ನಿಧನ
ಮದ್ದಲೆವಾದಕ ಸುಬ್ಬಣ್ಣ ಭಟ್
ಮದ್ದಲೆವಾದಕ ಸುಬ್ಬಣ್ಣ ಭಟ್
ಬ್ರಹ್ಮಾವರ, ಜು.22: ಬಡಗುತಿಟ್ಟು ಯಕ್ಷಗಾನದ ಜ್ಞಾನಭಂಡಾರದಂತಿದ್ದ, ಖ್ಯಾತ ವಿದ್ವಾಂಸ, ಹವ್ಯಾಸಿ ಮದ್ದಲೆಕಾರ, ನಿವೃತ್ತ ಶಿಕ್ಷಕ ಹಂದಾಡಿ ಸುಬ್ಬಣ್ಣ ಭಟ್ (84) ಗುರುವಾರ ರಾತ್ರಿ ಹಂದಾಡಿಯ ಸ್ವಗೃಹದಲ್ಲಿ ನಿಧನರಾದರು. ಅವರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.
ಯಕ್ಷಗಾನದ ಹಿರಿಯ ವಿಮರ್ಶಕರೂ, ಹಾರಾಡಿ ಮತ್ತು ಮಟಪಾಡಿ ಶೈಲಿಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲವರಾಗಿದ್ದ ಸುಬ್ಬಣ್ಣ ಭಟ್, ಪ್ರಸಾಧನ ತಜ್ಞರಾಗಿಯೂ ಹೆಸರು ಪಡೆದಿದ್ದರು. ಪ್ರಚಾರದ ಬೆಳಕಿಗೆ ತನ್ನನ್ನು ಒಡ್ಡಿಕೊಳ್ಳದೇ ಎಲೆಮರೆಯ ಕಾಯಿಯಂತಿದ್ದ ಅವರು, ಆದರ್ಶ ಶಿಕ್ಷಕರೂ ಆಗಿದ್ದರು. ಸಾಹಿತಿ, ಲೇಖಕ ಬೈಕಾಡಿ ವೆಂಕಟಕೃಷ್ಣ ರಾಯರು, ಪ್ರೊ.ಬಿ.ವಿ.ಆಚಾರ್ಯ ಹಾಗೂ ಡಾ.ನಾರಾಯಣ ಪೈಯವರೊಂದಿಗೆ ಸೇರಿ ಸುಬ್ಬಣ್ಣ ಭಟ್ಟರು ಬ್ರಹ್ಮಾವರದಲ್ಲಿ ಸ್ಥಾಪಿಸಿದ ಅಜಪುರ ಕರ್ನಾಟಕ ಸಂಘ ಉಡುಪಿ ಜಿಲ್ಲೆಯ ಹಿರಿಯ ಕನ್ನಡ ಸಂಘಗಳಲ್ಲಿ ಒಂದಾಗಿದ್ದು, ಕಲೆ, ಸಾಹಿತ್ಯ, ಭಾಷೆಗಾಗಿ ದುಡಿದ ಹಿರಿಯರನ್ನು ಗೌರವಿಸಿ ನಾಡಹಬ್ಬವನ್ನು ವೈಭವದಿಂದ ಆಚರಿಸುವ ಸಂಪ್ರದಾಯವನ್ನು ಪ್ರಾರಂಭಿಸಿತ್ತು.
1980ರಲ್ಲಿ ಮಾರ್ತ ಆಸ್ಟನ್ ಅವರ ಮುತುವರ್ಜಿಯಿಂದ ಪ್ರೊ.ಬಿ.ವಿ. ಆಚಾರ್ಯರ ನೇತೃತ್ವದಲ್ಲಿ ಯಕ್ಷಗಾನ ತಂಡದೊಂದಿಗೆ ವಿದೇಶ ಪ್ರವಾಸ ಕೈಗೊಂಡಿದ್ದ ಭಟ್ಟರು, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಪ್ರಶಸ್ತಿ, ಅಜಪುರ ಕರ್ನಾಟಕ ಸಂಘದ ಸುವರ್ಣ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಇತ್ತೀಚೆಗೆ ಮಟಪಾಡಿ ನಂದಿಕೇಶ್ವರ ಯಕ್ಷಗಾನ ಮಂಡಳಿ ಸುವರ್ಣ ಮಹೋತ್ಸವದ ಅಂಗವಾಗಿ ಗುರು ವೀರಭದ್ರ ನಾಯಕ್ ಸ್ಮಾರಕ ಪ್ರಶಸ್ತಿಗೆ ಪಾತ್ರರಾಗಿದ್ದರು.