ನೀಟ್ ಫಲಿತಾಂಶ ಪ್ರಕಟ
ಹೊಸದಿಲ್ಲಿ,ಆ.16: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳಿಗಾಗಿ ಮೊದಲ ಮತ್ತು ಎರಡನೇ ಹಂತದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಗಳ ಏಕೀಕೃತ ಫಲಿತಾಂಶಗಳನ್ನು ಸಿಬಿಎಸ್ಇ ಮಂಗಳವಾರ,ನಿಗದಿತ ದಿನಾಂಕಕ್ಕಿಂತ ಒಂದು ದಿನ ಮೊದಲೇ ಪ್ರಕಟಿಸಿದೆ. ಆ.17ಕ್ಕೆ ಅಥವಾ ಅದಕ್ಕೂ ಮೊದಲು ಆನ್ಲೈನ್ನಲ್ಲಿ ಫಲಿತಾಂಶಗಳನ್ನು ಪ್ರಕಟಿಸುವಂತೆ ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ಸಿಬಿಎಸ್ಇಗೆ ನಿರ್ದೇಶ ನೀಡಿತ್ತು. ಗುಜರಾತಿನ ನಡಿಯಾಡ್ ನಿವಾಸಿ ಹೇತ್ ಶಾ ಅವರು 720 ಅಂಕಗಳಲ್ಲಿ 685 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಒಡಿಶಾದ ರೂರ್ಕೇಲಾ ನಿವಾಸಿ ಏಕಾಂಶ ಗೋಯಲ್ ಮತ್ತು ನಿಖಿಲ್ ಭಜಿಯಾ ಎರಡು ಮತ್ತು ಮೂರನೇ ಸ್ಥಾನಗಳನ್ನು ಗಳಿಸಿದ್ದಾರೆ.
ಉನ್ನತ ಅಂಕಗಳನ್ನು ಗಳಿಸಿರುವ ಶೇ.15ರಷ್ಟು ವಿದ್ಯಾರ್ಥಿಗಳಲ್ಲಿ 11,058 ಬಾಲಕರು ಮತ್ತು 8,266 ಬಾಲಕಿಯರು ಹಾಗೂ ಓರ್ವ ತೃತೀಯ ಲಿಂಗಿ ಇದ್ದಾರೆ. 668 ಮತ್ತು ಹೆಚ್ಚಿನ ಅಂಕಗಳನ್ನು ಗಳಿಸಿರುವ 10 ವಿದ್ಯಾರ್ಥಿಗಳ ಹೆಸರುಗಳನ್ನು ಸಿಬಿಎಸ್ಇ ಪ್ರಕಟಿಸಿದ್ದು, ಈ ಪೈಕಿ ಎಂಟು ವಿದ್ಯಾರ್ಥಿಗಳು 670ಕ್ಕೂ ಅಧಿಕ ಅಂಕಗಳ ಸರದಾರರಾಗಿದ್ದಾರೆ.
ನೀಟ್-1 ಮತ್ತು ನೀಟ್-2 ಪರೀಕ್ಷೆಗಳು ಅನುಕ್ರಮವಾಗಿ 2016,ಮೇ 1 ಮತ್ತು ಜುಲೈ 24ರಂದು ನಡೆದಿದ್ದವು.