ಕಡಬದ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ಎಂದು...?
ರಸ್ತೆಯಲ್ಲೇ ವಾಹನ ನಿಲುಗಡೆ, ವ್ಯಾಪಾರಿಗಳ ಸಂಕಷ್ಟ ಕೇಳೋರಿಲ್ಲ
ಕಡಬ, ಆ.5. ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಕಡಬ ಪೇಟೆಯನ್ನು ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಪಾರ್ಕಿಂಗ್ ಸಮಸ್ಯೆಯು ಇಂದು ನಿನ್ನೆಯದಲ್ಲ. ಕಳೆದ ಹಲವಾರು ವರ್ಷಗಳಿಂದ ಕಡಬ ಪೇಟೆಯಲ್ಲಿ ಪಾರ್ಕಿಂಗ್ ಸಮಸೆಯಿದೆ. ಸುಮಾರು ಮೂರು ವರ್ಷಗಳ ಹಿಂದೆ ಆಗಿನ ಕಡಬ ಗ್ರಾ.ಪಂ. ಅಧ್ಯಕ್ಷರಾಗಿದ್ದ ಹಾಜಿ ಹನೀಫ್ ಕೆ.ಎಂ.ಮುಂದಾಳತ್ವದಲ್ಲಿ ಪೇಟೆಯಲ್ಲಿನ ಅಸಮರ್ಪಕ ಪಾರ್ಕಿಂಗ್ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಮತ್ತು ವರ್ತಕರ ಸಮಲೋಚನಾ ಸಭೆ ನಡೆಸಿದ್ದರು. ಸಭೆಯಲ್ಲಿ ಪೇಟೆಯ ಹೊರಗಡೆ ವಾಹನ ಪಾರ್ಕಿಂಗ್‌ಗೆಂದು ರಸ್ತೆಯ ಇಕ್ಕೆಡೆಗಳಲ್ಲಿ ಸ್ಥಳವನ್ನು ಗುರುತಿಸಲಾಗಿತ್ತು. ಅದರಂತೆ ಮಳೆಗಾಲ ಕಳೆದ ಕೂಡಲೇ ಪಾರ್ಕಿಂಗ್‌ಗೆ ಪೇಟೆಯಿಂದ ಹೊರಗೆ ಗುರುತಿಸಿದ ಜಾಗದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ತೀರ್ಮಾನಿಸಲಾಗಿತ್ತು. ಆದರೆ ಈ ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದು, ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ಸಿಕ್ಕಿಲ್ಲ. ಕಡಬ ಪೇಟೆಯ ಹೃದಯಭಾಗದಲ್ಲೇ ರಸ್ತೆಯ ಎರಡೂ ಬದಿಗಳಲ್ಲಿ ಟೂರಿಸ್ಟ್ ಜೀಪು, ತೂಪಾನ್, ಟೆಂಪೋಗಳನ್ನು ನಿಲ್ಲಿಸಲಾಗುತ್ತಿದ್ದು, ಸರಕಾರಿ ಬಸ್ಸುಗಳನ್ನು ರಸ್ತೆಯಲ್ಲೇ ನಿಲ್ಲಿಸುವುದು ಕಂಡು ಬರುತ್ತಿದೆ. ಬೆಳಗ್ಗೆ ಹಾಗೂ ಸಂಜೆಯ ವೇಳೆ ಕೆಲವೊಂದು ದಿನಗಳಲ್ಲಿ ಪೊಲೀಸರು ಟ್ರಾಫಿಕ್ ನಿಯಂತ್ರಿಸುತ್ತಾರೆ. ಆದರೆ ಉಳಿದ ಇನ್ನುಳಿದ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಸಾಮಾನ್ಯವಾಗಿದೆ. ಪೇಟೆಯಲ್ಲಿ ಕಡಬ ಗ್ರಾಮ ಪಂಚಾಯತ್‌ನ ಅಧೀನಕ್ಕೊಳಪಟ್ಟ ವಾಣಿಜ್ಯ ಸಂಕೀರ್ಣವಿದ್ದು, ಅದರ ಮುಂಭಾಗಲ್ಲೇ ಟೂರಿಸ್ಟ್ ವಾಹನಗಳನ್ನು ಅಡ್ಡಾದಿಡ್ಡಿ ಪಾರ್ಕಿಗ್ ಮಾಡಲಾಗುತ್ತಿದೆ. ಇದರಿಂದ ದುಬಾರಿ ಬಾಡಿಗೆ ಕೊಟ್ಟು ಕಡಬ ಪಂಚಾಯತಿನ ಕಟ್ಟಡದಲ್ಲಿ ವ್ಯಾಪಾರ ನಡೆಸುತ್ತಿದ್ದರೂ ತೊಂದರೆ ಎದುರಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಪಾರ್ಕಿಂಗ್‌ಗೆ ಅವಕಾಶ ನೀಡಬಾರದು ಎಂದು ಎಂದು ಇಲ್ಲಿನ ವ್ಯಾಪಾರಿಗಳು ಪಂಚಾಯತ್‌ಗೆ ಅದೆಷ್ಟೇ ಬಾರಿ ಮನವಿ ಸಲ್ಲಿಸಿದರೂ ಪಂಚಾಯತ್ ಆಡಳಿತ ಸಮಿತಿ ಈ ಬಗ್ಗೆ ಕ್ಯಾರೇ ಅಂದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಪಾರ್ಕಿಂಗ್ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಯವರಿಗೆ ಕಳುಹಿಸಲಾಗಿದೆ. ಅದನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಶ್ರಮಿಸಲಾಗುವುದು.
-ಹಾಜಿ ಹನೀಫ್ ಕೆ.ಎಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರು, ಗ್ರಾಪಂ ಕಡಬ
-------------
ಪಾರ್ಕಿಂಗ್ ಸಮಸ್ಯೆಗಳ ಬಗ್ಗೆ ದೂರುಗಳು ಬರುತ್ತಿದ್ದು, ಶೀಘ್ರದಲ್ಲೇ ಪೊಲೀಸ್ ಇಲಾಖೆ, ವರ್ತಕರ ಸಂಘ, ಕಂದಾಯ ಅಧಿಕಾರಿಗಳು, ಪಂಚಾಯತ್ ಆಡಳಿತ ಸಮಿತಿ ಸೇರಿ ಸಾರ್ವಜನಿಕ ಸಭೆೆ ಕರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಚೆನ್ನಪ್ಪ ಗೌಡ ಕಜೆಮೂಲೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಡಬ
-----------------
ಸಂಬಂಧಿಸಿದ ಇಲಾಖೆಯವರು ನೋ ಪಾರ್ಕಿಂಗ್ ಸೂಚನಾ ಫಲಕವನ್ನು ಹಾಕಿಕೊಟ್ಟಲ್ಲಿ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.
-ಉಮೇಶ್ ಉಪ್ಪಳಿಕೆ, ಆರಕ್ಷಕ ಉಪ ನಿರೀಕ್ಷಕರು, ಕಡಬ ಠಾಣೆ