26 ವಾರ ಮಾತೃತ್ವ ರಜೆ: ಅಸಂಘಟಿತರಿಗೆ ಏಕೆ ಸಜೆ?
ಗುಜರಾತ್‌ನ ವಡೋದರದಲ್ಲಿ ಕಂಡುಬಂದ ದೃಶ್ಯ ಇದು. ಆಕೆಯ ಹೆಸರು ತಿನಿಬೆನ್. ಏಳು ತಿಂಗಳ ತುಂಬು ಗರ್ಭಿಣಿ. ತೀವ್ರ ಜ್ವರದ ನಡುವೆಯೂ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಳು. ಬಳಿಕ ದಹೋದ್ ಜಿಲ್ಲೆಯ ತನ್ನ ಗ್ರಾಮಕ್ಕೆ ಪತಿಯ ಜತೆ ಹೆರಿಗೆಗಾಗಿ ಹೋದಳು. ಆಕೆಗೆ ವೇತನ ಸಹಿತ ರಜೆಯೂ ಇಲ್ಲ; ಆಕೆಯ ಉದ್ಯೋಗ ಉಳಿಯುವ ಖಾತ್ರಿಯೂ ಇಲ್ಲ.
ಮಾತೃತ್ವ ಸೌಲಭ್ಯ ಕಾಯ್ದೆ- 1961ಕ್ಕೆ ತಂದಿರುವ ತಿದ್ದುಪಡಿಯನ್ನು ಆಗಸ್ಟ್ 11ರಂದು ರಾಜ್ಯಸಭೆ ಅನುಮೋದಿ ಸಿದೆ. ಇದರ ಅನ್ವಯ ಹಿಂದೆ 12 ವಾರಗಳ ಕಾಲ ನೀಡುತ್ತಿದ್ದ ಮಾತೃತ್ವ ರಜೆಯನ್ನು 26 ವಾರಗಳಿಗೆ ಹೆಚ್ಚಿಸಲಾಗಿದೆ. ಅಂದರೆ ಸಂಘಟಿತ ವಲಯದ ಮಹಿಳಾ ಉದ್ಯೋಗಿಗಳು ಗರ್ಭಿಣಿಯರಾದರೆ ಇನ್ನು ಮೇಲೆ ಆರು ತಿಂಗಳ ವೇತನ ಸಹಿತ ಮಾತೃತ್ವ ರಜೆಗೆ ಅರ್ಹರಾಗುತ್ತಾರೆ. ಈ ಕಾಯ್ದೆಯ ಪ್ರಕಾರ, 50ಕ್ಕಿಂತ ಹೆಚ್ಚು ಮಹಿಳಾ ಉದ್ಯೋಗಿಗಳನ್ನು ಹೊಂದಿರುವ ಕಂಪೆನಿಗಳಲ್ಲಿ ಪ್ಲೇಹೋಮ್ (ಕ್ರೆಚ್) ನಿರ್ಮಿಸುವುದು ಕಡ್ಡಾಯ.
ಆದರೆ ಈ ತಿದ್ದುಪಡಿ ಕಾಯ್ದೆ ಸಂಘಟಿತ ಹಾಗೂ ಔಪಚಾರಿಕ ವಲಯಕ್ಕಷ್ಟೇ ಸೀಮಿತವಾಗಿದ್ದು, ತಿನಿಬೆನ್‌ನಂಥ ಲಕ್ಷಾಂತರ ಮಂದಿ ಅಸಂಘಟಿತ ಕಾರ್ಮಿಕರಿಗೆ ಈ ಸೌಲಭ್ಯ ಕನ್ನಡಿಯ ಗಂಟು.
ಆರೋಗ್ಯ ತಜ್ಞರ ಪ್ರಕಾರ, ತಾಯಂದಿರು ಮಗು ಹುಟ್ಟಿದ ಕನಿಷ್ಠ 24 ತಿಂಗಳುಗಳ ಕಾಲ ಮಕ್ಕಳ ನಿಕಟ ಒಡನಾಟದಲ್ಲಿರುವುದು ಅತ್ಯಗತ್ಯ. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನ ಅನ್ವಯ, ಪ್ರತಿ ಶಿಶುವಿಗೆ ಹುಟ್ಟಿನ ಮೊದಲ ಗಂಟೆಯಿಂದಲೇ ಎದೆಹಾಲು ನೀಡಬೇಕು. ಆರು ತಿಂಗಳ ವರೆಗೆ ಎದೆಹಾಲು ಬಿಟ್ಟು ಬೇರೇನನ್ನೂ ನೀಡುವಂತಿಲ್ಲ. ಮೊಲೆಹಾಲುಣಿಸುವುದನ್ನು ಸಾಮಾನ್ಯವಾಗಿ ಎರಡು ವರ್ಷಗಳವರೆಗೂ ಮುಂದುವರಿಸಬಹುದು. ಆದರೆ ಆರು ತಿಂಗಳ ಬಳಿಕ ಪೂರಕ ಆಹಾರಗಳನ್ನು ಮಕ್ಕಳಿಗೆ ನೀಡಬಹುದು. ಭಾರತದಲ್ಲಿ ಕೂಡಾ ಸಮರ್ಪಕವಾಗಿ ಮಕ್ಕಳಿಗೆ ಎದೆಹಾಲು ಲಭ್ಯವಾಗುವಂತಾದರೆ, ಅತಿಸಾರ, ನ್ಯುಮೋನಿಯಾದಂಥ ಮಾರಿಗಳಿಂದ ಪ್ರತಿ ವರ್ಷ ಸಾವಿರಾರು ಮಕ್ಕಳು ಮರಣ ಹೊಂದುವುದನ್ನು ತಡೆಗಟ್ಟಬಹುದು. ‘‘ಈ ತಿದ್ದುಪಡಿಯನ್ನು ನಾವು ಸ್ವಾಗತಿಸುತ್ತೇವೆ’’ ಎಂದು ‘ಅಲಯನ್ಸ್ ಫಾರ್ ದ ರೈಟ್ ಟೂ ಅರ್ಲಿ ಚೈಲ್ಡ್‌ಹುಡ್ ಡೆವಲಪ್‌ಮೆಂಟ್’ ಎಂಬ ಸ್ವಯಂಸೇವಾ ಸಂಸ್ಥೆಯ ಸುದೇಷ್ಣ ಸೇನ್‌ಗುಪ್ತಾ ಹೇಳುತ್ತಾರೆ. ‘‘ಕೊನೆಗೂ ಕೆಲ ಮಹಿಳೆಯರಿಗಾದರೂ ಆರು ತಿಂಗಳು ವೇತನ ಸಹಿತ ರಜೆಯ ಸೌಲಭ್ಯ ಸಿಗುತ್ತಿದೆ. ಆದರೆ ಬೇಸರದ ವಿಷಯವೆಂದರೆ ಇದು ಕೇವಲ 18 ಲಕ್ಷ ಮಹಿಳೆಯರಿಗಷ್ಟೇ ಲಭ್ಯವಾಗುತ್ತಿದೆ.’’ ದೇಶದಲ್ಲಿ ಸಾಮಾನ್ಯವಾಗಿ ಯಾವಾಗಲೂ 2.97 ಕೋಟಿ ಗರ್ಭಿಣಿಯರು ಇರುತ್ತಾರೆ ಎನ್ನುವುದು ಅವರ ಲೆಕ್ಕಾಚಾರ. ಹಾಗಾದರೆ ಎಷ್ಟು ಮಂದಿ ಗರ್ಭಿಣಿಯರನ್ನು ಈ ಸೌಲಭ್ಯದಿಂದ ವಂಚಿತರಾಗಿಸುತ್ತೇವೆ ನೋಡಿ ಎಂದು ಅವರು ಉದ್ಗರಿಸುತ್ತಾರೆ.
ಮಹಿಳೆಯರ ಹೆರಿಗೆ ಹಕ್ಕಿನ ವಿಚಾರದಲ್ಲಿ ಹೋರಾಟ ಮಾಡುತ್ತಿರುವ ಚಳವಳಿಗಾರರು ಈ ತಿದ್ದುಪಡಿ ಮಸೂದೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಈ ಪೈಕಿ ಕೆಲ ಸಂಘಟನೆಗಳು ಕಳೆದ ಮಾರ್ಚ್ ಹಾಗೂ ಮೇ ತಿಂಗಳಲ್ಲಿ, ಮಾತೃತ್ವ ಸೌಲಭ್ಯ ಹೆಚ್ಚಿಸಲು ಸರಕಾರದ ಮೇಲೆ ಒತ್ತಡ ತರುವ ಸಲುವಾಗಿ ಹೋರಾಟಗಳನ್ನೂ ನಡೆಸಿದ್ದವು. ಅಸಂಘಟಿತ ವಲಯದ ಕಾರ್ಮಿಕರ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ದಿಲ್ಲಿಯಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಅಹವಾಲು ಸಭೆಯನ್ನೂ ಆಯೋಜಿಸಿದ್ದವು. ತಿನಿಬೆನ್ ಅವರ ಮುಂದೆ ಹಾಜರಾಗಿದ್ದರು.
ಸಂಕುಚಿತ ವ್ಯಾಖ್ಯೆ
ಈ ಕಾಯ್ದೆಯ ಅನ್ವಯ 10 ಮಂದಿಗಿಂತ ಹೆಚ್ಚಿನ ಉದ್ಯೋಗಿಗಳಿರುವ ಕೃಷಿ, ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಗಳು ಅಥವಾ ಅಂಗಡಿಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರು ಮಾತೃತ್ವ ರಜೆ ಸೌಲಭ್ಯ ಪಡೆಯಬಹುದಾಗಿದೆ. ಆದರೆ ಈ ಕಾಯ್ದೆ ಮನೆಯಲ್ಲೇ ಕುಳಿತು ಕೆಲಸ ಮಾಡುವ ಅಸಂಖ್ಯಾತ ಮಹಿಳೆಯರ ಹಿತವನ್ನು ಕಡೆಗಣಿಸಿದೆ. ಉದಾಹರಣೆಗೆ ಬೀಡಿ ಸುತ್ತುವ ಮಹಿಳೆಯರು ಅಥವಾ ತೀರಾ ಸಣ್ಣ ಘಟಕಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರು. ಇಂಥ ಮಹಿಳೆಯರನ್ನು ಕಾಯ್ದೆ ಹೊರಗಿಟ್ಟಿದ್ದು, ಇವರಿಗೆ ವಾಸ್ತವವಾಗಿ ವೇತನ ಸೌಲಭ್ಯ ಸಿಗಬೇಕು ಎನ್ನುತ್ತಾರೆ ಲಕ್ನೋ ಮೂಲದ ಸಹಯೋಗ್ ಎಂಬ ಮಹಿಳಾ ಆರೋಗ್ಯ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆಯ ಜಶೋಧರ ದಾಸ್‌ಗುಪ್ತ. ‘‘ಅಂಥ ಮಹಿಳೆಯರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಒಬ್ಬರೇ ಕೆಲಸಕ್ಕೆ ಬರಲಾರರು. ಮಹಿಳೆಗೆ ನಿಗದಿತ ಉದ್ಯೋಗದಾತರು ಇಲ್ಲ ಎಂಬ ಕಾರಣಕ್ಕೆ ಆಕೆಗೆ ಎಲ್ಲ ಸೌಲಭ್ಯಗಳ ಅರ್ಹತೆ ಇಲ್ಲ ಎಂಬ ಅರ್ಥವಲ್ಲ’’ ಎನ್ನುವುದು ಅವರ ಅಭಿಮತ.
‘‘ಅಸಂಘಟಿತ ಹಾಗೂ ಅನೌಪಚಾರಿಕ ವಲಯದ ಉದ್ದಿಮೆಗಳ ಕುರಿತ ರಾಷ್ಟ್ರೀಯ ಆಯೋಗ 2007ರಲ್ಲಿ ಸಿದ್ಧಪಡಿಸಿದ ವರದಿಯ ಪ್ರಕಾರ, ಶೇ. 96ರಷ್ಟು ಮಹಿಳಾ ಉದ್ಯೋಗಿಗಳು ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ’’ ಎಂದು ಆಹಾರದ ಹಕ್ಕು ಹೋರಾಟಗಾರ್ತಿ ದೀಪಾ ಸಿನ್ಹಾ ಹೇಳುತ್ತಾರೆ. ಇವರು ಮಾತೃತ್ವ ಹಕ್ಕು ಮತ್ತು ಮಕ್ಕಳ ಪೌಷ್ಟಿಕತೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ತಿದ್ದುಪಡಿಯು ವಾಸ್ತವವಾಗಿ ಉದ್ಯೋಗಸ್ಥ ಮಹಿಳೆಯ ವ್ಯಾಖ್ಯೆಯ ವ್ಯಾಪ್ತಿಯನ್ನು ವಿಸ್ತರಿಸಬೇಕಿತ್ತು. ಬಹಳಷ್ಟು ಮಹಿಳೆಯರು ತಮ್ಮ ಉದ್ಯೋಗದಾತರನ್ನು ನೋಡಿರುವುದೇ ಇಲ್ಲ. ಕೆಲ ಮಹಿಳೆಯರು ತಮ್ಮದೇ ಹೊಲದಲ್ಲಿ ಕೆಲಸ ಮಾಡುತ್ತಾರೆೆ.
ಕೇಂದ್ರ ಹಾಗೂ ರಾಜ್ಯ ಸರಕಾರಿ ಉದ್ಯೋಗದಲ್ಲಿರುವ ಮಹಿಳೆಯರು ಇಂಥ ನತದೃಷ್ಟ ಮಹಿಳೆಯರ ಹಕ್ಕು ಸಂರಕ್ಷಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎನ್ನುವುದು ಅವರ ಸಲಹೆ. ಇಂಥ ಅಸಂಘಟಿತ ವಲಯದ ಕಾರ್ಮಿಕರಿಗೆ ತಾತ್ಕಾಲಿಕ ಉದ್ಯೋಗ ನೀಡುವವರು ಮಹಿಳಾ ಕಲ್ಯಾಣ ನಿಧಿಯನ್ನು ಆರಂಭಿಸಿ ಆ ಮೂಲಕ ಮಹಿಳೆಯರಿಗೆ ನಗದು ನೆರವು ನೀಡಬಹುದು ಎನ್ನುವುದು ಅವರ ಅಭಿಪ್ರಾಯ.
ತಾರತಮ್ಯ
ಈ ತಿದ್ದುಪಡಿ ಮಸೂದೆ ವಿಶಿಷ್ಟ ಉಪ ಕಾಲಂ ಹೊಂದಿದೆ. ಒಬ್ಬ ಮಹಿಳೆಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ, ಅಂಥ ಮಹಿಳೆಯರಿಗೆ ಕೇವಲ 12 ವಾರಗಳ ಮಾತೃತ್ವ ರಜೆಯಷ್ಟೇ ಸಿಗುತ್ತದೆ. ಅಂದರೆ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದುವುದು ಈ ಮಸೂದೆ ಪ್ರಕಾರ ಅಪರಾಧ. ಅದಕ್ಕಾಗಿ ಮಹಿಳೆಯರು ಶಿಕ್ಷೆ ಅನುಭವಿಸಬೇಕು. ‘‘ಎರಡು ಮಕ್ಕಳನ್ನು ಹೊಂದಿರುವವರು ಮತ್ತೆ ಗರ್ಭಿಣಿಯರಾಗಲೇಬಾರದು. ಆದರೆ ಬಹುತೇಕ ಮಂದಿಗೆ ಇಂಥ ಆಯ್ಕೆಯ ಹಕ್ಕೂ ಇಲ್ಲ; ಗರ್ಭನಿರೋಧಕಗಳ ಲಭ್ಯತೆಯೂ ಇಲ್ಲ’’ ಎಂದು ಸಿನ್ಹಾ ವಿಷಾದಿಸುತ್ತಾರೆ.
‘‘ಇದು ಮಹಿಳೆಯನ್ನು ಶಿಕ್ಷಿಸುವುದು ಮಾತ್ರವಲ್ಲದೇ, ಮೂರನೆ ಮಗುವಿಗೂ ಶಿಕ್ಷೆ ನೀಡುತ್ತದೆ. ಏಕೆಂದರೆ, ಅಂಥ ಮಗು ಮೂರು ತಿಂಗಳ ಬಳಿಕ ತಾಯಿಯ ಎದೆಹಾಲಿನ ಪೌಷ್ಟಿಕ ಆಹಾರ ಸೌಲಭ್ಯ ದಿಂದ ವಂಚಿತವಾಗುತ್ತದೆ. ಕಾಯ್ದೆಯ ಈ ನಿರ್ದಿಷ್ಟ ಅಂಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು’’ ಎಂದು ದಾಸ್‌ಗುಪ್ತಾ ಹೇಳುತ್ತಾರೆ.
ಕಾನೂನು ಜಾರಿ
ಪ್ರಸ್ತುತ ಮಾತೃತ್ವ ಕಾಯ್ದೆ ಜಾರಿಯಾಗುತ್ತಿದೆಯೇ ಎಂಬ ತಪಾಸಣೆ ಕೈಗೊಳ್ಳುವುದು ಕಾರ್ಮಿಕ ಅಧೀಕ್ಷಕರ ಜವಾಬ್ದಾರಿ. ಉದಾಹರಣೆಗೆ ಹೊಸ ಫ್ಯಾಕ್ಟರಿಗಳ ಕಾಯ್ದೆಯಡಿ, 30ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಯಾವುದೇ ಘಟಕಗಳು ಪ್ಲೇಹೋಮ್ ಅಥವಾ ಕ್ರೆಚ್‌ಗಳನ್ನು ಹೊಂದಿರುವುದು ಕಡ್ಡಾಯ.
‘‘ಆದರೆ ವಾಸ್ತವವಾಗಿ, ನೀವು ಇಂಥ ಕ್ರೆಚ್‌ಗಳಿಗೆ ಹೋದರೆ, ಅಲ್ಲಿ 15ಕ್ಕಿಂತ ಹೆಚ್ಚು ಮಕ್ಕಳನ್ನು ಪಾಲನೆ ಮಾಡುವುದು ಸಾಧ್ಯವೇ ಇಲ್ಲ’’ ಎನ್ನುತ್ತಾರೆ ಬೆಂಗಳೂರಿನ ಗಾರ್ಮೆಂಟ್ಸ್ ಮತ್ತು ಜವಳಿ ಕಾರ್ಮಿಕರ ಸಂಘದ ಕೆ.ಆರ್.ಜಯರಾಮ್. ಹಲವು ಕಡೆಗಳಲ್ಲಿ ಒಂದು ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಸೇರಿಸಿಕೊಳ್ಳದಂತೆ ಅಲಿಖಿತ ನಿರ್ಬಂಧಗಳು ಇರುತ್ತವೆ. ಎನ್ನುವುದು ಅವರ ಆರೋಪ.
ಕಾಯ್ದೆಯ ಆಶಯಗಳಿಗೆ ವಿರುದ್ಧವಾಗಿ ಬಹಳಷ್ಟು ಖಾಸಗಿ ಕಂಪೆನಿಗಳಲ್ಲಿ ಗರ್ಭಿಣಿಯರನ್ನು ಉದ್ಯೋಗದಿಂದ ವಜಾ ಮಾಡಲಾಗುತ್ತದೆ ಇಲ್ಲವೇ, ಹೆರಿಗೆ ಬಳಿಕ ಉದ್ಯೋಗ ತ್ಯಜಿಸುವಂತೆ ಒತ್ತಡ ತರಲಾಗುತ್ತದೆ ಎಂದು ಆರೋಗ್ಯ ಕಾರ್ಯಕರ್ತರು ದೂರುತ್ತಾರೆ. ಇಂಥ ಪ್ರಕರಣಗಳಲ್ಲಿ ಕಾರ್ಮಿಕ ಅಧೀಕ್ಷಕರು, ಇಂಥ ಉದ್ಯೋಗದಾತರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಅಂಕಿ ಅಂಶ ಕಲೆಹಾಕುವ ಪ್ರಯತ್ನ ನಡೆದಿದೆ ಎಂದು ವಿವರಿಸುತ್ತಾರೆ.
ಅಲಯನ್ಸ್ ಗುರ್ಗಾಂವ್‌ನಲ್ಲಿ ಗಾರ್ಮೆಂಟ್ಸ್ ಕಾರ್ಮಿಕರ ಬಗ್ಗೆ ಒಂದು ಅಧ್ಯಯನ ನಡೆಸಿತ್ತು. ಇಡೀ ಪ್ರದೇಶದಲ್ಲಿ ಒಬ್ಬ ಗರ್ಭಿಣಿ ಯರೂ ಕಂಡುಬರಲಿಲ್ಲ. ‘‘ಮಗುವಿಗೆ ಜನ್ಮ ನೀಡುವ ಮೊದಲು ಮಹಿಳೆ ಉದ್ಯೋಗ ಬಿಡಬೇಕು ಎನ್ನುವುದು ಅಲಿಖಿತ ನಿಯಮ. ಇದರಲ್ಲಿ ಯಾವುದೇ ರಾಜಿ ಇಲ್ಲ’’ ಎಂದು ಸೇನ್‌ಗುಪ್ತಾ ವಿಷಾದಿಸುತ್ತಾರೆ.