ಕಡಬ: ಟೂರಿಸ್ಟ್ ವ್ಯಾನ್-ಖಾಸಗಿ ಜೀಪ್ ಚಾಲಕರ ಮಾತಿನ ಚಕಮಕಿ
ಕಡಬ, ಆ.26: ಗುತ್ತಿಗಾರಿನಿಂದ ಬಳಕ್ಕ-ಪಂಜ ಮಾರ್ಗವಾಗಿ ಕಡಬಕ್ಕೆ ಟೂರಿಸ್ಟ್ ವ್ಯಾನೊಂದು ಟ್ರಿಪ್ ನಡೆಸುವುದಕ್ಕೆ ಆಕ್ಷೇಪಿಸಿ ಪಂಜ-ಕಡಬ ರೂಟ್ನಲ್ಲಿ ಟ್ರಿಪ್ ನಡೆಸುವ ಕಾಸಗಿ ಜೀಪ್ನವರು ವ್ಯಾನ್ಗೆ ಜೀಪ್ ಅಡ್ಡವಿಟ್ಟ ಘಟನೆ ಶುಕ್ರವಾರಕಡಬದಲ್ಲಿ ನಡೆದಿದೆ. ಗ್ರಾಮೀಣ ಪ್ರದೇಶವಾದ ಗುತ್ತಿಗಾರಿನ ಬಳಕ್ಕ ಮೂಲಕ ಸಾರ್ವಜನಿಕರಿಗೆ ವಾಹನದ ವ್ಯವಸ್ಥೆ ಇಲ್ಲದಿರುವುದನ್ನು ಮನಗಂಡ ಸ್ಥಳೀಯರೋರ್ವರು ಶುಕ್ರವಾರದಿಂದ ಟೂರಿಸ್ಟ್ ವ್ಯಾನ್ನಲ್ಲಿ ಟ್ರಿಪ್ ಆರಂಭಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಪಂಜ-ಕಡಬ ಸಡುವೆ ಸಂಚರಿಸುವ ಖಾಸಗಿ ವಾಹನಗಳವರು ಜೀಪನ್ನು ಅಡ್ಡವಿಟ್ಟು ಪ್ರತಿಭಟಿಸಿದ ಸಂದರ್ಭ ಕಡಬ ಸಂಗಮ ಟೂರಿಸ್ಟ್ ಜೀಪು ಚಾಲಕ ಮಾಲಕ ಸಂಘದವರು ವ್ಯಾನಿನವರ ಬೆಂಬಲಕ್ಕೆ ನಿಂತರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಕೆಎಸ್ಸಾರ್ಟಿಸಿ ಕಡಬ ಸಂಚಾರ ನಿಯಂತ್ರಕರು ವ್ಯಾನ್ ಸಂಚರಿಸುವುದಕ್ಕೆ ಆಕ್ಷೇಪಿಸಿ ವ್ಯಾನಿನ ನೋಂದಣಿ ಸಂಖ್ಯೆಯನ್ನು ಮಾತ್ರ ಬರೆದಿದ್ದು, ಖಾಸಗಿ ವಾಹನಗಳ ಸಂಖ್ಯೆಯನ್ನು ಬರೆಯಲಿಲ್ಲ ಎಂದು ಸ್ಥಳದಲ್ಲಿ ಮಾತಿನ ಚಕಮಕಿ ಉಂಟಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕಡಬ ಪೊಲೀಸರು ಇತ್ತಂಡಗಳವರನ್ನು ಶನಿವಾರ ಠಾಣೆಗೆ ಬರುವಂತೆ ಸೂಚಿಸಿದರು.