ರಾಜಧಾನಿಯಲ್ಲೊಂದು ಸುಸಜ್ಜಿತ ಹಜ್ ಭವನ
ಭವನದ ಅದ್ಭುತ ವಿನ್ಯಾಸ ಹಾಗೂ ಸಮಗ್ರತೆಯನ್ನು ನೋಡಿದರೆ,
ಸುದೀರ್ಘ ಕಾಯುವಿಕೆ ಸಾರ್ಥಕ ಎನಿಸುತ್ತದೆ.
ರಾಜ್ಯ ರಾಜಧಾನಿಗೆ ಈಗ ಹಜ್ ಭವನದ ಹೆಗ್ಗಳಿಕೆ. ಹಜ್ ಯಾತ್ರಿಕರಿಗಾಗಿ ಸೌದಿ ಅರೇಬಿಯಾದ ಜಿದ್ದಾಗೆ ಪ್ರಯಾಣಿಸಲು ನೇರ ವಿಮಾನ ಸೌಲಭ್ಯ ಆರಂಭವಾದ ಎರಡು ದಶಕ ಬಳಿಕ ಇದೀಗ ಸುಸಜ್ಜಿತ ಹಜ್ ಭವನ ಯಾತ್ರಿಕರ ಆತಿಥ್ಯಕ್ಕೆ ಮುಕ್ತವಾಗಿದೆ.
ಥಣಿಸಂದ್ರ ಮುಖ್ಯರಸ್ತೆಯಲ್ಲಿ ನಿರ್ಮಾಣವಾಗಿರುವ ಭವ್ಯ ಭವನವನ್ನು ನೋಡಿದರೆ, ಸುದೀರ್ಘ ಕಾಯುವಿಕೆಗೆ ಕೊನೆಗೂ ಲ ಸಿಕ್ಕಿದೆ ಎನ್ನಬಹುದು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 15 ಕಿಲೋಮೀಟರ್ ದಕ್ಷಿಣಕ್ಕೆ ಇರುವ ಈ ವೈಭವೋಪೇತ ಹಜ್ ಭವನ ಗ್ರೆನಡಾದ ಅಲ್-ಹಮರಾ ಅರಮನೆಯನ್ನು ಹೋಲುತ್ತದೆ. 2.75 ಎಕರೆ ವಿಶಾಲ ಪ್ರದೇಶದಲ್ಲಿ ತಲೆ ಎತ್ತಿದ ಈ ಭವನ ಎರಡು ಲಕ್ಷ ಚದರ ಅಡಿ ಸ್ಥಳಾವಕಾಶವನ್ನು, ವಾರ್ಷಿಕ ಹಜ್ ಯಾತ್ರೆಗಾಗಿ ಮಕ್ಕಾಗೆ ತೆರಳುವ ಯಾತ್ರಿಕರಿಗೆ ಕಲ್ಪಿಸಿದೆ. ಮೂರು ಈರುಳ್ಳಿ ಆಕಾರದ ಗೋಪುರಗಳಿಂದ ಕಂಗೊಳಿಸುವ ಭವನದ ಎದುರು ಬೃಹತ್ ಕಾರಂಜಿ ಕಣ್ಮನ ಸೆಳೆಯುತ್ತದೆ.
700 ಮಂದಿಗೆ ವಸತಿ
ಹಜ್ ಭವನದಲ್ಲಿ 100 ಸುಸಜ್ಜಿತ ಕೊಠಡಿಗಳಿದ್ದು, ಒಂದು ಬಾರಿಗೆ 600 ರಿಂದ 700 ಮಂದಿಗೆ ವಸತಿ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಹೊಂದಿದೆ. ನಾಲ್ಕನೆ ಮಹಡಿಯಲ್ಲಿರುವ ಪ್ರಾರ್ಥನಾ ಮಂದಿರದಲ್ಲಿ 1000 ಮಂದಿ ಏಕಕಾಲಕ್ಕೆ ನಮಾಝ್ ಮಾಡಬಹುದು. ಪುರುಷ ಹಾಗೂ ಮಹಿಳಾ ಯಾತ್ರಿಕರಿಗೆ ಪ್ರತ್ಯೇಕ ನಮಾಝ್‌ಗೆ ವ್ಯವಸ್ಥೆ ಇದ್ದು, ಅಂತೆಯೇ ಪ್ರತ್ಯೇಕ ವುಝು ಸೌಲಭ್ಯವೂ ಇದೆ. ಐದು ಮಹಡಿಯ ಕಟ್ಟಡಕ್ಕೆ ಏಳು ಬೃಹತ್ ಲ್‌ಟಿಗಳನ್ನೂ ಅಳವಡಿಸಲಾಗಿದೆ.
ವಿಶಾಲವಾದ ಹಜಾರದಲ್ಲಿ ರಿಸೆಪ್ಷನ್, ವಿಮಾನದ ಚೆಕ್ ಇನ್ ಕೌಂಟರ್, ಕ್ಲಾಕ್ ರೂಂ, ಇಮಿಗ್ರೇಷನ್, ಬ್ಯಾಗೇಜ್ ಸ್ಕ್ಯಾನ್ ಹಾಗೂ ಯಾತ್ರಿಗಳ ನಿರ್ಗಮನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಲಗೇಜ್ ಕೊಠಡಿಯಲ್ಲಿ ಏಕಕಾಲಕ್ಕೆ 500 ಸೂಟ್‌ಕೇಸ್‌ಗಳನ್ನು ಇಡಬಹುದಾಗಿದೆ. ಸುಮಾರು 700 ಆಸನ ಸಾಮರ್ಥ್ಯದ ಸಭಾಗೃಹ, 100 ಮಂದಿಯ ಸಮ್ಮೇಳನ ಸಭಾಂಗಣ ಮತ್ತು ಗ್ರಂಥಾಲಯ, ಈ ಭವ್ಯ ಭವನದ ಇತರ ಸೌಲಭ್ಯಗಳು.
ಮಳೆ ಕೊಯ್ಲು
ಇಷ್ಟೆಲ್ಲ ಸೌಲಭ್ಯಗಳ ಜತೆ ಇದು ಪರಿಸರ ಸ್ನೇಹಿ ಕೂಡಾ ಹೌದು. ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಮಳೆ ನೀರು ಸಂಗ್ರಹಕ್ಕಾಗಿಯೇ ಸುಮಾರು 10 ಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯದ ಬೃಹತ್ ಸಂಪ್ ನಿರ್ಮಿಸಲಾಗಿದೆ. ಸ್ನಾನ, ಬಟ್ಟೆ ತೊಳೆಯಲು ಹಾಗೂ ಉದ್ಯಾನವನಕ್ಕೆ ಇಲ್ಲಿಂದಲೇ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಇದರ ಜತೆಗೆ ಭವನಕ್ಕಾಗಿಯೇ ಪ್ರತ್ಯೇಕ ಕೊಳಚೆ ನೀರು ಸಂಸ್ಕರಣಾ ಘಟಕವೂ ಇದೆ. ಇದು ಇಲ್ಲಿ ಉತ್ಪತ್ತಿಯಾಗುವ ಸಂಪೂರ್ಣ ಕೊಳಚೆ ನೀರನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊಸ ನಿಯಮಾವಳಿಗಳ ಅನ್ವಯ, ದೊಡ್ಡ ಕಟ್ಟಡಗಳು ಇಂಥ ಸಂಸ್ಕರಣಾ ಘಟಕವನ್ನು ಹೊಂದಿರುವುದು ಕಡ್ಡಾಯವಾಗಿದ್ದು, ತಮ್ಮ ತ್ಯಾಜ್ಯ ನೀರನ್ನು ಬಿಡಬ್ಲ್ಯುಎಸ್‌ಎಸ್‌ಬಿ ಒಳಚರಂಡಿ ಲೈನ್‌ಗಳಿಗೆ ಬಿಡುವಂತಿಲ್ಲ. ಈ ಸಂಸ್ಕರಿತ ನೀರನ್ನು ಪಾಲಿಕೆಯಿಂದ ಸರಬರಾಜು ಆಗುವ ನೀರು ಸಂಗ್ರಹಕ್ಕೆ ಇರುವ ಸಂಪ್‌ಗಳಿಂದ ಹೊರತಾಗಿ ಪ್ರತ್ಯೇಕ ಸಂಪ್‌ಗಳಲ್ಲಿ ಶೇಖರಣೆಯಾಗಲಿದೆ. ಇದರ ಜತೆಗೆ ಮತ್ತೊಂದು ಸಂಪ್‌ನಲ್ಲಿ ಅಗ್ನಿಶಾಮಕ ವ್ಯವಸ್ಥೆಗೇ ಮೀಸಲಾದ ನೀರು ಶೇಖರಿಸಿ ಇಡಲಾಗಿದೆ. ಈ ಮೂರೂ ಸಂಪ್‌ಗಳು ತಲಾ 10 ಲಕ್ಷ ಲೀಟರ್ ಸಾಮರ್ಥ್ಯದವುಗಳು.
ಭೋಜನಾಲಯ,
ಕೆೆಟೇರಿಯಾ
ಹಜ್ ಭವನದಲ್ಲಿ ವಿಶಾಲವಾದ ಭೋಜನಗೃಹ ಇದ್ದು, ಅತ್ಯಾಧುನಿಕ ಅಡುಗೆ ವ್ಯವಸ್ಥೆ ಇದೆ. ಶೀಘ್ರದಲ್ಲೇ ಇಲ್ಲಿ ರೆಸ್ಟೋರೆಂಟ್ ಹಾಗೂ ಕೆೆಟೇರಿಯಾ ಆರಂಭವಾಗಲಿದೆ. ಇದರ ಜತೆಗೆ ಇಡೀ ಕಟ್ಟಡಕ್ಕೆ ವ್ಯಾಪಿಸುವಂತೆ ಸಾರ್ವಜನಿಕ ಘೋಷಣಾ ವ್ಯವಸ್ಥೆ ಅಳವಡಿಸಲಾಗಿದೆ. ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಾರ್ಡ್‌ಗಳನ್ನು ಹೊಂದಿರುವ 20 ಹಾಸಿಗೆ ಸೌಲಭ್ಯದ ಆಸ್ಪತ್ರೆಯೂ ಭವನದಲ್ಲಿದೆ. ವಿದ್ಯುತ್ ವಿಲವಾದ ಸಂದರ್ಭದಲ್ಲಿ ಪವರ್ ಬ್ಯಾಕಪ್ ಸೌಲಭ್ಯವೂ ಇದೆ. ಕಟ್ಟಡದ ತಳಭಾಗದಲ್ಲಿ 250 ವಾಹನಗಳನ್ನು ನಿಲ್ಲಿಸುವಷ್ಟು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ. ಭವ್ಯ ಕಟ್ಟಡವು ವಿಶಾಲವಾದ ಮೈದಾನ ಹಾಗೂ ಹೂಹಾಸು ಹಾಗೂ ಮರಗಳಿಂದ ಆವೃತವಾಗಿದೆ. ಮೂರು ವಿಶಾಲವಾದ ಪ್ರವೇಶದ್ವಾರಗಳ ಮೂಲಕ ಮುಖ್ಯ ಕಟ್ಟಡಕ್ಕೆ ಪ್ರವೇಶ ಪಡೆಯಬಹುದಾಗಿದ್ದು, ಬದಿಯಲ್ಲಿರುವ ಸರ್ವಿಸ್ ಗೇಟ್‌ಗಳು ಲಗೇಜ್ ಹಾಗೂ ವಿತರಣಾ ವ್ಯಾನ್‌ಗಳಿಗೆ ಅವಕಾಶ ಕಲ್ಪಿಸಿದೆ.
ಕೇಂದ್ರೀಯ ಹಜ್ ಸಮಿತಿಯಿಂದ ಕರ್ನಾಟಕಕ್ಕೆ ಸುಮಾರು ಆರು ಸಾವಿರ ಯಾತ್ರಿಕರನ್ನು ಕಳುಹಿಸುವ ಅವಕಾಶ ಕಲ್ಪಿಸಲಾಗಿದ್ದು, ಈ ಪೈಕಿ ಬಹುತೇಕ ಮಂದಿ ಬೆಂಗಳೂರಿನಿಂದ ಪ್ರಯಾಣಿಸುತ್ತಾರೆ. ಕೆಲವು ಮಂದಿ ಮಂಗಳೂರಿನಿಂದ ಹಾಗೂ ಹೈದರಾಬಾದ್ ಕರ್ನಾಟಕದ ಕೆಲ ಮಂದಿ ಹೈದರಾಬಾದ್‌ನಿಂದ ಯಾತ್ರೆ ಆರಂಭಿಸುತ್ತಾರೆ.
ಈ ಹಜ್‌ಭವನಕ್ಕೆ 2011ರಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದ ಗೌಡ ಶಿಲಾನ್ಯಾಸ ಮಾಡಿದ್ದರು. ಆದರೆ ನಿರ್ಮಾಣ ಕಾಮಗಾರಿ 2012ರಲ್ಲಿ ಆರಂಭವಾಗಿದೆ. ಕರ್ನಾಟಕ ಸರಕಾರ ಈ ಭವನ ನಿರ್ಮಾಣಕ್ಕೆ 60 ಕೋಟಿ ರೂಪಾಯಿ ನೀಡಿದ್ದು, ಶಿರ್ಕೆ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ ಲಿಮಿಟೆಡ್ ನಿರ್ಮಾಣ ಕಾರ್ಯವನ್ನು ನಿರ್ವಹಿಸಿದೆ. ಪ್ರೆಸ್ಟೀಜ್ ಡೆವಲಪರ್ಸ್ ನಿರ್ಮಾಣ ಸಲಹಾ ಸಂಸ್ಥೆಯಾಗಿದ್ದು, ಸಜ್ಜ್ಜಾದ್ ಆರ್ಕಿಟೆಕ್ಟ್ ಇಡೀ ಕಟ್ಟಡದ ಅಭಿವೃದ್ಧಿ ಕಾರ್ಯದ ಯೋಜನೆ, ವಿನ್ಯಾಸವನ್ನು ಸಿದ್ಧಪಡಿಸಿದೆ. ಈ ವರ್ಷದ ಹಜ್ ಯಾತ್ರೆಯ ಅವ ಮುಗಿದ ಬಳಿಕ ಕೆ2ಕೆ ಇಂಟೀರಿಯರ್ಸ್ ಆಂತರಿಕ ವಿನ್ಯಾಸ ನಿರ್ವಹಿಸಲಿದೆ. ಇಡೀ ಯೋಜನೆಯನ್ನು ಇಸ್ಲಾಮಿಕ್ ಸೌಂದರ್ಯ ಪ್ರಜ್ಞೆಗೆ ಅನುಗುಣವಾಗಿ ಸಿದ್ಧಪಡಿಸಲಾಗಿದೆ.
ಈ ಕಟ್ಟಡವನ್ನು ಸಮಾವೇಶಗಳನ್ನು ನಡೆಸಲು ಹಾಗೂ ಸಿಇಟಿ ಕೌನ್ಸೆಲಿಂಗ್‌ಗಾಗಿ ರಾಜ್ಯದ ಇತರ ಭಾಗಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಬಳಸಿಕೊಳ್ಳಲಾಗುತ್ತದೆ ಎಂದು ನಗರಾಡಳಿತ ಹಾಗೂ ಹಜ್ ವ್ಯವಹಾರಗಳ ಖಾತೆ ಸಚಿವ ಆರ್.ರೋಶನ್‌ಬೇಗ್ ಹೇಳಿದ್ದಾರೆ.
ದೇಶದ ಹಜ್ ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸಿದ ಬಳಿಕ ಅಂದರೆ 1996-97ರಿಂದೀಚೆಗೆ ಬೆಂಗಳೂರು, ಹಜ್‌ಯಾತ್ರಿಕರ ಯಾನ ಆರಂಭಿಸುವ ಕೇಂದ್ರವಾಗಿ ಮಾರ್ಪಟ್ಟಿದೆ. ಇಷ್ಟಾಗಿಯೂ ಹಜ್ ಯಾತ್ರಿಕರಿಗೆ ಅಗತ್ಯ ಸೌಲಭ್ಯವನ್ನು ಕಲ್ಪಿಸುವ ವ್ಯವಸ್ಥೆ ಹಲವು ವರ್ಷಗಳಿಂದ ಕನಸಾಗಿಯೇ ಉಳಿದಿತ್ತು. ಹಲವು ವರ್ಷಗಳ ಕಾಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಳವೇ ತೂಗುಯ್ಯಾಲೆಯಾಗಿದ್ದುದರಿಂದ ಈ ಸೌಲಭ್ಯ ವಿಳಂಬವಾಗಿತ್ತು. ಆದರೆ ಕೆಲಸ ಆರಂಭವಾದ ಬಳಿಕ, ಯೋಜನೆಯಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. 2008-2013ರ ಅವಯಲ್ಲಿ ರಾಜ್ಯದಲ್ಲಿ ಅಕಾರದಲ್ಲಿದ್ದ ಬಿಜೆಪಿ ಸರಕಾರ, ಇದಕ್ಕೆ 40 ಕೋಟಿ ರೂಪಾಯಿಗಳನ್ನು 2010ರಲ್ಲಿ ಮಂಜೂರು ಮಾಡಿತ್ತು. ನಂತರ ಬಂದ ಕಾಂಗ್ರೆಸ್ ಸರಕಾರ ಮತ್ತೆ 20 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.