ರೇಖೆಗಳಲ್ಲಿ ರಾಮಾನುಜನ್ ಕಾವ್ಯ
ಸಾಹಿತ್ಯ ಮತ್ತು ಚಿತ್ರಕಲೆಗಳ ನಡುವಣ ಸಂಬಂಧ ಬುದ್ಧಿ ಭಾವಗಳ ಅನಿರ್ವಚನೀಯ ಮಿಲನ ದಂತೆ. ಭಾಷೆ ಮುಖೇನ ಮಾತು ಕಾವ್ಯ ವಾಗುತ್ತೆ. ರೇಖೆ ಮತ್ತು ಬಣ್ಣಗಳ ಮುಖೇನ ಚಿತ್ರ ಕಾವ್ಯವಾಗುತ್ತೆ. ಎರಡರ ಉದ್ದೇಶವೂ ಸಂವಹನವೇ. ಆದರೂ ಅರ್ಥ ಸ್ಫುರಣೆಯಲ್ಲಿ ಅವು ಭಿನ್ನ. ಸಾಹಿತ್ಯದಲ್ಲಿ ಸಹೃದಯರ ರಸಾನುಭವ ನಿಶ್ಚಿತವಾದ ಅರ್ಥದ ಗಡಿಗೆ ಬಂದು ನಿಲ್ಲುತ್ತದೆ. ಆದರೆ ಚಿತ್ರಕಲೆಯ ಮಾಧ್ಯಮಗಳಾದ ರೇಖೆ-ಬಣ್ಣಗಳಿಗೆ ಇಂಥ ಸೀಮಿತ ಗಡಿಯಿಲ್ಲ.ಅವು ಪರಿಸ್ಥಿತಿಗೆ ತಕ್ಕಂತೆ, ವೀಕ್ಷಕನ ಬುದ್ಧಿಭಾವಕಲ್ಪನಾ ಸಾಮರ್ಥ್ಯಗಳಿಗನು ಗುಣವಾಗಿ ಅರ್ಥ ವ್ಯತ್ಯಾಸವಾಗುತ್ತಾ ಹೋಗಬಹುದು, ವೈವಿಧ್ಯಮಯ ಆಯಾಮಗಳಿಗೆ ಚಾಚಿಕೊಳ್ಳಬಹುದು.ಸಾಹಿತ್ಯ ಚಿತ್ರಕಲೆಗಳು ಬೇರೆಬೇರೆ ಮಾಧ್ಯಮಗಳಾದರೂ ಪರಸ್ಪರ ಕೈಕುಲುಕುವ ಅನುಸಂಧಾನದಿಂದ ಒಂದಾಗಿ ಸಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇಂತಹ ಒಂದು ಅಪರೂಪದ ಸಾಂಗತ್ಯ ಕವಿ ಎ.ಕೆ. ರಾಮಾನುಜನ್ ಮತ್ತು ಚಿತ್ರಕಲಾವಿದ ಎಸ್.ಜಿ.ವಾಸುದೇವ್. ಇಬ್ಬರೂ ಅಂತಾ ರಾಷ್ಟ್ರೀಯ ಖ್ಯಾತಿವೆತ್ತರು. ಈ ಸಾಂಗತ್ಯ ದ ಅಪರೂಪದ ಪ್ರದರ್ಶನವನ್ನು ನಾವೀಗ ಬೆಂಗಳೂರಿನ ಗ್ಯಾಲರಿ ಡೇ ಆರ್ಟ್ಸ್ ನಲ್ಲಿ ಕಾಣಬಹುದಾಗಿದೆ. ಇದು ರಾಮಾನುಜನ್‌ಅವರ ಕವನಗಳಿಗೆ ಪ್ರತಿಸ್ಪಂದಿಸಿ ಕಲಾವಿದ ಎಸ್.ಜಿ. ವಾಸುದೇವ್ ರಚಿಸಿರುವ ಕಲಾ ಕೃತಿಗಳ ಪ್ರದರ್ಶನ- ‘ಟ್ರಿಬ್ಯೂಟ್ ಟು ರಾಮಾನುಜನ್’.ಸಂದರ್ಭ: ರಾಮಾನುಜನ್ ಅವರ 24ನೆ ಪುಣ್ಯತಿಥಿ (ಜುಲೈ24).
ಅಂತಾರಾಷ್ಟ್ರೀಯ ಖ್ಯಾತಿಯ ಕನ್ನಡ ಕವಿ, ಜಾನಪದ ತಜ್ಞ ಎ.ಕೆ ರಾಮಾನುಜನ್ ಜನನ (16-3-1929), ಓದು ವಿದ್ಯಾಭ್ಯಾಸಗಳು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯ ನಂತರ ಅಧ್ಯಾಪನ, ಕಾವ್ಯರಚನೆ, ಜಾನಪದ ಸಂಗ್ರಹಗಳಲ್ಲಿ ಸಾಗಿದ ಮೂರು ದಾರಿಯ ಪಯಣ. ಬೆಳಗಾವಿಯ ಲಿಂಗರಾಜಾ ಕಾಲೇಜು, ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯಗಳಲ್ಲಿ ಕೆಲವು ವರ್ಷಗಳ ಕಾಲ ಇಂಗ್ಲಿಷ್ ಸಾಹಿತ್ಯ ಬೋಧಿಸಿದ ನಂತರ ಅಮೆರಿಕಕ್ಕೆ ಹಾರಿದರು.1962ರಲ್ಲಿ ಅಸಿಸ್ಟೆಂಟ್ ಪ್ರೊಫೆಸರಾಗಿ ಶಿಕಾಗೊ ವಿಶ್ವವಿದ್ಯಾನಿಲಯ ಸೇರಿದರು. ಮುಂದೆ ರಾಮಾನುಜನ್ ಹಾರ್ವರ್ಡ್, ಮಿಚಿಗನ್, ಕ್ಯಾಲಿಫೋರ್ನಿಯಾ, ಬರ್ಕ್ಲೀ ವಿಶ್ವ ವಿದ್ಯಾನಿಲಯಗಳಲ್ಲಿ ಬೋಧಿಸಿದರು. ದಕ್ಷಿಣ ಏಷ್ಯಾ ಭಾಷೆಗಳ ಅಧ್ಯಯನ ಕೇಂದ್ರ ಸ್ಥಾಪನೆಗೆ ಕಾರಣೀಭೂತರಾದರು. 1976ರಲ್ಲಿ ಪದ್ಮಶ್ರೀ ಪುರಸ್ಕೃತರಾದರು.ಮಸಾಚುಸೆಟ್ಸ್ ವಿಶ್ವವಿದ್ಯಾನಿಲಯ 1994ರಲ್ಲಿ ಈ‘ಇಂಡೋಅಮೆರಿಕನ್’ ರೈಟರ್‌ಗೆ ಷುಲ್ಮನ್ ಫೆಲೋಶಿಪ್ ನೀಡಿ ಗೌರವಿಸಿತು. ‘ಹೊಕ್ಕುಳಲ್ಲಿ ಹೂವಿಲ್ಲ’, ‘ಮತ್ತು ಇತರ ಪದ್ಯಗಳು’, ‘ಕುಂಟೋಬಿಲ್ಲೆ’ ರಾಮನುಜನ್ ಅವರೆ ಮುಖ್ಯ ಕವನ ಸಂಕಲನಗಳು. ‘ಮತ್ತೊಬ್ಬನ ಆತ್ಮ ಚರಿತ್ರೆ’, ‘ಹಳದಿ ಮೀನು’(ಅನುವಾದ) ಕಾದಂಬರಿಗಳು. ‘ಮಧುರೆಯಲ್ಲಿ ಕಂಡ ತಲೆ’ ಮತ್ತು ‘ಅಣ್ಣಯ್ಯನ ಮಾನವ ಶಾಸ್ತ್ರ’ ಕಥಾ ಸಂಕಲನಗಳು. ಇದಲ್ಲದೆ ರಾಮಾನುಜನ್ ಇಂಗ್ಲಿಷ್‌ನಲ್ಲಿ ನಾಲ್ಕು ಕವನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಹನ್ನೆರಡನೆ ಶತಮಾನದ ಪ್ರಮುಖ ವಚನಕಾರರ ವಚನಗಳನ್ನು (ಸ್ಪೀಕಿಂಗ್ ಆಫ್ ಶಿವ), ತಮಿಳು ಸಂಗಂ ಕಾವ್ಯವನ್ನು ಹಾಗೂ ಗೋಪಾಲಕೃಷ್ಣ ಅಡಿಗರ ಕಾವ್ಯವನ್ನು, ಅನಂತ ಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಪ್ರಸ್ತುತ ರಾಮಾನುಜನ್ ಅವರ ಮೂರು ಕವನ ಸಂಕಲನಗಳು ಮತ್ತು ‘ಸ್ಪೀಕಿಂಗ್ ಆಫ್ ಶಿವ’ ಸಂಕಲನದಿಂದ ಪದ್ಯಗಳನ್ನು ಆಯ್ದುಕೊಂಡು ಎಸ್.ಜಿ.ವಾಸುದೇವ್ ಪ್ರತಿಸ್ಪಂದನಾ ಚಿತ್ರಗಳನ್ನು ರಚಿಸಿದ್ದಾರೆ. ವಾಸುದೇವರ ‘ಟ್ರಿಬ್ಯೂಟ್ ಟು ರಾಮಾನುಜನ್’ ಚಿತ್ರಗಳೆಡೆಗೆ ವಾಚಕ ರನ್ನು ಕರೆದೊಯ್ಯುವ ಮೊದಲು ತಿಳಿಸಬೇಕಾದ್ದು ಇದೆ. ಅದು: ವಾಸುದೇವ್. ಅಂತಾರಾಷ್ಟ್ರೀಯ ಖ್ಯಾತಿಗಳಿಸಿರುವ ವಾಸುದೇವ್ ದೇಶವಿದೇಶಗಳಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶಿಸಿದ ಖ್ಯಾತಿವಂತರು. ಚೆನ್ನೈನಲ್ಲಿ ಅರವತ್ತರ ದಶಕದಲ್ಲಿ ರೂಪುಗೊಂಡ ‘ಚೋಳಮಂಡಲಮ್’ ಕಲಾಗ್ರಾಮ ನಿರ್ಮಾಣದ ರೂವಾರಿಗಳು. ಕ್ಯಾನ್ವಾಸ್, ಲೋಹಶಿಲ್ಪ, ಭಿತ್ತಿಚಿತ್ರ, ರೇಖಾಚಿತ್ರ-ಹೀಗೆ ಚಿತ್ರಕಲೆಯ ಹಲವು ಮಾಧ್ಯಮಗಳಲ್ಲಿ ಸೃಜನಶೀಲ ರಾಗಿರುವ ವಾಸುದೇವ್ ಸಾಹಿತ್ಯ ಮತ್ತು ಚಿತ್ರಕಲೆಗಳ ನಡುವಣ ಅನುಸಂಧಾನದಲ್ಲಿ ಮಹತ್ವದ ಸೂತ್ರಧಾರಿ/ಪಾತ್ರಧಾರಿಗಳು. ಬೆಂಗಳೂರಿನ ನ್ಯಾಷನಲ್ ಕಾಲೇಜ್ ವಿದ್ಯಾರ್ಥಿ ದಿನಗಳಿಂದಲೆ ಸಾಹಿತ್ಯ ಕಲೆಗಳಲ್ಲಿ ಆಸಕ್ತಿ. ಬೇಂದ್ರೆ, ಅನಂತ ಮೂರ್ತಿ, ಗಿರೀಶ್ ಕಾರ್ನಾಡ್, ರಾಮಾನುಜನ್ ಮೊದಲಾದವರ ಪರಿಚಯದಿಂದ ವಾಸುದೇವ್‌ರೊಳಗಿನ ಕಲಾವಿದನಿಗೆ ಸಾಹಿತ್ಯದೊಂದಿಗೆ ಸಂಸರ್ಗ ಶುರುವಾಯಿತು.‘ಕಲ್ಪವೃಕ್ಷ ವೃಂದಾವನಗಳಲ್ಲಿ ಹೇಗೋ ಹೊಕ್ಕು ಬಂದೆ’-ಬೇಂದ್ರೆ ಕವನದ ಸ್ಫೂರ್ತಿ ಸರಣಿ ಚಿತ್ರಗಳಿಗೆ ಪ್ರೇರಣೆಯನ್ನೊದಗಿಸಿತು. ಮನೋಹರ ಗ್ರಂಥಮಾಲೆಯ ಜಿ.ಬಿ.ಜೋಶಿ ಪುಸ್ತಕಗಳ ಮುಖಪುಟ ರಚನೆ/ವಿನ್ಯಾಸಗಳಿಗೆ ಆಹ್ವಾನಿಸಿದ್ದರಿಂದ ಸಾಹಿತ್ಯದೊಂದಿಗೆ ನಂಟಿನ ಅಂಟು ಇನ್ನಷ್ಟು ಗಟ್ಟಿಯಾಯಿತು. ವಾಸುದೇವರ ಚಿತ್ರಗಳ ಅನನ್ಯತೆ ಇರುವುದು ಅವರ ರೇಖೆಗಳಲ್ಲಿ. ಬಾಗಿ ಬಳುಕುವ, ನೇರ ನಿಲ್ಲುವ, ಡೊಂಕಾಗುವ ರೇಖೆಗಳ ಭಾವ ಮಿಡಿತದಲ್ಲಿ, ಅರ್ಥಸ್ಫುರಣೆಯಲ್ಲಿ. ರಾಮಾನುಜನ್ ಅವರ ಕಾವ್ಯದ ಅಂತರಂಗದ ಭಾವವಿಭಾವ ಅರ್ಥಗಳೆಲ್ಲ ಸ್ಫುರಿಸುವುದು ಈ ರೇಖೆಗಳ ಚಲನಶೀಲ ಮಿಡಿತದಲ್ಲಿ.
ಹಾಗೆ ನೋಡಿದರೆ ಭಾರತೀಯ ಸಾಂಪ್ರದಾಯಿಕ ಚಿತ್ರಕಲೆ ರೇಖಾಪ್ರಧಾನವಾದುದು. ರೇಖೆಗಳೇ ಸಂವಹನಕ್ಕೆ ಮುಖ್ಯ ಮಾಧ್ಯಮ.ರೇಖೆಗಳೇ ಸೃಜನಶೀಲ ಕಲಾವಿದನೊಬ್ಬನ ಅತ್ಯುನ್ನತ ಸಾಧನೆ ಎಂಬ ಉಕ್ತಿಯೂ ಕಲಾ ವಿಮರ್ಶೆಯಲ್ಲಿ ಕೇಳಿ ಬರುತ್ತದೆ. ಈ ಮಾತು ವಾಸುದೇವ್‌ಗೆ ನಿರ್ದಾಕ್ಷಿಣ್ಯವಾಗಿ ಅನ್ವಯಿಸಬಹು ದಾದಂತಹ ಮಾತು. ಚಲನಶೀಲತೆಯನ್ನು ಗರ್ಭೀಕರಿಸಿಕೊಂಡು ಮಂದಗತಿಯಲ್ಲಿ ಸಾಗುವ ಅವರ ರೇಖೆಗಳು ಭಾವನೆಗಳನ್ನು ಅನನ್ಯರೀತಿಯಲ್ಲಿ ಅಭಿವ್ಯಕ್ತಿಸಿ ವಿಶಿಷ್ಟ ಪರಿಣಾಮ ಸಾಧಿಸುತ್ತವೆ. ಸರಳ ರೇಖೆಗಳು, ಕೆಲವೊಮ್ಮೆ ನವಿಲುಗರಿಯ ಗರಿಗಳಂತೆ ಚೇತೋಹಾರಿಯಾಗಿ ಕಾಣುತ್ತವೆ. ಇನ್ನು ಕೆಲವೊಮ್ಮೆ ರೋಮಭರಿತ ಹುಳಗಳನ್ನು ನೆನಪಿಸುವ ರೀತಿ ವಕ್ರವಕ್ರವಾಗಿ ಚಲಿಸುವ ಈ ರೇಖೆಗಳು ನೋಡುಗರಲ್ಲಿ ಸ್ಪಂದನ ಉಂಟುಮಾಡುವಷ್ಟು ಪರಿಣಾಮಕಾರಿ. ಹೀಗೆ ರೇಖಾ ಚಿತ್ರದಲ್ಲಿ ವಾಸುದೇವ್ ಅವರ ಸಾಧನೆ ಅನುಪಮವಾದುದು. ಈ ಮಾತಿಗೆ ನಿದರ್ಶನವಾಗಿ ಅವರ ‘ಅವನು-ಅವಳು’ ಮಾಲಿಕೆಯ ಹಾಗೂ ‘ವೃಕ್ಷಸರಣಿಯ ಚಿತ್ರಗಳನ್ನು ನೋಡಬಹುದು. ವಾಸದೇವ್ ಅವರ ವರ್ಣಚಿತ್ರಗಳಲ್ಲೂ ರೇಖೆಗಳೇ ಪ್ರಧಾನವಾಗಿರುವುದು ಗಮನಾರ್ಹವಾದುದು. ಈ ಮಾತಿಗೆ ನಿದರ್ಶನವಾಗಿ ಅವರ ಭಿತ್ತಿಚಿತ್ರಗಳು ಮತ್ತು ಇತರ ವರ್ಣಚಿತ್ರಗಳನ್ನು ನೋಡಬಹುದು, ವಿಶೇಷವಾಗಿ, ತೈಲವರ್ಣದ ‘ಹಿ ಆ್ಯಂಡ್ ಷಿ’ ಮೊದಲಾದವು. ಇವುಗಳಲ್ಲಿ ವಾಸುದೇವ್ ಕಡುಬಣ್ಣಗಳನ್ನು ಬಳಸುತ್ತಾರಾದರೂ ಅದರಿಂದ ರೇಖೆಗಳ ಜೀವಂತಿಕೆಗೆ ಕುಂದುಂಟಾಗುವುದಿಲ್ಲ. ಕಲಾ ವಿಮರ್ಶಕರು ಹೇಳುವಂತೆ ಕ್ಯಾನ್ವಾಸಿನ ಮೇಲೆ ಬಣ್ಣ ಆರುವ ಮೊದಲೇ ಅವರು ರಚಿಸುವ ರೇಖಾಕೃತಿಗಳು ಬಣ್ಣಗಳ ಒಡಲಿನಿಂದ ಎದ್ದುಬಂದಂತೆ ಗಾಢ ಪರಿಣಾಮ ಬೀರುತ್ತವೆ.
ಪ್ರಸ್ತುತ ಪ್ರದರ್ಶನಗೊಂಡಿರುವ ರಾಮಾನುಜನ್ ಅವರ ಕವಿತೆಗಳಿಗೆ ಪ್ರತಿಸ್ಪಂದಿಸಿರುವ ರಚನೆಗಳೂ ರೇಖಾ ಕೃತಿಗಳೇ ಆಗಿದ್ದು ಈ ಮಾಧ್ಯಮದಲ್ಲಿನ ವಾಸುದೇವ್‌ಅವರ ಪ್ರತಿಭೆ-ಸೃಜನಶೀಲ ಶಕ್ತಿಸಾಮರ್ಥ್ಯಗಳ ಛಾಪು ಅವುಗಳಲ್ಲಿ ಎದ್ದು ಕಾಣುತ್ತದೆ.‘ಹೊಕ್ಕುಳಲ್ಲಿ ಹೂವಿಲ್ಲ’ ಸಂಕಲನಕ್ಕೆ ವಾಸುದೇವ್ ಕಡುಗಪ್ಪಿನಲ್ಲಿ ರಕ್ಷಾಪುಟ ಚಿತ್ರ ರಚಿಸಿದಾಗ, ರಾಮಾನುಜನ್ ಸ್ವಲ್ಪ ವರ್ಣರಂಜಿತವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಪ್ರತಿಕ್ರಿಯಿಸಿದ್ದರಂತೆ. ನಿಮ್ಮ ಕಾವ್ಯಕ್ಕೆ ಬಣ್ಣಗಳ ಅಗತ್ಯ ಇಲ್ಲ ಎಂಬುದು ವಾಸುದೇವ್ ಉತ್ತರವಾಗಿತ್ತು. ಇದು ಸತ್ಯ, ರಾಮಾನುಜನ್ ಅವರದು ಅಪ್ಪಟ ಕಪ್ಪು ಬೀಳುಪು ಕಾವ್ಯ. ಅವರ ಕಾವ್ಯ ವರ್ಣರಂಜಿತವೂ ಅಲ್ಲ ಲೋಲುಪವೂ ಅಲ್ಲ.ಬದುಕಿನ ಕಪ್ಪು-ಬೀಳುಪು ನಿರೂಪಣೆ. ಇದಕ್ಕನುಗುಣವಾಗಿ, ರಾಮಾನುಜನ್ ಅವರ ಕಾವ್ಯಕ್ಕೆ ವಸ್ತುವಿನ ಉತ್ಕಟತೆಯಿಂದ, ಭಾವತೀವ್ರತೆಯಿಂದ ವಾಸುದೇವ್ ಸ್ಪಂದಿಸಿದ್ದಾರೆ. ಸ್ಪಂದಿಸುವ ಈ ಕ್ರಿಯಯಲ್ಲಿ ಅವರು ಬಳಸಿರುವ ಸಾಧನಗಳೂ ಕವಿತೆಗಳ ಜೀವದ್ರವ್ಯಕ್ಕೆ ಸಾಟಿಯಾದುದೇ ಆಗಿದೆ. ಕಾಳಗಪ್ಪು ಕಾಗದದ ಬೋರ್ಡ್ ಮತ್ತು ಬೆಳ್ಳಿ ಶಾಯಿ(ಸಿಲ್ವರ್ ಇಂಕ್) ಹಾಗೂ ಬಿಳಿ ಕಾಗದದ ಬೋರ್ಡ್ ಮತ್ತು ಕಪ್ಪು ಶಾಯಿ, ಇವೇ ಆ ಸಾಧನಗಳು. ಪ್ರದರ್ಶಿತ 25 ಚಿತ್ರಗಳಲ್ಲಿ ಹೆಚ್ಚು ಚಿತ್ರಗಳು ಕಪ್ಪುಕಾಗದದ ಮೇಲೆ ಬೆಳ್ಳಿ ಶಾಯಿಯಲ್ಲಿ ರಚಿಸಲಾಗಿರುವ ಚಿತ್ರಗಳು.ಕಡುಗಪ್ಪು ಹಿನ್ನೆಲೆಯಲ್ಲಿ ಸಿಲ್ವರ್ ಇಂಕಿನ ರೇಖೆಗಳು ರಾಮಾನುಜನ್ ಕಾವ್ಯದಲ್ಲಿನ ನಿಗೂಢತೆ ಮತ್ತು ಪಾರದರ್ಶಕತೆಗಳನ್ನು ಬಿಂಬಿಸುವುದರಲ್ಲಿ ಯಶಸ್ವಿಯಾಗಿದ್ದು ವೀಕ್ಷಕರಲ್ಲಿ ಹೊಸಹೊಳಹುಗಳನ್ನು ಪ್ರೇರೇಪಿಸುವಷ್ಟು ಪರಿಣಾಮಕಾರಿಯಾಗಿವೆ. ಈ ಮಾತುಗಳಿಗೆ ಉದಾಹರಣೆಯಾಗಿ ಕೆಲವು ಚಿತ್ರಗಳನ್ನು ಈಗ ನೋಡೋಣ. ‘ಬ್ರಹ್ಮಜ್ಞಾನ’ ಕುಂಟೊಬಿಲ್ಲೆ ಸಂಕಲನದಲ್ಲಿರುವ ಒಂದು ಸುನೀತ. ಬ್ರಹ್ಮ ಜ್ಞಾನವೆಂದರೆ ಪರಬ್ರಹ್ಮದ ಅರಿವು, ತಾನು ಬ್ರಹ್ಮವೇ ಎಂಬ ಅರಿವು.ಬ್ರಹ್ಮಜ್ಞಾನಿ ಬ್ರಹ್ಮವೇ ಆಗಿದ್ದು,ಬ್ರಹ್ಮದಲ್ಲಿ ಸೇರುತ್ತಾನೆ.ಇದು ಮಾನವಜೀವಿಗೆ ಪರಮೋಚ್ಚ ಸ್ಥಿತಿ. ಇಲ್ಲಿಂದಾಚೆ ಮತ್ತೊಂದಿಲ್ಲ. ಇಲ್ಲಿ ವೌನವೇ ಪರಾತ್ಪರ. ಈ ದಿವ್ಯ ವೌನವನ್ನು ವಾಸುದೇವ್ ಬಿಂಬಿಸಿರುವ ರೀತಿ ಅದ್ಭುತವಾದದ್ದು. ಕಪ್ಪು ಹಿನ್ನೆಲೆಯಲ್ಲಿ, ಸಿಲ್ವರ್ ಇಂಕಿನಲ್ಲಿ ಒಂದಕ್ಕೊಂದು ಹೆಣೆದುಕೊಂಡಂತೆ ‘1’ಮಾದರಿಯ ಆಕೃತಿ ಪ್ರಾಚೀನ ಶಿಲಾ ಶಾಸನದಂತೆ ಊರ್ಧ್ವಮುಖಿಯಾಗಿ ನಿಂತಿರುವುದನ್ನು ಕಂಡಾಗ ಶ್ವೇತ ಶುಭ್ರ ಹಿಮಾದ್ರಿಯ ಘನದಿವ್ಯ ವೌನದ ದರ್ಶನವಾದಂತೆ ಅನುಭವವಾಗುತ್ತದೆ. ಪ್ರಾಚೀನವೂ ಅರ್ವಾಚೀನವೂ ಆದ ಪರಾತ್ಪರದ ಅನುಭಾವದ ದಿವ್ಯ ವೌನ.
ಕುಂಟೋ ಬಿಲ್ಲೆ -ಹೆಣ್ಣು ಮಕ್ಕಳು ಹಳ್ಳಿಪಟ್ಟಣಗಳ ಸಂದಿಗೊಂದಿಗಳಲ್ಲಿ ಆಡುವ ಒಂದು ಆಟ. ಒಂಟಿಕಾಲಲ್ಲಿ ಚೌಕದ ಮನೆಗಳನ್ನು ಸೇರಿ, ಮಧ್ಯದ ಮನೆಯಲ್ಲಿ ಎರಡು ಕಾಲುಗಳನ್ನು ಊರಿ,ಮತ್ತೆ ಮುಂದಿನ ಮನೆಗಳಿಗೆ ಒಂಟಿಕಾಲಿನಲ್ಲೇ ಸಾಗಬೇಕು. ಈ ರೀತಿ ಒಂದು ಸುತ್ತು ಹಾಕಿ ಮತ್ತೆ ಹೊರಟ ಚೌಕಕ್ಕೆ ಹಿಂದಿರುಗುವ ಆಟ. ಪಯಣಿಗನೊಬ್ಬ ಈ ರೀತಿ ಹುಟ್ಟಿದ ಮನೆ ತೊರೆದು, ಪರ್ಯಟನದ ಕೊನೆಯಲ್ಲಿ ಈ ಕುಂಟೋಬಿಲ್ಲೆ ಆಟವನ್ನು ಜರ್ಮನಿ, ಆಫ್ರಿಕಾ-ಹೀಗೆ ಎಲ್ಲೆಲ್ಲೂ ಕಂಡು ವಿಶ್ವರೂಪ ಕಂಡವನಂತೆ ತಬ್ಬಿಬ್ಬಾಗುತ್ತಾನೆ. ಈ ‘ವಿಶ್ವರೂಪ’ದಲ್ಲಿ ಮಾತ್ರ ತನ್ನ ಸಮಗ್ರ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಬಂದು ಮುಟ್ಟುತ್ತಾನೆ. ಇದು ರಾಮಾನುಜನ್ ಕವನದ ತಾತ್ಪರ್ಯ. ವಾಸುದೇವರ ಕಲ್ಪನೆಯಲ್ಲಿ ಇದು ರೇಖೆಗಳು ಮತ್ತು ಕನ್ನಡ ಅಕ್ಷರಗಳ ಸಂಯೋಗದಲ್ಲಿ ಪರಮಪದ ಸೋಪಾನಕ್ಕೊಯ್ಯುವ ಒಂದು ಆಟವಾಗಿ ‘ಕುಂಟೋಬಿಲ್ಲೆ’ ದೃಶ್ಯವತ್ತಾಗಿ ಕಣ್ಸೆಳೆಯುತ್ತದೆ, ಜಿಜ್ಞಾಸೆಗೆಡೆ ಮಾಡಿಕೊಡುತ್ತದೆ. ‘ಕಾಮ ಪೀಡಿತ ಜೈನ ಸವಣ ಸನ್ಯಾಸಿ’ ಇನ್ನೊಂದು ಕೌತುಕಭರಿತ ಚಿತ್ರ. ಪರಿವ್ರಾಜಕನೊಬ್ಬನ ಇರುವೆ ಗೋಡಿನ ಮೇಲೆ ಕೂತಂತಹ ಮನಸ್ಥಿತಿಯು ಸರಳ ರೇಖೆಗಳು ಮತ್ತು ಇರುವೆಗಳ ಚಲನೆಯೋಪಾದಿಯಲ್ಲಿ ಸಾಗುವ ವಿನ್ಯಾಸದ ರೇಖೆಗಳಲ್ಲಿ ಸನ್ಯಾಸಿಯ ಅಂತ ರಂಗದ ತಳಮಳವಾಗಿ ನಮ್ಮ ಕಣ್ಮನಗಳನ್ನು ತಾಕುತ್ತದೆ. ಆತ್ಮಚಿತ್ರ, ಸುರಕ್ಷಿತ ಪ್ರೇಮ, ಸಾವಿನ ಕರೆ, ಸ್ಪೀಕಿಂಗ್ ಆಫ್ ಶಿವ ವಚನಗಳನ್ನು ನಿರೂಪಿಸುವ ಇನ್ನೂ ಕೆಲವು ರೇಖಾಚಿತ್ರಗಳು ನಮ್ಮನ್ನು ಹಿಡಿದು ನಿಲ್ಲಿಸುತ್ತವೆ. ಈ ರೀತಿ ನೋಡುಗರ ಬುದ್ಧಿಭಾವಕಲ್ಪನೆಗಳನ್ನು ಮೀಟುವ ವಾಸುದೇವ್ ಅವರ ಚಿತ್ರಗಳ ಈ ಪ್ರದರ್ಶನ ಆಗಸ್ಟ್ 9 ರವರೆಗೆ ನಡೆಯಲಿದೆ. ಸ್ಥಳ: ಗ್ಯಾಲರಿ ಡೇ ಆಟ್ಸ್‌ರ್ , ಬಾರ್ಟನ್ ಸೆಂಟರ್, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು-1.