ಮಕ್ಕಳಿಗೆ ವ್ಯಾಯಾಮ ಅಗತ್ಯ ಏಕೆ ಮತ್ತು ಹೇಗೆ? ಭಾಗ 2
ಮಕ್ಕಳ ಆರೋಗ್ಯ ಸಲಹೆಗಳು
ಹನ್ನೆರಡು ವಯಸ್ಸಿಗಿಂತಲೂ ಚಿಕ್ಕ ಮಕ್ಕಳಿಗೆ: ಎರಡು ವರ್ಷದ ಮಕ್ಕಳು ನಡೆಯಲು ಕಲಿತುಕೊಂಡ ಬಳಿಕ ನಿಧಾನಗತಿಯಲ್ಲಿ ಓಡಲು, ಕೈಕಾಲುಗಳನ್ನು ಸುಲಭವಾಗಿ ಆಡಿಸಲು, ಏರೋಬಿಕ್ಸ್ ಮತ್ತು ಚಿಕ್ಕ ಪುಟ್ಟ ಆಟಗಳನ್ನು ಆಡುವಂತೆ ಪ್ರೇರೇಪಿಸಿ. ಚೆಂಡನ್ನು ದೂರ ಎಸೆದು ಹಿಡಿಯುವಂತೆ ಮಾಡುವುದು, ಗೋಲಿಗಳನ್ನು ಎತ್ತಿಕೊಳ್ಳುವುದು ಮೊದಲಾದವು ಮಕ್ಕಳ ರಕ್ತಸಂಚಾರವನ್ನು ಹೆಚ್ಚಿಸಿ ಮೂಳೆಗಳ ದೃಢತೆಯನ್ನು ಹೆಚ್ಚಿಸುತ್ತವೆ. ಸ್ನಾಯುಗಳ ಸಾಂದ್ರತೆ ಹೆಚ್ಚಿಸಿ, ಹೆಚ್ಚಿನ ಕ್ಯಾಲೋರಿಗಳು ಬಳಕೆಯಾಗುವ ಮೂಲಕ ಸ್ಥೂಲಕಾಯ ಆವರಿಸದಂತೆ ತಡೆಯುತ್ತವೆ. ಅಲ್ಲದೇ ನರವ್ಯವಸ್ಥೆ ಚುರುಕುಗೊಳ್ಳುವ ಮೂಲಕ ನಿತ್ಯದ ಚಟುವಟಿಕೆ ಮತ್ತು ಕೌಶಲ್ಯವೂ ಹೆಚ್ಚುತ್ತದೆ.
ಹನ್ನೆರಡು ವರ್ಷದ ನಂತರದ ಮಕ್ಕಳು ಹೆಚ್ಚಿನ ಕೌಶಲ್ಯಾಧರಿತ ಆಟಗಳನ್ನು ಆಡಬೇಕು. ಕೊಂಚ ಶಕ್ತಿ ವ್ಯಯಿಸುವ, ಶರೀರವನ್ನು ಬಾಗಿಸುವ, ಚುರುಕಾಗಿ ಕಾರ್ಯನಿರ್ವಹಿಸುವ ಮತ್ತು ಸಂತುಲತೆಯನ್ನು ಕಾಪಾಡುವಂತಹ ಆಟಗಳು ಮತ್ತು ವ್ಯಾಯಾಮಗಳನ್ನು ಅನುಸರಿಸಬೇಕು. ಈ ವ್ಯಾಯಾಮಗಳಲ್ಲಿ ಕೆಲವು ಘಟ್ಟಗಳನ್ನು ಏರ್ಪಡಿಸಿ ಒಂದೊಂದಾಗಿ ಮೇಲೇರಲು ಪ್ರೇರಣೆ ಮತ್ತು ಸೂಕ್ತ ಮಾಹಿತಿ, ಸೂಚನೆಗಳನ್ನು ನೀಡಬೇಕು. ಸಾಧ್ಯವಾದಷ್ಟು ಹೆಚ್ಚಿನ ಶ್ರಮದಾಯಕ ವ್ಯಾಯಾಮಗಳು ಅಂದರೆ ಸೈಕ್ಲಿಂಗ್, ಈಜು, ಟೆನಿಸ್, ಸ್ಕೇಟಿಂಗ್ ಮೊದಲಾದವುಗಳನ್ನು ಅನುಸರಿಸುವಂತೆ ಪ್ರೇರೇಪಿಸಬೇಕು. ಸಾಧ್ಯವಾದಷ್ಟು ತಂಡದಲ್ಲಿ ಆಡುವ ಕಬಡ್ಡಿ, ಕ್ರಿಕೆಟ್, ಫುಟ್ಬಾಲ್ ಮೊದಲಾದ ಕ್ರೀಡೆಗಳನ್ನು ಆಡುವಂತೆಯೂ ಪ್ರೋತ್ಸಾಹಿಸಿ.
ಈ ವಿಷಯಗಳು ನೆನಪಿರಲಿ
1) ಮಕ್ಕಳನ್ನು ಅವರ ಇಚ್ಛೆಗೆ ವಿರುದ್ಧವಾಗಿ ಎಂದಿಗೂ ಯಾವುದೇ ಕ್ರೀಡೆಗೆ ಬಲವಂತವಾಗಿ ಸೇರಿಸಬೇಡಿ
2) ಮಕ್ಕಳನ್ನು ಎಂದಿಗೂ ಭಾರ ಎತ್ತುವ ಕ್ರೀಡೆಗೆ ಸೇರಿಸಬೇಡಿ. ಒಂದು ವೇಳೆ ಮಗುವೇ ಈ ಬಗ್ಗೆ ಆಸಕ್ತಿ ತೋರಿದರೆ ನುರಿತ ಮತ್ತು ವೃತ್ತಿಪರರ ನಿಗಾ ಇವರ ಮೇಲಿರುವಂತೆ ಕ್ರಮ ಕೈಗೊಳ್ಳಿ
3) ಹೊರಗಿನ ಆಟಗಳನ್ನು ಕನಿಷ್ಠ ಒಂದು ಗಂಟೆಯಾದರೂ ಆಡುವಂತೆ ಮಕ್ಕಳಿಗೆ ತಿಳಿಹೇಳಿ.
-ಮಾಹಿತಿ