ಶಾರದಾ ವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಜ್ಞಾನ-ವಿಜ್ಞಾನ ಮೇಳ ಉದ್ಘಾಟನೆ
ಮಂಗಳೂರು, ಆ.20: ವಿದ್ಯಾಭಾರತಿ ಮತ್ತು ಶಾರದಾ ವಿದ್ಯಾಲಯದ ವತಿಯಿಂದ ಆಯೋಜಿಸಲಾದ ಜಿಲ್ಲಾ ಮಟ್ಟದ ಜ್ಞಾನ-ವಿಜ್ಞಾನ ಮೇಳದ ಉದ್ಘಾಟನಾ ಸಮಾರಂಭವು ವಿದ್ಯಾಲಯದ ಶರವು ಮಹಾಗಣಪತಿ ವೇದಿಕೆಯಲ್ಲಿ ನಡೆಯಿತು.
ನಿವೃತ್ತ ಹಿಂದಿ ಪ್ರಾಚಾರ್ಯ, ಗೋವಾನಿತಾಶ್ರಮ ಟ್ರಸ್ಟ್ ಪಜೀರಿನ ವಿಶ್ವಸ್ಥ ಎಲ್. ಶ್ರೀಧರ ಭಟ್ ಉದ್ಘಾಟಿಸಿದರು. ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳು ಜ್ಞಾನ ಸಂಚಯನದ ಜೊತೆಯಲ್ಲಿ ನಮ್ಮ ಹಿರಿಯರ ವೈಜ್ಞಾನಿಕ ಸಾಧನೆಗಳನ್ನು ಅರಿತುಕೊಂಡು ಈ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಮೆರೆಯುವುದರ ಜೊತೆಗೆ ಭಾರತೀಯ ಸಂಸ್ಕೃತಿ, ವಿಜ್ಞಾನ-ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾಭಾರತಿಯ ದ.ಕ. ಜಿಲ್ಲಾ ಕಾರ್ಯದರ್ಶಿಲೋಕಯ್ಯ ಡಿ., ಶಾರದಾ ವಿದ್ಯಾ ಸಂಸ್ಥೆಗಳ ಉಪಾಧ್ಯಕ್ಷ ಕೆ.ಎಸ್.ಕಲ್ಲೂರಾಯ, ಶಾರದಾ ಪ.ಪೂ.ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಪತಿ ರಾವ್, ವಿದ್ಯಾಲಯದ ಪ್ರಾಂಶುಪಾಲೆ ಸುನೀತಾ ವಿ. ಮಡಿ ಉಪಸ್ಥಿತರಿದ್ದರು.
ವಿದ್ಯಾಲಯದ ಉಪ-ಪ್ರಾಂಶುಪಾಲ ದಯಾನಂದ ಕಟೀಲ್ ಸ್ವಾಗತಿಸಿದರು. ಶಿಕ್ಷಕಿಯರಾದ ನಂದಿತಾ ರಾಣಿ ಕಾರ್ಯಕ್ರಮ ನಿರೂಪಿಸಿದರು. ಮಾಲತಿ ಬಿ.ವಂದಿಸಿದರು.
ಜ್ಞಾನ-ವಿಜ್ಞಾನ ಮೇಳದಲ್ಲಿ ವಿಜ್ಞಾನ-ವೇದಗಣಿತ, ರಸಪ್ರಶ್ನೆ, ಪತ್ರವಾಚನ, ವಿಜ್ಞಾನ ಮಾದರಿ ತಯಾರಿ, ಪ್ರದರ್ಶನ ಇತ್ಯಾದಿ ವಿಷಯಗಳಲ್ಲಿ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು ಜಿಲ್ಲೆಯ ಪುತ್ತೂರು, ಬಂಟ್ವಾಳ, ಸುಳ್ಯ, ಬೆಳ್ತಂಗಡಿ, ಮಂಗಳೂರು ತಾಲೂಕುಗಳಿಂದ ಸುಮಾರು 15 ವಿದ್ಯಾ ಸಂಸ್ಥೆಗಳಿಂದ 500 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ.