ಅತ್ಯಾಚಾರ ಸಂತ್ರಸ್ತಳ ಗರ್ಭಪಾತಕ್ಕೆ ಸುಪ್ರೀಂ ಅನುಮತಿ
ಹೊಸದಿಲ್ಲಿ, ಜು.25: ವೈದ್ಯರ ಸಲಹೆಯ ಮೇರೆಗೆ 26ರ ಹರೆಯದ ಅತ್ಯಾಚಾರ ಸಂತ್ರಸ್ತೆಯೊಬ್ಬಳ 24 ವಾರಗಳ ಗರ್ಭವನ್ನು ತೆಗೆಯಲು ಸುಪ್ರೀಂಕೋರ್ಟ್ ಸೋಮವಾರ ಅನುಮತಿ ನೀಡಿದೆ.
ಕಾನೂನು ಪ್ರಕಾರ 20 ವಾರಕ್ಕಿಂತ ಹೆಚ್ಚಿನ ಅವಧಿಯ ಗರ್ಭಪಾತಕ್ಕೆ ಅವಕಾಶವಿಲ್ಲ. ಆದರೆ, ಯುವತಿಯ ಜೀವ ಅಪಾಯದಲ್ಲಿದೆಯೆಂದು ವೈದ್ಯರು ತಿಳಿಸಿದ ಕಾರಣ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ.
ಯುವತಿಯ ಪರೀಕ್ಷೆಗಾಗಿ ವೈದ್ಯಕೀಯ ಮಂಡಳಿಯೊಂದನ್ನು ರಚಿಸುವಂತೆ ನ್ಯಾಯಾಲಯವು ಮುಂಬೈಯ ಕೆಇಎಂ ಆಸ್ಪತ್ರೆಗೆ ಶುಕ್ರವಾರ ನಿರ್ದೇಶನ ನೀಡಿತ್ತು.
ತನ್ನ ಮಾಜಿ ಪ್ರಿಯಕರ ಅತ್ಯಾಚಾರ ನಡೆಸಿದುದರಿಂದ ತಾನು ಗರ್ಭವತಿಯಾಗಿದ್ದೇನೆ. ಆತ ತನ್ನನ್ನು ಮದುವೆಯಾಗುವ ಭರವಸೆಯನ್ನು ಮುರಿದಿದ್ದಾನೆ. ಅಲ್ಲದೆ, ಭ್ರೂಣವು ದೋಷಪೂರಿತವಾಗಿದ್ದು, ತಲೆ ಬುರುಡೆ ಹಾಗೂ ಮೆದುಳಿನ ಕೆಲವು ಭಾಗಗಳು ಇಲ್ಲದೆ ಜನಿಸುವ ಸಾಧ್ಯತೆಯಿದೆ. ಆದರೆ, ವೈದ್ಯರು 20 ವಾರಗಳ ಬಳಿಕ ಗರ್ಭಪಾತ ನಡೆಸಲು ನಿರಾಕರಿಸಿದ್ದಾರೆ. ಆದುದರಿಂದ ನ್ಯಾಯಾಲಯ ಗರ್ಭಪಾತ ನಡೆಸಲು ಅನುಮತಿ ನೀಡಬೇಕೆಂದು ಸಂತ್ರಸ್ತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಳು.