ದೇಶ: ಪ್ರೇಮ ಮತ್ತು ದ್ರೋಹ
ನಮ್ಮ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಉಲ್ಲೇಖಿಸಿ ಜನಪ್ರಿಯವಾದ ಒಂದು ತಮಾಷೆಯಿದೆ: 2020ರಲ್ಲಿ ಭಾರತವು ವಿಶ್ವದಲ್ಲಿ ಮೊದಲಿಗರಾಗಬೇಕೆಂದು ಅವರ ಆಸೆ. ಅದು ಕೈಗೂಡುವುದು ಅಸಾಧ್ಯವಾದ್ದರಿಂದ ಅವರ ಕನಸನ್ನು ಹೇಗಾದರೂ ಸತ್ಯವಾಗಿಸಬೇಕೆಂದು ಭಾರತದ ಕ್ರಿಕೆಟ್ ತಂಡ 20-20ರಲ್ಲಿ ವಿಶ್ವ ಚಾಂಪಿಯನ್ನರಾದರಂತೆ! ಹೇಗೂ ಇರಲಿ, ಭಾರತದ ಜನ ವಾಸ್ತವವನ್ನು ಅರ್ಥಮಾಡಿಕೊಳ್ಳುವಲ್ಲಿ ಮೊದಲಿನಿಂದಲೂ ಹಿಂದೆ. ನಾವು ವೈಯಕ್ತಿಕವಾಗಿ ಬುದ್ಧಿವಂತರು ಒಟ್ಟಾಗಿ ಮೂರ್ಖರು. ಈ ಸತ್ಯ ನಮಗೆ ಅರ್ಥವಾಗಿಲ್ಲ; ಅರ್ಥವಾಗುವ ಹಾಗೆ ಕಾಣುವುದಿಲ್ಲ. ವಿದೇಶೀಯರು ವೈಯಕ್ತಿಕವಾಗಿ ಮೂರ್ಖರೆಂದು ನಾವು ಭಾವಿಸಿದರೂ ಅವರು ಒಟ್ಟಾಗಿ ಬುದ್ಧಿವಂತರು ಎಂಬುದು ಈಗಾಗಲೇ ಸಾಬೀತಾಗಿದೆ. ಆದರೆ ಇದನ್ನು ನಾವು ಸಾರಾ ಸಗಟು ತಿರಸ್ಕರಿಸುತ್ತೇವೆ. ಆದ್ದರಿಂದಲೇ ಎಲ್ಲ ರಾಷ್ಟ್ರೀಯ ವಿಚಾರಗಳಲ್ಲಿ ಎಲ್ಲ ರಾಷ್ಟ್ರಗಳು ಮುಂದೆ ಸಾಗಿದರೆ ನಾವು ಹಿಂದೆ ಸಾಗುತ್ತೇವೆ. ಇದನ್ನು ಒಪ್ಪಿಕೊಳ್ಳದೆ ನಾವೇ ಮುಂದೆ ಇದ್ದೇವೆಂದು ಭಾವಿಸಿಕೊಂಡು ನಮ್ಮ ಬೆನ್ನನ್ನೇ ತಟ್ಟಿಕೊಂಡು ಬೆತ್ತಲೆ ಅರಸನ ರಾಜರಹಸ್ಯವನ್ನು ಕಾಪಾಡಿಕೊಂಡು ಇದು ತನಕವೂ ಬಂದಿದ್ದೇವೆ.
ದೇಶಪ್ರೇಮದ ಅಪಾರ ಶಕ್ತಿಯನ್ನು ಹೊಂದಿದ ಜನರು ನಮ್ಮಲ್ಲಿದ್ದಾರೆ. ಜಗತ್ತಿನ ಯಾವುದೇ ವಿಚಾರವನ್ನು ನೀವು ಚರ್ಚಿಸಿ: ಅದರಲ್ಲಿ ಭಾರತವು ಮೊದಲಿಗನೆಂದು ಹೇಳಲು, ತರ್ಕಿಸಲು, ವಾದಿಸಲು ನಮ್ಮಲ್ಲಿ ದೇಶಭಕ್ತರ ದಂಡೇ ಇದೆ. ಒಂದು ಆಟದ ಗೊಂಬೆಯಿದೆ: ಅದು ಆಕಾಶಕ್ಕೆ ಹೇಗೇ ಹಾರಿಸಿದರೂ ನೆಲಕ್ಕೆ ಬೀಳುವಾಗ ನೆಟ್ಟಗೆ ಬೀಳುತ್ತದೆ. ಹೀಗೆ ವಾಸ್ತವವೇನೇ ಇರಲಿ, ನಮ್ಮ ತರ್ಕಕ್ಕೆ ತಲುಪುವಾಗ ಅದು ನಮ್ಮ ಮೂಗಿಗೆ (ಅದೆಷ್ಟೇ ವಾರೆಯಿದ್ದರೂ) ನೇರವಾಗಿರುತ್ತದೆ. ದೇಶಪ್ರೇಮವಿರಲಿ. ಹಿತಮಿತವಾಗಿ ಇರಲಿ. ನೈಜವಾಗಿರಲಿ. ನಮ್ಮ ದೇಶವನ್ನು ನಾವು ಪ್ರೀತಿಸುವುದು ಅದು ಎಲ್ಲದರಲ್ಲೂ ಸರಿಯಿದೆಯೆಂಬ ಕಾರಣಕ್ಕಲ್ಲ; ಅದು ನನ್ನ-ನಮ್ಮ ದೇಶ ಎಂಬುದಕ್ಕೆ. ಮೊನ್ನೆ ಮೊನ್ನೆ ನಮ್ಮ ರಕ್ಷಣಾ ಸಚಿವರು ಪಾಕಿಸ್ತಾನಕ್ಕೆ ಹೋಗುವುದೆಂದರೆ ನರಕಕ್ಕೆ ಹೋದಂತೆ ಎಂದು ಭಾಷ್ಯ-ಭವಿಷ್ಯ ಹೇಳಿದರು. ಇದಕ್ಕೆ ಪ್ರತಿಯಾಗಿ ಹಿಂದೆ ಪಾಕಿಸ್ತಾನಕ್ಕೆ ಯುವಸಂಸದರ ತಂಡದಲ್ಲಿ ಹೋಗಿದ್ದ ಕನ್ನಡತಿ ರಮ್ಯಾ (ಈಕೆ ಕನ್ನಡದ ಪ್ರಖ್ಯಾತ ನಟಿಯೂ ಹೌದು) ರಕ್ಷಣಾ ಸಚಿವರ ಮಾತನ್ನು ಒಪ್ಪದೆ ಪಾಕಿಸ್ತಾನದ ಜನರು ಒಳ್ಳೆಯವರು ಎಂದು ಪ್ರತಿಕ್ರಿಯಿಸಿದರು. ಇದರಲ್ಲಿ ವಿಶೇಷವೇನಿರಲಿಲ್ಲ. ವಿದೇಶಕ್ಕೆ ಹೋದ ಭಾರತೀಯಳೊಬ್ಬಳು ಅಲ್ಲಿನ ಜನರ ಬಗ್ಗೆ ಒಳ್ಳೆಯ ಭಾವನೆಯನ್ನು ವ್ಯಕ್ತಪಡಿಸಿದಳು ಎಂಬಲ್ಲಿಗೆ ಈ ವಿಚಾರ ಮುಗಿಯಬೇಕಿತ್ತು. ಒಂದು ವೇಳೆ ಇದನ್ನು ಒಪ್ಪದವರು ಸರಿ ಆಕೆಗೆ ನಮ್ಮಷ್ಟು ದೇಶಭಕ್ತಿಯಿಲ್ಲ ಎಂದು ತಿರಸ್ಕರಿಸಿ ಸುಮ್ಮನಿರಬಹುದಾಗಿತ್ತು. ಎಷ್ಟಾದರೂ ನಮ್ಮದು ಅತ್ಯಂತ ಸಹನೆಶೀಲ ರಾಷ್ಟ್ರ ತಾನೇ?
ಆದರೆ ವಿಷಯ ಇಲ್ಲಿಗೇ ನಿಲ್ಲಲಿಲ್ಲ. ಒಬ್ಬ ಮೇಧಾವಿ ವಕೀಲರು ಆಕೆಯ ವಿರುದ್ಧ ದೇಶದ್ರೋಹದ ಆಪಾದನೆ ಮಾಡಿ ನ್ಯಾಯಾಲಯದಲ್ಲಿ ದೂರು ನೀಡಿದರು. ಇದು ಸಹಜ ಅಂತ್ಯವನ್ನು ಕಾಣುತ್ತದೆಂದು ನ್ಯಾಯಾಲಯದ, ಕಾಯ್ದೆ-ಕಾನೂನಿನ ಎಳ್ಳಷ್ಟಾದರೂ ಅರಿವಿರುವ ಮನುಷ್ಯರಿಗೆ ಗೊತ್ತಿದೆಯಾದರೂ ಹೊರಗಿನ ಪ್ರಚಾರ ಪ್ರಪಂಚಕ್ಕೆ ಇದೊಂದು ಭಾರೀ ಸುದ್ದಿ. ನಮ್ಮ ಪತ್ರಿಕಾ ಮಾಧ್ಯಮದವರೋ ಇದನ್ನು ರಮ್ಯಾರ ಮೇಲೆ ಆಕಾಶ ಮಗುಚಿಬಿತ್ತೆಂಬಂತೆ ವರದಿ ಮಾಡುತ್ತಾರೆ. ವಿದ್ಯುನ್ಮಾನ ಮಾಧ್ಯಮದವರಂತೂ ಬಗೆಬಗೆಯ ಮಸಾಲೆ, ರಂಗು ಸೇರಿಸಿ, ಇದನ್ನೊಂದು ಚರ್ಚಾವೇದಿಕೆ ಮಾಡಿ ಸಾಕಷ್ಟು ಜನರಲ್ಲಿ (ಜ್ಯೋತಿಷಿಗಳಲ್ಲಿ ಪ್ರಶ್ನಿಸಿದಂತೆ) ಇದು ಏನಾಗಬಹುದು? ರಮ್ಯಾ ಜೈಲು ಸೇರುವರೇ? ಬಿಡುಗಡೆಯಾಗುವರೇ? ಎಂದೆಲ್ಲ ಪ್ರಶ್ನಿಸಿ ಕೊನೆಗೆ ‘ಕಾದು ನೋಡೋಣ’, ‘ಮತ್ತೆ ಭೇಟಿಯಾಗೋಣ’ ಎಂದೆಲ್ಲ ಹೇಳುತ್ತಾ ಜಾಹೀರಾತನ್ನು ಪ್ರದರ್ಶಿಸಿ ಮುಂದಿನ ಕಾರ್ಯಕ್ರಮಕ್ಕೆ ಹಾ(ಜಾ)ರುತ್ತಾರೆ. ಕಾನೂನಿನ ಅಜ್ಞಾನದ ಭವ್ಯ ಪ್ರದರ್ಶನವು ನಡೆದು ವೀಕ್ಷಕರ ದೇಶಭಕ್ತಿ ಇನ್ನಷ್ಟು ಹೆಚ್ಚಾಗುತ್ತದೆ. ಅಷ್ಟರಲ್ಲಿ ರಮ್ಯಾ ಕ್ಷಮೆ ಕೋರಬೇಕೆಂಬ ಬೇಡಿಕೆಯೂ ಬಂದಿದೆ. ಆಕೆ ತಾನು ಯಾವ ತಪ್ಪುಹೇಳಿಕೆಯನ್ನೂ ನೀಡಿಲ್ಲವೆಂದೂ ಆದ್ದರಿಂದ ಕ್ಷಮೆ ಕೇಳುವ ಪ್ರಮೇಯವೇ ಇಲ್ಲವೆಂದೂ ಹೇಳಿದರು. ಒಬ್ಬ ಹೆಣ್ಣುಮಗಳಿಗೆ ಇಷ್ಟೊಂದು ಧೈರ್ಯ ಬಂದದ್ದಕ್ಕೆ ಖುಷಿಪಡಬೇಕು. ಈ ಧೈರ್ಯ ಈಗ ಸಹಜವೇ ಏಕೆಂದರೆ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲೂ ಪದಕಪಟ್ಟಿಯಲ್ಲಿ ಹೆಸರಿಲ್ಲದೆ ಅಳಿದುಹೋಗುತ್ತಿದ್ದ ಭಾರತದ ಮಾನವನ್ನು ಉಳಿಸಿದ್ದೂ ಮಹಿಳೆಯರೇ! ಘಟನೆ ಚರ್ಚೆಗೆ ವಸ್ತು ಆಗಬಾರದು ಎಂಬ ನನ್ನ ಹೇಳಿಕೆಗೆ ತದ್ವಿರುದ್ಧವಾಗಿ ನಾನು ಈ ಘಟನೆಯನ್ನು ಚರ್ಚಿಸುತ್ತಿದ್ದೇನೆಂದರೆ ಅದಕ್ಕೆ ಕಾರಣ ಇದು ಮಾಧ್ಯಮಗಳಲ್ಲಿ ಪ್ರಚಾರವಾಗುವ ಘಟನೆಯಾಗಿ ಮಾತ್ರವಲ್ಲದಿರುವುದು. ಇದಕ್ಕೆ ಪೂರಕವಾಗಿ ಒಂದಷ್ಟು ಯೋಚನೆಗಳನ್ನು ಹರಿಯಬಿಡೋಣ:
ವೈರವಿಲ್ಲದೆ ಇನ್ನೊಬ್ಬನನ್ನು ದ್ವೇಷಿಸುವುದು, ಹಿಂಸಿಸುವುದು ಒಂದು ರೀತಿಯ ಮನೋವಿಕಲ್ಪ. ಇದಕ್ಕೆ ಅಪವಾದವೆಂದರೆ ಯೋಧರು ಮಾತ್ರ. ದೇಶ-ದೇಶಗಳ ನಡುವಣ ಯುದ್ಧದಲ್ಲಿ ವೈರಿಪಡೆಯ ಯೋಧನನ್ನು ನಮ್ಮ ಯೋಧ ಕೊಲ್ಲುತ್ತಾನೆಂದರೆ ಅದು ಆ ಎದುರಾಳಿಯ ಮೇಲಣ ವೈರದಿಂದಲ್ಲ. ಆತ ತಾತ್ವಿಕವಾಗಿ ಎದುರಾಳಿ ಎಂಬ ಕಾರಣಕ್ಕಾಗಿ. ಅದಕ್ಕೇ ಶರಣಾಗತನಾದ, ಇಲ್ಲವೇ ಮಡಿದ ವೈರಿಯ ಮೇಲೆ ಸೇಡು ತೀರಿಸಿಕೊಳ್ಳಲು ಅಂತಾರಾಷ್ಟ್ರೀಯ ಕಾನೂನಿನಲ್ಲಿ, ಮಾನವ ಹಕ್ಕುಗಳಲ್ಲಿ ಅವಕಾಶವಿಲ್ಲ. ಹಾಗೆಯೇ ಯಾವೊಂದು ರಾಷ್ಟ್ರದ ಜನರೆಲ್ಲರೂ ಕೆಟ್ಟವರಾಗಿರುವುದಿಲ್ಲ. ಅವರವರ ನಂಬಿಕೆ ಮತ್ತು ಆಶಯಗಳಿಗನುಗುಣವಾಗಿ ಅವರವರು ರಾಷ್ಟ್ರೀಯ ಮತ್ತು ಜಾಗತಿಕ ಸಂಬಂಧಗಳನ್ನು ಕಟ್ಟುತ್ತಾರೆ. ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಹೀಗೆ ಒಂದೊಂದು ಸಂದರ್ಭಗಳಲ್ಲಿ ಈ ಸ್ನೇಹ ಸೇತುವೆ ತಾತ್ಕಾಲಿಕವಾಗಿ ಕಡಿಯಬಹುದು. ಆದರೆ ಇದನ್ನು ಪರಿಹರಿಸಿಕೊಳ್ಳುವುದು ಶಾಶ್ವತವಾದ ಆಯ್ಕೆಯಾಗಿರಬೇಕು. ಇಲ್ಲವಾದರೆ ಮೂರನೆ ಒಂದು ವೇದಿಕೆಯಲ್ಲಿ ಸಿಕ್ಕಾಗ ಮುಖ-ಮುಖ ಎದುರಾದರೂ ಅಪರಿಚಿತರಂತೆ ಕೂತಿರಬೇಕಾದ ಸನ್ನಿವೇಶ ಎದುರಾಗಬಹುದು. ರಾಜಕೀಯದಲ್ಲಂತೂ ಇದು ಬಹಳ ಹೆಚ್ಚು. ನಮ್ಮ ದೇಶದ ನಾಯಕರು ವೈರಿ ರಾಷ್ಟ್ರವೊಂದರ ನಾಯಕರನ್ನು ಭೇಟಿಯಾದಾಗ ಹೇಗೆ ಮಾತನಾಡು ತ್ತಾರೆ? ಅಥವಾ ಪ್ರಸ್ತುತ ಭಾರತ-ಪಾಕಿಸ್ತಾನದ ಸಂಬಂಧವನ್ನೇ ಗಮನಿಸಿ ದರೂ ಭಾರತದ ರಾಜತಾಂತ್ರಿಕರು ಪಾಕಿಸ್ತಾನದಲ್ಲೂ ಪಾಕಿಸ್ತಾನದ ರಾಜತಾಂತ್ರಿಕರು ಭಾರತದಲ್ಲೂ ಸುರಕ್ಷಿತವಾಗಿ ಹೇಗಿರುತ್ತಾರೆ? ಅಂದರೆ ಎಲ್ಲವನ್ನೂ ಮೀರುವ ಒಂದು ಘನತೆ ಗೌರವದಿಂದ ವ್ಯವಹರಿಸಬೇಕಾದ್ದು ಪ್ರಜ್ಞಾವಂತಿಕೆಯ ಲಕ್ಷಣವಾಗುತ್ತದೆ. ಇದನ್ನು ಮೀರಿದರೆ ಅದು ರಾಜಕೀಯವಾಗುವುದಿಲ್ಲ; ಲಫಂಗತನವಾಗುತ್ತದೆ.
ನಮ್ಮ ರಕ್ಷಣಾ ಸಚಿವರು ಪಾಕಿಸ್ತಾನವನ್ನು ಯಾಕೆ ನರಕಸದೃಶವಾಗಿಸಿದರು ಎಂಬುದಕ್ಕೆ ಸಮರ್ಥನೆಯಿಲ್ಲ. ಅವರು ಅಥವಾ ಅವರ ಮಾತನ್ನು ನಂಬುವವರು ಇಲ್ಲವೇ ಬೆಂಬಲಿಸುವವರು ಈ ಅಭಿಪ್ರಾಯಕ್ಕೆ ಸಮರ್ಥನೆಯನ್ನು ಹುಡುಕಲೂ ಬಯಸುವುದಿಲ್ಲ. ಬಹುಪಾಲು ಇಂತಹ ಅಭಿಪ್ರಾಯಗಳು ಜನಪ್ರಿಯತೆಗೆ, ಇಲ್ಲವೇ ಇನ್ಯಾವುದೋ ದುರುದ್ದೇಶಕ್ಕೆ ಬಳಕೆಯಾಗುತ್ತವೆ. ರಕ್ಷಣಾ ಸಚಿವರಾಗಲೀ, ಇತರರಾಗಲೀ ಇಂತಹ ನರಕದಲ್ಲಿ ನಮ್ಮ ರಾಜತಾಂತ್ರಿಕರು ಯಾಕಿರಬೇಕು, ಅವರನ್ನು ಕರೆಸಿಕೊಳ್ಳಿ ಎಂದು ಹೇಳಲಿಲ್ಲ. ನಮ್ಮ ಪ್ರಧಾನಿ ತಮ್ಮ ಸಿಂಹಾಸನಾರೋಹಣಕ್ಕೆ ಪಾಕಿಸ್ತಾನದ ಪ್ರಧಾನಿಯನ್ನು ಯಾಕೆ ಆಮಂತ್ರಿಸಿದರು ಅಥವಾ ಅವರೊಂದಿಗೆ ಉಡುಗೊರೆಗಳ ವಿನಿಮಯಮಾಡಿಕೊಂಡರು, ಅಥವಾ ಪೂರ್ವಸೂಚನೆಯಿಲ್ಲದೆ ಅವರ ಹುಟ್ಟು ಹಬ್ಬಕ್ಕೆ ಹೋಗಿ ಶುಭಾಶಯಗಳನ್ನು ಸಲ್ಲಿಸಿದರು ಎಂದು ಪ್ರಶ್ನಿಸಲೇ ಇಲ್ಲ.
ರಕ್ಷಣಾ ಸಚಿವರು ರಾಜಕಾರಣಿಯಾಗಿ ಹೀಗೆ ಹೇಳಿದರು ಮತ್ತು ಅದಕ್ಕೆ ರಮ್ಯಾ ಎಂಬ ಯುವ ರಾಜಕಾರಣಿ ಪ್ರತಿಕ್ರಿಯಿಸಿದರು ಎಂಬಲ್ಲಿಗೆ ಈ ಪ್ರಸಂಗ ಮುಗಿಯಬೇಕಿತ್ತು. ರಾಜಕೀಯದಲ್ಲಿ-ಅದು ರಾಷ್ಟ್ರೀಯವೇ ಇರಲಿ, ಅಂತಾರಾಷ್ಟ್ರೀಯವೇ ಇರಲಿ-ಶಾಶ್ವತ ಸ್ನೇಹವಾಗಲಿ ಶಾಶ್ವತ ವೈರವಾಗಲಿ ಇರುವುದಿಲ್ಲ. ಅವರಿಗೆ ಶಾಶ್ವತ ಆಸಕ್ತಿಗಳಷ್ಟೇ ಇರುತ್ತವೆ. ಅಲ್ಲವಾದರೆ ಪಾಕಿಸ್ತಾನದೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿರುವ ಅಮೆರಿಕ, ಚೀನಾ ಮುಂತಾದ ಅನೇಕ ರಾಷ್ಟ್ರಗಳೂ ಭಾರತದ ಪಾಲಿಗೆ ನರಕಸದೃಶವಾಗಬೇಕಿತ್ತು.
ಆದ್ದರಿಂದ ನರಕ ಎಂಬುದೊಂದು ರಾಜಕೀಯ ರೂಪಕ. ಆದರೆ ಸಮಸ್ಯೆಯಾಗುವುದು ಅದನ್ನು ರಾಜಕೀಯದ ಇತರ ಅಂಚಿನ ಗುಂಪುಗಳು (fringe elements) ಗಂಭೀರವಾಗಿ, ಅತಾತ್ವಿಕವಾಗಿ ಮತ್ತು ಅತಿಯಾದ ವಾಚ್ಯಾರ್ಥದಲ್ಲಿ ಸ್ವೀಕರಿಸಿದಾಗ. ಅವು ಇಂತಹ ಸಂದರ್ಭಗಳನ್ನು ತಮ್ಮ ವೈಯಕ್ತಿಕ ಮೆಹನತ್ತಿಗೆ, ಬಿಟ್ಟಿ ಪ್ರಚಾರಕ್ಕೆ, ಸಾರ್ವಜನಿಕರ ಗಮನ ಸೆಳೆಯುವುದಕ್ಕೆ ಮತ್ತು ಆ ಮೂಲಕ ಧನ-ಜನಬೆಂಬಲ ಗಳಿಸುವುದಕ್ಕೆ ಬಳಸಿಕೊಳ್ಳುತ್ತವೆ. ಅದರ ಅಪಾಯಗಳ ಅರಿವು ಅವುಗಳಿಗಿರುವುದಿಲ್ಲ. ಏಕೆಂದರೆ ಅವುಗಳು ಯಾವುದಾದರೊಂದು ರಾಜಕೀಯ ಪಕ್ಷದ ಕೃಪಾಛತ್ರದಡಿ ಇರುತ್ತವಾದರೂ ಆ ಗುಂಪುಗಳನ್ನು ಆ ಪಕ್ಷ ಇಂತಹ ಪುಂಡುಪೋಕರಿತನಕ್ಕಷ್ಟೇ ಉಪಯೋಗಿಸುತ್ತವೆ. ಈ ಶೋಷಣೆಯ ಕುರಿತು ಯೋಚಿಸುವಷ್ಟು ಚಿಂತನಾ ಶಕ್ತಿ ಅವರಿಗಿರುವುದಿಲ್ಲ. ಪರಿಣಾಮವಾಗಿ ಅವರು ಇಂತಹ ವಿವಾದ, ಗಲಭೆ, ಮತ್ತು ಆ ಮೂಲಕ ಎದುರಾಗುವ ಎಡರು-ತೊಡರುಗಳಿಗೆ ಬಲಿಯಾಗುತ್ತಾರೆ. ಪಾಕಿಸ್ತಾನ ಒಂದು ಕಾಲದಲ್ಲಿ ಭಾರತದೊಂದಿಗೆ ಒಂದೇ ಭೂಭಾಗ ವಾಗಿತ್ತು ಎಂಬುದನ್ನು ನಾವು ಮರೆಯಬಾರದು. ಭಾರತ ಅನೇಕ ತುಂಡು ರಾಜ್ಯಗಳ, ಅರಸೊತ್ತಿಗೆಗಳ ಸಮೂಹವಾಗಿದ್ದು ಬ್ರಿಟಿಷರಡಿ ಒಂದಾಯಿತು. ಮತ್ತೆ 1947ರಲ್ಲಿ ವಿಭಜನೆಯಾಯಿತು. ದಿಲ್ಲಿಯಲ್ಲಿ ಹುಟ್ಟಿದ ಮುಷರಫ್ ಪಾಕಿಸ್ತಾನದ ಅಧ್ಯಕ್ಷರಾದರೆ, ಲಾಹೋರಿನಲ್ಲಿ ಹುಟ್ಟಿದ ಅಡ್ವ್ವಾಣಿ ಭಾರತದ ಉಪಪ್ರಧಾನಿಯಾದರು. ಜಿನ್ನಾರನ್ನು ಅಡ್ವ್ವಾಣಿ ಒಬ್ಬ ‘ಜಾತ್ಯತೀತ’ ಎಂದು ಕೊಂಡಾಡಿದರು. (ಈ ಮಾತಿಗೆ ಅವರು ತನ್ನ ಪಕ್ಷದಲ್ಲೇ ಭಾರೀ ಬೆಲೆ ತೆರಬೇಕಾಯಿತು ಅನ್ನುವ ವಿಚಾರ ಬೇರೆ!) ಆದರೆ ನಾವು ನೆನಪಿಡಬೇಕಾದ್ದು ಈ ಎರಡೂ ದೇಶಗಳಿಗೆ ತಾಯಿಬೇರು ಒಂದೇ ಎಂಬುದನ್ನು.
ಆದ್ದರಿಂದ ದೇಶದ್ರೋಹದ ಮಾತನ್ನಾಡುತ್ತಿರುವವರು ನಮ್ಮ ಸಂಸ್ಕೃತಿ ಯನ್ನು ಇನ್ನಷ್ಟು ಆಳಕ್ಕೆ ತಳ್ಳುತ್ತಿದ್ದಾರೆಯೇ ಹೊರತು ಯಾರನ್ನೂ ಉದ್ಧರಿ ಸುವುದಿಲ್ಲ. ಪಾಕಿಸ್ತಾನದ ಭಾಗವಾಗಿದ್ದ ಬಾಂಗ್ಲಾದೇಶವು ಈಗ ನಮ್ಮ ಪರಮ ಮಿತ್ರರಲ್ಲೊಂದು ಎಂಬುದನ್ನು ಸ್ಮರಿಸಿದರೆ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕೀತು. ದೇಶದ ಜನರ ಗಮನವನ್ನು ಸೆಳೆಯಲು ಯಾರಾದರೂ ಏನಾದರೂ ಹೇಳಿದರೆ ಆ ಮಾತು ಮಾತಾಗಿ ಉಳಿಯಬೇಕೇ ವಿನಾ ದೇಶಭಾಷೆಯಾದರೆ ಅದು ದೇಶಪ್ರೇಮವಾಗುವುದಿಲ್ಲ; ದೇಶದ್ರೋಹವಾಗುತ್ತದೆ. ಇಷ್ಟು ಹೇಳು ವಾಗ ಎಲ್ಲಿ ನನ್ನ ವಿರುದ್ಧವೂ ಭಾರತೀಯ ದಂಡ ಸಂಹಿತೆಯ ಕುಖ್ಯಾತ 124-ಎ ಕಲಮಿನನ್ವಯ ದೂರು ದಾಖಲಾಗುತ್ತದೊ ಎಂಬ ಭಯವೂ ನನಗಿದೆ!