ಅಂಬೇಡ್ಕರ್ ರೂಪಿಸಿದ ‘ಏಕರೂಪ ಹಿಂದೂ ಸಂಹಿತೆ’
ಭಾಗ 1
‘ಏಕರೂಪ ನಾಗರಿಕ ಸಂಹಿತೆ’ ಹೀಗೊಂದು ಚರ್ಚೆ ದೇಶದೆಲ್ಲೆಡೆ ಪ್ರಾರಂಭವಾಗಿದೆ. ಕೇಂದ್ರ ಬಿಜೆಪಿ ಸರಕಾರ ತನ್ನ ಅಜೆಂಡಾ ಜಾರಿಗಾಗಿ ಹೀಗೊಂದು ಚರ್ಚೆ ಹುಟ್ಟುಹಾಕಿದೆ. ಕಾನೂನು ಇಲಾಖೆಗೆ ಆ ಬಗ್ಗೆ ವರದಿ ನೀಡುವಂತೆ ಅದು ಕೇಳಿದೆ. ತರಾತುರಿ ನೋಡಿದರೆ ’ಸಮಾನ’ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಸರಕಾರದ ಈ ಬದ್ಧತೆ ನೆನೆಸಿಕೊಂಡರೇನೆ ಬಲ್ಲವರಿಗೆ ಅಚ್ಚರಿ ಎನಿಸದಿರದು. ಯಾಕೆಂದರೆ ಈಗ ‘ಏಕರೂಪ ನಾಗರಿಕ ಸಂಹಿತೆ’ ಜಾರಿ ತರ ಹೊರಟಿರುವ ಇದೇ ಮನಸ್ಸುಗಳೇ ಹಿಂದೆ ಅಂಬೇಡ್ಕರ್ ‘ಹಿಂದೂ ಸಂಹಿತೆ’ ರೂಪಿಸಲು ಹೊರಟಾಗ ಉಗ್ರವಾಗಿ ವಿರೋಧಿಸಿವೆ. ಆಶ್ಚರ್ಯವೆಂದರೆ ಈಗ ಇವರಿಗೆ ‘ಏಕರೂಪ ನಾಗರಿಕ ಸಂಹಿತೆ’ ಜಾರಿಯಾಗಬೇಕಾಗಿದೆ. ಅಂದರೆ ತಮ್ಮ ಮನೆಯ ಕೊಳೆ ಕಡೆ ತಕರಾರಿಲ್ಲ, ಅದು ಹಾಗೆಯೇ ಇರಲಿ ಎಂಬಂತೆ ಆದರೆ ಬೇರೆಯವರ ಮನೆ ಕಡೆ ಕಣ್ಣು! ಮತ್ತು ಇದೇ ಈ ಸಂಹಿತೆಯ ಗೊಂದಲ ಕೂಡ. ಏಕರೂಪ ನಾಗರಿಕ ಸಂಹಿತೆಯ ಚರ್ಚೆಯ ಈ ಹಿನ್ನೆಲೆಯಲ್ಲಿ ಈ ದೇಶದ ಪ್ರಥಮ ಕಾನೂನು ಸಚಿವರಾಗಿದ್ದಾಗ ಅಂಬೇಡ್ಕರ್ ಅಂದು ರೂಪಿಸಿದ ಹಿಂದೂ ಸಂಹಿತೆ ಬಗ್ಗೆ ಸದ್ಯ ಚರ್ಚಿಸುವ ಅಗತ್ಯವಿದೆ. ಹಿಂದೂ ಸಂಹಿತೆ ಮಸೂದೆ ಅಥವಾ ಜನಪ್ರಿಯ ಧಾಟಿಯಲ್ಲಿ ಹೇಳುವುದಾದರೆ ಅಂಬೇಡ್ಕರ್‌ರವರು ರಚಿಸಿದ ಹಿಂದೂ ಕೋಡ್ ಬಿಲ್‌ನಲ್ಲಿ ಅಂತಹದ್ದೇನಿತ್ತು? ಅದಕ್ಕೆ ಇಂದಿನ ಕರ್ಮಠ ಹಿಂದೂಗಳ ಅಂದಿನ ಪೂರ್ವಿಕರ ಅಭಿಪ್ರಾಯ? ಆದ ಗತಿ? ಈ ಹಿನ್ನೆಲೆಯಲ್ಲಿ ಅದರ ಸಾರ ದಾಖಲಿಸುವುದಾದರೆ, ಹಿಂದೂ ಸಂಹಿತೆ ಮಸೂದೆ ಮುಖ್ಯವಾಗಿ 7 ಅಂಶಗಳನ್ನು ಒಳಗೊಂಡಿತ್ತು.
ಅವುಗಳೆಂದರೆ 1.ಆಸ್ತಿಯ ಹಂಚಿಕೆ. 2.ಆಸ್ತಿಗೆ ವಾರಸುದಾರರನ್ನು ಪಟ್ಟಿಮಾಡುವುದು. 3.ಜೀವನಾಂಶ. 4.ಮದುವೆ. 5.ವಿಚ್ಛೇದನ. 6.ದತ್ತು ಸ್ವೀಕಾರ. 7.ಅಪ್ರಾಪ್ತ ವಯಸ್ಕರ ಮದುವೆ. ಇವೇ ಆ ಏಳು ಅಂಶಗಳು. ಅಂದಹಾಗೆ ಈ ಮಸೂದೆ ಹಿಂದೂಗಳಿಗಷ್ಟೆ ಸಂಬಂಧಿಸಿದ ಮಸೂದೆಯಾಗಿತ್ತು ಮತ್ತು ‘ಹಿಂದೂ’ ಎಂಬ ಆ ವ್ಯಾಪ್ತಿಯಲ್ಲಿ ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳನ್ನೂ ಸೇರಿಸಲಾ ಗಿತ್ತು. ಈ ಹಿನ್ನೆಲೆಯಲ್ಲಿ ಅದನ್ನು ಅಂಬೇಡ್ಕರರು ‘ಹಿಂದೂ ಸಂಹಿತೆ ಮಸೂದೆ’ ಎಂದೇ ಕರೆದಿದ್ದರು. ಹಾಗೆ ಯಾಕೆ ಹಿಂದೂಗಳಿಗೇ ಕಾನೂನು ರೂಪಿಸಬೇಕು ಎಂದು ವಿವರಿಸುತ್ತಾ ಅಂಬೇಡ್ಕರರು ಹೇಳುವುದು ‘‘ಹಿಂದೂ ಸಮಾಜ ಸದಾ ನಂಬಿರುವುದೆಂದರೆ ಕಾನೂನು ರೂಪಿಸುವ ಕೆಲಸ ಕೇವಲ ದೇವರದ್ದು ಅಥವಾ ಸ್ಮತಿಯದ್ದಾಗಿದ್ದು ಅದನ್ನು ಬದಲಿಸುವ ಹಕ್ಕು ಹಿಂದೂ ಸಮಾಜಕ್ಕೆ ಇಲ್ಲ ಎಂಬುದು. ಈ ಕಾರಣಕ್ಕಾಗಿ ಹಲವು ತಲೆಮಾರುಗಳು ಕಳೆದಿದ್ದರೂ ಕೂಡ ಹಿಂದೂ ಸಮಾಜದಲ್ಲಿ ಕಾನೂನು ಬದಲಾಗದೆ ಹಾಗೆಯೇ ಇದೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಹಿಂದೂ ಸಮಾಜ ತನ್ನ ಸಾಮಾಜಿಕ, ಆರ್ಥಿಕ ಮತ್ತು ಕಾನೂನಾತ್ಮಕ ಜೀವನವನ್ನು ಬದಲಿಸಿಕೊಳ್ಳುವುದು ತನ್ನ ಸ್ವಂತ ಜವಾಬ್ದಾರಿ ಮತ್ತು ತನ್ನ ಶಕ್ತಿಯದ್ದು ಎಂದು ಎಂದಿಗೂ ಒಪ್ಪಿಕೊಂಡೇ ಇಲ್ಲ. ಈ ಹಿನ್ನೆಲೆಯಲ್ಲಿ ಹಿಂದೂ ಸಂಹಿತೆ ಮಸೂದೆ ಮೂಲಕ ಹಿಂದೂ ಸಮಾಜ ಇಂತಹದ್ದೊಂದು ದೊಡ್ಡ ಹೆಜ್ಜೆ ಇಡುತ್ತಿರುವುದು ಇದೇ ಪ್ರಥಮ’’. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.14, ಭಾಗ.1, ಪು.41). ಖಂಡಿತ, ಅಂಬೇಡ್ಕರರು ಅಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಲಿಕ್ಕೆ ಪ್ರಮುಖ ಕಾರಣ ಈ ದೇಶದ ಮಹಿಳೆಯರು ಮತ್ತು ಮಕ್ಕಳ ಹಿತಚಿಂತನೆ ಎಂಬುದು ಅವರ ಈ ಮಸೂದೆಯ ಒಟ್ಟಾರೆ ವಿಶ್ಲೇಷಣೆಯಿಂದ ಅರಿವಾಗುತ್ತದೆ. ಮಸೂದೆ, ಮೊದಲಿಗೆ ಅಂಬೇಡ್ಕರರು ಹೇಳುವುದು ಆಸ್ತಿಯ ವಾರಸುದಾರಿಕೆಯ ಬಗ್ಗೆ. ಆ ಕಾಲದಲ್ಲಿ ಬ್ರಿಟಿಷರ ಕಾಲದಲ್ಲಿ ಹಿಂದೂಗಳಲ್ಲಿ ಆಸ್ತಿಯ ಹಂಚಿಕೆ ಬಗ್ಗೆ ಎರಡು ವಿಧಾನಗಳಿತ್ತು.
ಒಂದನೆಯದು ಮಿತಾಕ್ಷರ, ಎರಡನೆಯದು ದಯಾಭಾಗ ಮತ್ತು ಇದರಲ್ಲಿ ಹಿಂದೂಗಳು ಪ್ರಮುಖವಾಗಿ ಮಿತಾಕ್ಷರ ಪದ್ಧತಿಯನ್ನು ಅನುಸರಿಸುತ್ತಿದ್ದರು. ಮಿತಾಕ್ಷರದ ಈ ಪದ್ಧತಿಯಲ್ಲಿ ಆಸ್ತಿಯು ವ್ಯಕ್ತಿಯ ಸ್ವಂತ ಆಸ್ತಿಯಾಗಿರುತ್ತಿರಲಿಲ್ಲ. ಬದಲಿಗೆ ಅದು ತಂದೆ, ಮಗ, ಮೊಮ್ಮಗ ಮತ್ತು ಮರಿ ಮೊಮ್ಮಗ ಹೀಗೆ ನಾಲ್ವರು ಸಮಾನ ಪಾಲುದಾರರಿಗೆ ಸೇರಿರುತ್ತಿತ್ತು. (ತಂದೆ, ಮಗ, ಮೊಮ್ಮಗ, ಮರಿ ಮೊಮ್ಮಗ ಈ ಸರಣಿಯಲ್ಲಿ ಹೆಣ್ಣು ಮಕ್ಕಳಿಗೆ ಅವಕಾಶವೇ ಇಲ್ಲ ಎಂಬುದನ್ನು ಓದುಗರು ಗಮನಿಸಬೇಕು). ಆದರೆ ಅಂಬೇಡ್ಕರರು ಮಿತಾಕ್ಷರದ ಈ ಪದ್ಧ್ಧತಿಯ ಬದಲಿಗೆ ದಯಾಭಾಗ ಪದ್ಧತಿಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದರು. ದಯಾಭಾಗ ಈ ಪದ್ಧತಿಯ ಪ್ರಕಾರ ವ್ಯಕ್ತಿಯ ಆಸ್ತಿಯು ಆತನ ಸ್ವಂತದ್ದಾಗಿದ್ದು ಮುಂದೆ ಅದು ಆತನ ಉತ್ತರಾಧಿಕಾರಿಗೆ ಸೇರುತ್ತಿತ್ತು. ಆ ಉತ್ತರಾ ಧಿಕಾರಿ ಅದನ್ನು ಮಾರಬಹುದಿತ್ತು, ಕೊಡುಗೆ ಅಥವಾ ವಿಲ್ ಮೂಲಕ ತನಗೆ ಬೇಕಾದವರಿಗೆ ಕೊಡಬಹುದಿತ್ತು.
ಇನ್ನು ಎರಡನೆಯ ಅಂಶ ಅಂಬೇಡ್ಕರರು ಹೇಳಿದ್ದು ವ್ಯಕ್ತಿ ಸತ್ತ ನಂತರ ಆಸ್ತಿ ಯಾರಿಗೆ ಸೇರುತ್ತದೆ ಎಂಬುದನ್ನು. ಅಂದು ಜಾರಿಯಲ್ಲಿದ್ದ ಮಿತಾಕ್ಷರ ಪದ್ಧತಿ ಪ್ರಕಾರ ವ್ಯಕ್ತಿ ಸತ್ತ ನಂತರ ಆತನ ಆಸ್ತಿ ಆತನ ಸಹಜಾತರು ಅಂದರೆ ಅಣ್ಣತಮ್ಮಂದಿರಿಗಿಂತ ಆತನ ಪಿತೃ ಸಂಬಂಧಿಗಳಿಗೆ ಹೋಗುತ್ತಿತ್ತು. ಅಂದರೆ ತಂದೆಯ ಸಂಬಂಧಿಗಳಿಗೆ ಹೋಗುತ್ತಿತ್ತು. ಆದರೆ ಅಂಬೇಡ್ಕರರು ದಯಾಭಾಗ ಪದ್ಧತಿ ಶಿಫಾರಸು ಮಾಡಲಾಗಿ ಆಸ್ತಿ ಆತನ ರಕ್ತ ಸಂಬಂಧಿಗಳಿಗೇ ಹೋಗುವಂತಾಯಿತು. ಈ ಸಂದರ್ಭದಲ್ಲಿ ಅಂಬೇಡ್ಕರರು ಆಸ್ತಿಯ ವಾರಸುದಾರಿಕೆಗೆ ಸಂಬಂಧಿಸಿದಂತೆ ಮಹಿಳೆಯರ ಪರವಾಗಿ ಒಂದು ಬದಲಾವಣೆ ತಂದರು. ಅದೆಂದರೆ ಅದುವರೆಗಿನ ನಿಯಮದಲ್ಲಿ ಕೇವಲ ಮಗನಷ್ಟೆ ವಾರಸುದಾರನಾಗಿರುತ್ತಿದ್ದ. ಆದರೆ ಅಂಬೇಡ್ಕರರು ಅಂತಹ ವಾರಸುದಾರಿಕೆಗೆ ಮಗಳು, ವಿಧವೆ, ಈಗಾಗಲೇ ಮರಣ ಹೊಂದಿರುವಂತಹ ಮಗನ ವಿಧವಾ ಪತ್ನಿ ಇವರೆಲ್ಲರನ್ನು ಮಗನಷ್ಟೆ ಸಮಾನ ವಾರಸುದಾರಿಕೆಗೆ ತಂದರು. ಆ ಮೂಲಕ ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಪಾಲು ನೀಡಿದರು. ಅಂದಹಾಗೆ ಅದೆಷ್ಟು ಪಾಲು? ಅಂದರೆ ತಂದೆಯ ಆಸ್ತಿಯಲ್ಲಿ ಮಗನಿಗೆ ಎಷ್ಟು ಸಿಗುತ್ತದೆಯೋ ಅದರ ಅರ್ಧದಷ್ಟು ಮಗಳಿಗೆ. ಈ ಸಂದರ್ಭದಲ್ಲಿ ಆ ಹೆಣ್ಣು ಮಗಳು ಮದುವೆಯಾಗಿದ್ದರೆ ಅಥವಾ ಮದುವೆಯಾಗದಿದ್ದರೆ? ಖಂಡಿತ, ಅದ್ಯಾವುದೂ ಅಡ್ಡಿ ಬರದಂತೆ ಮಗನ ಅರ್ಧದಷ್ಟು ಆಕೆ ಪಡೆಯುವಂತಾಯಿತು.
ಇನ್ನು ಈ ವಾರಸುದಾರಿಕೆಯಲ್ಲಿ, ಮೊದಲು ತಂದೆ ನಂತರ ತಾಯಿ ಎಂದಿತ್ತು. ಆದರೆ ಅಂಬೇಡ್ಕರರು ಮೊದಲು ತಾಯಿ ನಂತರ ತಂದೆ ಎಂದು ಬದಲಿಸಿದರು. ಈ ಸಂದರ್ಭದಲ್ಲಿ ಮಹಿಳೆಯರದೇ ಹೆಸರಿನಲ್ಲಿರುವ ಆಸ್ತಿ ಅಥವ ಸ್ತ್ರೀಧನಕ್ಕೆ ಸಂಬಂಧಿಸಿ ಅನೇಕ ವಾರಸುದಾರಿಕೆಯ ನಿಯಮಗಳಿದ್ದವು. ಅಂಬೇಡ್ಕರರು ಅವೆಲ್ಲವನ್ನು ಒಂದೇ ನಿಯಮದಡಿ ತಂದರು. ಹಾಗೆಯೇ ಹೇಗೆ ತಂದೆಯ ಆಸ್ತಿಯಲ್ಲಿ ಮಗಳಿಗೆ ಅರ್ಧದಷ್ಟು ಎಂದರೋ ಹಾಗೆಯೇ ಸ್ತ್ರೀಧನದಲ್ಲಿ ಮಗನಿಗೂ ಮಗಳ ಅರ್ಧದಷ್ಟು ಎಂದು ಬದಲಾವಣೆ ತಂದರು. ಅಂದಹಾಗೆ ಅದುವರೆಗೆ ಇದ್ದ ನಿಯಮವೆಂದರೆ ಗಂಡ ತೀರಿಹೋದರೆ ಆಸ್ತಿ ಆಕೆಯ ಗಂಡನ ಸಂಬಂಧಿಕರಿಗೆ ಹೋಗುತ್ತಿತ್ತು. ಆದರೆ ಅಂಬೇಡ್ಕರರು ಅದನ್ನು ಆತನ ವಿಧವಾ ಪತ್ನಿಗಷ್ಟೆ ಎಂಬಂತೆ ಬದಲಾವಣೆ ತಂದರು. ಪತಿಯ ಸಂಬಂಧಿಕರಿಗೆ ಅದರಲ್ಲಿ ಯಾವುದೇ ಪಾಲೂ ಇಲ್ಲವೆಂಬ ನಿಯಮ ರೂಪಿಸಿದರು. ಈ ಸಮಯದಲ್ಲಿ ವರದಕ್ಷಿಣೆ ಬಗ್ಗೆಯೂ ಅಂಬೇಡ್ಕರರು ಒಂದು ನಿಯಮ ತಂದರು. ಅಂದರೆ ಅದನ್ನು ನಿಷೇಧಿಸಿದರು. ಆದರೂ ವರದಕ್ಷಿಣೆ, ಅದು ವಧುವಿನ ಆಸ್ತಿ. ಅದನ್ನು ಆಕೆಯ ಗಂಡನಾಗಲೀ ಆತನ ಸಂಬಂಧಿಕರಾಗಲೀ ಬಳಸುವಂತಿಲ್ಲ.
ಬದಲಿಗೆ ಆಕೆಗೆ 18 ವರ್ಷ ತುಂಬಿದ ನಂತರ ಅದು ಆಕೆಯ ವೈಯಕ್ತಿಕ ಆಸ್ತಿಯಾಗುತ್ತದೆ ಎಂದರು.
ಇನ್ನು ಅದುವರೆಗೆ ಅಕಸ್ಮಾತ್ ಹೆಂಡತಿ ಗಂಡನಿಂದ ದೂರವಾಗಿ ಬದುಕುವಂತಾದರೆ ಆಕೆಗೆ ಜೀವನಾಂಶ ಸಿಗುತ್ತಿರಲಿಲ್ಲ. ಆದರೆ ಅಂಬೇಡ್ಕರರು ಜೀವನಾಂಶ ಸಿಗುವಂತೆ ಮಾಡಿದರು. ಅಲ್ಲದೆ ಅಂತಹ ಜೀವನಾಂಶದ ಸಂದರ್ಭವನ್ನು ಕೂಡ ಅವರು ಮಹಿಳೆಯ ಹಿತದೃಷ್ಟಿಯಿಂದ ಪಟ್ಟಿಮಾಡಿದರು. ಅವುಗಳೆಂದರೆ 1.ಆತ ಅಸಹನೀಯ ರೋಗದಿಂದ ನರಳುತ್ತಿದ್ದರೆ. 2.ಆತ ಇನ್ನೊಬ್ಬಳನ್ನು ಇಟ್ಟುಕೊಂಡಿದ್ದರೆ. 3.ಆತ ಅತಿ ಕ್ರೂರನಾಗಿದ್ದರೆ. 4.ಆತ ಅವಳನ್ನು ಬಿಟ್ಟು ಎರಡು ವರ್ಷಗಳು ಮೀರಿ ದೂರ ಇದ್ದರೆ. 5.ಆತ ಬೇರೆ ಯಾವುದಾದರೂ ಧರ್ಮಕ್ಕೆ ಮತಾಂತರ ಹೊಂದಿದ್ದರೆ. 6.ಅಥವಾ ಇನ್ನಾವುದಾದರೂ ನ್ಯಾಯಬದ್ಧ ಕಾರಣಗಳು. ಒಟ್ಟಾರೆ ಹೀಗೆ ಅಂಬೇಡ್ಕರರು ಮಹಿಳೆಗೆ ಕಾನೂನಾತ್ಮಕವಾಗಿ ಸ್ವಾತಂತ್ರ್ಯ ನೀಡಿದ್ದರು.