ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟು ಮಾದಕ ವಸ್ತು ಮಾರಾಟದಲ್ಲಿ ಹೆಚ್ಚಳ
ಕೇರಳದಲ್ಲಿ ಐದು ವರ್ಷಗಳಲ್ಲಿ 20,000 ಪ್ರಕರಣಗಳು ದಾಖಲು!
ತೃಶೂರ್, ಜುಲೈ 25: ಕೇರಳದಾದ್ಯಂತ ಶಾಲಾ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟು ಮಾದಕವಸ್ತುಗಳ ಮಾರಾಟ ಹೆಚ್ಚುತ್ತಿದೆಯೆಂದು ವರದಿಯಾಗಿದೆ. ಕಳೆದ ಐದು ವರ್ಷಗಳಲ್ಲಿ ಶಾಲೆಗಳ ಸಮೀಪ ಮಾದಕವಸ್ತುಗಳನ್ನು ಮಾರಿದ್ದಕ್ಕೆ ಸಂಬಂಧಿಸಿ 20,000ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ ಅಬಕಾರಿ ಇಲಾಖೆ 4,600 ಪ್ರಕರಣಗಳನ್ನು ದಾಖಲಿಸಿದೆ. 15,000ಕ್ಕೂ ಅಧಿಕ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಇತ್ತೀಚೆಗೆ ಕೇರಳದಲ್ಲಿ ಶಾಲಾ ಪರಿಸರದಲ್ಲಿ ಮಾದಕವಸ್ತು ಮಾರುತ್ತಿರುವವರನ್ನು ಹೆಚ್ಚು ಬಂಧಿಸಲಾಗಿದೆ. ಮಾದಕವಸ್ತು ಮಾಫಿಂ ವಿದ್ಯಾಲಯಗಳನ್ನು ಕೇಂದ್ರವಾಗಿಟ್ಟು ಕಾರ್ಯಾಚರಿಸುತ್ತಿರುವುದಕ್ಕೆ ಇದು ಪುರಾವೆಯಾಗಿದೆ ಎಂದು ವರದಿ ತಿಳಿಸಿದೆ.
ಸಮಾಜದೊಳಗೆ ಗಂಭೀರ ರೀತಿಯಲ್ಲಿ ಮಾದಕವಸ್ತುಗಳ ಬಳಕೆ ಹೆಚ್ಚಳವಾಗಿದೆ ಎಂದು ಈ ಎಲ್ಲ ಪ್ರಕರಣಗಳಿಂದ ತಿಳಿದು ಬರುತ್ತಿದೆ. ರಾಜ್ಯದ ಸಾಮಾಜಿಕ ಸುರಕ್ಷೆ ಇಲಾಖೆಯ ಕೌನ್ಸಿಲರ್‌ಗಳು ನಡೆಸಿದ ಪರಿಶೀಲನೆಯಲ್ಲಿ ಪ್ರಾಥಮಿಕ ಶಾಲಾ ಮಟ್ಟದಿಂದಲೇ ವಿದ್ಯಾರ್ಥಿಗಳು ಮಾದಕವಸ್ತು ಉಪಯೋಗಿಸುತ್ತಿರುವುದು ಕಂಡುಬಂದಿದೆ. ಕೆಲವು ಶಾಲಾ ಪರಿಸರದಲ್ಲಿ ಮಾದಕವಸ್ತುಗಳಲ್ಲದೆ ಮದ್ಯಮಾರಾಟವೂ ನಡೆಯುತ್ತಿದೆ ಎಂದು ವರದಿಯಾಗಿದೆ.