ಮನೆ ಮೊದಲ ಶಾಲೆ ತಾಯಿ ಮೊದಲ ಗುರು
ಮನೆಗಲಿಕೆ ಎಂದರೆ ಮನೆ ಎಂಬ ಭೌಗೋಳಿಕ ಜಾಗವೆಂದೇನೂ ಅರ್ಥವಲ್ಲ. ಮನೆಯಲ್ಲಿರುವಷ್ಟು ಮುಕ್ತ ಮತ್ತು ಒತ್ತಡ ರಹಿತ ಜಾಗವಾಗಿರಬೇಕು. ಯಾವುದೇ ಜಾಗದಲ್ಲಿ ಮಕ್ಕಳಿಗೆ ಮುಕ್ತವಾಗಿರಲು ಸಾಧ್ಯವಾಗುತ್ತದೆ ಎಂದರೆ ಅವರು ಹಿತವಾಗಿ, ಮುದವಾಗಿ ಯಾವುದೇ ವಿಷಯವನ್ನು ಗ್ರಹಿಸುತ್ತಾರೆ. ತಮಗೇ ತಿಳಿಯದಂತೆ ಅದನ್ನು ತಮ್ಮದಾಗಿಸಿಕೊಳ್ಳುತ್ತಾರೆ.
ಅನುದ್ದೇಶ ಪುನರಾವರ್ತನೆ
ನಮ್ಮ ಮನೆಯಲ್ಲಿ ರಂಗಭೂಮಿ ಚಟುವಟಿಕೆಗಳನ್ನು ಮಕ್ಕಳು ನೋಡುತ್ತಿರುತ್ತವೆ. ಕಲಾವಿದರು ತಮ್ಮ ಸಂಭಾಷಣೆಗಳನ್ನು ಹೇಳುತ್ತಿರುತ್ತಾರೆ. ಅಲ್ಲಿ ಇಲ್ಲಿ ಓಡಾಡುತ್ತಾ, ಆಟವಾಡುತ್ತಾ ಇರುವ ಮಕ್ಕಳು ಕ್ಲಿಷ್ಟಕರವಾದಂತಹ ನಾಟಕದ ಸಂಭಾಷಣೆಗಳನ್ನು ಕಲಿತುಬಿಟ್ಟಿರುತ್ತಾರೆ. ಏಕೆಂದರೆ ಕಲಾವಿದರಿಗೆ ಕಂಠಪಾಠವಾಗುವುದಕ್ಕೆ ಮತ್ತು ಉಚ್ಚಾರಣೆ, ಜೊತೆಗೆ ಏರಿಳಿತಗಳನ್ನು ಹೇಳಿಕೊಡುವುದಕ್ಕೆ ನಿರ್ದೇಶಕನಾಗಿ ನಾನೂ ಮತ್ತು ಕಲಾವಿದರಾಗಿ ಅವರೂ ಬಹಳಷ್ಟು ಬಾರಿ ಪುನರಾವರ್ತನೆಗಳನ್ನು ಮಾಡುತ್ತಿರುತ್ತೇವೆ. ಈ ಮಾತುಗಳು ಮಕ್ಕಳ ಕಿವಿಗಳ ಮೇಲೂ ಅನಾಯಾಸವಾಗಿ ಪುನರಾವರ್ತಿತವಾಗುತ್ತಿರುವವು. ಅವರಿಗೆ ಇದನ್ನು ಕಲಿಯಬೇಕೆಂಬುದೇ ಇರುವುದಿಲ್ಲ. ಆದರೆ ಅವರಿಗೇ ತಿಳಿಯದಂತೆ ಅದು ಅವರಿಗೆ ಪಾಠವಾಗಿಬಿಟ್ಟಿರುತ್ತದೆ. ಅವರ ಪಾಡಿಗೆ ಅವರು ಆಟವಾಡಿಕೊಳ್ಳುತ್ತಾ ಹೇಳಿಕೊಳ್ಳುವಾಗ, ಅದರಲ್ಲಿರುವ ಸ್ಪಷ್ಟತೆ, ಪೂರ್ಣತೆಯ ಬಗ್ಗೆ ನಮಗೇ ಆಶ್ಚರ್ಯವಾಗುತ್ತದೆ. ಇನ್ನು ಅತೀ ಸಣ್ಣಪುಟ್ಟ ತಿದ್ದುಪಡಿಗಳೊಡನೆ ಅವರೇ ಸಂಪೂರ್ಣ ವೇದಿಕೆಗೆ ಸಿದ್ಧವಾಗಿರುವಂತೆ ತೋರುತ್ತಾರೆ. ಇದನ್ನು ಸಾಕ್ಷೀಕರಿಸುವ ಹೊರಗಿನವರು, ‘‘ಯಾರ ಮಕ್ಕಳು, ಹೇಳಿ ಕೇಳಿ ರಂಗ ಕಲಾವಿದರ ಮಕ್ಕಳು. ರಕ್ತದಲ್ಲೇ ಬಂದುಬಿಟ್ಟಿರುತ್ತೆ’’ ಎಂದು ಹೇಳುತ್ತಾರೆ. ಯಾವ ಪ್ರತಿಬೆಯೂ, ಕಲೆಗಾರಿಕೆಯೂ, ವಿದ್ಯೆಯೂ ರಕ್ತದಲ್ಲಿ ಬಂದಿರುವುದಿಲ್ಲ. ಯಾವುದಾದರೂ ಅನುವಂಶೀಯ ರೋಗವಿದ್ದರೆ ಬರುತ್ತದೆಯೇ ಹೊರತು ಯಾವ ಸಾಧನೆಯೂ ಅನುವಂಶೀಯವಾಗಿ ದಕ್ಕುವುದಿಲ್ಲ. ಮಕ್ಕಳು ಪುನರಾವರ್ತಿತವಾಗುವಂತಹ ವಿಷಯವನ್ನು ತಮ್ಮ ನಿಕಟ ಮತ್ತು ಆಪ್ತ ಪರಿಸರದಲ್ಲಿ ನೋಡುತ್ತಲೇ ಇರುತ್ತಾರೆ. ಹಾಗೇ ಅವರು ವಿಶ್ರಾಂತರಾಗಿ, ತಮ್ಮ ಸಮಯಕ್ಕೆ, ತಮ್ಮ ಇಚ್ಛೆಗೆ ತಿಳಿಯುವಷ್ಟು ಮುಕ್ತಾವಕಾಶ ಇರುವುದರಿಂದ ತಾವು ಕಲಿಯುತ್ತಿದ್ದೇವೆಂಬ ಅರಿವೇ ಇಲ್ಲದಂತೆ ಕಲಿತುಬಿಟ್ಟಿರುತ್ತಾರೆ. ಅವರಿಗೆ ಮನೆಯಲ್ಲಿ ಕಣ್ಬಿಟ್ಟಾಗೆಲ್ಲಾ ಅದೇ ಬಗೆಯ ಪರಿಸರವನ್ನು ಗಮನಿಸುತ್ತಿರುವುದರಿಂದ ಅದನ್ನೇ ಗ್ರಹಿಸಿರುತ್ತಾರೆ. ಅವರಲ್ಲಿ ಪ್ರಾವೀಣ್ಯತೆ ಎಂಬುದು ಆಟದ್ದಾಗಿರುತ್ತದೆ. ಸಾಧನೆ ಎಂಬುದೇನೂ ಆಗಿರುವುದಿಲ್ಲ.
ಅನಾಯಾಸದ ಕಲಿಕೆ ಮನರಂಜನೆ
ಕಲೆ, ಸಂಗೀತ, ನೃತ್ಯ, ನಾಟಕಗಳ ವಿಷಯಗಳಲ್ಲಿ ಮಕ್ಕಳು ಪುನರಾವರ್ತಿತವಾಗಿ ವೀಕ್ಷಿಸುವುದು, ಅನಾಯಾಸವಾಗಿ ಅನುಕರಿಸುವುದು, ಒತ್ತಡವಿಲ್ಲದೇ ಗ್ರಹಿಸುವುದು ಆಗಿ, ತಾವೂ ಕಲಾವಿದರಾಗಿ ಪ್ರಾವಿಣ್ಯತೆಯನ್ನು ಪಡೆಯುತ್ತಾ ಹೋಗುತ್ತಾರೆ. ಅದೇ ರೀತಿಯ ಮನೋರಂಜಿತವಾಗುವಂತಹ ಮತ್ತು ಮುಕ್ತವಾಗಿರುವಂತಹ ಪರಿಸರವನ್ನು ಇತರ ಕಲಿಕೆಗಳಲ್ಲೂ ಉಂಟು ಮಾಡುವುದೇ ಮನೆಗಲಿಕೆ. ಅದನ್ನು ಶಾಲೆಯೇ ಒದಗಿಸಬಹುದು. ಆದರೆ ಶಿಸ್ತು, ಕ್ರಮ, ರೀತಿ ನೀತಿ ಅಂತ ವಾತಾವರಣ ಉಸಿರುಗಟ್ಟಿಸುವಂತಾಗಿಬಿಟ್ಟಾಗ ಶಾಲೆಯ ಕಲಿಕೆ ಬಲವಂತದ ಹೇರಿಕೆಯಾಗುತ್ತಾ, ಯಾಂತ್ರಿಕ ಕಲಿಕೆಯಾಗುತ್ತದೆ. ಶಾಲೆಗಳಲ್ಲಿ ಹಾಗೆ ಮಾಡುತ್ತಿದ್ದಾರೆಂದೇ ಮಕ್ಕಳು ಶಿಕ್ಷಣವನ್ನು ಪ್ರೀತಿಯಿಂದ ಮತ್ತು ಆಪ್ತವಾಗಿ ಪಡೆಯಲೆಂದು ಶಾಲೆಯನ್ನೇ ಬಿಡಿಸಿ ಮನೆಯಲ್ಲೇ ಕಲಿಕೆಗೆ ವ್ಯವಸ್ಥೆ ಮಾಡುವುದು. ಇನ್ನು ಮನೆಯೇ ಶಾಲೆಯಂತಾಗಿರಬಾರದು ಎಂಬುದಂತೂ ಅರ್ಥವಾಯಿತು. ನಾವು ಏನು ಶಿಕ್ಷಣ ಕೊಡಬೇಕೆಂದು ಕೊಂಡಿರುತ್ತೇವೋ ಅದನ್ನು ಗಂಭೀರ ಗುಮ್ಮನ ರೀತಿಯಲ್ಲಿ ಅವರ ಮುಂದಿಡಬಾರದು. ಮಕ್ಕಳಿಗೆ ದಾಟಿಸಬೇಕಾದ ವಿಷಯ ಏನು ಎಂಬುದನ್ನು ನಾವು ಮನದಟ್ಟು ಮಾಡಿಕೊಂಡು ಸಂದರ್ಭವೊದಗಿದಾಗೆಲ್ಲಾ ಅದರ ಪರಿಚಯ ಮತ್ತು ಪಾಠ ಅಶಾಸ್ತ್ರೀಯವಾಗಿ ಪುನರಾವರ್ತಿತವಾಗುತ್ತಿರಬೇಕು. ಸ್ನಾನ ಮಾಡುವಾಗ ಅಥವಾ ಅಡುಗೆ ಮನೆಯಲ್ಲಿ ವಿವಿಧ ಪಾತ್ರೆಗಳಲ್ಲಿ ನೀರಿಡುವಾಗ ವಿಜ್ಞಾನದಲ್ಲಿರುವ ನೀರಿನ ಗುಣದ ಬಗ್ಗೆ ಪರಿಚಯವಾಗಬಹುದು. ಮಲಗಿಕೊಂಡು ನಿದ್ರೆಯಿನ್ನೂ ಬಾರದಿರುವಾಗ ಕಥೆ ಹೇಳುವಂತೆ ಭಾಷೆಯ ಪಾಠವಾಗಬಹುದು. ಅಮ್ಮ ತರಕಾರಿ ಕತ್ತರಿಸುತ್ತಿರುವಾಗ ಮಗು ಕೇಳುವ ಪ್ರಶ್ನೆಗೆ ಉತ್ತರಿಸಬಹುದು. ಅಂಗಡಿಯಿಂದ ಮನೆಗೆ ತಂದಿರುವ ಸಾಮಾನುಗಳನ್ನು ಪರಿಶೀಲಿಸುವಾಗ ಮಗುವಿಗೆ ಲೆಕ್ಕದ ಪುನರಾವರ್ತನೆ ಆಗಬಹುದು. ಟಿವಿಯಲ್ಲಿ ನ್ಯಾಷನಲ್ ಜಿಯಾಗ್ರಫಿ ನೋಡುತ್ತಾ ಯಾವುದೋ ಜೀವಜಗತ್ತಿನ ಬಗ್ಗೆ ಅನಾವರಣವಾಗಬಹುದು. ಹೀಗೆ ಹಲವು ರೀತಿಗಳಲ್ಲಿ ಮಗುವು ಕಲಿಕೆಗೆ ಸುಲಲಿತವಾದಂತಹ, ಒತ್ತಡ ರಹಿತವಾದಂತಹ ಅವಕಾಶವನ್ನು ಪಡೆಯುತ್ತದೆ. ನಂತರ ಅದಕ್ಕೆ ಒಂದಿಷ್ಟು ಒಪ್ಪ ಓರಣ ಮಾಡಿದರೆ ಶಾಸ್ತ್ರೀಯ ವಿದ್ಯಾಭ್ಯಾಸವಾಯಿತು. ಮಗುವಿನಲ್ಲಿ ಸರಳವಾದ ಗ್ರಹಿಕೆಯ ಅನುಭವ ಉಂಟಾದಷ್ಟೂ ವಿದ್ಯಾಭ್ಯಾಸ ಸುಲಭ.
ಬಡಿಬಡಿಯುತ್ತಾ ನುಡಿಸುವ ಪರಿ
ಸಣ್ಣ ಮಕ್ಕಳಿಗೆ ಯಾವುದೇ ವಿದ್ಯೆಯನ್ನಾದರೂ ಅನೌಪಚಾರಿಕವಾಗಿ ಕಲಿಸಿಕೊಡಿ. ಕಲಿಯುತ್ತಿದ್ದೇವೆ ಎಂಬ ಅರಿವಿಲ್ಲದೇ ಕಲಿತುಬಿಡುತ್ತಾರೆ. ಅವರಿಗೆ ಹತ್ತು ಹನ್ನೆರಡು ವರ್ಷಗಳಾದ ಮೇಲೆ ಕಲಿಯುತ್ತಿರುವ ವಿದ್ಯೆಯನ್ನು ಅಥವಾ ರೂಢಿಸಿಕೊಂಡಿರುವ ಕಲೆಯನ್ನು ಶಾಸ್ತ್ರೀಯ ಚೌಕಟ್ಟಿಗೆ ವಿಸ್ತರಿಸುತ್ತಾ ಹೋದರೆ ಪ್ರೌಢಿಮೆಗೆ ಬರುತ್ತಾರೆ. ರೂಪಕ್ ಆರು ವರ್ಷದ ಬಾಲಕ. ತಂದೆ ಹೆಸರಾಂತ ತಬಲಾ ವಾದಕರು. ಹಿಂದೂಸ್ಥ್ತಾನಿ ಸಂಗೀತ ಕ್ಷೇತ್ರದಲ್ಲಿ ಶಾಸ್ತ್ರೀಯ ಸ್ಥಾನಮಾನ ಹೊಂದಿರುವವರು. ಅಂತೆಯೇ ಸುಗಮ ಸಂಗೀತ, ಭಕ್ತಿ ಸಂಗೀತಗಳಲ್ಲಿ ಸಂಗೀತ ಸಂಯೋಜಕರಾಗಿಯೂ ಕೂಡ ತಮ್ಮ ಛಾಪು ಮೂಡಿಸಿರುವವರು. ಇವರು ತಮ್ಮ ಶಿಷ್ಯರಿಗೆ ಶಾಸ್ತ್ರೀಯವಾಗಿ ತಬಲಾವಾದನ ಹೇಳಿಕೊಡುತ್ತಿದ್ದರೆ ಪಕ್ಕದಲ್ಲಿ ಸಣ್ಣ ಬಾಲಕ ರೂಪಕ್ ಕುಳಿತುಕೊಳ್ಳುತ್ತಿದ್ದನು. ತಗೊ ಬಡೀ ಅಂತ ತಬಲಾವನ್ನು ಆತನ ಮುಂದಿಡುತ್ತಿದ್ದರು. ಬೇರೆಯವರಿಗೆ ಹೇಳಿಕೊಡುತ್ತಿದ್ದರೆ ಅವನು ಅವರನ್ನು ನೋಡಿಕೊಂಡಿದ್ದು ಅವರಂತೆ ತಬಲಾ ಬಡಿಯುತ್ತಿದ್ದನು. ಶಾಸ್ತ್ರೀಯವಾಗಿ ತಬಲಾ ನುಡಿಸುವುದಲ್ಲಾ, ಸುಮ್ಮನೆ ಬಡಿಯುವುದು. ಅದು ಈಗ ರೂಪಾಂತರ ಹೊಂದಿರುವುದು ಹೇಗೆಂದರೆ, ತಂದೆ ರೆಕಾರ್ಡಿಂಗ್‌ಗೆ ಹೋದರೆ ತಾಳ, ಗೆಜ್ಜೆಯೇ ಮೊದಲಾದ ಇತರ ಲಘು ವಾದ್ಯಗಳನ್ನು ತಂದೆಯ ನಿರ್ದೇಶನದಲ್ಲಿ ತಪ್ಪಿಲ್ಲದಂತೆ ನುರಿತ ಕಲಾವಿದರಂತೆ ಹಾಕಬಲ್ಲ. ಅಲ್ಲದೇ ನೇರ ಸಂಗೀತ ಕಾರ್ಯಕ್ರಮಗಳಲ್ಲಿ ಗಂಟೆಗಟ್ಟಲೆ ತಬಲಾ ನುಡಿಸಬಲ್ಲ. ನೋಡುವವರು ಅವನ ಪ್ರಾವೀಣ್ಯತೆಯನ್ನು ಶ್ಲಾಘಿಸುವುದನ್ನು ನೋಡಿದ್ದೇನೆ ಇಷ್ಟು ಸಣ್ಣ ವಯಸ್ಸಿಗೇ ಎಂತಹ ಕಠಿಣ ಸಾಧನೆ ಮಾಡಿದ್ದಾನೆ ಎಂದು. ಆದರೆ ವಿಷಯವೇನೆಂದರೆ ತಂದೆಯು ಶಾಸ್ತ್ರೀಯ ಶಿಕ್ಷಣವನ್ನು ನೀಡಿಯೇ ಇಲ್ಲ. ಅವನು ವಿದ್ಯಾರ್ಥಿಗಳು ಕಲಿತುಕೊಳ್ಳುವಂತೆ ಕಲಿತೇ ಇಲ್ಲ. ಎಲ್ಲರೂ ನುಡಿಸುವುದನ್ನು ನೋಡಿ ಬಡ ಬಡ ಬಡಿಯುತ್ತಿದ್ದ ರೀತಿಯೇ ಒಂದು ಹದಕ್ಕೆ ಬಂದಿರುವುದು. ಅದನ್ನೇ ನಂತರ ಕೇರ್ವಾ, ಏಕ್ ತಾಳ್, ರೂಪಕ್ ತಾಳ್ ಎಂದು ಪರಿಚಯ ಮಾಡಿಕೊಟ್ಟಿದ್ದಾರೆ. ಈಗ ಇದು ಈ ತಾಳ, ಅದು ಆ ತಾಳ ಎಂದು ತಿಳಿದಿದೆ. ತಬಲಾ ಪರೀಕ್ಷೆಗೆ ಕುಳಿತು ಪಾಸ್ ಆಗುವಷ್ಟರ ಮಟ್ಟಿಗಿದ್ದಾನೆ. ಆದರೆ ಅವನು ಪಡೆಯುವ ಸರ್ಟಿಫಿಕೆಟ್ ಅವನ ವೇದಿಕೆ ಕಾರ್ಯಕ್ರಮಕ್ಕೆ ಯಾವ ರೀತಿಯೂ ಅನುಕೂಲಕರವೇನಲ್ಲ. ಅವನು ನುಡಿಸುವ ಪರಿ, ನುಡಿಸುವಿಕೆಯಲ್ಲಿರುವ ನಿರಾಯಾಸ ಮತ್ತು ಆತ್ಮವಿಶ್ವಾಸದ ಜೊತೆಗೆ ಯಾವುದಕ್ಕೆ ನುಡಿಸಬೇಕೋ ಅದರೊಟ್ಟಿಗೆ ಹೊಂದಿಕೊಳ್ಳುವ ಸಲಿಲತೆ ಮುಖ್ಯವಾಗುತ್ತದೆ. ಅದೆಯೇ ಅವರನ್ನು ನುರಿತ ಕಲಾವಿದರನ್ನಾಗಿ ಮಾಡುವುದೂ ಕೂಡ.
ಆನಂದವೇ ಕಲಿಕೆಯ ಸಾಧ್ಯತೆ
ನಾನು ಸಣ್ಣ ಹುಡುಗನಿದ್ದಾಗ ಪ್ರತಿದಿನ ಸಂಜೆ ಮನೆಯ ಪಕ್ಕದ ಮಠವೊಂದರಲ್ಲಿ ಭಜನೆಯನ್ನು ನೋಡುತ್ತಿದ್ದೆ. ನನ್ನ ತಾಯಿ, ಅಜ್ಜಿ, ಚಿಕ್ಕಮ್ಮ ಎಲ್ಲರೂ ಭಾಗಿಯಾಗು ತ್ತಿದ್ದುದರಿಂದ ನಾನೂ ಹೋಗುತ್ತಿದ್ದೆ. ಅಲ್ಲಿ ಬಳಸುತ್ತಿದ್ದ ಹಾರ್ಮೋನಿಯಂ, ತಬಲಾ, ತಾಳ, ಖಂಜರ ಇವುಗಳೆಲ್ಲಾ ಆಕರ್ಷಕವಾಗಿ ಸೆಳೆಯುತ್ತಿತ್ತು. ಮಕ್ಕಳೇ ಏಕೆ? ದೊಡ್ಡವರಿಗೂ ತಮಗೆ ತಿಳಿಯದ ಯಾವುದೋ ಒಂದು ತಂತಿವಾದ್ಯವನ್ನೋ, ತಾಳವಾದ್ಯವನ್ನೋ ಕಂಡಾಗ ತಂತಿಯನ್ನು ಮೀಟುತ್ತಾ, ವಾದ್ಯವನ್ನು ಬಡಿಯುತ್ತಾ ಅದರಿಂದ ಹೊರಡುವ, ತಾವು ಹೊರಡಿಸುತ್ತಿರುವ ನಾದವನ್ನು ತಾವೇ ಕೇಳುತ್ತಾ ಆನಂದಿಸುತ್ತಾರೆ. ಅದೊಂದು ಭಾವೋದ್ವೇಗದ ಆನಂದ. ಬರಿದೇ ಚಿತ್ರಗಳಲ್ಲೋ, ವೇದಿಕೆಯ ಮೇಲುಗಡೆಗಳಲ್ಲೋ ಕಾಣುವ ವಾದ್ಯಗಳು ತಮ್ಮ ಕೈಗೆಟುಕಿದೆ ಎಂದರೇನೇ ಅದೊಂದು ಖುಷಿ. ಸುಮ್ಮನೆ ಎಂತದ್ದೋ ಸದ್ದು ಹೊರಡಿಸಿ ಸಂತೋಷ ಕಾಣುವುದು ನಿಜಕ್ಕೂ ಒಂದು ಅಪೂರ್ವವಾದ ಅನುಭವ. ಸಣ್ಣ ಬಾಲಕನಾಗಿದ್ದ ನಾನು ಭಜನೆ ಆರಂಭ ವಾಗುವ ಮುನ್ನವೇ ಹೋಗಿ ಅಂತಹ ಆನಂದ ಪಡೆಯಲು ಆ ವಾದ್ಯಗಳ ಮೇಲೆ ಕೈಯಾಡಿಸುತ್ತಿದ್ದೆ. ಆ ಮಠದ ಸ್ವಾಮೀಜಿಯು ನನ್ನಂತಹ ಮಕ್ಕಳಿಗೆ ಮನಸ್ಸಿಗೆ ಬಂದಂತೆ ಬಡಿದುಕೊಳ್ಳಲು ಬಿಡುತ್ತಿದ್ದರು. ಒಡೆದು ಹಾಕದಿರುವಂತೆ ನೋಡಿಕೊಳ್ಳುತ್ತಿದ್ದರಷ್ಟೇ. ನಮ್ಮ ಅನುಭವಕ್ಕೆ ಆ ಶಬ್ಧವೋ ಅತ್ಯಾನಂದಕರವಾದದ್ದು. ಇತರರಿಗೆ ಕರ್ಣ ಕಠೋರವಾದದ್ದು. ನಂತರ ನಿಧಾನವಾಗಿ ಭಜನೆ ನಡೆಯುವಾಗಲೂ ಸ್ವಾಮೀಜಿ ನಮಗೆ ತಾಳ ವಾದ್ಯಗಳನ್ನು ಕೈಗಿಡುತ್ತಿದ್ದರು. ಅಲ್ಲೂ ಅಲ್ಲಿ ಇಲ್ಲಿ ತಪ್ಪಾದರೆ ಏನೂ ತಲೆ ಕೆಡಿಸಿಕೊಳ್ಳದೇ ಕೈ ಹಿಡಿದು ಕೊಂಚ ಕ್ರಮಕ್ಕೆ ತರುತ್ತಿದ್ದರು. ಮುಂದೆ ನಾಲ್ಕೈದು ವರ್ಷದಲ್ಲಿ ಆಟವಾಡುತ್ತಿದ್ದ ಹುಡುಗರಾಗಿದ್ದ ನಾವು ಭಜನಾ ಮಂಡಳಿಯ ಪ್ರಮುಖ ಭಾಗವೇ ಆಗಿಹೋಗಿದ್ದೆವು. ನಾಲ್ಕನೆಯ ಅಥವಾ ಐದನೆಯ ತರಗತಿಯ ಹೊತ್ತಿಗೆ ರಾಗದಲ್ಲಿ ಕೇಳಿರದ ಹೊಸ ಹೊಸ ಭಜನೆ ಕೀರ್ತನೆಗಳಿಗೆ ನಾನೇ ರಾಗ ಸಂಯೋಜನೆ ಮಾಡಿರುತ್ತಿದ್ದೆ. ಅದನ್ನು ಸ್ವಾಮೀಜಿಯು ತಾವೂ ಕಲಿತು, ಭಜನಾ ಮಂಡಳಿಯ ಇತರರಿಗೂ ಹೇಳಿಕೊಡುತ್ತಿದ್ದರು. ‘‘ಇದು ಶುದ್ಧ ಧನ್ಯಾಸಿ ರಾಗದಲ್ಲಿದೆ’’ ಎಂದು ಅವರು ನಾನೇ ರಾಗ ಸಂಯೋಜಿಸಿರುವ ಭಜನೆಯ ಬಗ್ಗೆ ಹೇಳಿದರೆ ಆಶ್ಚರ್ಯವಾಗುತ್ತಿತ್ತು. ಯಾವ ಶುದ್ಧ ಅಶುದ್ಧಗಳ ಬಗ್ಗೆಯೇ ಅರಿವಿಲ್ಲದಂತೆ ಹಲವಾರು ಶಾಸ್ತ್ರೀಯ ರಾಗಗಳನ್ನು ನಾನು ಗ್ರಹಿಸಿದ್ದು, ಆ ಓಘದಲ್ಲಿಯೇ ಸಂಯೋಜಿಸುತ್ತಿದ್ದೆ ಎಂಬುದು ಧನ್ಯತಾಭಾವ ಮೂಡಿಸುತ್ತಿತ್ತು. ನಂತರ ಬೆಳೆಬೆಳೆಯುತ್ತಾ ಶಾಸ್ತ್ರೀಯ ಸಂಗೀತದ ಪರಿಚಯವಾದ ಮೇಲೆ ಯಾವ ರಾಗ ಯಾವ ತಾಳ ಎಂದು ತಿಳಿಯುತ್ತಿತ್ತು. ಅದಕ್ಕೆ ಮುಂಚೆ ಅವುಗಳ ಬಗ್ಗೆ ಏನೂ ತಿಳಿಯದಿದ್ದರೂ ಅವು ಶಾಸ್ತ್ರೀಯವಾದ ಮತ್ತು ಶುದ್ಧವಾದ ರಾಗಗಳಲ್ಲೇ ಪೂರ್ಣಪ್ರಮಾಣದಲ್ಲಿ ಸಂಯೋಜಿತವಾಗಿರುತ್ತಿದ್ದವು. ಇದೇ ಹೋಂ ಸ್ಕೂಲಿಂಗ್‌ನ ಮಹತ್ವ ಮತ್ತು ಶಕ್ತಿ. ಮನೆಗಲಿಕೆ ಎಂದರೆ ಮನೆ ಎಂಬ ಭೌಗೋಳಿಕ ಜಾಗವೆಂದೇನೂ ಅರ್ಥವಲ್ಲ. ಮನೆಯಲ್ಲಿರುವಷ್ಟು ಮುಕ್ತ ಮತ್ತು ಒತ್ತಡ ರಹಿತ ಜಾಗವಾಗಿರಬೇಕು. ಯಾವುದೇ ಜಾಗದಲ್ಲಿ ಮಕ್ಕಳಿಗೆ ಮುಕ್ತವಾಗಿರಲು ಸಾಧ್ಯವಾಗುತ್ತದೆ ಎಂದರೆ ಅವರು ಹಿತವಾಗಿ, ಮುದವಾಗಿ ಯಾವುದೇ ವಿಷಯವನ್ನು ಗ್ರಹಿಸುತ್ತಾರೆ. ತಮಗೇ ತಿಳಿಯದಂತೆ ಅದನ್ನು ತಮ್ಮದಾಗಿಸಿಕೊಳ್ಳುತ್ತಾರೆ.
ಏಕತಾನತೆಯ ಮೀರುವ ಪುನರಾವರ್ತನೆ
ಸಂಗೀತ ನಿರ್ದೇಶಕ ಹಂಸಲೇಖಾರವರು ದೇಸಿ ಶಾಲೆಯನ್ನು ತೆರೆದರು. ಅದರಲ್ಲಿ ಅತ್ಯುತ್ತಮ ಅಥವಾ ಮುಂದುವರಿದ ಶಾಲೆಗಳಲ್ಲಿ ದೊರೆಯುವ ಶಿಕ್ಷಣದಿಂದ ವಂಚಿತರಾಗಿರುವಂತಹ ತಳಸ್ತರದ (ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ) ಮಕ್ಕಳನ್ನು ಹುಡುಕಿಸಿ ಕರೆತಂದು ವಿದ್ಯಾಭ್ಯಾಸವೊದಗಿಸುವ ಸಾಹಸ ಮಾಡುತ್ತಿದ್ದರು. ಆ ಮಕ್ಕಳ ಮನೆಯವರು ಸಾಮಾನ್ಯವಾಗಿ ಸುಶಿಕ್ಷಿತರೇನಾಗಿರುತ್ತಿರಲಿಲ್ಲ. ಆ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸಕ್ಕೆ ಪೂರಕವಾಗಿರುವಂತಹ ವಾತಾವರಣವೇನೂ ಇರುತ್ತಿರಲಿಲ್ಲ. ಅವರಿಗೆ ಕಲಿಕೆಯನ್ನು ಸುಲಭ ಮಾಡಲು ಹಂಸಲೇಖಾ ನೇತೃತ್ವದ ನಮ್ಮದೊಂದು ಪುಟ್ಟ ತಂಡ ಕಲಿಯಲು ಇರುವಂತಹ ಪಠ್ಯ ಮತ್ತು ಇತರೇ ವಿಷಯಗಳನ್ನು ಸಂಗೀತ, ನೃತ್ಯ ಮತ್ತು ನಾಟಕಗಳಾಗಿ ರೂಪಾಂತರಿಸುತ್ತಿದ್ದೆವು. ಗುಣಾಕಾರ ಮಗ್ಗಿಯು ಸಂಗೀತದಲ್ಲಿ ತಾಳ ಮೇಳದೊಂದಿಗೆ ಕೂಡಿದ್ದು, ಹಾಡುತ್ತಾ ಕುಣಿಯುತ್ತಿದ್ದರು. ಹಾಡುಗಳಲ್ಲಿ ಪುನರಾವರ್ತಿತವಾಗುವ ಶಕ್ತಿ ಇರುವುದರಿಂದ ವಿಷಯವೂ ಪುನರಾವರ್ತಿತವಾಗುತ್ತಿತ್ತು. ಮಕ್ಕಳು ಕಲಿಯುತ್ತಿದ್ದರು. ಮಕ್ಕಳಿಗೆ ಹೇಳಿಕೊಟ್ಟಾದ ಮೇಲೆ ಉಪಾಧ್ಯಾಯರಾಗಿದ್ದ ನಾವುಗಳೂ ಕೂಡ ಅದನ್ನೇ ಗುಂಗುನಿಸುತ್ತಿದ್ದೆವು. ವಿಜ್ಞಾನದ ಪಾಠಗಳೂ ಕೂಡ ನಾಟಕಗಳಾಗುತ್ತಿದ್ದವು. ಮನಕ್ಕೆ ರಂಜಿತವಾ ಗುವಂತಹ ವಿಧಾನದಲ್ಲಿ ಕಲಿಯುತ್ತಿದ್ದ ಮಕ್ಕಳು ತಮ್ಮ ಕಲಿಕೆಯನ್ನು ಆಪ್ತಗೊಳಿಸಿಕೊಳ್ಳುತ್ತಿದ್ದರು. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬುವ ಮಾತು ನಿಜವೇ. ಕಲಿಕೆ ಅಲ್ಲಿಂದ ಪ್ರಾರಂಭವಾಗುತ್ತದೆ ಎಂದು ಗಾದೆ ಧ್ವನಿಸುತ್ತದೆ. ಆದರೆ ಮಗುವು ಶಾಲೆಗೆ ಹೋಗಲು ಶುರು ಮಾಡಿದ ಮೇಲೆ ಮನೆಯು ಶಾಲೆಯಲ್ಲಿ ಕಲಿಸಿಕೊಟ್ಟಿರುವುದರ ನಕಲನ್ನು ಉತ್ಪಾದಿಸುವಂತಹ ಮನೆಪಾಠವಾಗಿಬಿಡುವುದು ಬೇಸರದ ಸಂಗತಿ. ಮಕ್ಕಳಿಗೆ ಶಾಲೆಯಲ್ಲಿ ಕಲಿತಿರುವಂತಹ ವಿಷಯವನ್ನೇ ಮತ್ತೆ ಮನೆಯಲ್ಲಿ ಕೂರಿಸಿಕೊಂಡು ಪದೇ ಪದೇ ಹೇಳಿಸುವುದರಿಂದ ಏಕತಾನತೆ ಉಂಟಾಗುತ್ತದೆ. ಸಹಜವಾಗಿ ಏಕತಾನತೆಯಿಂದ ಬೇಸರವಾಗುತ್ತದೆ. ಏಕತಾನತೆಗೂ ಪುನರಾವರ್ತನೆಗೂ ವ್ಯತ್ಯಾಸವಿದೆ.
ಏಕತಾನತೆಯು ಅನಿವಾರ್ಯದ ಹೇರಿಕೆಯ ಅನುಭವವನ್ನು ನೀಡಿದರೆ ಹಾಡುಗಳಂತಹ ಪ್ರಭಾವಗಳಿಂದ ತಾವಾಗಿಯೇ ವಿಷಯಗಳನ್ನು ಪುನರಾವರ್ತನೆ ಮಾಡುತ್ತಾರೆ. ಇದು ಸಂಗೀತದ ಶಕ್ತಿ. ಹಾಡನ್ನು ಬಳಸುವ ಯುಕ್ತಿ. ವಿಷಯ ಯಾವುದಾದರೇನು ಹಾಡಿನ ಮೂಲಕ ಬರುವುದು ಪುನರಾವರ್ತಿತವಾಗುತ್ತದೆ. ಇದು ಪ್ರಾರಂಭಕ್ಕೆ ಯಾಂತ್ರಿಕ ಕಲಿಕೆಯೇ ಆಗಿರುತ್ತದೆ. ಆದರೆ ಮಕ್ಕಳು ತಿಳಿಯುವಷ್ಟು ಪ್ರಬುದ್ಧರಾದಾಗ ಅರಿತುಕೊಳ್ಳಲು, ಅರಗಿಸಿಕೊಳ್ಳಲು ಅವರ ಸ್ಮತಿಯಲ್ಲಿ ಸರಕಿರುತ್ತದೆ. ಅದೂ ಕೂಡ ಶಿಕ್ಷಣದ ಬಹು ಮುಖ್ಯವಾದ ಅಂಶ. ಸಂಪೂರ್ಣವಾಗಿ ಶಾಲೆಯನ್ನು ಬಿಡಿಸಿ ಮನೆಯಲ್ಲೇ ಹೇಳಿಕೊಡದಿದ್ದರೂ, ಮಕ್ಕಳಿಗೆ ಮನೆಗಲಿಕೆಯ ಅಗತ್ಯವಿದೆ. ಮಕ್ಕಳು ಶಾಲೆಯಲ್ಲಿ ಏನು ಕಲಿಯುತ್ತಿದ್ದಾರೆ ಎಂದು ತಂದೆ ಅಥವಾ ತಾಯಿ ಖಂಡಿತ ತಿಳಿದುಕೊಳ್ಳಬೇಕು. ಅದಕ್ಕೆ ಪೂರಕವಾದ, ಪ್ರೇರಕವಾದಂತಹ ವಿಷಯಗಳನ್ನು (ಪಠ್ಯದಲ್ಲಿ ಇಲ್ಲದಿರುವುದು) ಮಕ್ಕಳಿಗೆ ಸಹಜವಾಗಿ ಪರಿಚಿತವಾಗುವಂತಹ ಅವಕಾಶವನ್ನು ಸೃಷ್ಟಿಸಬೇಕು. ಟಿವಿಯಲ್ಲೋ, ಅಂತರ್ಜಾಲದಲ್ಲೋ ಅದನ್ನು ಗುರುತಿಸಲು ಸಹಕರಿಸಬೇಕು. ಹೊರಗೆ ಎಲ್ಲೇ ಹೋದಾಗ ಕಲಿಕೆಗೆ ಅಗತ್ಯವಿರುವ ಅಂಶಗಳ ಬಗ್ಗೆ ತಾವು ಗಮನ ಹರಿಸಬೇಕು. ಇದು ಮಕ್ಕಳ ಕೆಲಸವಲ್ಲ. ಸಂಪೂರ್ಣ ಪೋಷಕರ ಅಥವಾ ಕುಟುಂಬದವರ ಕೆಲಸ. ತಾವು ಶಾಲೆಯಲ್ಲಿ ಕಲಿಯುವ ಅಂಶಗಳಿಗೂ, ಮನೆಯಲ್ಲಿ ಗ್ರಹಿಸುವ ಅಂಶಗಳಿಗೂ, ಹೊರಗೆ ಪರಿಚಿತವಾಗುವ ಅಂಶಗಳಿಗೂ ಸಾದೃಶ್ಯವಿರುವುದನ್ನು ಅವರು ತಮಗೇ ಅರಿವಿಲ್ಲದಂತೆ ತಿಳಿಯುತ್ತಾರೆ, ಅಥವಾ ತಿಳಿಸಬೇಕು. ಆಗ ಮಕ್ಕಳು ನಿರಾಯಾಸವಾಗಿ ಒತ್ತಡದ ಕಲಿಕೆಯಿಲ್ಲದ ವಿದ್ಯಾಭ್ಯಾಸದಲ್ಲಿ ತಾವಾಗಿಯೇ ತೊಡಗಿಕೊಳ್ಳುತ್ತಾರೆ.