾವು ಬದುಕಬೇಕು. ಇನ್ನೊಬ್ಬರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಕಾಲವಿತ್ತು; ಆದರೆ ಈಗ ಅವರವರ ಮಕ್ಕಳನ್ನೇ ಬಾವಿಗೆ ತಳ್ಳಿ ಆಳ ನೋಡುವ ಕಾಲ ಬಂದಿರುವಂತೆ ಕಾಣಿಸುತ್ತದೆ.
ಇಂತಹ ಪ್ರಾಕೃತಿಕ ವಿಕೃತಿಗೆ ಕಾಲಗತಿಯ ಅನೇಕ ಸಹಜ ಅನಿವಾರ್ಯ ಮೆಟ್ಟಲುಗಳನ್ನು ದೂಷಿಸಬಹುದಾದರೂ ಮನುಷ್ಯ-ಮನುಷ್ಯನ ನಡುವೆ ಲಾಗಾಯ್ತಿನಿಂದಲೂ ನಡೆದು ಬರುತ್ತಿರುವ ದ್ವೇಷ, ಕ್ರೌರ್ಯ, ಯುದ್ಧ ಮುಂತಾದ ಹಿಂಸೆಯ ಪ್ರವೃತ್ತಿಗಳು ಈಗ ಸ್ಫೋಟಗೊಳ್ಳುವ ಸ್ಥಿತಿಗೆ ಬಂದಿವೆ. ಎಂದಿನಿಂದಲೂ ಈ ಜಗತ್ತು ಹೀಗೆಯೇ ಇತ್ತು ಎಂದು ತೋರಿಸಬಹುದಾದ ರೂಪಕಗಳು ನಮ್ಮ ಸಾಹಿತ್ಯದಲ್ಲಿವೆ. ನಮ್ಮ ಪುರಾಣಗಳು ಮತ್ತು ಇತಿಹಾಸ ಮನುಷ್ಯನ ಮಹತ್ವಾಕಾಂಕ್ಷೆಯ ಮತ್ತು ಒಟ್ಟಂದದ ಪರಿಣಾಮದಲ್ಲಿನ ದುಷ್ಟತನದ ಪ್ರತೀಕಗಳಾಗಿವೆ. ಪುರಾಣಗಳು ನಿಜವಾಗಿ ನಡೆದ ಘಟನೆಗಳೇನೋ ಎಂಬಷ್ಟು ಅನನ್ಯವಾಗಿ ನಮ್ಮ ಸ್ಮತಿಯಲ್ಲಿ ಹಾಸುಹೊಕ್ಕಾಗಿವೆ. ಅನೇಕ ಬಾರಿ ಇತಿಹಾಸವನ್ನು ನಂಬದವರೂ ಪುರಾಣಗಳನ್ನು ನಂಬುತ್ತಾರೆ. ವಿಶೇಷವೆಂದರೆ ನಮ್ಮ ಪುರಾಣಗಳೂ ಇತಿಹಾಸವೂ ಆಳುವವರ ಜೀವನದ ಸುಖ-ದುಃಖಗಳ ವಿವರಗಳನ್ನು ತುಂಬಿಕೊಟ್ಟಷ್ಟು ಶ್ರೀ ಸಾಮಾನ್ಯರ, ಬಡವರ ಜೀವನವನ್ನು-ಪ್ರಾಸಂಗಿಕವಾಗಿ ಬರುವ ಪೋಷಕ ಘಟನೆಗಳನ್ನು ಹೊರತುಪಡಿಸಿದರೆ-ತುಂಬಿಕೊಟ್ಟಿಲ್ಲ. ರಾಮಾಯಣದಲ್ಲಿ ಬರುವ ಶಬರಿಯಾಗಲಿ, ಮಹಾಭಾರತದ ಏಕಲವ್ಯನಾಗಲಿ ಕಥಾನಾಯಕರಾಗಿಲ್ಲ. ಪೌರಾಣಿಕ ಯುಗಕಲ್ಪನೆಯಲ್ಲಿ ಈ ಅಥವಾ ಇಂತಹ ವ್ಯಕ್ತಿಗಳು ಅವರನ್ನು ಎಷ್ಟೇ ವೈಭವೀಕರಿಸಿದರೂ ಯುಗಪ್ರವರ್ತಕರಾಗಿಲ್ಲ. ಒಂದರ್ಥದಲ್ಲಿ ಪುರಾಣಗಳೆಲ್ಲವೂ ರಾಜರ ಕಥೆಗಳೇ; ಅವರ ತ್ಯಾಗದ, ಭೋಗದ, ಅಧಿಕಾರ ಲಾಲಸೆಯ, ಚಿತ್ತಚಾಂಚಲ್ಯದ, ವಾಂಛೆಗಳ ಕಥೆಗಳು. ಶೋಷಣೆಯ ಕಥೆಗಳು. ದರ್ಪದ ಕಥೆಗಳು. ಧರ್ಮ ಸಂಸ್ಥಾಪನೆಗಾಗಿ ಯುದ್ಧ; ಕೊನೆಗೆ ವಿಷಾದಮಯ ದುರಂತ.
ಇಂತಹ ಕಥೆಗಳು ಜಾನಪದರಲ್ಲೂ ಇವೆ. ಅಲ್ಲೂ ಒಬ್ಬ ರಾಜಕುಮಾರ ನಿಗೆ ಒಬ್ಬಳು ರಾಜಕುಮಾರಿ. ಇನ್ನು ಏಳು ಸಮುದ್ರ, ಏಳು ಬೆಟ್ಟಗಳು, ಏಳು ಸುತ್ತಿನ ಕೋಟೆಗಳು, ಅಲ್ಲಿ ಬಂಧಿತ ಗಿಳಿ ಇತ್ಯಾದಿ ಮನಮೋಹಕ ವಿವರಣೆಗಳ ನಡುವೆ ನೆನಪಿಡಲಾರದಷ್ಟು ಘಟನಾವಳಿಗಳ ಸಂಕೋಲೆ. ಸಾಮಾನ್ಯ ಜನಜೀವನ ವೈಭವವನ್ನು ಹೊಗಳಿದ ಪಂಚತಂತ್ರವಾಗಲಿ, ಹಾತಿಮತಾಯಿ ಕಥೆಯಾಗಲಿ, ಕಥಾ ಸರಿತ್ಸಾಗರವಾಗಲಿ, ಜೈನತೀರ್ಥಂಕರರ ಜನ್ಮವಿಲಾಸಗಳಾಗಲಿ, ಆಗಾಗ ಓದಿ ಮೆಲುಕು ಹಾಕಬೇಕಾದ ಕಥಾನಕಗಳಾಗಿವೆಯೇ ಹೊರತು ನೇರ ವಿವರಣೆಯ ಪುರಾಣಗಳಾಗಿಲ್ಲ.
ಇಲ್ಲೆಲ್ಲ ಸುಖಾಂತಕ್ಕೆ ಆದ್ಯತೆ. ದುರಂತವಾದಾಗಲೂ ಅಲ್ಲೊಂದು ಗಂಭೀರ ವಿಷಾದ ಹುಟ್ಟಿ ಮನುಷ್ಯನಲ್ಲಿ ಪಶ್ಚಾತ್ತಾಪದ ಬೆಂಕಿಯನ್ನು ಮೂಡಿಸುವ ಕಿಡಿಗಳು ಬೆಳಗುತ್ತಿರುತ್ತವೆ. ಇದರಿಂದಾಗಿ ಎಲ್ಲ ಪುರಾಣಗಳಲ್ಲೂ ಯುಗಾಂತಗಳು ಹೊಸ ಬೆಳಕನ್ನು ಹೊಸ ಬೆಳಗನ್ನು ಪ್ರತಿಪಾದಿಸುವಂತಿದ್ದವು.
ಇವೆಲ್ಲ ಇದ್ದದ್ದು ಒಂದು ಮುಗ್ಧ ಯುಗದಲ್ಲಿ. ಆದರೆ ಕಳೆದ ಸಹಸ್ರಮಾನವು ಮನುಷ್ಯನ ಬದುಕಿನ ವೇಗವನ್ನು ವಿಜ್ಞಾನದ ನೆರವಿನೊಂದಿಗೆ ಹೆಚ್ಚಿಸಿತು. ಇದನ್ನು ಆಧುನಿಕತೆ ಎಂದು ನಾವೇ ಕರೆದೆವು. ಪುರಾಣಗಳು ಗೊಡ್ಡು ಆದವು. ಪರಂಪರೆಯ ಆಚಾರ ವಿಚಾರಗಳು ಹೊಸ ಪ್ರಯೋಗಗಳನ್ನು ಮಾಡಲು ಜಾಗ ಕಲ್ಪಿಸುವ ಕೇಂದ್ರಗಳಾದವು. ಹಿಂದಿನ ಹೆಜ್ಜೆಯನ್ನು ನೋಡದೆ ಮುಂದಡಿಯಿಡುವವನೇ ಮುಂದಾಳುವಾದನು. ಉಳಿದವರು ಕುರಿಗಳಾದರು. ಆಧುನಿಕ ಯುಗವು ವಿಜ್ಞಾನಯುಗವಾಗುವುದಕ್ಕೆ ಯಾರ ಅಡ್ಡಿಯೂ ಇರಲಿಲ್ಲ; ಇರಲಾರದು; ಇರಬಾರದು. ಆದರೆ ಪರಿಣಾಮದ ಊಹೆಯೇ ಇಲ್ಲದೆ, ಖಳನಾಯಕರಂತೆ ಎಲ್ಲವನ್ನೂ ನಿಯಂತ್ರಣದಲ್ಲಿಡುವ ಆತುರದಲ್ಲಿ ಮನುಷ್ಯನಿಗೆ ವಿನಾಶದ ಅರ್ಥವೇ ಗೊತ್ತಿಲ್ಲದಾಯಿತು. ಫಲಿತಾಂಶವೆಂದರೆ ಒಂದು ಒಳ್ಳೆಯ ಸೃಷ್ಟಿಯಾದಾಗ ಹತ್ತು, ನೂರು, ಸಾವಿರ ಕೇಡುಗಳು ಸೃಷ್ಟಿಯಾದವು.
ಕಳೆದ ಶತಮಾನದಲ್ಲಿ ಮನುಷ್ಯನ ಮಹತ್ವಾಕಾಂಕ್ಷೆ ಹೆಜ್ಜೆ ಮೀರಿದ್ದನ್ನು ಎರಡು ವಿಶ್ವ ಮಹಾಯುದ್ಧಗಳಲ್ಲಿ ಸಾಕ್ಷೀಕರಿಸಿಕೊಂಡಿದ್ದೇವೆ. ವೈಜ್ಞಾನಿಕ ಮೇಲ್ಮೆಯ ಮೂಲಕ ಎಲ್ಲವನ್ನೂ ಸಾಧಿಸಬಹುದು ಎಂಬ ತಂತ್ರ ಒಂದಾದರೆ ಇತರರನ್ನು ನಿಯಂತ್ರಿಸಿ ತನ್ನ ಮೇಲ್ಮೆಯನ್ನು ಸಾಧಿಸಬಹುದೆಂಬುದು ಇನ್ನೊಂದು ತಂತ್ರ. ಈ ಮೇಲಾಟದಲ್ಲಿ ಉಪಕೃತಗೊಂಡವರು ತೀರಾ ಕಡಿಮೆ; ನೊಂದವರ ಸಂಖ್ಯೆ ಹೆಚ್ಚು. ಯುದ್ಧಗಳು ಮನುಷ್ಯನನ್ನು ಸುಸ್ತು ಹೊಡೆಸಿವೆಯೆಂದು ನಂಬಿದ್ದು ಹುಂಬತನವೆಂಬುದು ಇತ್ತೀಚೆಗಿನ ಕೆಲವು ದಶಕಗಳಲ್ಲಿ ಸ್ಪಷ್ಟವಾಗುತ್ತಿದೆ. ನಿತ್ಯದ ದೈಹಿಕ ವ್ಯಾಯಾಮದಂತೆ ಕಲಹದ ಪ್ರವೃತ್ತಿಯು ಬದುಕಿಗೆ- ಬದುಕಿನ ಆರೋಗ್ಯವೆಂದು ಭಾವಿಸುವ ವೈಪರೀತ್ಯಕ್ಕೆ-ದಾರಿ ಮಾಡಿಕೊಟ್ಟಿದೆ. ಹಸಿದ ಹುಲಿಗೆ ಮಾಂಸ ಬೇಕು. ಆದರೆ ಮನುಷ್ಯನಿಗೆ ಹಸಿವಿಲ್ಲದಿದ್ದಾಗಲೂ ಆಹಾರ ಬೇಕೇ ಬೇಕು. ಏಕೆಂದರೆ ಒಳ್ಳೆಯದಿರಲಿ, ಕೆಟ್ಟದಾಗಿರಲಿ, ಒಂದು ನಿಯಮಕ್ಕೆ ಆತ ಬದ್ಧ. ರಾಮಾಯಣದಲ್ಲಿ ಬರುವ ಶಾಪಗ್ರಸ್ತ ಕಬಂಧನ ಕಥೆಯು ಇಂತಹ ಕ್ರೂರ ನಿಯಮ ಬದ್ಧತೆಗೆ ನಿದರ್ಶನ. ಮಹಾಭಾರತದಲ್ಲಿ ಬರುವ ಬಕಾಸುರನ ಕಥೆಯೂ ಇದೇ. ಹಸಿವಿರಲಿ, ಇಲ್ಲದಿರಲಿ, ನಿತ್ಯ ನಿಗದಿಯಾದ ಕೂಳು ಬೇಕು.
ಹಿಂದೆ ಇವೆಲ್ಲ ಒಬ್ಬ ವ್ಯಕ್ತಿಯ ದುರಾಕಾಂಕ್ಷೆಯ ಫಲಶೃತಿಯಾಗಿದ್ದರೆ ಈಗ ಇವು ಸಾಂಸ್ಥಿಕ ರೂಪವನ್ನು ತಾಳುತ್ತಿವೆ. ಯಾವುದೇ ಪ್ರಮಾಣೀಕೃತ ಧೋರಣೆಯಾಗಲಿ, ಕಾರಣವಾಗಲಿ ಇಲ್ಲದೆ ಹಿಂಸೆ ತಾಂಡವವಾಡತೊಡಗಿದೆ. ಸುಮ್ಮಸುಮ್ಮನೆ ಸಮಾಜವನ್ನು ಹೆದರಿಸುವುದು ಮಕ್ಕಳಾಟವಾಗುತ್ತಿದೆ. ಪ್ರಾಯಃ ಮನುಷ್ಯನ ಸಹಜ ದಾದಾಗಿರಿ ಈಗ ಬ್ರೇಕ್ ಫೇಲ್ ಆದ ಗಾಡಿಯಂತೆ ಸೂತ್ರಧಾರನ ಸೂತ್ರಹಸ್ತದೊಂದಿಗಿನ ಸಂಬಂಧವನ್ನು, ಆತನ ಹತೋಟಿಯನ್ನು, ಮೂಲದ ಗುರುತ್ವಾಕರ್ಷಣವನ್ನು ಕಳೆದುಕೊಂಡು ಮುಗಿವಿಲ್ಲದ ಭೂಪ್ರದಕ್ಷಿಣೆಗೆ ತೊಡಗಿದಂತಿದೆ. ಏನೂ ಲಾಭವಿಲ್ಲದೆ ಹಿಂಸೆಗೆ ರೂಪವನ್ನು ನೀಡುವ ಅನೇಕ ಮಂದಿ ರೌಡಿಗಳಿಗೆ ತಾವೇಕೆ ಇಲ್ಲಿದ್ದೇವೆ, ಹೀಗೇಕೆ ಮಾಡುತ್ತಿದ್ದೇವೆ, ಮುಂದೇನು ಮಾಡಲಿದ್ದೇವೆ ಎಂಬುದರ ಅರಿವೇ ಇಲ್ಲ. ಎಲ್ಲಿಂದಲೋ ಬಂದ ಸೂಚನೆ, ನಿರ್ದೇಶನಗಳಿಗೆ ತಲೆಬಾಗುವ, ಕೊರಳೊಡ್ಡುವ ಮಂದಿ ಅಪಾರವಾದ ವಿನಾಶವನ್ನು ಹಂಚುತ್ತಾರೆ. ದೇವರ ಭಯವು ಜ್ಞಾನದ ಆರಂಭವೆಂಬ ಸೂಕ್ತಿಯಿತ್ತು. ಆದರೆ ಇಂದು ನಾವು ಕಾಣುವ ಭಯವು ಅಜ್ಞಾನದ ಶಿಖರ.
ಭಯೋತ್ಪಾದನೆಯು ಒಂದು ಜಾಗತಿಕ ವಿದ್ಯಮಾನವಾಗಿದೆಯೆಂಬುದು ಒಪ್ಪುವವರೆಲ್ಲರೂ ಅದರ ನಿಮಿತ್ತಗಳಲ್ಲಿ ಮಾತ್ರ ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತಾರೆ. ಧರ್ಮ-ಮತಗಳನ್ನು ವಿವಿಧ ಕಾರಣಗಳಿಗಾಗಿ ಬೆಂಬಲಿಸುವವರು, ನಂಬುವವರು ಈ ಧರ್ಮಾಚರಣೆ, ಮತಶ್ರದ್ಧೆಯೇ ಭಯೋತ್ಪಾದನೆಯ ಮುಖ್ಯ ಬೀಜಮಂತ್ರವೆಂದು ಒಪ್ಪುವುದಿಲ್ಲ. ಒಂದು ಕಾಲದಲ್ಲಿ ಧರ್ಮವೇ ಜಯವೆಂಬ ದಿವ್ಯ ಮಂತ್ರ ಎಂಬ ಮಾತಿತ್ತು. ಆಗ ಧರ್ಮವೆಂದರೆ ನಿಂದೆಗೆ, ಭಯಕ್ಕೆ, ಹಿಂಸೆಗೆ ಕಾರಣವಾಗಬಲ್ಲ ಸೂತ್ರವಾಗಿರಲಿಲ್ಲ. ಅದು ಸದಾಚಾರ; ಸತ್ಪಥ. ಆದರೆ ಈಗ ಧಾರ್ಮಿಕ ಮುಖಂಡರು ಈ ಭಯೋತ್ಪಾದನೆಯ ಹಿಮ್ಮೇಳದಲ್ಲಿದ್ದಾರೆ.
ಮತಧರ್ಮಗಳನ್ನು ಮನೆಯೊಳಗಿಟ್ಟು ಹೊರಗೆ ನಡೆದರೆ ಎಲ್ಲವೂ ಸುಸೂತ್ರ. ಆದರೆ ಶಿಕ್ಷಣ, ಆರೋಗ್ಯ, ಶಿಸ್ತು, ಪ್ರೀತಿ, ಸಹನೆ, ಬಂಧುತ್ವ, ಸಾಮಾಜಿಕ ಹೊಣೆ, ಇವೆಲ್ಲವನ್ನೂ ಮೀರಿ ಧರ್ಮ ಮತ್ತು ಮತ ವೈಯಕ್ತಿಕ ಆಕಾಂಕ್ಷೆಗಳಿಗೆ ರೆಕ್ಕೆ ಹುಟ್ಟಿಸುತ್ತಿರುವುದು ಅಚ್ಚರಿ ತರುತ್ತಿದೆ.ಹಣೆ ತುಂಬ ನಾಮ ಹಾಕುವವನು, ದೇವರ ಹೆಸರನ್ನೇ ಎಲ್ಲ ಕಡೆ, ಎಲ್ಲ ಕಾಲ ಉಸಿರುವವನು, ಇನ್ನೊಬ್ಬರನ್ನು ಕ್ರೂರವಾಗಿ ಟೀಕಿಸುವುದರಲ್ಲಿ ಹಿಂದೆ ಬಿದ್ದಿಲ್ಲ ಮಾತ್ರವಲ್ಲ, ಎಲ್ಲರಿಗಿಂತ ಮುಂದೆ ಇದ್ದಾನೆ. ನಮ್ಮ ನ್ಯಾಯಾಲಯಗಳಿಗೆ ಹಾಜರಾಗುವ ಸಾಕಷ್ಟು ಆರೋಪಿಗಳು- ಈ ಪೈಕಿ ಕೊಲೆ, ದರೋಡೆ, ಮಾನಭಂಗ, ವಂಚನೆ ಮುಂತಾದ ದೊಡ್ಡ ಆರೋಪ ಹೊತ್ತವರಾಗಿದ್ದಾರೆ- ಬಹಳ ಧರ್ಮಿಷ್ಟರು ಎಂದು ತೋರಿಸಿಕೊಳ್ಳುವ ಎಲ್ಲ ಸಂಕೇತಗಳನ್ನು, ಚಿಹ್ನೆಗಳನ್ನು ಇಟ್ಟುಕೊಳ್ಳುತ್ತಾರೆ. ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಮಾಡಬಾರದ್ದನ್ನು ಮಾಡುವ ನಮ್ಮ ಸಾಧು ಸಂತರು ತೋರಿಸುವ (ಅವರ ಜೀವನಶೈಲಿಯ ಮಾತು ಬಿಟ್ಟುಬಿಡಿ; ಅದು ಶುದ್ಧ ಆಷಾಢಭೂತಿತನ!) ಆಟಾಟೋಪ ಯಾವ ಗಬ್ಬರ್ ಸಿಂಗ್‌ನಿಗೂ ಕಡಿಮೆಯಿಲ್ಲ. ಸಲ್ಮಾನ್ ರಶೀದ್‌ರ ತಲೆಗೆ ಖೊಮೇನಿ ಫತ್ವಾ ನೀಡುತ್ತಾರೆ! ಸಾಧ್ವಿ ಪ್ರಾಚಿ, ಡಾ. ಝಾಕಿರ್ ನಾಯ್ಕಾರ ತಲೆ ತಂದುಕೊಟ್ಟವರಿಗೆ ಲಕ್ಷಗಟ್ಟಲೆ ಬಹುಮಾನ ಘೋಷಿಸುತ್ತಾರೆ! ಮಾತು ಮತ್ತು ಕ್ರಿಯೆ ಹಿಂಸೆಯನ್ನು ವಿಶ್ವವ್ಯಾಪಕವಾಗಿಸುವತ್ತ ದೊಡ್ಡ ಹೆಜ್ಜೆಯಿ ಟ್ಟಿದೆ. ದಲಾಯಿಲಾಮಾರಂಥವರೇ ಹಿಂಸೆಯ ಹೊರತಾಗಿ ಜಗತ್ತನ್ನು ಊಹಿಸುವುದೇ ಸಾಧ್ಯವಿಲ್ಲವೆಂದಿದ್ದಾರೆ.
ಪ್ರಾಯಃ ಮತಾಂಧರಿಗೆ ಇನ್ಯಾವ ಕಾರಣವೂ ಬೇಕಿಲ್ಲ. ವಿಶ್ವದೆಲ್ಲೆಡೆ ನಡೆಯುವ ಸಮೂಹ ಹಿಂಸೆ, ಆತ್ಮಹತ್ಯಾ ದಾಳಿಗಳು, ಹಿಟ್ಲರನನ್ನೂ ನಾಚಿಸುವಂತಿದೆ. ಆತ ತನ್ನದೇ ಸಾಮ್ರಾಜ್ಯ ಕಟ್ಟುವುದಕ್ಕಾಗಿ ಹಿಂಸೆ ನಡೆಸಿದರೆ, ಈ ಮಂದಿ ಯಾವ ದೇವದೇವತೆಗಳಿಗಾಗಿ ಸಾಮ್ರಾಜ್ಯ ಕಟ್ಟುತ್ತಾರೆ ಎಂಬ ಕುತೂಹಲ ಮೃತ ಸರ್ವಾಧಿಕಾರಿಗೆ ಉಂಟಾದರೆ ಆಶ್ಚರ್ಯವಿಲ್ಲ.
ಧರ್ಮ ಮತ್ತು ಮತ ಹೊಸ ನಿರೂಪಣೆಗೆ ಸಿದ್ಧವಾದಂತಿದೆ.