varthabharthi


ಫೋಕಸ್

ಮುಕ್ತಾಯದ ಹಂತಕ್ಕೆ ತಲುಪಿದ ಸಾರ್ವಜನಿಕ ಉದ್ಯಾನವನದ ಕಾಮಗಾರಿ

ಬಿ.ಸಿ.ರೋಡ್: ಪಾಳುಬಿದ್ದ ಜಾಗದಲ್ಲೀಗ ಸುಸಜ್ಜಿತ ಪಾರ್ಕ್!

ವಾರ್ತಾ ಭಾರತಿ : 25 Jul, 2016

ಬಂಟ್ವಾಳ, ಜು. 25: ಸತ್ತ ಪ್ರಾಣಿಗಳು, ಕಟ್ಟಡ, ಆಸ್ಪತ್ರೆ, ಹೊಟೇಲ್, ಅಂಗಡಿ ಮುಂಗಟ್ಟುಗಳ ತ್ಯಾಜ್ಯಗಳಿಂದ ಕೊಳೆತುನಾರುತ್ತಿದ್ದ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಮುಖ್ಯವೃತ್ತದ ಸಮೀಪದ ಸ್ಥಳದಲ್ಲೀಗ ವೈಪೈ, ಎಫ್.ಎಂ. ರೇಡಿಯೋ, ವಿವಿಧ ಕಾರಂಜಿಗಳ ಸಹಿತ ಆಧುನಿಕ ಸೌಲಭ್ಯಗಳನ್ನೊಳಗೊಂಡ ಸುಂದರ, ಸುಸಜ್ಜಿತ ‘ಸಾರ್ವಜನಿಕ ಪಾರ್ಕ್’ವೊಂದು ಕಂಗೊಳಿಸುತ್ತಿದೆ. ಪಾರ್ಕ್ ನಿರ್ಮಾಣದ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಆ.15ರೊಳಗೆ ಲೋಕಾರ್ಪಣೆಗೊಳ್ಳಲಿದೆ.

ಕರ್ನಾಟಕ ಸರಕಾರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುದಾನದಿಂದ, ಬಂಟ್ವಾಳ ಪುರಸಭೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತದ ಜಂಟಿ ಪ್ರಾಯೋಜಕತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯ ಮುಂದಾಳತ್ವದಲ್ಲಿ ಸುಮಾರು 1.40 ಕೋ.ರೂ. ವೆಚ್ಚದಲ್ಲಿ ಈ ಪಾರ್ಕ್‌ನ ನಿರ್ಮಾಣ ಕಾರ್ಯಕೈಗೆತ್ತಿಕೊಳ್ಳಲಾಗಿತ್ತು.

ಸುಮಾರು 5 ಅಡಿಯಷ್ಟು ಸಾವಿರಾರು ಲೋಡ್ ಮಣ್ಣನ್ನು ತುಂಬಿಸಿ 1 ಎಕರೆ ಪ್ರದೇಶದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣ ಮಾಡಿರುವ ಈ ಸುಸಜ್ಜಿತ ಪಾರ್ಕ್‌ಗೆ ಸುಂದರ ಕಾಂಪೌಂಡ್ ಗೋಡೆ ಮತ್ತು ಪ್ರವೇಶ ದ್ವಾರ ಇನ್ನಷ್ಟು ಮೆರಗು ನೀಡಿದೆ. ಪಾರ್ಕ್‌ನಲ್ಲಿ ನಡೆದಾಡಲು ಇಂಟರ್‌ಲಾಕ್ ಅಳವಡಿಸಿರುವ ಪಥವನ್ನು ಹೊಂದಿದೆ. ಪಾರ್ಕ್‌ನೊಳಗಡೆ ವಿನೂತನ ವಿನ್ಯಾಸದ ಶೌಚಾಲಯ ನಿರ್ಮಿಸಲಾಗಿದ್ದು, ಇದು ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿರುವ ಸಾಧ್ಯತೆ ಇದೆ ಎಂದು ಗುತ್ತಿಗೆದಾರ ಪ್ರಮೋದ್ ಅಭಿಪ್ರಾಯಪಡುತ್ತಾರೆ.

ಪಾರ್ಕ್‌ಗೆ ಬರುವ ಜನರಿಗೆ ಕುಡಿಯಲು ಶುದ್ಧ ಸಿಹಿ, ಬಿಸಿ ಮತ್ತು ತಂಪು ನೀರಿನ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ. ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ಎರಡು ಮೀನಿನ ಶೈಲಿಯಲ್ಲಿ ಹಾಗೂ ಎರಡು ವಿವಿಧ ರೀತಿಯ ಕಾರಂಜಿಗಳನ್ನು ನಿರ್ಮಿಸಲಾಗಿದೆ. ವಿಶಾಲವಾದ ಕೊಳ ಹಾಗೂ ಕಾರಂಜಿಗಳು ಈ ಪಾರ್ಕ್‌ನ ಸೊಬಗನ್ನು ಹೆಚ್ಚಿಸಲಿದೆ. ಕಾರಂಜಿ ಹಾಗೂ ಗಿಡಗಳಿಗೆ ನೀರು ಪೂರೈಸಲು ಸುಮಾರು 100 ಅಡಿ ಆಳದ ಬಾವಿಯೊಂದನ್ನು ಪಾರ್ಕ್‌ನೊಳಗಡೆ ನಿರ್ಮಾಣ ಮಾಡಲಾಗಿದೆ. ಸುಮಾರು 40ರಷ್ಟು ಕಾರುಗಳನ್ನು ಪಾರ್ಕ್ ಮಾಡುವಷ್ಟು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದ್ದು, ಪಾರ್ಕ್‌ನೊಳಗೆ ಜನರಿಗೆ ಕುಳಿತುಕೊಳ್ಳಲು ಸುಮಾರು 30 ಉದ್ದದ ಕುರ್ಚಿಗಳನ್ನೂ ಹಾಗೂ ವಿಶ್ರಾಂತಿ ಪಡೆಯಲು ಸಣ್ಣ ಮಾದರಿಯ 9 ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ.

ಕೃತಕ ಬಿದಿರಿನಿಂದ ನಿರ್ಮಾಣಗೊಂಡ ವಿವಿಧ ರೀತಿಯ ಆಲಂಕಾರಿಕ ದೀಪಗಳು ಪಾರ್ಕ್‌ನ ಅಂದ ಹೆಚ್ಚಿಸಲಿದೆ. ಎಲ್ಲಾ ದೀಪಗಳು ಸೋಲಾರ್‌ನಿಂದ ಉರಿಯುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಸಭಾಕಾರ್ಯಕ್ರಮ ನಡೆಸಲು ಮಿನಿ ವೇದಿಕೆಯೂ, 500ರಷ್ಟು ಜನರು ಸೇರಬಹುದಾದ ಸಭಾಂಗಣವೂ ಇದೆ. ಸರಕಾರದ ವಿವಿಧ ಸಮಾರಂಭಗಳನ್ನು ನಡೆಸುವ ಸಲುವಾಗಿ ಪಾರ್ಕ್‌ನೊಳಗೆ ಧ್ವಜಸ್ತಂಭವನ್ನು ನಿರ್ಮಿಸಲಾಗಿದೆ. ಹಸಿರು ಹುಲ್ಲು ಹಾಸಿದ ಈ ಪಾರ್ಕ್‌ನಲ್ಲಿ ವನದ ಮಾದರಿಯಲ್ಲಿ ಕೃತಕ ಮರ ಹಾಗೂ ಬಿದಿರಿನ ಸೇತುವೆ ಅಲಂಕಾರಗೊಂಡಿದೆ. ಮಕ್ಕಳಿಗಾಗಿ ಪಾರ್ಕ್‌ನೊಳಗೆ ಆಟಿಕೆಯ ವಿವಿಧ ಉಡಿ ಪಕರಣಗಳನ್ನು ಅಳವಡಿಸಲಾಗಿದೆ. ಸಿಮೆಂಟ್‌ನಿಂದ ನಿರ್ಮಾಣಗೊಂಡಿರುವ ಪ್ರಾಣಿ, ಪಕ್ಷಿಗಳು ಈ ಪಾರ್ಕ್‌ನೊಳಗೆ ಬರುವ ಜನರನ್ನು ಆಕರ್ಷಿಸಲಿದೆ.

ಪಾರ್ಕ್‌ನ ಅಂದ ಹೆಚ್ಚಿಸಲು ವಿವಿಧ ಜಾತಿಯ ಹೂವಿನ ಗಿಡಗಳನ್ನು ನೆಟ್ಟರೆ, ಸಾರ್ವಜನಿಕರ ಉಪಯೋಗಕ್ಕಾಗಿ ಪಾರ್ಕ್‌ನೊಳಗೆ ಉಚಿತ ವೈಪೈ ಇಂಟರ್‌ನೆಟ್ ಸೇವೆ ಹಾಗೂ ಎಫ್.ಎಂ. ರೇಡಿಯೊದ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ. ಶುಚಿತ್ವವನ್ನು ಕಾಪಾಡುವ ದೃಷ್ಟಿಯಿಂದ ಸುಮಾರು ಹತ್ತು ಕಸದ ತೊಟ್ಟಿಗಳನ್ನು ಅಳವಡಿಸಲಿದೆ. ವಿಶೇಷವೆಂದರೆ ಹೊಸ ವಿಧಾನದಲ್ಲಿ ಇಡೀ ಪಾರ್ಕ್‌ನೊಳಗೆ 6 ಇಂಗು ಗುಂಡಿ ನಿರ್ಮಿಸಿ ಮಳೆ ನೀರನ್ನು ಇಂಗಿಸುವ ವ್ಯವಸ್ಥೆ ಮಾಡಲಾಗಿದೆ.

ತ್ಯಾಜ್ಯಗಳಿಂದಾಗಿ ಜನರು ಮೂಗು ಮುಚ್ಚಿಕೊಂಡು ಹೋಗುತ್ತಿದ್ದ ಪ್ರದೇಶದಲ್ಲಿ ಎಲ್ಲ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಳ್ಳುತ್ತಿರುವ ಈ ಪಾರ್ಕ್ ಬಿ.ಸಿ.ರೋಡ್‌ನ ಸೌಂದರ್ಯವನ್ನು ಹೆಚ್ಚಿಸಲಿದೆ. ಇಲ್ಲಿ ಮಕ್ಕಳಿಂದ ವಯಸ್ಕರವರೆಗಿನ ಜನರಿಗೆ ಬೇಕಾದ ಎಲ್ಲ ವ್ಯವಸ್ಥೆಯಿದ್ದು, ಬಂಟ್ವಾಳ ತಾಲೂಕಿನ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ. ಪಾರ್ಕ್‌ನ ಅಚ್ಚುಕಟ್ಟಿನ ನಿರ್ವಹಣೆಗೆ ಬೇಕಾದ ವ್ಯವಸ್ಥೆಯನ್ನು ಕೂಡ ಮಾಡಲಾಗುವುದು.

- ಪಿಯೂಸ್ ರೊಡ್ರಿಗಸ್, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)