ದೇಶದ 55 ಸಾವಿರಕ್ಕೂ ಅಧಿಕ ಗ್ರಾಮಗಳಲ್ಲಿ ಮೊಬೈಲ್ ಸಂಪರ್ಕವಿಲ್ಲ
ಕರ್ನಾಟಕ, ಕೇರಳದ ಎಲ್ಲ ಗ್ರಾಮಗಳಲ್ಲಿ ಮೊಬೈಲ್ ಜಾಲ
ಹೊಸದಿಲ್ಲಿ, ಆ.5: ಭಾರತದಲ್ಲಿ ಸುಮಾರು 55,000ಕ್ಕಿಂತ ಅಧಿಕ ಗ್ರಾಮಗಳಲ್ಲಿ ಇಂದಿಗೂ ಮೊಬೈಲ್ ಜಾಲ (ಕವರೇಜ್) ಇಲ್ಲ. ಇಂತಹ ಅತ್ಯಧಿಕ ಸಂಖ್ಯೆಯ ಗ್ರಾಮಗಳು ಒಡಿಶಾ ರಾಜ್ಯದಲ್ಲಿವೆ ಎಂದು ಕೇಂದ್ರ ಸಂಪರ್ಕ ಖಾತೆಯ ರಾಜ್ಯ ಸಚಿವ ಮನೋಜ್ ಸಿನ್ಹಾ ಶುಕ್ರವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
‘‘ದೇಶದಲ್ಲಿ ಸುಮಾರು 55,000ಕ್ಕಿಂತ ಅಧಿಕ ಗ್ರಾಮಗಳಲ್ಲಿ ಮೊಬೈಲ್ ಸಂಪರ್ಕವಿಲ್ಲ ಎಂದು ಅಂದಾಜಿಸಲಾಗಿದೆ.ಹಣದ ಲಭ್ಯತೆಯ ಅನುಸಾರ ಮೊಬೈಲ್ ಸಂಪರ್ಕ ಒಳಪಡದ ಗ್ರಾಮಗಳಿಗೆ ಹಂತಹಂತವಾಗಿ ಒದಗಿಸಲಾಗುವುದು’’ ಎಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ಅವರು ತಿಳಿಸಿದರು.
ನಕ್ಸಲ್ ಪೀಡಿತ ಪ್ರದೇಶ, ಈಶಾನ್ಯ ರಾಜ್ಯಗಳು, ದ್ವೀಪಗಳು ಮತ್ತು ಹಿಮಾಲಯ ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಗಳಿಗೆ ಪ್ರಥಮ ಹಂತದಲ್ಲಿ ಮೊಬೈಲ್ ಸೇವೆಗಳನ್ನು ಒದಗಿಸುವುದು ಸರಕಾರದ ಆದ್ಯತೆಯಾಗಿದೆ ಎಂದು ಸಚಿವರು ತಿಳಿಸಿದರು.
ಮೊಬೈಲ್ ಪ್ರಸಾರ ವ್ಯಾಪ್ತಿ ಹೊಂದಿರದ ಪೈಕಿ 10,398ರಷ್ಟು ಅತ್ಯಧಿಕ ಸಂಖ್ಯೆಯ ಗ್ರಾಮಗಳು ಒಡಿಶಾದಲ್ಲಿವೆ.ಜಾರ್ಖಂಡ್ ನಲ್ಲಿ 5,926, ಮಧ್ಯಪ್ರದೇಶದಲ್ಲಿ 5,926 , ಛತ್ತಿಸ್‌ಗಡದಲ್ಲಿ 4,041 ಹಾಗೂ ಆಂಧ್ರಪ್ರದೇಶದಲ್ಲಿ 3,812. ಆದರೆ ಕರ್ನಾಟಕ ,ಕೇರಳ ಮತ್ತು ಪುದುಚೇರಿಗಳಲ್ಲಿ ಮೊಬೈಲ್ ಸೇವೆಗಳ ಸಂಪರ್ಕವು ಎಲ್ಲ ಗ್ರಾಮಗಳಲ್ಲಿ ಇವೆ ಎಂದು ಸಚಿವರು ಹೇಳಿದ್ದಾರೆ.
2011ರ ಜನಗಣತಿಯ ಪ್ರಕಾರ 5,93,601 ಜನ ವಸತಿ ಗ್ರಾಮಗಳ ಪೈಕಿ 5,81,183 (ಶೇ.97.9) ಗಳಿಗೆ ಸಾರ್ವತ್ರಿಕ ಸೇವೆ ಬಾಧ್ಯತೆಯ ನಿಧಿಯ ಆರ್ಥಿಕ ನೆರವಿನೊಂದಿಗೆ ಸಾರ್ವಜನಿಕ ದೂರವಾಣಿಯನ್ನು ಒದಗಿಸಲಾಗಿದೆ ಎಂದು ಸಚಿವರು ಹೇಳಿದರು.
ಸಾರ್ವತ್ರಿಕ ಸಂಪರ್ಕ ತೆರಿಗೆಯಡಿಯಲ್ಲಿ 76,403.7 ಕೋ.ರೂ. ಸಂಗ್ರಹಿಸಲಾಗಿದೆ. ಅದರಲ್ಲಿ 2016ರ ಜೂನ್ 30ರೊಳಗೆ 31,147.19 ಕೋ.ರೂ. ಸಾರ್ವತ್ರಿಕ ಸೇವೆ ಬಾಧ್ಯತೆಯ ನಿಧಿ (ಯುಎಸ್‌ಒಎಫ್)ಯ ಮೂಲಕ ಹಂಚಿಕೆ ಮತ್ತು ವಿತರಿಸಲಾಗಿದೆ ಎಂದು ಸಚಿವ ಮನೋಜ್ ಸಿನ್ಹಾ ತಿಳಿಸಿದರು.