ಕಸುವಿಲ್ಲದ, ಜಾಗತೀಕರಣದ, ಪಲಾಯನವಾದದ ಶಿಕ್ಷಣ ನೀತಿ
ಹೊಸ ಶಿಕ್ಷಣ ನೀತಿ 2016

* ಆದಿವಾಸಿ ಬುಡಕಟ್ಟು ಸಮುದಾಯಗಳಿಗಾಗಿ ವಿಶೇಷ ಶಿಕ್ಷಣ ನೀತಿಯನ್ನು ಶಿಫಾರಸು ಮಾಡಿದೆ. ಇದನ್ನು ಸರಕಾರವೇ ಕೈಗೆತ್ತಿಕೊಳ್ಳಬೇಕೆಂದು ಹೇಳುತ್ತದೆ. ಇದು ಸಹ ಸ್ವಾಗತಾರ್ಹ.
* ಭಾಷೆಯ ವಿಷಯಕ್ಕೆ ಬಂದಾಗ ಈ ಹೊಸ ಶಿಕ್ಷಣ ನೀತಿಯು ಸಹ ಮಾತೃಭಾಷೆ ಮಾಧ್ಯಮ ಮತ್ತು ತ್ರಿಭಾಷೆ ಸೂತ್ರದ ಕುರಿತಾಗಿ ಗೊಂದಲದಿಂದ ಮಾತನಾಡುತ್ತದೆ. 5ನೆ ತರಗತಿಯವರೆಗೆ ಮಾತೃಭಾಷೆ ಮಾಧ್ಯಮ ಶಿಕ್ಷಣವನ್ನು ಬೆಂಬಲಿಸುತ್ತದೆ.ಇದು ಸಹ ಸ್ವಾಗತಾರ್ಹ. ಆದರೆ ಇಲ್ಲಿ ಮಾತೃಭಾಷೆ ಮಾಧ್ಯಮ ಅಥವಾ ಪ್ರಾಂತೀಯ ಭಾಷೆ ಎಂದು ಸಂಬೋಧಿಸುತ್ತದೆ.ಇದು ಮತ್ತೆ ಗೊಂದಲಗೊಳಿಸುತ್ತದೆ. ಏಕೆಂದರೆ ಮಾತೃಭಾಷೆ ಮಾಧ್ಯಮ ಮಾತ್ರವೇ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಅದರ ಎಲ್ಲಾ ವೈವಿಧ್ಯತೆಯನ್ನು, ಬಹುರೂಪಿ ಸಂಸ್ಕೃತಿಯನ್ನು ಮತ್ತು ನೆಲಸಂಸ್ಕೃತಿಯನ್ನು ನೀಡಲು ಸಾಧ್ಯ ಮಾತೃಭಾಷೆ ಮಾಧ್ಯಮದ ಶಿಕ್ಷಣವು ವಿದ್ಯಾರ್ಥಿ/ನಿಯನ್ನು ಸಂಪೂರ್ಣವಾಗಿ ತನ್ನ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆಸೆಯುತ್ತದೆ. ಇದರೊಂದಿಗೆ ರಾಜ್ಯಭಾಷೆಯನ್ನು ಮಾಧ್ಯಮವಾಗಿ ಜೋಡಿಸುವುದು ಸಮರ್ಥನೀಯವಲ್ಲ. ಇದನ್ನು ಸಮರ್ಥಿಸಿಕೊಳ್ಳುವುದೂ ಕಷ್ಟ. ಏಕೆಂದರೆ ರಾಜ್ಯಭಾಷೆ ಮಾಧ್ಯಮದ ಶಿಕ್ಷಣ ಹೇರಿಕೆಯ ಶಿಕ್ಷಣವೆನಿಸಿಕೊಳ್ಳುತ್ತದೆ. ಈ ಕುರಿತಾಗಿ ದಶಕಗಳ ಕಾಲ ಚರ್ಚೆ ನಡೆದಿದೆ. ಆದರೆ ಈ ಸಮಿತಿಯ ಸದಸ್ಯರಲ್ಲಿ ಶಿಕ್ಷಣದ ಕುರಿತಾಗಿ ಪ್ರಾಥಮಿಕ ತಿಳುವಳಿಕೆಯ ಕೊರತೆಯಿಂದಾಗಿ ಇಲ್ಲಿ ಅದು ಸಂಪೂರ್ಣ ಹಾದಿ ತಪ್ಪಿದೆ.
* ಆದರೆ ತ್ರಿಭಾಷೆ ಸೂತ್ರವು ಇಂದು ಸಂಪೂರ್ಣ ಕಲಬೆರಕೆಗೊಂಡು ತನ್ನ ಮೂಲ ಆಶಯವನ್ನೇ ಕಳೆದುಕೊಂಡಿರುವುದರ ಕುರಿತಾಗಿ ಹೊಸ ಶಿಕ್ಷಣ ನೀತಿ ಏನನ್ನೂ ಹೇಳುವುದಿಲ್ಲ. ಮೊದಲ ಭಾಷೆಯಾಗಿ ಮಾತೃಭಾಷೆಯನ್ನು ಕಡ್ಡಾಯಗೊಳಿಸಬೇಕೆನ್ನುವ ಆಶಯದೊಂದಿಗೆ ಪ್ರಾರಂಭಗೊಂಡ ಈ ತ್ರಿಭಾಷೆ ಸೂತ್ರದ ಕರಡು ನೀತಿಯು ಇಂದು ಸಂಪೂರ್ಣ ತಿರುಚಿ ಮೂರು ಭಾಷೆಗಳಲ್ಲಿ ಒಂದಾಗಿ (ಅದು ತೃತೀಯ ಭಾಷೆಯಾಗಿದ್ದರೂ ಸರಿ) ಮಾತೃಭಾಷೆಯನ್ನು ಕಲಿಯಬೇಕೆಂದು ಸೂಚಿಸುತ್ತದೆ. ಈ ದೋಷಪೂರ್ಣ ನೀತಿಯ ಕುರಿತಾಗಿ ಹೊಸ ಶಿಕ್ಷಣ ನೀತಿ ಏನನ್ನೂ ಹೇಳುವುದಿಲ್ಲ . * ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸಬೇಕೆನ್ನುವ ಆಶಯವನ್ನು ಈ ಸಮಿತಿ ಪರಿಗಣಿಸಿಯೇ ಇಲ್ಲ. ಬದಲಾಗಿ ಹಿಂದಿ,ಸಂಸ್ಕೃತವನ್ನು ಬೆಂಬಲಿಸುತ್ತದೆ.
* ಈ ಸಮಿತಿ ಹಿಂದಿಯನ್ನು ಸಂಪರ್ಕ ಭಾಷೆಯಾಗಿ 1ನೆ ತರಗತಿಯಿಂದಲೇ ಕಡ್ಡಾಯಗೊಳಿಸಬೇಕೆಂದು ಶಿಫಾರಸು ಮಾಡುತ್ತದೆ. ಇದು ಇಂಡಿಯಾದ ಫೆಡರಲ್ ವ್ಯವಸ್ಥೆಗೆ ಮಾರಕವಾದದ್ದು. ಭಾಷಾವಾರು ಆಧಾರದ ಮೇಲೆ ವಿಂಗಡಣೆಯಾದ ರಾಜ್ಯಗಳು ಇಂದು ತಮ್ಮದೇ ಆದ ಸ್ಥಳೀಯವಾದ, ಪ್ರಾಂತೀಯವಾದ ಭಾಷೆಯನ್ನು ಸಂಪರ್ಕ ಭಾಷೆಯನ್ನು ಅಳವಡಿಸಿಕೊಂಡಿವೆ. ಅಂದರೆ ತಮಿಳುನಾಡಿನಲ್ಲಿ ತಮಿಳು ಭಾಷೆಯ ಮೂಲಕ, ಕರ್ನಾಟಕದಲ್ಲಿ ಕನ್ನಡ ಭಾಷೆಯ ಮೂಲಕ, ಒಡಿಸಾದಲ್ಲಿ ಒರಿಯಾ ಭಾಷೆಯ ಮೂಲಕವೇ ಸಂಪರ್ಕ ಸಾಧಿಸಬೇಕು. ಹಿಂದಿ ಭಾಷೆ ಎನ್ನುವುದು ಇಲ್ಲಿ ಸಂಪೂರ್ಣ ಅಪ್ರಸ್ತುತ. ಆದರೆ ಈ ಸಮಿತಿಯು ಮತ್ತೆ ಸಂಘ ಪರಿವಾರದ ಹುಸಿ ರಾಷ್ಟ್ರೀಯತೆಗೆ ಬಲಿಯಾದಂತೆ ಕಂಡು ಬರುತ್ತದೆ.ಇಂಡಿಯಾದಲ್ಲಿ ಹಿಂದಿ ಸಂಪರ್ಕ ಭಾಷೆ ಎನ್ನುವುದನ್ನು ಬಹು ಹಿಂದೆಯೇ ತಿರಸ್ಕರಿಸಿಯಾಗಿದೆ ಮತ್ತು ಹಿಂದಿ ಸಹ ಒಂದು ಪ್ರಾಂತೀಯ ಭಾಷೆ ಎಂದು ಒಪ್ಪಿಕೊಂಡಾಗಿದೆ.ಆದರೆ ಈ ಸಮಿತಿಯ ಸದಸ್ಯರಿಗೆ ಸಾಮಾಜಿಕ ಚಟುವಟಿಕೆಗಳ ಅನುಭವದ ಕೊರತೆ ಮತ್ತು ಶಿಕ್ಷಣ ವ್ಯವಸ್ಥೆಯ ಸಂಪೂರ್ಣ ಪರಿಚಯದ ಕೊರತೆಯಿಂದಾಗಿ ಈ ರೀತಿಯಲ್ಲಿ ಅಸಂಬದ್ಧವಾಗಿ ಶಿಫಾರಸು ಮಾಡುತ್ತದೆ.
* 5ನೆ ತರಗತಿಯವರೆಗೂ ಸಂಸ್ಕೃತವನ್ನು ಒಂದು ಕಡ್ಡಾಯ ಭಾಷೆಯಾಗಿ ಅಳವಡಿಸಬೇಕೆಂದು ಈ ಸಮಿತಿ ಶಿಫಾರಸು ಮಾಡಿರುವುದು ಸಹ ಇಲ್ಲಿನ ಫೆಡರಲ್ ವ್ಯವಸ್ಥೆ ಮತ್ತು ಬಹುತ್ವ ತತ್ವಕ್ಕೆ ವಿರೋಧಿಯಾಗಿದೆ.ಇದು ಸಹ ಹಿಂದುತ್ವ ಶಕ್ತಿಗಳನ್ನು ಸಂತೋಷಗೊಳಿಸಲು ಎಂದು ಮೇಲ್ನೋಟಕ್ಕೆ ಅರ್ಥವಾಗುತ್ತದೆ.
* ಪ್ರಾಥಮಿಕ ತರಗತಿಯಿಂದಲೇ ಯೋಗ ವನ್ನು ಶಿಕ್ಷಣದ ಪಠ್ಯಕ್ರಮದ ಭಾಗವಾಗಿ ರೂಪಿಸಬೇಕೆಂದು ಸಲಹೆ ಮಾಡಿದೆ. ಇಂದು ಆರೆಸ್ಸೆಸ್ ನೇತೃತ್ವದ ಬಲಪಂಥೀಯ ಸರಕಾರವು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಇಂದಿನ ಸಂದರ್ಭದಲ್ಲಿ ಈ ಯೋಗ ಕಡ್ಡಾಯ ಎನ್ನುವ ಸಲಹೆ ಸಂಪೂರ್ಣವಾಗಿ ಬಹುಸಂಖ್ಯಾತವಾದದ ಮತೀಯವಾದವನ್ನು ಪುಷ್ಟೀಕರಿಸುತ್ತದೆ ಎಂದು ಈ ಸಮಿತಿಯ ಸದಸ್ಯರು ಅರಿಯದೇ ಹೋದದ್ದು ಒಂದು ದುರಂತ.
* ಪಠ್ಯಕ್ರಮ,ಪಠ್ಯಪುಸ್ತಕಗಳ ಸ್ವರೂಪದ ಕುರಿತಾಗಿ ಇಲ್ಲಿ ಚರ್ಚಿಸಲಾಗಿದೆಯಾದರೂ ಅದು ತುಂಬಾ ಸೀಮಿತವಾಗಿದೆ.ವ್ಯಾಪಕತೆ ಇಲ್ಲ. ಏಕೆಂದರೆ ಇಂದಿನ ಪ್ರಾಥಮಿಕ ಶಿಕ್ಷಣದ ಅವನತಿಗೆ ಮೂಲಭೂತ ಸೌಲಭ್ಯಗಳ ಕೊರತೆಯ ಜೊತೆಗೆ ಪಠ್ಯಪುಸ್ತಕಗಳ ರಚನೆಯಲ್ಲಿ ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ಜಾತ್ಯತೀತತೆಯ ಅಂಶಗಳ ಕೊರತೆಯೂ ತುಂಬಾ ಇದೆ. ಗ್ರಾಮೀಣ ಭಾಗದ ಮಕ್ಕಳು,ತಳ ಸಮುದಾಯದ,ಅಲ್ಪ ಸಂಖ್ಯಾತ ಸಮುದಾಯದ ಮಕ್ಕಳು ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಮೊಟಕುಗೊಳಿಸಲು ಈ ಸಂವೇದನೆಯೇ ಇಲ್ಲದ,ನಗರ ಕೇಂದ್ರಿತ ಪಠ್ಯಗಳು ಮತ್ತು ಪಠ್ಯಕ್ರಮಗಳೂ ಒಂದು ಮೂಲಭೂತ ಕಾರಣ. ಇದರ ಕುರಿತಾಗಿ ಈ ಹೊಸ ಶಿಕ್ಷಣ ನೀತಿ ಕೊಂಚವೂ ಗಮನ ಹರಿಸುವುದಿಲ್ಲ. ಇದು ಇಲ್ಲಿನ ಒಂದು ದೊಡ್ಡ ಮಿತಿ. ಇನ್ನು ಸಂಘ ಪರಿವಾರದ ಸರಕಾರಗಳು ಅಧಿಕಾರಕ್ಕೆ ಬಂದಾಗ ಇಡೀ ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸುವುದನ್ನು ಈ ಸಮಿತಿಯು ಪ್ರಶ್ನಿಸಬೇಕಾಗಿತ್ತದೆಂದು ನಾವು ಕೇಳುವುದೇ ಅಸಂಗತವೆನಿಸುತ್ತದೆ. ಈ ಸಮಿತಿಗೆ ಆ ಮಟ್ಟದ ಕ್ಷಮತೆ ಮತ್ತು ಬದ್ಧತೆ ಇಲ್ಲವೇ ಇಲ್ಲ. ಉನ್ನತ ಶಿಕ್ಷಣ
* ಉನ್ನತ ಶಿಕ್ಷಣದ ಬಗ್ಗೆ ಆರಂಭದಲ್ಲಿ ಪ್ರಾಧ್ಯಾಪಕರ ಕುರಿತಾಗಿ ಭರವಸೆಯ ಮಾತುಗಳನ್ನಾಡುವ ಸಮಿತಿ ಅತಿಥಿ ಉಪನ್ಯಾಸಕರ ಬದಲಾಗಿ ಖಾಯಂ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕೆಂದು ಶಿಫಾರಸು ಮಾಡುತ್ತದೆ. ಇದು ಸ್ವಾಗತಾರ್ಹ.
* ಯುಜಿಸಿ ಮತ್ತು ಎಐಸಿಟಿಇ ಸಂಸ್ಥೆಗಳನ್ನು ರದ್ದು ಪಡಿಸಬೇಕೆಂದು ಶಿಫಾರಸು ಮಾಡುತ್ತದೆ. ಈ ಯುಜಿಸಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಾಶವಾದರೆ (ಛಿಞಜಿಛಿ ) ಒಳ್ಳೆಯದು ಎಂದು ಕಟುವಾಗಿ ಟೀಕಿಸುತ್ತದೆ. ಅಲ್ಲಿನ ಭ್ರಷ್ಟತೆ ಮತ್ತು ನಿರ್ಜೀವ ಶೈಲಿಯ ಆಡಳಿತವನ್ನು ಕಂಡಾಗ ಈ ಟೀಕೆ ಸಮಂಜಸವೆನಿಸುತ್ತದೆ. ಆದರೆ ಇದರ ಬದಲಾಗಿ ಒಂದು ಸಂಸ್ಥೆಯನ್ನು ಸ್ಥಾಪಿಸಬೇಕೆಂದು ಹೇಳುವ ಸಮಿತಿ ಅದಕ್ಕೆ ಕೊಡುವ ಸೂಕ್ತ ಕಾರಣಗಳು ಒಂದು ಕಾರ್ಪೊರೇಟ್ ಕಂಪೆನಿಯ ಸಿಇಒ ಶೈಲಿಯಲ್ಲಿವೆ. ಒಂದು ಕಂಪೆನಿಯ ವ್ಯವಸ್ಥಾಪಕನ ರೀತಿಯಲ್ಲಿ ಮಾತನಾಡುವ ಸಮಿತಿಯು ಇಡೀ ಉನ್ನತ ಶಿಕ್ಷಣದ ಮಿತಿಗಳು ಮತ್ತು ಅದರ ಸೋಲುಗಳನ್ನು ತಾತ್ವಿಕವಾಗಿ, ಅಕಾಡಮಿಕ್ ಆಗಿ, ಸೈದ್ಧಾಂತಿಕ ಬದ್ಧತೆಯಿಂದ ಅರ್ಥ ಮಾಡಿಕೊಳ್ಳುವುದಿಲ್ಲ.ಅಧಿಕಾರಿಶಾಹಿಗಳನ್ನು ಸದಸ್ಯರನ್ನಾಗಿ ಹೊಂದಿದ ಈ ಹೊಸ ಶಿಕ್ಷಣ ನೀತಿಯ ಸಮಿತಿಯು ಕೇವಲ ಸುಂದರವಾದ ಬಣ್ಣಗಳನ್ನು ಬಳಿಯುವ ಪ್ರಯತ್ನ ಮಾಡುತ್ತದೆ.
* ಸಮಿತಿಯು ಇಲ್ಲಿ ನ್ಯಾಕ್ನ ಮಹತ್ವವನ್ನು ಸಮರ್ಥಿಸುತ್ತದೆ.ಆದರೆ ಅದರ ಕಾರ್ಯವೈಖರಿಯನ್ನು ಟೀಕಿಸುತ್ತದೆ. ಅದರ ಗುಣಮಟ್ಟವನ್ನು ಟೀಕಿಸುತ್ತದೆ. ಇದು ಸಹ ಸ್ವಾಗತಾರ್ಹ. ಆದರೆ ಮುಂದುವರಿದು ಇದಕ್ಕೆ ಪರಿಹಾರವಾಗಿ ಖಾಸಗಿ ವಲಯವನ್ನು ತರಬೇಕು ಎಂದು ಶಿಫಾರಸು ಮಾಡುತ್ತದೆ. ಈ ಸಮಿತಿ ನಿಜಕ್ಕೂ ಶಿಕ್ಷಣದ ಸಮಾನತೆಗಾಗಿ, ಶಿಕ್ಷಣದ ರಾಷ್ಟ್ರೀಕರಣಕ್ಕಾಗಿ ಚಿಂತಿಸುವುದನ್ನು ಕೈಬಿಟ್ಟಿದೆ. ಒಂದು ಕಾರ್ಪೊರೇಟ್ ಶೈಲಿಯ ಕಾರ್ಯ ನಿರ್ವಹಣೆಯನ್ನು ಪದೇ ಪದೇ ಶಿಫಾರಸು ಮಾಡುವುದನ್ನು ಅವಲೋಕಿಸಿದಾಗ ಇದು ಭವಿಷ್ಯದಲ್ಲಿ ಒಂದು ಮಾರಕ ಎಂದು ಅನಿಸದೇ ಇರದು.
* ಅದು ಖಾಸಗಿ ವಿಶ್ವ ವಿದ್ಯಾನಿಲಯಗಳ ಕುರಿತಾಗಿ ಚರ್ಚಿಸುವ ಈ ಹೊಸ ಶಿಕ್ಷಣ ನೀತಿಯು ಆ ಕುರಿತಾಗಿ ಹೆಚ್ಚಿನದನ್ನು ಹೇಳುವುದಿಲ್ಲ. ಉನ್ನತ ಶಿಕ್ಷಣದ ಗುಣಮಟ್ಟವನ್ನು ಉತ್ಕೃಷ್ಟತೆಯ ಮಟ್ಟಕ್ಕೆ ಹೆಚ್ಚಿಸಲು ಸುಮಾರು 100 ಕೇಂದ್ರಗಳನ್ನು ಪ್ರಾರಂಭಿಸಬೇಕೆಂದು ಹೇಳುತ್ತದೆ. ಆದರೆ ಇದನ್ನು ಸಾರ್ವಜನಿಕ-ಖಾಸಗಿ-ಸಹಭಾಗಿತ್ವ ಅಥವಾ ಖಾಸಗಿ ಸಂಸ್ಥೆಗಳ ಮೂಲಕ ಜಾರಿಗೊಳಿಸಬೇಕೆಂದು ಶಿಫಾರಸು ಮಾಡುತ್ತದೆ.ಮುಂದುವರಿದು ವಿಷಯಗಳ ಆಯ್ಕೆ, ಸ್ಥಳದ ಆಯ್ಕೆ, ಪಠ್ಯಕ್ರಮ ಮತ್ತು ಪಠ್ಯದ ಆಯ್ಕೆ, ಸ್ಥಳೀಯವಾಗಿ ಅಥವಾ ವಿದೇಶದಿಂದ ಪ್ರಾಧ್ಯಾಪಕರ ಆಯ್ಕೆ ಮಾಡಿಕೊಳ್ಳಲು ಈ ಖಾಸಗಿ ಸಂಸ್ಥೆಗಳಿಗೆ ಅಧಿಕಾರವನ್ನು ನೀಡಬೇಕೆಂದು ಶಿಫಾರಸು ಮಾಡುತ್ತದೆ. ಹಾಗಿದ್ದಲ್ಲಿ ಈ ಹೊಸ ಶಿಕ್ಷಣ ನೀತಿಯ ಆಶಯಗಳೇನು? ಇದು ಉನ್ನತ ಶಿಕ್ಷಣವನ್ನು ಮತ್ತೆ ಖಾಸಗೀಕರಣಗೊಳಿಸಲು ಸಮರ್ಥಿಸುತ್ತದೆ ಎಂದು ನಮಗೆ ನಿಚ್ಚಳವಾಗಿ ಗೊತ್ತಾಗುತ್ತದೆ.
* ಡಬ್ಲಿಟಿಒ/ಗ್ಯಾಟ್ಸ್ ಒಪ್ಪಂದದ ಕುರಿತಾಗಿ ಯಾವುದೇ ಪ್ರಸ್ತಾಪವನ್ನು ಮಾಡುವುದಿಲ್ಲ. ಉನ್ನತ ಶಿಕ್ಷಣದಲ್ಲಿ ಭಾರತವು ಅಂತಾರಾಷ್ಟ್ರೀಯ ಸಂಸ್ಥೆ ಡಬ್ಲಿಟಿಓದೊಂದಿಗೆ ಯಾವ ಒಪ್ಪಂದಗಳನ್ನು ಮಾಡಿಕೊಂಡಿದೆ ಎನ್ನುವುದನ್ನೂ ವಿವರಿಸುವುದಿಲ್ಲ, ಅಥವಾ ತಾನು ತಿಳಿದುಕೊಳ್ಳುವ ಗೋಜಿಗೆ ಹೋದಂತಿಲ್ಲ. ಉನ್ನತ ಶಿಕ್ಷಣದ ಗುಣಮಟ್ಟ ಕುಂಠಿತಗೊಳ್ಳುವುದರ ಕುರಿತಾಗಿ ಸಹಜವಾಗಿ ಚಿಂತೆ ವ್ಯಕ್ತಪಡಿಸುವ ಈ ಸಮಿತಿ ಅದು ಒಂದು ಸರಕಾಗಿ ಪರಿವರ್ತನೆಗೊಂಡಿರುವುದರ ಕುರಿತಾಗಿ ಕಳವಳ ವ್ಯಕ್ತಪಡಿಸುವುದಿಲ್ಲ. ಬದಲಾಗಿ ವಿದೇಶಿ ಯುನಿವರ್ಸಿಟಿಗಳಿಗೆ ಇಲ್ಲಿ ಪ್ರವೇಶಕ್ಕೆ ಅನುವು ಮಾಡಿಕೊಡಬೇಕೆಂದು ಶಿಫಾರಸು ಮಾಡುತ್ತದೆ. ಅಂದರೆ ನಮ್ಮ ದೇಶೀಯ ಯುನಿವರ್ಸಿಟಿಗಳ ಅಧೋಗತಿಗೆ ಪರಿಹಾರವೆಂದರೆ ವಿದೇಶಿ ಯುನಿವರ್ಸಿಟಿಗಳು. ಇದನ್ನು ಹೇಳಲು ಈ ಮಾದರಿಯ ಒಂದು ಸಮಿತಿಯ ಆವಶ್ಯಕತೆ ಇತ್ತೇ?
* ಶಿಕ್ಷಣವನ್ನು ಜಾಗತೀಕರಣಗೊಳಿಸಬೇಕೆಂದು ಶಿಫಾರಸು ಮಾಡುತ್ತದೆ. ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು? ಈ ಸಮಿತಿ ನೇರವಾಗಿಯೇ ಉನ್ನತ ಶಿಕ್ಷಣವನ್ನು ವಿದೇಶಿ ಬಂಡವಾಳ ಹೂಡಿಕೆಯ ಉದ್ಯಮವನ್ನಾಗಿ ಪರಿಗಣಿಸಿದಂತಿದೆ. ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ನಮ್ಮ ಉನ್ನತ ಶಿಕ್ಷಣವನ್ನು ರೂಪಿಸಬೇಕೆಂದು ಬಯಸುವ ಈ ಹೊಸ ಶಿಕ್ಷಣ ನೀತಿ ನಿಜಕ್ಕೂ ನಮ್ಮ ಶಿಕ್ಷಣ ನೀತಿಗೆ, ಹೊಸ ಬದಲಾವಣೆಗಳಿಗೆ, ಹೊಸ ಚಿಂತನೆಗಳಿಗೆ ಮರಣಶಾಸನದಂತಿದೆ.
ಉಪಸಂಹಾರ
ಕಡೆಯದಾಗಿ ಹೊಸ ಶಿಕ್ಷಣ ನೀತಿ2016 ಪಲಾಯನವಾದವನ್ನೇ ಸೂಚಿಸುತ್ತದೆ. ಇದಕ್ಕೆ ಯಾವುದೇ ಬಗೆಯ ನೈತಿಕ, ಸಾಮಾಜಿಕ ಪರಿವರ್ತನೆಯ, ಸಾಮಾಜಿಕ ನ್ಯಾಯದ, ಹೊಸ ಪಠ್ಯಕ್ರಮಗಳ, ಶಿಕ್ಷಣದ ರಾಷ್ಟ್ರೀಕರಣದ ಆಶಯಗಳಾಗಲಿ ಅದಕ್ಕೆ ಭದ್ರ ತಳಹದಿಯಾಗಲೀ ಇಲ್ಲವೇ ಇಲ್ಲ. ನವ ಉದಾರೀಕರಣದ ಎಲ್ಲಾ ಬಂಡವಾಳಶಾಹಿ ಲಕ್ಷಣಗಳನ್ನು ಅನುಮೋದಿಸುವ ಈ ಹೊಸ ಶಿಕ್ಷಣ ನೀತಿಯು ಶಿಕ್ಷಣವನ್ನು ಸರಕನ್ನಾಗಿಸುವ ಯೋಜನೆಗಳಿಗೂ ಸಹಮತ ವ್ಯಕ್ತಪಡಿಸುತ್ತದೆ. ಶಿಕ್ಷಣದ ರಾಷ್ಟ್ರೀಕರಣದ ಕುರಿತಾಗಿ ಏನನ್ನೂ ಮಾತನಾಡದ ಈ ಸಮಿತಿ ಖಾಸಗಿ ಶಿಕ್ಷಣದ ಲಾಬಿಯ ಕೋಟೆಯೊಳಗೆ ಅವಿತುಕೊಂಡು ಈ ಶಿಕ್ಷಣ ನೀತಿಯನ್ನು ರೂಪಿಸಿದೆ. ಅಷ್ಟರಮಟ್ಟಿಗೆ ಈ ಹೊಸ ಶಿಕ್ಷಣ ನೀತಿಯು ಖಾಸಗೀಕರಣದ ಪರವಾಗಿದೆ. ಸಂಘ ಪರಿವಾರದ ವಿಚಾರ ಶೂನ್ಯ ರಾಷ್ಟ್ರೀಯವಾದದ ಚಿಂತನೆಯನ್ನು ಸಮರ್ಥಿಸುತ್ತದೆ.