ಮೊಹೆಂಜೊದಾರೋ - ನಗರ ಲಾಲಸೆಗೆ ಬಲಿಯಾದವರ ಕತೆ
ಗೋವಾರಿಕರ್ ಅವರ ಬಹು ನಿರೀಕ್ಷಿತ ಮೊಹೆಂಜೊದಾರೋ ಚಿತ್ರ ಕೆಲವು ಕಾರಣಗಳಿಂದ ವಿಫಲವಾಗಿದೆ. ಬಾಹುಬಲಿ ಮತ್ತು ಗ್ಲಾಡಿಯೇಟರ್ ಎರಡರ ಕಲಬೆರಕೆಯ ಹಿಂದಿ ರಿಮೇಕ್ ಎಂದೂ ಇದನ್ನು ಕರೆಯಬಹುದು.
"ಬಾಹುಬಲಿ" ಚಂದ ಮಾಮ ಕತೆ. ಮತ್ತು ಅದಕ್ಕೆ ಯಾವುದೇ ಆಶಯ ಇದ್ದಿರಲಿಲ್ಲ. ಮುಖ್ಯವಾಗಿ ಅಲ್ಲಿ ಸಿನಿಮ ಅರ್ಧದಲ್ಲೇ ನಿಂತು ಬಿಡುತ್ತದೆ.
"ಮೊಹೆಂಜೊ ದಾರೋ" ಚಿತ್ರದಲ್ಲಿ ಒಂದು ಆಶಯ ಇದೆ. 2016 BCಯ ಕಾಲದಲ್ಲಿ ಲೋಭ, ಹಣದ ತಳಹದಿಯಲ್ಲಿ ತಲೆಯೆತ್ತಿದ ಮೊಹೆಂಜೊ ದಾರೋ ನಗರ ನಾಗರಿಕತೆ ಹೇಗೆ ತನ್ನ ನಗರ ಲಾಲಸೆಗೇ ಬಲಿಯಾಗುತ್ತದೆ ಎನ್ನುದನ್ನು ಹೇಳುವ ಪ್ರಯತ್ನ ಇದೆ. ಸದ್ಯದ ಭಾರತದ ಸ್ಥಿತಿಗೆ ಚಿತ್ರ ಕನ್ನಡಿ ಹಿಡಿಯುತ್ತದೆ.
ಆದರೆ ಚಿತ್ರದ ಮುಖ್ಯ ಕತೆಯೇ ದುರ್ಬಲವಾಗಿದೆ. ಅದೇ ತಂದೆಯ ಕೊಲೆ, ಬೇರೆಯಾಗುವ ಮಗ, ಮತ್ತೆ ತಂದೆಯ ಕೊಲೆಯ ಸೇಡು ತೀರಿಸಿ ಕಳೆದುಕೊಂದದ್ದನ್ನು (ಮೊಹೆಂಜೊ ದಾರೋವನ್ನು) ತನ್ನದಾಗಿಸುವ ಹಳೆ ಬೋರು ಹೊಡೆಸುವ ಕತೆ. ಸ್ವಾರ್ಥದಿಂದ ಸರ್ವವನ್ನು ನಾಶದೆಡೆಗೆ ಕೊಂಡೊಯ್ದ ಸಿಂದೂ ನಾಗರಿಕತೆ ಮತ್ತೆ ಗಂಗಾ ನದಿಯ ನಾಗರಿಕತೆಯ ವಲಸೆಯಲ್ಲಿ ಚಿತ್ರ ಕೊನೆಯಾಗುತ್ತದೆ. ಇದೆ ಸಂದರ್ಭದಲ್ಲಿ ಸದ್ಯ ಮೋದಿ ಸಾಗುತ್ತಿರುವ ದಾರಿಯನ್ನು ಮೊಹೆಂಜೊ ದಾರೋ ನಾಗರಿಕತೆಗೆ ತಾಳೆ ಹಾಕಿ ನಿರ್ದೇಶಕರು ಪರೋಕ್ಷವಾಗಿ ದೇಶ ಹೇಗೆ ದುರಂತದೆಡೆಗೆ ಸಾಗುತ್ತಿದೆ ಎನ್ನೋದನ್ನು ಚಿತ್ರದಲ್ಲಿ ಹೇಳಿದ್ದಾರೆ.
ಒಂದು ಕೋನದಲ್ಲಿ ಬಾಹುಬಲಿಯನ್ನು -ಮತ್ತೊಂದು ಕೋನದಲ್ಲಿ ಗ್ಲಾಡಿಯೇಟರ್ ನ್ನು ಹೋಲುವ ಮೊಹೆಂಜೊ ದಾರೋ ಚಿತ್ರವನ್ನು ನಿರ್ದೇಶಕ ಗಟ್ಟಿ ಕತೆಯೊಂದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದಿತ್ತು.
ಚಿತ್ರದ ನಾಯಕಿ(ಪೂಜಾ ಹೆಗ್ಡೆ) ಒಂದು ಗೊಂಬೆ ಅಷ್ಟೇ. ಭಾವುಕ ಸನ್ನಿವೇಶವನ್ನು ಕಟ್ಟಿಕೊಡುವಲ್ಲಿ ಸಂಪೂರ್ಣ ಸೋತು ಬಿಟ್ಟಿದ್ದಾರೆ. ಹೃತಿಕ್ ಅವರ ಆಕ್ಷನ್ ಚಿತ್ರದ ಹೆಗ್ಗಳಿಕೆ.
ಮೊಹೆಜೋದಾರೊ ನಗರವನ್ನು ಆ ಕಾಲಘಟ್ಟದ ವೇಷಭೂಷಣವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಗೋವಾರಿಕರ್. ಆದರೂ ಆ ಒಂದು ಕಾರಣಕ್ಕಾಗಿಯೇ ಚಿತ್ರವೊಂದನ್ನು ಎರಡೂವರೆ ಗಂಟೆ ಕಾಲ ನೋಡಬೇಕೆ ? ಎಂಬುದು ಪ್ರಶ್ನೆ ?