ಸಾವಿಗೊಂದು ಡಿಗ್ನಿಟಿ, ಜವಾಬ್ದಾರಿ ಮರೆತವರು...
ಭಾರತದಲ್ಲಿ ಸಾವು ಖಾಸಗಿ ಅಲ್ಲ. ಸಾವಿನ ಮನೆಗೆ ಆಹ್ವಾನ ಪಡೆದು ಹೋಗುವ ಕ್ರಮ ಇಲ್ಲ. ಕುಟುಂಬ, ಪರಿಚಯ, ಊರು, ಉಪಕಾರ ಸ್ಮರಣೆ, ಅಭಿಮಾನ ಹೀಗೆ ಸಾವಿನ ಮನೆಗೆ ಹೋಗುವುದಕ್ಕೆ ಜನರಿಗೆ ಹಲವು ಕಾರಣಗಳಿರುತ್ತವೆ. ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿಗಳ ಸಾವಿಗಂತೂ ಖಾಸಗಿತನ ಇರುವುದೇ ಇಲ್ಲ.
ಮೂವತ್ತು ವರ್ಷಗಳ ಹಿಂದೆ, ಕೇವಲ ಸರಕಾರಿ ಟೆಲಿವಿಷನ್ ಚಾನೆಲ್‌ಗಳಿದ್ದಾಗ ರಾಷ್ಟ್ರೀಯ ಶೋಕ ಆಚರಿಸಬೇಕಿರುವಲ್ಲಿ ಸಾವಿನ ಅಧಿಕೃತ ಸುದ್ದಿಯ ಜೊತೆಗೆ ದುಃಖ ಆಚರಿಸಲು ಶೋಕ ಸಂಗೀತ ಪ್ರಸಾರ ಮಾಡುವ ಕ್ರಮವಿತ್ತು. ಇಂದಿರಾಗಾಂಧಿ ಅವರ ಅಂತ್ಯಸಂಸ್ಕಾರ ಹೆಚ್ಚಿನಂಶ ಈ ದೇಶದ ಬಹುಭಾಗ ಮಂದಿ ಮೊದಲಬಾರಿಗೆ ಲೈವ್ ಆಗಿ ಕಂಡ ಅಂತ್ಯಸಂಸ್ಕಾರದ ಸುದ್ದಿ.
ಅಲ್ಲಿಂದೀಚೆಗೆ ಖಾಸಗಿ ಚಾನೆಲ್‌ಗಳ ಪ್ರವೇಶ ಆದ ಬಳಿಕ ಪ್ರತಿಯೊಂದು ಸೆಲೆಬ್ರಿಟಿ ಸಾವು ಕೂಡ ಒಂದೆಡೆಯಲ್ಲಿ ಮಾರಾಟದ ಸರಕಾಗುತ್ತಾ, ಇನ್ನೊಂದೆಡೆಯಲ್ಲಿ ಸಾವಿಗೆ ಸಮಾಜ ನೀಡುವ ಡಿಗ್ನಿಟಿಯನ್ನೂ ಅಷ್ಟೋ ಇಷ್ಟೋ ಖಾಸಗಿತನವನ್ನೂ, ಕೆಡಿಸುತ್ತಾ ಬಂದಿವೆ. ಇದರ ಅಪಾಯಕಾರಿ ಮಗ್ಗುಲುಗಳನ್ನು ಡಾ. ರಾಜ್ ಕುಮಾರ್ ಅವರ ನಿಧನದ ಸಂದರ್ಭದಲ್ಲಿ ಕರ್ನಾಟಕ ಕಂಡಿದೆ.
ಈಗ ಟೆಲಿವಿಷನ್ ಚಾನೆಲ್‌ಗಳ ಜೊತೆ ಸೋಷಿಯಲ್ ಮೀಡಿಯಾಗಳೂ ಸೇರಿಕೊಂಡಿವೆ. ಇಂತಹದೊಂದು ಸನ್ನಿವೇಶದಲ್ಲಿ ಮೊನ್ನೆ ರಾಕೇಶ್ ಸಿದ್ದರಾಮಯ್ಯ ಅವರ ನಿಧನವನ್ನು ಮಾಧ್ಯಮಗಳು ಸುದ್ದಿಯಾಗಿ ಬಗೆಯುತ್ತಿರುವ ಪರಿ ನಿಜಕ್ಕೂ ಆತಂಕ ಹುಟ್ಟಿಸುವಂತಿದೆ.
ಶನಿವಾರ ಮಧ್ಯಾಹ್ನದ ಹೊತ್ತಿಗೆ ಬೆಲ್ಜಿಯಂನಲ್ಲಿ ರಾಕೇಶ್ ಸಿದ್ದರಾಮಯ್ಯ ಅವರು ತೀರಿಕೊಂಡ ಸುದ್ದಿ ಮೊದಲಬಾರಿಗೆ ಚಾನೆಲ್‌ಗಳಲ್ಲಿ ಹೊರಬಿದ್ದಾಗ ವಿಚಿತ್ರ ಪರಿಸ್ಥಿತಿ ಇತ್ತು. ನಾನು ಕಂಡ ಒಂದು ಚಾನೆಲ್‌ನಲ್ಲಿ ಆ್ಯಂಕರ್ ಬೆಳಗ್ಗೆ ಸಂಭವಿಸಿದ್ದ ಯಮನೂರು ಪೊಲೀಸ್ ದೌರ್ಜನ್ಯದ ಬಗ್ಗೆ ‘ರಣಚಂಡಿ ಅವತಾರ’ ಎತ್ತಿಕೂತಿದ್ದರು. ಆ ಹೂಂಕಾರ, ಫೂತ್ಕಾರಗಳೆಲ್ಲ ಭಯ ಹುಟ್ಟಿಸುವಂತಿದ್ದವು. ಬೆಲ್ಜಿಯಂನಲ್ಲಿ ಸಾವಿನ ಸುದ್ದಿ ಹೊರಬಿದ್ದದ್ದೇ ತಡ, ಅದೇ ಮಹಿಳೆ ‘ಬುದ್ಧಾವತಾರ’ ಎತ್ತಿ ಅಕ್ಷರಕ್ಷರಗಳಲ್ಲೂ ದುಃಖವನ್ನೇ ಹಾಸಿ, ಹೊದ್ದು ಮಾತನಾಡತೊಡಗಿದ್ದರು!
ಸತ್ಯವೆಂದರೆ, ಈ ಯಾವುದೇ ಚಾನೆಲ್‌ಗಳ ಕೈಯಲ್ಲಿ ಸಾವಿನ ಸುದ್ದಿ ಬಿಟ್ಟರೆ ಹೆಚ್ಚೇನೂ ಮಾಹಿತಿ ಇದ್ದಂತಿರಲಿಲ್ಲ. ವೃತ್ತಿಪರ ವ್ಯವಸ್ಥೆಯಿದ್ದಲ್ಲಿ, ಎರಡು ದಿನಗಳ ಹಿಂದೆ ಮುಖ್ಯಮಂತ್ರಿಗಳು ತಮ್ಮ ಇಲ್ಲಿನ ವ್ಯಸ್ತ ಚಟುವಟಿಕೆಗಳ ನಡುವೆಯೇ ಹಠಾತ್ ಬೆಲ್ಜಿಯಂಗೆ ತೆರಳಿದಾಗಲೇ ರಾಕೇಶ್ ಸಿದ್ದರಾಮಯ್ಯ ಅವರ ಬಗ್ಗೆ ಕೆಲವು ಮೂಲಭೂತ ಮಾಹಿತಿಗಳನ್ನು ಸಂಗ್ರಹಿಸಿಡಬಹುದಿತ್ತು. ಆ ತಯಾರಿ ಇಲ್ಲದ ಸೊಂಬೇರಿ ಮಾಧ್ಯಮಗಳು ಆರಿಸಿಕೊಂಡದ್ದು ಮಾತ್ರ ಅತ್ಯಂತ ಹೇಯ ದಾರಿಯನ್ನು. ರಾಕೇಶ್ ಸಾವಿನ ಸುದ್ದಿಯ ಶಾಕ್‌ನಿಂದ ಇನ್ನೂ ಚೇತರಿಸಿಕೊಂಡಿರದ ಅವರ ಸ್ನೇಹಿತರು ಮತ್ತು ಬಂಧು-ಬಳಗದವರಿಗೆ ಖಾಸಗಿಯಾಗಿ ದುಃಖಿಸುವುದಕ್ಕೂ ಅವಕಾಶ ಸಿಗದಂತೆ, ಅವರ ಬಾಯಿಗಳಿಗೆ ಮೈಕ್ ಹಿಡಿದ ಮಾಧ್ಯಮಗಳು ತೀರಾ ಅಸಹ್ಯವಾಗಿ ವರ್ತಿಸಿವೆ ಮತ್ತು ಸಂದರ್ಭದ ಔಚಿತ್ಯವನ್ನು ಮರೆತಿವೆ.
ಒಂದು ಚಾನೆಲ್, ಎಲ್ಲೋ ವೆಬ್‌ನಲ್ಲಿ ಸಿಕ್ಕಿದ ಯಾವುದೋ ಯುರೋಪಿಯನ್ ಆಸ್ಪತ್ರೆಯಲ್ಲಿ ಹೃದಯದ ತೊಂದರೆಗೆ ‘ಆ್ಯಂಜಿಯೋಗ್ರಾಮ್’ ನಡೆಯುತ್ತಿರುವ ಕ್ಲಿಪ್ಪಿಂಗನ್ನೂ, ತಲೆಯ ಸಿ.ಟಿ. ಸ್ಕ್ಯಾನ್ ನಡೆಯುತ್ತಿರುವುದನ್ನೂ ತಮ್ಮ ಎಕ್ಸ್‌ಕ್ಲೂಸಿವ್ ಪ್ರಸಾರ ಎಂದು ವಾಟರ್ ಮಾರ್ಕ್ ಸಹಿತ ಪ್ರಸಾರ ಮಾಡುತ್ತಿತ್ತು! ಜೊತೆಗೆ, ರಾಕೇಶ್ ಅವರು ಬಹು ಅಂಗಾಂಗ ವೈಫಲ್ಯದಿಂದ ‘ಬಳಲುತ್ತಿದ್ದರು’ ಎಂಬ ಸುದ್ದಿ ಇನ್ನೊಂದರಲ್ಲಿ!! ರಾಕೇಶ್ ಅವರ ಖಾಸಗಿ ಜೀವನಶೈಲಿಗೂ ಈ ಸಾವಿಗೂ ತಳುಕು ಹಾಕುವ ಅಮಾನುಷ ಪ್ರಯತ್ನವೂ ಚಾನೆಲೊಂದರಲ್ಲಿ ನಡೆಯಿತು - ಒಟ್ಟಿನಲ್ಲಿ ಒಂದು ಸಾವಿನ ಡಿಗ್ನಿಟಿಯನ್ನು ಅಳಿಸಲು ಮತ್ತು, ಆ ಮೂಲಕ ತಮ್ಮ ಸರಕನ್ನು ಮಾರಲು ಚಾನೆಲ್‌ಗಳು ಪ್ರಯತ್ನಿಸಿದ್ದಂತೂ ಸತ್ಯ.
ಇತ್ತ ಸೋಷಿಯಲ್ ಮೀಡಿಯಾದಲ್ಲಂತೂ ಕೆಲವರು ಇನ್ನೂ ಕೆಲವು ಹೆಜ್ಜೆ ಮುಂದೆಹೋಗಿ, ಮಗನ ಸಾವಿನ ಆಘಾತವನ್ನು ಇಂಗಿಸಿಕೊಳ್ಳುತ್ತಿರುವ ತಂದೆಯೊಬ್ಬರನ್ನು ಗೇಲಿ ಮಾಡುವ ಮೂಲಕ ನಮ್ಮ ನಡುವೆಯೇ ಎಂತೆಂತಹ ಹೇಸಿಗೆಗಳಿವೆ ಎಂಬುದು ಜಗಜ್ಜಾಹೀರುಮಾಡಿಬಿಟ್ಟರು.
***
ಈ ಎಲ್ಲ ಅಸಹ್ಯಗಳ ನಡುವೆ ನನಗೆ ಮತ್ತೆ ಮತ್ತೆ ನೆನಪಾಗುತ್ತಿರುವುದು ಮೊನ್ನೆಮೊನ್ನೆ ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿಯ ನಿಧನ ಮತ್ತು ಅಂತ್ಯಸಂಸ್ಕಾರಗಳ ಬಗ್ಗೆ ಬಿಬಿಸಿ ಮಾಡಿದ ನೇರಪ್ರಸಾರ. ಸಾವಿಗೊಂದು ಡಿಗ್ನಿಟಿ ತಂದುಕೊಡುವುದು ಹೇಗೆಂಬ ಪ್ರಶ್ನೆಯಾರಿಗಾದರೂ ಇದ್ದರೆ, ಅದು ಆ ಪ್ರಶ್ನೆಗೆ ಉತ್ತರವಾದೀತು.