ಜ.7ರಿಂದ ಬೆಂಗಳೂರಿನಲ್ಲಿ ‘ಪ್ರವಾಸಿ ಭಾರತೀಯ ದಿವಸ್’
ಹೊಸದಿಲ್ಲಿಯಲ್ಲಿ ‘ಲಾಂಚನ, ವೆಬ್‌ಸೈಟ್’ ಲೋಕಾರ್ಪಣೆ
ಹೊಸದಿಲ್ಲಿ/ಬೆಂಗಳೂರು, ಆ. 26: ಹದಿನಾಲ್ಕನೆ ‘ಪ್ರವಾಸಿ ಭಾರತೀಯ ದಿವಸ್’ ಅನ್ನು 2017ರ ಜನವರಿ 7ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಏರ್ಪಡಿಸಿದ್ದು ಕಾರ್ಯಕ್ರಮ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಸಿಎಂ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಹೊಸದಿಲ್ಲಿಯ ಜವಾಹರಲಾಲ್ ನೆಹರೂ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಸುಷ್ಮಾ ಸ್ವರಾಜ್ ಅವರು ‘ಪ್ರವಾಸಿ ಭಾರತೀಯ ದಿವಸ್-2017’ರ ‘ಲಾಂಚನ’ ಮತ್ತು ವೆಬ್‌ಸೈಟ್‌ನ್ನು ಅನಾವರಣಗೊಳಿಸಲಾಯಿತು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ಮೂಲಕ ‘ಪ್ರವಾಸಿ ಭಾರತೀಯ ದಿವಸ್’ನ್ನ್ನು ಸ್ಮರಣೀಯ ಸಮಾವೇಶವನ್ನಾಗಿಸಲು ಕರ್ನಾಟಕ ಸರಕಾರ ಬದ್ಧವಾಗಿದೆ ಎಂದು ಪ್ರಕಟಿಸಿದರು.
ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ಭಾರತೀಯ ದಿವಸ್‌ನಲ್ಲಿ ಭಾಗವಹಿಸುವಂತೆ ಮತ್ತು ಕರ್ನಾಟಕದ ಪ್ರತ್ಯಕ್ಷ ಅನುಭವವನ್ನು ಪಡೆಯುವಂತೆ ನಾನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿದ್ದೇನೆ ಎಂದ ಸಿದ್ದರಾಮಯ್ಯ, ಎಲ್ಲ್ಲರೂ ಒಗ್ಗಟ್ಟಿನಿಂದ ‘ಪ್ರವಾಸಿ ಭಾರತೀಯ ದಿವಸ್’ನ್ನು ಯಶಸ್ವಿ ಸಮಾರಂಭವನ್ನಾಗಿಸೋಣ ಎಂದು ಹೇಳಿದರು.
ಆತಿಥ್ಯಕ್ಕೆ ಅಭಿನಂದೆ: ಬೆಂಗಳೂರು ನಗರದಲ್ಲಿ ಪ್ರವಾಸಿ ಭಾರತೀಯ ದಿವಸ್ ಹದಿನಾಲ್ಕನೆ ಆವೃತ್ತಿಯ ಆತಿಥ್ಯ ವಹಿಸಲು ಕರ್ನಾಟಕಕ್ಕೆ ಅವಕಾಶ ಒದಗಿಸಿರುವುದಕ್ಕೆ ವಿದೇಶಾಂಗ ವ್ಯವಹಾರಗಳ ಮಂತ್ರಾಲಯಕ್ಕೆ ಅಭಿನಂದನೆ ಸಲ್ಲಿಸಿವೆ. ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸುವ ಹೆಗ್ಗುರಿ ರಾಜ್ಯ ಸರಕಾರದ್ದು ಎಂದು ಹೇಳಿದರು.
ದೇಶದ ಇತಿಹಾಸದಲ್ಲಿ ಜ.9 ಅತ್ಯಂತ ಗಮನಾರ್ಹ ದಿನ. 1915ರ ಜನವರಿ 9ರಂದೇ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಮಹಾತ್ಮ ಗಾಂಧೀಜಿಯವರನ್ನು ಗಣ್ಯಾತಿ ಗಣ್ಯ ಪ್ರವಾಸಿ ಎಂಬುದಾಗಿ ಪರಿಗಣಿಸಲಾಗಿದೆ. ಗಾಂಧೀಜಿಯವರು ಅಂದಿನಿಂದ ಭಾರತದ ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಿದರು, ಭಾರತೀಯರ ಜೀವನದ ರೂಪವನ್ನೆ ಶಾಶ್ವತವಾಗಿ ಬದಲಾಯಿಸಿದರು ಎಂದು ಸ್ಮರಿಸಿದರು.
ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಮತ್ತು ಗಣತಂತ್ರ ರಾಜ್ಯವಾಗಿರುವ ನಮ್ಮ ಮಹಾನ್ ರಾಷ್ಟ್ರದ ಪ್ರಜಾಸತ್ತಾತ್ಮಕ ತತ್ವಗಳನ್ನು ನಾವೆಲ್ಲ ಸ್ವತಃ ನೆನಪಿಸಿಕೊಳ್ಳುವ ಮತ್ತು ಸಂಭ್ರಮಪಡುವ ಸಂದರ್ಭ ‘ಪ್ರವಾಸಿ ಭಾರತೀಯ ದಿವಸ್’ ಎಂದ ಅವರು, ಭಾರತದ ಸುಮಾರು 25 ದಶಲಕ್ಷ ಜನರು ವಿದೇಶದಲ್ಲಿ ನೆಲೆಸಿದ್ದಾರೆ. ವಿಶ್ವಬ್ಯಾಂಕಿನ ಅಂಕಿ ಅಂಶಗಳ ಅನುಸಾರ 2015ರ ಅವಧಿಯಲ್ಲಿ ಭಾರತೀಯರು ಸುಮಾರು 69 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಸಂದಾಯಿಸಿದ್ದಾರೆ. ಇದು ವಿಶ್ವದಲ್ಲಿಯೇ ಅತ್ಯಧಿಕ ಪ್ರಮಾಣವಾಗಿದೆ. ವಿಶ್ವದಾದ್ಯಂತ ನೆಲಿಸಿರುವ ಭಾರತೀಯರು ಅವರ ಪ್ರಸಿದ್ಧಿ ಮತ್ತು ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ಖ್ಯಾತಿ ಗಳಿಸುತ್ತಿದ್ದಾರೆ. ಆದರೂ ಅವರು ಭಾರತೀಯತೆಯ ಭಾವನೆಗೆ ಬದ್ಧರಾಗಿದ್ದಾರೆ. ಭಾರತದೊಂದಿಗೆ ಭಾವನಾತ್ಮಕ ಬಾಂಧವ್ಯ ಹೊಂದಿದ್ದಾರೆ ಎಂದರು.
ಕರ್ನಾಟಕವು ವಿಸ್ತೀರ್ಣದಲ್ಲಿ ಭಾರತದಲ್ಲೆ 7ನೆ ಅತಿದೊಡ್ಡ ರಾಜ್ಯ ಹಾಗೂ ಜನಸಂಖ್ಯೆಯಲ್ಲಿ ಎಂಟನೆ ಸ್ಥಾನದಲ್ಲಿದೆ. ಇಲ್ಲಿನ ಕನ್ನಡಿಗರು ವಿಶ್ವದಾದ್ಯಂತ ಕರ್ನಾಟಕವನ್ನು ಪ್ರತಿನಿಧಿಸುವರು. ಮೇಲಾಗಿ ಕನ್ನಡಿಗರು ಅತ್ಯುನ್ನತ ಕೌಶಲ್ಯಕ್ಕೆ ಪ್ರಸಿದ್ಧಿಪಡೆದಿದ್ದಾರೆ. ಅವರು ವಾಸಿಸುತ್ತಿರುವ ರಾಷ್ಟ್ರಗಳಿಗೆ ಅಮೋಘ ಕೊಡುಗೆ ನೀಡುತ್ತಿದ್ದಾರೆ. ಸುಮಾರು ನಾಲ್ಕು ಲಕ್ಷ ಕನ್ನಡಿಗರು ದೇಶಗಳಲ್ಲಿ ನೆಲೆಸಿದ್ದಾರೆಂದು ಅಂದಾಜಿಸಲಾಗಿದೆ.
ಪ್ರವಾಸಿ ಭಾರತೀಯ ದಿವಸ್ 2017ರಲ್ಲಿ ಭಾಗವಹಿಸುವ ಎಲ್ಲ ಪ್ರತಿನಿಧಿಗಳ ಆಶೋತ್ತರಗಳಿಗೆ ಕರ್ನಾಟಕವು ಅವಕಾಶಗಳನ್ನು ಒದಗಿಸಲಿದೆ. ಜೊತೆಗೆ ಅನಿವಾಸಿ ಭಾರತೀಯ ಸಮುದಾಯದ ಬಂಡವಾಳ ಹೂಡಿಕೆದಾರರಲ್ಲಿ ಆಸಕ್ತಿ ಹುಟ್ಟಿಸಲು ಅರ್ಥಗರ್ಭಿತ ಅಧಿವೇಶನವನ್ನು ರಾಜ್ಯವು ಹಮ್ಮಿಕೊಂಡಿದೆ. ಪ್ರತಿಯೊಬ್ಬರ ಆಸಕ್ತಿಗೆ ಹಾಗೂ ಸಮಯಕ್ಕೆ ಅನುಗುಣವಾಗಿ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸಲು ವಿಶೇಷ ಪ್ಯಾಕೇಜ್ ಪ್ರವಾಸ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಚಿವರಾದ ಆರ್.ವಿ.ದೇಶಪಾಂಡೆ, ಪ್ರಿಯಾಂಕ್ ಖರ್ಗೆ, ಹಿರಿಯ ಅಧಿಕಾರಿಗಳಾದ ಡಿ.ವಿ.ಪ್ರಸಾದ್, ಗೌರವ್ ಗುಪ್ತ, ಅತುಲ್ ಕುಮಾರ್ ತಿವಾರಿ, ವಿದೇಶಾಂಗ ಇಲಾಖೆ ಧ್ಯಾನೇಷ್ವರ್ ಎಂ.ಮೂಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.