ಬತ್ತದ ಜೀಯಸೆಲೆ
ಬ್ಯಾರಿ ಭಾಷೆಯ ಹಿರಿಯ ಕವಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಇತ್ತೀಚೆಗೆ ಹೊರತಂದ ‘ಜೀಯಸೆಲೆ’ (ಜೀವಸೆಲೆ) ಬ್ಯಾರಿ ಭಾಷೆಯಲ್ಲಿ ಪ್ರಕಟವಾದ ಸತ್ವಶಾಲಿ ಕವನಗಳ ಸಂಕಲನ. ಜೀಯಸೆಲೆ ಕವನ ಸಂಕಲನದಲ್ಲಿ ಕ್ರಮವಾಗಿ ಕವನಗಳು, ಚುಟುಕುಗಳು ಮತ್ತು ಸರ್ವಜ್ಞನ ತ್ರಿಪದಿಗಳ ಅನುವಾದ ಎಂಬ ಮೂರು ವಿಭಾಗಗಳಿವೆ. ಈ ಸಂಕಲನದ ನಂಡೊ ಕವನ, ನಂಡುಮ್ಮ, ಗುರ್ಬಿ ದಾದಡೊ ಕಿನಾವು ಮುಂತಾದವುಗಳು ಬಹಳಷ್ಟು ಗಮನ ಸೆಳೆಯುವ ಕವನಗಳು. ದುಡಿದು ದುಡಿದು ಹಣ್ಣಾದ ಹಿರಿಯ ಹೆಣ್ಣು ಜೀವದ ಚಿತ್ರಣ ನಂಡುಮ್ಮದಲ್ಲಿದೆ. ಈ ಕವನದಲ್ಲಿ ಕವಿ ಟಿಪಿಕಲ್ ಬ್ಯಾರಿ ಉಮ್ಮನನ್ನು ಸೊಗಸಾಗಿ ಕಟ್ಟಿದ್ದಾರೆ. ಇನ್ನೂ ವಿಶೇಷವೇನೆಂದರೆ ಇದರಲ್ಲಿ ಬ್ಯಾರಿಗಳ ಜನಪ್ರಿಯ ತಿನಿಸುಗಳು, ಆಭರಣಗಳ ಚಿತ್ರಣವೂ ಇದೆ.
‘ಗುರ್ಬಿ ದಾದಡೊ ಕಿಡಾವು’ ಬಹು ಜನಪ್ರಿಯ ಬಾಲಕಥೆಯಾದ ಕಾಗಕ್ಕ ಗುಬ್ಬಕ್ಕನ ಕಥೆಯ ಬ್ಯಾರಿ ಕವನ ರೂಪ. ಬ್ಯಾರಿ ಅಜ್ಜಿಯಂದಿರು ಮೊಮ್ಮಕ್ಕಳಿಗೆ ಕಥೆ ಹೇಳುವಂತೆ ಕವಿ ಇಲ್ಲಿ ಅದನ್ನು ಸರಳವಾಗಿ ಕವನ ರೂಪದಲ್ಲಿ ಹೆಣೆದಿದ್ದಾರೆ. ಈ ಸಂಕಲನದ ಚುಟುಕುಗಳಲ್ಲಿ ನಂಬಿಕೆ, ನಾನ್ ಎಂದಾಕಟ್ಟ್ (ನಾನೇನು ಮಾಡಲಿ) ಮುಂತಾದವುಗಳು ಬಹುವಾಗಿ ಕಾಡುವ ಚುಟುಕುಗಳು. ‘ನಾನ್ ಎಂದಾಕಟ್ಟ್’ನಲ್ಲಿ ಉಳ್ಳವರ ಡಾಂಭಿಕ ಭಕ್ತಿಯನ್ನು ಕುಟುಕುವ ಶಕ್ತಿ ಈ ಚುಟುಕಕ್ಕಿದೆ. ಸರ್ವಜ್ಞನ ಕೆಲವು ತ್ರಿಪದಿಗಳ ಅನುವಾದವಂತೂ ಬಹಳ ಶಕ್ತವಾಗಿದೆ. ಅವುಗಳನ್ನು ಬ್ಯಾರಿ ಭಾಷೆಯಲ್ಲಿ ಓದುತ್ತಾ ಹೋದಂತೆ ಅದರ ಫಿಲಾಸಫಿಗೂ ಇಸ್ಲಾಮಿಕ್ ಅಧ್ಯಾತ್ಮದ ಫಿಲಾಸಫಿಗೂ ಇರುವ ಸಾಮ್ಯತೆ ನಮ್ಮರಿವಿಗೆ ಬರುತ್ತದೆ.
ಓರ್ವ ಹಿರಿಯ ಬ್ಯಾರಿ ಕವಿಯಾದುದರಿಂದ ಅಬ್ದುಲ್ ರಹಿಮಾನ್ ಸರಳವಾಗಿ ಬ್ಯಾರಿಯಲ್ಲಿ ಲಭ್ಯವಿರುವ ಪದಗಳಿಗೆ ಬದಲಾಗಿ ಎರವಲು ಪದಗಳನ್ನು ಹೆಚ್ಚು ಬಳಸಿರುವುದು ಈ ಕವನ ಸಂಕಲನದ ಪಟ್ಟಿ ಮಾಡಬಹುದಾದ ಪ್ರಮುಖ ಮಿತಿ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಪ್ರಕಟಿಸಿರುವ ನಲ್ವತ್ತೆರಡು ಪುಟಗಳ ಈ ಪುಟ್ಟ ಕೃತಿಯ ಮುಖ ಬೆಲೆ 40 ರೂಪಾಯಿಗಳು. ಪ್ರತಿಗಳು ಅಕಾಡಮಿಯ ಕಚೇರಿಯಲ್ಲಿ ಲಭ್ಯ. ಸಂಪರ್ಕಿಸಿ: 0824-2412297