ಭ್ರಷ್ಟಾಚಾರ ದೂರುಗಳಲ್ಲಿ ರೈಲ್ವೆಗೆ ಪ್ರಥಮ ಸ್ಥಾನ!
ಹೊಸದಿಲ್ಲಿ, ಆ.3: ಭ್ರಷ್ಟಾಚಾರದ ದೂರುಗಳಿರುವ ಸರಕಾರಿ ಸಂಸ್ಥೆಗಳಲ್ಲಿ ರೈಲ್ವೆ ಅಗ್ರ ಸ್ಥಾನದಲ್ಲಿದೆ. ಅದರ ವಿರುದ್ಧ ಕಳೆದ ಸಾಲಿನಲ್ಲಿ 12 ಸಾವಿರಕ್ಕೂ ಹೆಚ್ಚು ದೂರುಗಳು ಕೇಂದ್ರೀಯ ವಿಚಕ್ಷಣ ಆಯೋಗಕ್ಕೆ(ಸಿವಿಸಿ) ಬಂದಿದ್ದವು.
ರೈಲ್ವೆ ನೌಕರರ ವಿರುದ್ಧ 12,394ರಷ್ಟು ಭ್ರಷ್ಟಾಚಾರದ ದೂರುಗಳು ಬಂದಿದ್ದರೆ, ಬ್ಯಾಂಕ್ ಅಧಿಕಾರಿಗಳ ವಿರುದ್ಧ 5,363 ಹಾಗೂ ದಿಲ್ಲಿ ರಾಷ್ಟ್ರ ರಾಜಧಾನಿ ಪ್ರಾಂತ ಸರಕಾರದ ವಿರುದ್ಧ 5,139 ದೂರುಗಳು ಬಂದಿವೆ ಎಂದು ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಲಾಗಿದ್ದ ಸಿವಿಸಿ ವರದಿ ಹೇಳಿದೆ.
ವಿತ್ತ ಸಚಿವಾಲಯದ ಅಧಿಕಾರಿಗಳ ವಿರುದ್ಧ 4,986, ದೂರ ಸಂಪರ್ಕ ಸಚಿವಾಲಯದ ವಿರುದ್ಧ 3,379 ಹಾಗೂ ನಗರಾಭಿವೃದ್ಧಿ ಸಚಿವಾಲಯದ ಅಧೀನ ಕೆಲಸ ಮಾಡುತ್ತಿರುವ 3,079 ನೌಕರರ ವಿರುದ್ಧ ಭ್ರಷ್ಟಾಚಾರದ ದೂರುಗಳು ಬಂದಿವೆ.
ಇವು ಮುಖ್ಯ ಜಾಗೃತ ಅಧಿಕಾರಿಗಳಿಗೆ ಬಂದಿರುವ ಒಟ್ಟು 56,104 ಭ್ರಷ್ಟಾಚಾರದ ದೂರುಗಳಲ್ಲಿ ಸೇರಿವೆಯೆಂದು ವರದಿ ತಿಳಿಸಿದೆ.
ಪೆಟ್ರೋಲಿಯಂ ಸಚಿವಾಲಯದ 2,741, ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವಾಲಯದ 2,235, ಕೇಂದ್ರೀಯ ನೇರ ತೆರಿಗೆ ಮಂಡಳಿಯ 2,084, ಉಕ್ಕು ಸಚಿವಾಲಯದ 1,601, ಕೇಂದ್ರ ಅಬಕಾರಿ ಹಾಗೂ ಸೀಮಾ ಸುಂಕ ಮಂಡಳಿಯ 1,460, ಮಾನವ ಸಂಪನ್ಮೂಲ ಸಚಿವಾಲಯದ 1,377, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ 1,143, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ 1,018, ಅಂಚೆ ಇಲಾಖೆಯ 738, ವಿದ್ಯುತ್ ಸಚಿವಾಲಯದ 596, ಜವುಳಿ ಸಚಿವಾಲಯದ 527 ಹಾಗೂ ರಕ್ಷಣಾ ಸಚಿವಾಲಯದ 604 ಉದ್ಯೋಗಿಗಳ ವಿರುದ್ಧ ಕಳೆದ ಸಾಲಿನಲ್ಲಿ ಭ್ರಷ್ಟಾಚಾರದ ದೂರುಗಳು ಬಂದಿದ್ದವೆಂದು ಸಿವಿಸಿ ಹೇಳಿವೆ.
ಒಟ್ಟು 38,192 ದೂರುಗಳು ವಿಲೇವಾರಿಯಾಗಿದ್ದು, 17,912 ದೂರುಗಳು ಬಾಕಿಯಿವೆ. ಬಾಕಿಯಿರುವವುಗಳಲ್ಲಿ 8,878 ದೂರುಗಳು ಬಂದು 6 ತಿಂಗಳಿಗೂ ಹೆಚ್ಚು ಕಾಲವಾಗಿದೆಯೆಂದು ವರದಿ ತಿಳಿಸಿದೆ.