ರಾಜಕೀಯಕ್ಕೆ ಧುಮುಕುವ ನಿರ್ಧಾರ ಬದಲಿಲ್ಲ: ಶರ್ಮಿಳಾ
ಇಂಫಾಲ, ಆ.14: ರಾಜಕೀಯಕ್ಕೆ ಧುಮುಕುವ ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ಆ ಕುರಿತು ಯಾರದೇ ವಿರೋಧವನ್ನು ಲೆಕ್ಕಿಸುವುದಿಲ್ಲ. ರಾಜ್ಯದಲ್ಲಿ ವಿವಾದಿತ ಆಫ್‌ಸ್ಪಾ ಹಿಂದೆಗೆತಕ್ಕಾಗಿ ತನ್ನ ಚಳವಳಿಗೆ ‘ಹೊಸ ಆರಂಭ’ವೊಂದನ್ನು ನೀಡಲಿದ್ದೇನೆಂದು ಮಣಿಪುರದ ಉಕ್ಕಿನ ಮಹಿಳೆ ಇರೋಮ್ ಚಾನು ಶರ್ಮಿಳಾ ಇಂದು ಸ್ಪಷ್ಟಪಡಿಸಿದ್ದಾರೆ.
ಹಠಾತ್ ಏಕಾಂಗಿತನ ಹಾಗೂ ಬೆಂಬಲಿಗರ ಬಂಡಾಯ ಪ್ರತಿಕ್ರಿಯೆಯನ್ನು ಎದುರಿಸುತ್ತಿರುವ 44ರ ಹರೆಯದ ಹಕ್ಕು ಹೋರಾಟಗಾರ್ತಿ, ಮಂಗಳವಾರ ತಾನು ಉಪವಾಸ ಮುಷ್ಕರ ಕೊನೆಗೊಳಿಸಿದುದು ಹಾಗೂ ರಾಜಕೀಯ ಪ್ರವೇಶಕ್ಕೆ ನಿರ್ಧರಿಸಿರುವುದು ಜನರಿಗೆ ಅಸಮಾಧಾನ ಉಂಟು ಮಾಡಿದೆಯೆಂಬುದನ್ನು ಒಪ್ಪಿಕೊಂಡಿದ್ದಾರೆ.
ನಾಗರಿಕ ಸಮಾಜದ ಗುಂಪುಗಳು ಹಾಗೂ ಜನ ಸಾಮಾನ್ಯರಿಗೆ ಅವರ ಈ ನಿರ್ಧಾರ ಸರಿಬರದ ಕಾರಣ, ಒಂದು ರೀತಿಯಲ್ಲಿ ಅವರು ಶರ್ಮಿಳಾರನ್ನು ತೊರೆದಿದ್ದಾರೆ.
ತನ್ನ ಕುಟುಂಬದಿಂದ ಹಿಡಿದು ನಿಕಟ ಸ್ನೇಹಿತರ ವರೆಗೆ ಹಾಗೂ ನೆರೆಹೊರೆಯವರು ಸಹಿತ ಸಾರ್ವಜನಿಕರ ಪ್ರತಿಭಟನೆಯನ್ನು ಶರ್ಮಿಳಾ ಎದುರಿಸುತ್ತಿದ್ದಾರೆ. ಕೆಲವು ಉಗ್ರಗಾಮಿ ಗುಂಪುಗಳು ಅವರಿಗೆ ಬೆದರಿಕೆಯನ್ನೂ ಹಾಕಿವೆಯೆಂದು ವರದಿಯಾಗಿದೆ. ಇದರಿಂದ ನೊಂದ ಅವರು, 16 ವರ್ಷಗಳಿಂದ ತಾನು ವಾಸವಿದ್ದ ಆಸ್ಪತ್ರೆಗೆ ಹಿಂದಿರುಗಿದ್ದಾರೆ.
ತಾನು ಮುಖ್ಯಮಂತ್ರಿಯಾಗಲು ಬಯಸುತ್ತಿದ್ದೇನೆ. ಹಾಗಾದಲ್ಲಿ ಅತ್ಯಂತ ಜನವಿರೋಧಿ ಆಫ್‌ಸ್ಪಾವನ್ನು ಹಿಂದೆಗೆ ಯಲು ತನಗೆ ಸಾಧ್ಯವಾಗಲಿದೆ. ಇದಕ್ಕೆ ಜನ ಬೆಂಬಲ ನೀಡ ದಿದ್ದರೆ, ತನ್ನದೇ ದಾರಿ ಹಿಡಿಯುತ್ತೇನೆಂದು ಶರ್ಮಿಳಾ ಹೇಳಿದ್ದಾರೆ.
ಮಣಿಪುರದಲ್ಲಿ ವಿಧಾನಸಭಾ ಚುನಾವಣೆ 2017ರಲ್ಲಿ ನಡೆಯಲಿದೆ.