ಹಿಂದುಳಿದವರೇ ಇನ್ನು ಮುಂದಕ್ಕೆ ಎಂದ ಅರಸು -ಕೆ.ಆರ್. ರಮೇಶ್‌ಕುಮಾರ್
‘ಎಕ್ಸೋ-70’ ವಿರುದ್ಧ ಪ್ರತಿಭಟನೆಗಿಳಿದ, ಪೊಲೀಸರಿಂದ ಲಾಠಿ ಏಟು ತಿಂದ ವಿದ್ಯಾರ್ಥಿಗಳ ಪೈಕಿ ಮಾಜಿ ಸ್ಪೀಕರ್, ಹಾಲಿ ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್ ಕೂಡ ಒಬ್ಬರು. ಹೋರಾಟದ ಬದುಕಿಗೆ, ಹೋರಾಟದಿಂದ ರಾಜಕಾರಣಿಗಳ ಸಹವಾಸಕ್ಕೆ, ಆನಂತರ ರಾಜಕಾರಣಕ್ಕೆ ಬಂದ ರಮೇಶ್‌ಕುಮಾರ್, ಬುದ್ಧಿ ಬೆಳೆಯುವ ಮೊದಲೇ ದೇವರಾಜ ಅರಸು ಅವರ ಶಿಷ್ಯರಾಗಿದ್ದರು. ತಮಗೇ ಗೊತ್ತಿಲ್ಲದಂತೆ ಅರಸು ಅವರನ್ನು ನಾಯಕನನ್ನಾಗಿ ಸ್ವೀಕರಿಸಿದ್ದರು. 1970ರಲ್ಲಿ ಗ್ಯಾಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಓದುತ್ತಿದ್ದ ವಿದ್ಯಾರ್ಥಿ ರಮೇಶ್‌ಕುಮಾರ್, ಬೆಂಗಳೂರು ಕಾರ್ಪೊರೇಷನ್ ಚುನಾವಣೆಗೆ ಅಭ್ಯರ್ಥಿಯಾದರು. ಪ್ರಬಲ ಜಾತಿ, ಪ್ರತಿಷ್ಠಿತ ಕೌಟುಂಬಿಕ ಹಿನ್ನೆಲೆ, ಅಪಾರ ಹಣ, ಅನುಭವಗಳಿಲ್ಲದ ಪುಟ್ಟ ಪೈಲ್ವಾನನನ್ನು ಚುನಾವಣಾ ಕಣಕ್ಕಿಳಿಸಿದ್ದರು ದೇವರಾಜ ಅರಸು. ಆ ಮೂಲಕ ವೃತ್ತಿವಂತ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅರಸು ಅವರಿಂದ ರಾಜಕಾರಣದ ದೀಕ್ಷೆ ಪಡೆದ ರಮೇಶ್‌ಕುಮಾರ್, ಅವರ ತತ್ವ ಸಿದ್ಧಾಂತಗಳನ್ನು ತಮ್ಮ ರಾಜಕೀಯ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದವರು. ರಾಜಕಾರಣದಲ್ಲಿ ಅಪರೂಪವೆನಿಸುವ ಖಚಿತ ಮಾತು, ದಿಟ್ಟ ನಿಲುವು, ದೂರದರ್ಶಿತ್ವ ವನ್ನು ಮೈಗೂಡಿಸಿಕೊಂಡವರು. ಶಿಸ್ತಿನ ಓದು, ಶ್ರದ್ಧೆಯ ಅಧ್ಯಯನಗಳಿಂದ ರಾಜನೀತಿ, ಸಮಾಜಶಾಸ, ಸಂವಿಧಾನವನ್ನಷ್ಟೇ ಅಲ್ಲ; ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಬಗ್ಗೆಯೂ ತರ್ಕಬದ್ಧವಾಗಿ ಮಾತನಾಡಬಲ್ಲ ಚತುರ ವಾಗ್ಮಿ. ಅಷ್ಟೇ ಸರಳವಾಗಿ ಜನಸಾಮಾನ್ಯರೊಡನೆ ಬೆರೆಯುವ ಸಜ್ಜನಿಕೆಯ ರಮೇಶ್‌ಕುಮಾರ್, ಯೂತ್ ಕಾಂಗ್ರೆಸ್ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಸಾಕಷ್ಟು ಸೇವೆ ಸಲ್ಲಿಸಿದ ನಂತರ, 1978ರ ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದು ಗೆದ್ದು ಮೊದಲ ಬಾರಿಗೆ ಶಾಸಕರಾಗಿ ವಿಧಾನಸೌಧ ಪ್ರವೇಶಿಸಿದರು. ಗುಂಡೂರಾವ್ ಸಚಿವ ಸಂಪುಟದ ಸದಸ್ಯರಾದ ಮಾಣಿಕ್‌ರಾವ್‌ರ ಸಿಮೆಂಟ್ ಹಗರಣ ಮತ್ತು ಸಿ.ಎಂ. ಇಬ್ರಾಹೀಂರ ಕೃಷ್ಣ ಮಿಲ್ ಹಗರಣಗಳನ್ನು ಬಯಲಿಗೆಳೆದು ನೇರ, ನಿಷ್ಠುರ ರಾಜಕಾರಣಿ ಎಂದು ಹೆಸರಾದರು. ಅರಸು ನಿಧನಾನಂತರ ಜನತಾಪಕ್ಷ ಸೇರಿ, 1983ರಿಂದ ಇಲ್ಲಿಯವರೆಗೆ, ರೊಟೇಷನ್ ಸಿಸ್ಟಮ್‌ನಲ್ಲಿ ಗೆದ್ದು, ಸೋತು ರಾಜಕಾರಣದ ಏರಿಳಿತಗಳನ್ನು ಸಮನಾಗಿ ಸ್ವೀಕರಿಸಿ ಪಳಗಿದ ರಾಜಕಾರಣಿ ಎನಿಸಿಕೊಂಡರು. 1994ರಲ್ಲಿ, 43ನೆ ವಯಸ್ಸಿನಲ್ಲಿ, ಪ್ರತಿಷ್ಠಿತ ವಿಧಾನಸಭಾಧ್ಯಕ್ಷ ಹುದ್ದೆಯನ್ನು ಅಲಂಕರಿಸಿದರು. ಅರಸು ಅವರಿಂದ ಕಲಿತ ತತ್ವನಿಷ್ಠ ರಾಜಕಾರಣವನ್ನು ಪ್ರಯೋಗಕ್ಕಿಳಿಸಿ, ಆ ಸ್ಥಾನಕ್ಕೆ ಘನತೆ ಗೌರವವನ್ನು ತಂದರು. ಸದನವನ್ನು ಸರಿದೂಗಿಸಿಕೊಂಡು ಹೋದ ಹಿರಿಮೆಗೆ ಪಾತ್ರರಾಗಿ, ರಾಜಕೀಯ ಪಂಡಿತರಿಂದ ಪ್ರಶಂಸೆಗೊಳಗಾದರು. ಇಂತಹ ರಮೇಶ್‌ಕುಮಾರ್‌ಗೆ ಈಗ 65 ವರ್ಷ. ಅರಸು ಅವರನ್ನು ಭೇಟಿಯಾ ಗಿದ್ದು, ಕಂಡಾಕ್ಷಣ ಆಕರ್ಷಿತರಾಗಿ ಅವರ ಶಿಷ್ಯರಾಗಿದ್ದು, ಕೊನೆಯ ಕ್ಷಣದವರೆಗೂ ಅವರ ಒಡನಾಡಿಯಾಗಿದ್ದು... ಎಲ್ಲವನ್ನು ಅವರ ಮಾತುಗಳಲ್ಲೇ ಕೇಳಿ.
ಅರಸು ನಾಯಕನಾಗಿ ರೂಪುಗೊಂಡದ್ದು...
1969-70ರ ಸಂದರ್ಭ. ನಾನಾಗ ವಿದ್ಯಾರ್ಥಿ. ಗ್ಯಾಸ್ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದೆ. ಕೇಂದ್ರದಲ್ಲಿ ಇಂದಿರಾ ಗಾಂ ಪ್ರಧಾನಿಯಾಗಿದ್ದರು, ರಾಜ್ಯದಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಗಳಾಗಿದ್ದರು. ಆಗ ರಾಜ್ಯ ಸರಕಾರ ಜಪಾನ್‌ನಲ್ಲಿ ನಡೆಯಲಿದ್ದ ‘ಎಕ್ಸ್‌ಪೋ-70’ ಕಾರ್ಯಕ್ರಮಕ್ಕೆ ರಾಜ್ಯವನ್ನು ಪ್ರತಿನಿಸುವವರನ್ನು ಆಯ್ಕೆ ಮಾಡಿತ್ತು. ಆಯ್ಕೆಯಾದವರ ಪೈಕಿ ಹೆಚ್ಚಿನವರು ಅಕಾರಸ್ಥರ ಸಂಬಂಕರು, ಹಿತೈಷಿಗಳು, ಆಪ್ತರು ಆಗಿದ್ದರು. ಅಕಾರ ದುರುಪಯೋಗವಾಗಿತ್ತು. ಅದರ ವಿರುದ್ಧ ವಿದ್ಯಾರ್ಥಿಗಳಾದ ನಾವು ಪ್ರತಿಭಟಿಸಿದೆವು. ಆ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪೊಲೀಸರು ನಮ್ಮನ್ನು ಹಿಗ್ಗಾಮುಗ್ಗಾ ಥಳಿಸಿದರು. ಎಂ.ರಘುಪತಿಯೂ ಸೇರಿದಂತೆ ನಾವೊಂದಷ್ಟು ಗೆಳೆಯರು, ವಿರೋಧ ಪಕ್ಷದ ನಾಯಕರನ್ನು ನೋಡಲು ಶಾಸಕರ ಭವನದ ರೂಮ್ ನಂಬರ್ 2ರಲ್ಲಿದ್ದ ಅಂದಿನ ವಿಧಾನಸಭೆಯ ವಿರೋಧಪಕ್ಷದ ನಾಯಕರಾದ ಸಿದ್ದವೀರಪ್ಪನವರನ್ನು ನೋಡಲು ಹೋದೆವು.
ಇದಕ್ಕಿಂತ ಮುಂಚೆ, ಅಂದಿನ ದೇಶದ ರಾಜಕಾರಣದ ಸ್ಥಿತಿಗತಿಯನ್ನು ಅವಲೋಕಿಸಿದರೆ, ದೇವರಾಜ ಅರಸು ಅವರು ನಾಯಕನಾಗಿ ರೂಪುಗೊಂಡ ರೀತಿಯನ್ನು, ಮುಂಚೂಣಿಗೆ ಬಂದ ಬಗೆಯನ್ನು ಅರಿಯಬಹುದು. ಆ ಸಂದರ್ಭದಲ್ಲಿ, ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತ್ತು. ಪ್ರಧಾನಿ ಇಂದಿರಾ ಗಾಂ ವಿರುದ್ಧ ಒಳಗೊಳಗೇ ಬಂಡಾಯ ಶುರುವಾಗಿತ್ತು. ಕಾಕತಾಳೀಯವೆಂಬಂತೆ, ರಾಷ್ಟ್ರಪತಿ ಝಾಕಿರ್ ಹುಸೈನ್ ನಿಧನರಾದರು. ಅಧ್ಯಕ್ಷರ ಆಯ್ಕೆಗೆ ಚುನಾವಣೆ ಘೋಷಣೆಯಾಯಿತು. ಪ್ರಧಾನಿ ಇಂದಿರಾ, ತಮ್ಮ ಕಾಂಗ್ರೆಸ್ ಪಕ್ಷದ ಅಕೃತ ಅಭ್ಯರ್ಥಿ ಎಂದು ನೀಲಂ ಸಂಜೀವರೆಡ್ಡಿಯವರ ಹೆಸರನ್ನು ಸೂಚಿಸಿದರು. ಆದರೆ ಉಪರಾಷ್ಟ್ರಪತಿಯಾಗಿದ್ದ ವಿ.ವಿ.ಗಿರಿ, ತಮ್ಮನ್ನೇ ರಾಷ್ಟ್ರಪತಿಯನ್ನಾಗಿ ಮಾಡಬೇಕಿತ್ತು ಎಂದು ಸೆಟಗೊಂಡು, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದುಬಿಟ್ಟರು. ಚುನಾವಣಾ ಪ್ರಕ್ರಿಯೆ ಪ್ರಾರಂಭವಾದಾಗ, ಗೊಂದಲಕ್ಕೆ ಬಿದ್ದ ಇಂದಿರಾ ಗಾಂಯವರು, ಆತ್ಮಸಾಕ್ಷಿ ಮತದಾನಕ್ಕೆ ಅವಕಾಶವಿದೆ ಎಂದು ಘೋಷಿಸಿದರು. ಕಾಂಗ್ರೆಸ್‌ನೊಳಗಿನ ಭಿನ್ನಾಭಿಪ್ರಾಯ ತಾರ್ಕಿಕ ಅಂತ್ಯ ಕಂಡು, ಅಕೃತ ಅಭ್ಯರ್ಥಿ ರೆಡ್ಡಿ ಪರಾಭವಗೊಂಡರು. ಬಂಡಾಯ ಅಭ್ಯರ್ಥಿ ವಿ.ವಿ. ಗಿರಿ ಗೆದ್ದು ಇಂದಿರಾಗೆ ಮುಖಭಂಗವಾಯಿತು.
ಇಂದಿರಾ ವಿರುದ್ಧ ಸೆಟೆದುನಿಂತವರು
ಇದು ರಾಜಕಾರಣದ ಮತ್ತೊಂದು ಮಜಲಿಗೆ ಕಾರಣವಾಯಿತು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿದ್ದ ಇಂದಿರಾ ಗಾಂಯವರೇ ಅಭ್ಯರ್ಥಿ ಉಮೇದುವಾರಿಕೆಗೆ ಸಹಿ ಮಾಡಿ, ಆತ್ಮಸಾಕ್ಷಿ ಮತಕ್ಕೂ ಕರೆ ಕೊಟ್ಟಿದ್ದು, ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದು- ಇಂದಿರಾರವರ ನಾಯಕತ್ವಕ್ಕೆ ಬೆಲೆ ಮತ್ತು ಬೆಂಬಲವಿಲ್ಲ ಎನ್ನುವುದನ್ನು ಸಾರಿದಂತಲ್ಲವೇ ಎಂಬ ಚರ್ಚೆ ದೇಶಾದ್ಯಂತ ಶುರುವಾಯಿತು. ಜೊತೆಗೆ ಇಂದಿರಾ ವಿರೋ ಪಾಳೇಯವಾದ ಸಿಂಡಿಕೇಟ್- ತಮಿಳುನಾಡಿನ ಕಾಮರಾಜ್, ಮಹಾರಾಷ್ಟ್ರದ ಎಸ್.ಆರ್.ಪಾಟೀಲ್, ಪಶ್ಚಿಮ ಬಂಗಾಲದ ಅತುಲ್ಯ ಘೋಷ್, ಕರ್ನಾಟಕದ ನಿಜಲಿಂಗಪ್ಪರ ಕೈ ಮೇಲಾಯಿತು. ಇದೇ ಸೂಕ್ತ ಸಂದರ್ಭವೆಂದು ಭಾವಿಸಿದ ವಿರೋಗಳು, ಕಾಂಗ್ರೆಸ್‌ನಿಂದ ಇಂದಿರಾರನ್ನು ಉಚ್ಚಾಟಿಸಿಬಿಟ್ಟರು. ಆದರೆ, ಇಂದಿರಾ ಗಾಂಯವರ ಆಕರ್ಷಣೀಯ ವ್ಯಕ್ತಿತ್ವಕ್ಕೆ ಮಾರುಹೋದವರು; ಅವರ ಬಡವರ ಬಗೆಗಿನ ಕಾಳಜಿ, ಕಳಕಳಿ ಗೊತ್ತಿದ್ದವರು; ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ಧತಿಯಂತಹ ನಿಷ್ಠುರ ನಿರ್ಧಾರಗಳಿಂದಾಗಿ ಅವರ ಪರ ನಿಂತರು. ಉಚ್ಛಾಟನೆಯ ವಿರುದ್ಧ ಬೀದಿಗಿಳಿದರು. ಉಚ್ಛಾಟನೆ ಮಾಡಲು ಇವರ್ಯಾರು ಎಂದು ಕಾಂಗ್ರೆಸ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆಗಿಳಿದರು.
ಕಾಂಗ್ರೆಸ್ ವಿಭಜನೆಯಾಯಿತು. ನಿಜಲಿಂಗಪ್ಪನವರದು ಸಂಸ್ಥಾ ಕಾಂಗ್ರೆಸ್, ಇಂದಿರಾ ಗಾಂಯವರ ಬೆಂಬಲಿತರದ್ದು ಆಳುವ ಕಾಂಗ್ರೆಸ್. ಸಂಸ್ಥಾ ಕಾಂಗ್ರೆಸ್‌ನವರ ಬೆಂಬಲ ಹಿಂತೆಗೆತದಿಂದ ಕೇಂದ್ರ ಸರಕಾರ ಅಲ್ಪಮತಕ್ಕೆ ಇಳಿಯಿತು. ಸೋಷಲಿಸ್ಟರು, ಕಮ್ಯುನಿಸ್ಟರು ಬೆಂಬಲಿಸಿ ಸರಕಾರವನ್ನು ಪಾರು ಮಾಡಿದರು. ಇದರಿಂದ ಅವಮಾನಕ್ಕೀಡಾದ ನಿಜಲಿಂಗಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾದರು. ನಿಜಲಿಂಗಪ್ಪನವರ ವಿರುದ್ಧವಿದ್ದ, ಇಂದಿರಾ ಪರವಿದ್ದ ಬಿ.ಡಿ. ಜತ್ತಿಯವರ ಗುಂಪಿನಲ್ಲಿ ದೇವರಾಜ ಅರಸು, ಕೊಂಡಜ್ಜಿ ಬಸಪ್ಪ, ಆರ್.ಎಂ.ಪಾಟೀಲ್, ನಾಗರತ್ನಮ್ಮ, ಬದರಿ ನಾರಾಯಣ, ಬಸವಲಿಂಗಪ್ಪ, ದಯಾನಂದ ಸಾಗರ್ ಗುರುತಿಸಿಕೊಂಡಿದ್ದರು. ಇವರ ಜೊತೆಗೆ ಸಿದ್ದವೀರಪ್ಪ, ಚನ್ನಬಸಪ್ಪ, ಕೆ.ಎಚ್.ಪಾಟೀಲ್ ಬಂದು ಸೇರಿಕೊಂಡರು. ಅತ್ತ ಕಡೆಯಿಂದ ಅಝೀಝ್ ಸೇಠ್, ಕೆ.ಎಚ್.ರಂಗನಾಥ್, ಎಸ್.ಎಂ.ಕೃಷ್ಣ, ಲಕ್ಕಪ್ಪ, ಶಿವಾನಂದಸ್ವಾಮಿ, ಡಿ.ಬಿ.ಕಲ್ಮಣಕರ್, ಜಾರ್ ಶರ್ೀ ಜೊತೆಗೂಡಿದರು.
ಇವರೆಲ್ಲರೂ ಸೇರಿ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿ (ಅಡ್ಡಾಕ್) ರಚಿಸಿಕೊಂಡಿದ್ದರು. ಆದರೆ ಈ ಗುಂಪಿನ ನಾಯಕರಂತಿದ್ದ ಬಿ.ಡಿ. ಜತ್ತಿ ರಾಜ್ಯಪಾಲ ರಾಗಿ ನೇಮಕವಾಗಿ, ರಾಜ್ಯ ರಾಜಕಾರಣ ಬಿಟ್ಟು ಪುದುಚೇರಿಗೆ ತೆರಳಿದರು. ಹಿರಿಯ ನಾಯಕ ಕೆಂಗಲ್ ಹನುಮಂತಯ್ಯನವರು ಕೇಂದ್ರ ಕಾನೂನು ಮಂತ್ರಿಯಾಗಿ ದಿಲ್ಲಿಗೆ ಹೋದರು. ಇಲ್ಲಿ, ಕರ್ನಾಟಕದಲ್ಲಿ ಇಂದಿರಾ ಬೆಂಬಲಿತ ಗುಂಪಿನ ಕಾಂಗ್ರೆಸ್ ಪಕ್ಷ ನಾವಿಕನಿಲ್ಲದ ನಾವೆಯಂತಾಯಿತು. ಆದರೂ ನಾಯಕ ಅಂತ ಯಾರಾದರೂ ಬೇಕಲ್ಲ, ವಿಧಾನಸಭೆಯ ವಿರೋಧಪಕ್ಷದ ನಾಯಕರಾಗಿ ಸಿದ್ದವೀರಪ್ಪನವರು ಆಯ್ಕೆಯಾದರೆ, ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿಯನ್ನು ದೇವರಾಜ ಅರಸು ನಿಭಾಯಿಸಿದರು.
ಅರಸು ಆಗಮನಕ್ಕೆ ಹದವಾಗಿದ್ದ ನೆಲ
ಆ ಸಂದರ್ಭವೇ ಹಾಗಿತ್ತು. ನಾಡಿನ ನೆಲ ಹದವಾಗಿತ್ತು. ಹೊಸ ರಾಜಕಾರಣಕ್ಕೆ ಪಕ್ವಗೊಂಡಿತ್ತು, ಹೊಸ ನಾಯಕನ ಆಗಮನಕ್ಕೆ ಹಾತೊರೆಯುತ್ತಿತ್ತು. ಅಂತಹ ಸಂದರ್ಭದಲ್ಲಿ ಉದಯಿಸಿದ ನಾಯಕ ದೇವರಾಜ ಅರಸು. ನಾಡಿನ ಜನತೆಯ ನಾಡಿಮಿಡಿತ ಅರಿತಿದ್ದ, ಜನರ ನಿರೀಕ್ಷೆಯನ್ನು ಹುಸಿಗೊಳಿಸದ, ಪ್ರಜಾಪ್ರಭುತ್ವವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ದ ಮಹಾನ್ ವ್ಯಕ್ತಿ. ಸಾಮಾಜಿಕ ಕ್ರಾಂತಿಯನ್ನು ಕಣ್ಣಮುಂದಿರಿಸಿದ ಕಲಿ. ರಾಜಕೀಯವಾಗಿ, ಸಾಮಾಜಿಕವಾಗಿ ಆಧುನಿಕ ಕರ್ನಾಟಕದ ಚಿಂತನೆಗಳನ್ನು ರೂಪಿಸಿದ ಮುತ್ಸದ್ದಿ. ಇದೇ ಸಂದರ್ಭದಲ್ಲಿ ನಾವು, ವಿದ್ಯಾರ್ಥಿಗಳು, ಪೊಲೀಸರಿಂದ ಒದೆ ತಿಂದಿದ್ದೆವಲ್ಲ, ಅದನ್ನು ಹೇಳಿಕೊಳ್ಳಲು ಅಂದಿನ ವಿರೋಧಪಕ್ಷದ ನಾಯಕರನ್ನು ಹುಡುಕಿಕೊಂಡು, ಶಾಸಕರ ಭವನಕ್ಕೆ ಹೋದೆವು. ಅಲ್ಲಿ ನಾನು ಮೇಲೆ ಹೇಳಿದ ಅಷ್ಟೂ ನಾಯಕರಿದ್ದರು. ನಾವು ಹುಡುಗರು, ಸಿಕ್ಕಾಪಟ್ಟೆ ಸಿಟ್ಟು, ಉತ್ಸಾಹ, ಹುಮ್ಮಸ್ಸು ಎಲ್ಲವನ್ನು ಒಟ್ಟಿಗೆ ತಂದು ಕೊಂಡು, ಎಲ್ಲರೂ ಮಾತಾಡತೊಡಗಿದೆವು. ವಿಷಯ ಗೊಂದಲವಾಗಿ, ಯಾರಿಗೂ ಅರ್ಥವಾಗಲಿಲ್ಲ. ಆಗ, ದೇವರಾಜ ಅರಸು ಅವರು, ನನ್ನತ್ತ ಬೆರಳು ಮಾಡಿ, ‘‘ನೋಡಪ್ಪ, ನೀನು ಕರೆಕ್ಟಾಗಿ ಹೇಳ್ತಿದೀಯ, ನೀನು ಹೇಳಪ್ಪ’’ ಅಂದರು. ಇದು ಅರಸು ಅವರೊಂದಿಗಿನ ನನ್ನ ಮೊದಲ ಇಂಟರ್ಯಾಕ್ಷನ್. ಭಾರೀ ಉತ್ಸಾಹದಿಂದ ನಡೆದ ಘಟನೆಯನ್ನು ವಿವರಿಸಿದೆ. ಅದು ವಿಧಾನಸಭೆಯಲ್ಲಿ ಚರ್ಚೆಯಾಗಿ, ದೊಡ್ಡ ಸುದ್ದಿಯಾಯಿತು. ಇದಾದ ಮೇಲೆ, ನಾವೆಲ್ಲ ಯೂತ್ ಕಾಂಗ್ರೆಸ್ ಮೆಂಬರ್‌ಗಳಾದೆವು. ರಾಜಕಾರಣವನ್ನು ತಲೆತುಂಬಿಕೊಂಡು ಓಡಾಡತೊಡಗಿದೆವು. ಒಂಥರಾ ಹುಚ್ಚಿನ ರೀತಿ ರಾಜಕಾರಣ ನಮ್ಮನ್ನು ಆವರಿಸಿತ್ತು. ಮುಂದೇನು ಅಂತಾನೆ ಗೊತ್ತಿಲ್ಲದ ಕಾಲ ಅದು.
ವಿದ್ಯಾರ್ಥಿಯೇ ಅಭ್ಯರ್ಥಿ
1970, ನವೆಂಬರ್-ಡಿಸೆಂಬರ್, ಬೆಂಗಳೂರು ಕಾರ್ಪೊ ರೇಷನ್ ಚುನಾವಣೆ ಡಿಕ್ಲೇರ್ ಆಯಿತು. ಕಾಂಗ್ರೆಸ್ ಇಬ್ಭಾಗ ಆದ ನಂತರ ನಡೆದ ಮೊದಲ ಚುನಾವಣೆ ಅದು. ಹಾಗಾಗಿ ಕಾಂಗ್ರೆಸ್‌ನ ಎರಡೂ ಬಣಕ್ಕೂ ಆ ಚುನಾವಣೆ ಅತಿ ಪ್ರತಿಷ್ಠೆಯದಾಗಿತ್ತು. ಇದಕ್ಕಿಂತ ಮುಂಚೆ ಶಿವಾಜಿನಗರ, ಹೊಸಪೇಟೆ ಮತ್ತು ಹುನಗುಂದ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆದಿತ್ತು. ಆ ಮೂರೂ ಕ್ಷೇತ್ರಗಳಲ್ಲಿ ಅರಸು ನಾಯಕತ್ವದ ಇಂದಿರಾ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗವಾಗಿತ್ತು. ಹೀಗಾಗಿ ಬೆಂಗಳೂರು ಕಾರ್ಪೊರೇಷನ್ ಎಲೆಕ್ಷನ್ ವಿಚಿತ್ರ ಕುತೂಹಲ ಕ್ರಿಯೇಟ್ ಮಾಡಿತ್ತು. ದೇವರಾಜ ಅರಸು ಪಕ್ಷದ ಅಧ್ಯಕ್ಷರು, ಟಿಕೆಟ್ ಹಂಚುವ ನಾಯಕರು. ಅರಸು ಆಗ, ಮಲ್ಲೇಶ್ವರಂ 10ನೆ ಕ್ರಾಸ್‌ನಲ್ಲಿ ವಾಸವಾಗಿದ್ದರು. ಬಾಡಿಗೆ ಮನೆ. ಅದು 4ನೆ ವಾರ್ಡಿಗೆ ಸೇರುತ್ತಿತ್ತು. ಅಲ್ಲಿಂದ ರಾಂದೇವ್ ಸ್ಪರ್ಸುತ್ತಿದ್ದರು. ಕೇಂದ್ರ ಮಂತ್ರಿ ಕೆಂಗಲ್ ಹನುಮಂತಯ್ಯನವರು, ಶಿಷ್ಯ ರಾಮಯ್ಯನವರಿಗೆ ಟಿಕೆಟ್ ಕೊಡಲು ಅರಸುಗೆ ಶಿಾರಸು ಮಾಡಿದ್ದರು. ರಾಮಯ್ಯ ಸಮಯಕ್ಕೆ ಸರಿಯಾಗಿ ಬರಲಿಲ್ಲ, ಬೇಸರಿಸಿಕೊಂಡ ರಾಂದೇವ್ ಅರ್ಜಿ ಹಾಕಲಿಲ್ಲ. ಹೀಗಾಗಿ ಅಧ್ಯಕ್ಷರ ಮನೆಯಿದ್ದ ವಾರ್ಡಿನಲ್ಲಿಯೇ ಅಭ್ಯರ್ಥಿ ಇಲ್ಲ ಎನ್ನುವಂತಹ ವಿಚಿತ್ರ ಪರಿಸ್ಥಿತಿ ಉದ್ಭವಿಸಿತು. ಆಡಿಕೊಳ್ಳುವವರಿಗೆ ಅಸವಾಯಿತು. ಅರಸು ಅವರಿಗೆ ಭಾರೀ ಮುಜುಗರಕ್ಕೀಡು ಮಾಡಿತು.
ಅದಕ್ಕಿಂತಲೂ ಹೆಚ್ಚಾಗಿ ಕಾಂಗ್ರೆಸ್ ಪಕ್ಷದೊಳಗೇ ಇದ್ದ, ಅರಸು ಅವರ ಬೆಳವಣಿಗೆ ಯನ್ನು ಸಹಿಸದ, ಇಂತಹ ಸಂದರ್ಭಕ್ಕಾಗಿಯೇ ಕಾಯುತ್ತಿದ್ದ ಕೆಲವರು, ಅರಸು ನಾಮಕಾವಾಸ್ತೆ ಪಟೇಲ ಎಂದು ಅಪಪ್ರಚಾರ ಮಾಡತೊಡಗಿದರು. ಆದರೆ ಅರಸು ಮಾತ್ರ ಅದ್ಯಾವುದಕ್ಕೂ ಪ್ರತಿಕ್ರಿಯಿಸದೆ ತಣ್ಣಗಿದ್ದರು. ತಣ್ಣಗಿದ್ದುಕೊಂಡೇ ನಮ್ಮ ಮನೆಯ ಕದ ತಟ್ಟಿದ್ದರು. ನಾನಾಗ ಮಲ್ಲೇಶ್ವರಂ 7ನೆ ಕ್ರಾಸ್‌ನಲ್ಲಿ, ನಮ್ಮಣ್ಣನ ಮನೆಯಲ್ಲಿದ್ದುಕೊಂಡು ಓದುತ್ತಿದ್ದ ವಿದ್ಯಾರ್ಥಿ. ರಾತ್ರಿ 11:15 ಇರಬಹುದು. ಫಿಯಟ್ ಕಾರಿನಲ್ಲಿ ಅರಸರೊಂದಿಗೆ ಬಂದ ಅಝೀಝ್ ಸೇಠ್, ‘‘ಬಡ್ಡೀಮಗ, ಕ್ಯಾಂಡಿಡೇಟ್ ಕಣೋ ನೀನು’’ ಎಂದರು. ನನಗೆ ಅಯೋಮಯ. ಆದರೆ ಅರಸು ಮಾತ್ರ ಎಲ್ಲವನ್ನು ಮೊದಲೇ ಯೋಚಿಸಿದ್ದ ವರಂತೆ ಅರ್ಜಿಗೆ ಸಹಿ ಪಡೆದು ಹೋಗಿಯೇ ಬಿಟ್ಟರು. ಬಿಎಸ್ಸಿ ಓದುತ್ತಿದ್ದ ವಿದ್ಯಾರ್ಥಿ ಕಾರ್ಪೊರೇಷನ್ ಎಲೆಕ್ಷನ್ನಿಗೆ ಕ್ಯಾಂಡಿಡೇಟ್ ಆದೆ. ಅನುಭವಿ ರಾಜಕಾರಣಿ ರಾಂದೇವ್ ಮುಂದೆ ನಾನು ಸೋತೆ. ಆದರೆ ನಮ್ಮ ಪಕ್ಷ ಗೆದ್ದು ಅಕಾರ ಹಿಡಿಯಿತು. ಮತ್ತೊಮ್ಮೆ ಆಳುವ ಪಕ್ಷಕ್ಕೆ ಅವಮಾನವಾಯಿತು. ಈ ಚುನಾವಣೆಯಲ್ಲಿ ನನಗೆ ಸ್ಪಷ್ಟವಾಗಿ ಕಂಡಿದ್ದು, ದೇವರಾಜ ಅರಸು ಅವರ ಸೋಷಿಯಲ್ ಇಂಜಿನಿಯರಿಂಗ್. ನನ್ನನ್ನೂ ಒಳಗೊಂಡಂತೆ, ಕಾರ್ಪೊರೇಷನ್ ಎಲೆಕ್ಷನ್‌ಗೆ ಆಝಾದ್ ನಗರದಿಂದ ಟೈಲರ್ ರಾಮದಾಸಪ್ಪ, ವಸಂತನಗರದಿಂದ ಹೊಟೇಲ್ ಸಪ್ಲೆಯರ್ ಚಾರಿ, ಸಂಪಂಗಿರಾಮನಗರದಿಂದ ಚಿಕ್ಕ ಹೊಟೇಲ್ ಇಟ್ಟುಕೊಂಡಿದ್ದ ರಾಮಚಂದ್ರಪ್ಪ, ಗವರ್ನಮೆಂಟ್ ಪ್ರೆಸ್‌ನಲ್ಲಿ ಕೆಲಸಕ್ಕಿದ್ದ ಲಕ್ಕಣ್ಣ(ಮೇಯರ್ ಆಗಿದ್ದವರು)ನಂತಹ ಹೆಸರಿಲ್ಲದ, ಹಣವಿಲ್ಲದ, ಜಾತಿ ಬಲವಿಲ್ಲದ, ತಳಸಮುದಾಯಗಳಿಂದ ಬಂದ ಹೊಸಬರನ್ನು ಕಣಕ್ಕಿಳಿಸಿದ್ದರು.
ಇನ್ನುಮುಂದಕ್ಕೆ ಅವರೇ...
ಹಿಂದುಳಿದ ವರ್ಗಗಳಿಂದ ಬಂದವರನ್ನು ದೇವರಾಜ ಅರಸರು ಕಣಕ್ಕಿಳಿಸಲು ಕಾರಣ, ಕರ್ನಾಟಕದ ಜನರ ನಾಡಿಮಿಡಿತವನ್ನು ಅರಿತು ಅರಗಿಸಿಕೊಂಡಿದ್ದು. ಅರಸು ಅವರಿಗೆ ಜಾತಿಗಳ ಬಗ್ಗೆ ನಂಬಿಕೆ ಇರಲಿಲ್ಲ. ಆದರೆ ಯಾವ ಜಾತಿಯ ಜನ ಹೇಗೆ ವರ್ತಿಸುತ್ತಾರೆ, ಅವರ ಸಾಮಾಜಿಕ, ಆರ್ಥಿಕ ಸ್ಥಿತಿ ಹೇಗಿದೆ ಎಂಬುದರ ಸಂಪೂರ್ಣ ಅರಿವಿತ್ತು. ಆ ನಿರ್ಲಕ್ಷಿತ ಸಮುದಾಯಗಳಿಗೆ ರಾಜಕೀಯ ಅಕಾರವನ್ನು ಕೊಡಬೇಕೆಂಬ ಅದಮ್ಯ ಹಂಬಲವಿತ್ತು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು, ಬೆಳೆದರು ಮತ್ತು ನಮ್ಮಂಥವರನ್ನು ಬೆಳೆಸಿದರು. ಇದು ಇನ್ನಷ್ಟು ನಿಚ್ಚಳವಾಗಿ ಕಂಡಿದ್ದು, 1971ರ ಲೋಕಸಭೆ ಚುನಾವಣೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ. ದೇವರಾಜ ಅರಸರ ಪಕ್ಷದ ಅಭ್ಯರ್ಥಿಗಳು ಯಾವ ಹಿನ್ನೆಲೆಯೂ ಇಲ್ಲದವರು, ಅತ್ಯಂತ ಕಡಿಮೆ ಜನಸಂಖ್ಯೆಯುಳ್ಳ ಜಾತಿಯವರು ಮತ್ತು ರಾಜಕಾರಣಕ್ಕೇ ಹೊಸಬರು. ಅಲ್ಲಿಯವರೆಗೂ ಯಾವ ರಾಜಕೀಯ ಪಕ್ಷವೂ ಗುರುತಿಸದಂತಹ ಅಭ್ಯರ್ಥಿಗಳನ್ನು ಅರಸು ಗುರುತಿಸಿ, ಕಣಕ್ಕಿಳಿಸಿದ್ದರು. ಆ ಪಟ್ಟಿಯನ್ನು ನೋಡಿ ಸಂಸ್ಥಾ ಕಾಂಗ್ರೆಸ್ಸಿಗರು ಲೇವಡಿ ಮಾಡಿದರು. ಅಷ್ಟೇ ಅಲ್ಲ, ನಮ್ಮ ಪಕ್ಷದವರೇ ಅರಸು ಅವರನ್ನು ತರಾಟೆಗೆ ತೆಗೆದುಕೊಂಡು ಕೂಗಾಡಿದರು.
ಪಾರ್ಟಿ ಆಫೀಸಿನಲ್ಲಿ ಸಭೆ, ಲಿಂಗಾಯತ ಕೋಮಿನ ಹಿರಿಯ ನಾಯಕರೊಬ್ಬರು, ‘‘ಹುಚ್ಚು ಹಿಡಿದಿದೆಯಾ ನಿನಗೆ, ಯಾರನ್ನು ಎಲ್ಲಿ ಅಭ್ಯರ್ಥಿ ಮಾಡಬೇಕೆಂದು ಗೊತ್ತ, ಅವನಿಗೆ ಮೂರು ಓಟು ಬರಲ್ಲ’’ ಎಂದು ಸಿಟ್ಟಿಗೆದ್ದರು. ಎಲ್ಲವನ್ನೂ ಕೇಳಿಸಿಕೊಳ್ಳುತ್ತ ತಣ್ಣಗೆ ಕೂತಿದ್ದ ಅರಸು ಎದ್ದು ನಿಂತರು. ಆಜಾನುಬಾಹು. ಆ ನಿಲುವೇ ಗೌರವ ತರುವಂಥಾದ್ದು. ‘‘ನಿಮಗೆ ಇತಿಹಾಸ ಅರ್ಥ ಆಗ್ತಾಯಿಲ್ಲ. ಜನ ತಿರುಗಿ ಬಿದ್ದಿದ್ದಾರೆ ಅನ್ನೋದು ಗೊತ್ತಾಗ್ತಿಲ್ಲ. ಹಳೆ ಕಂದಾಚಾರದಲ್ಲೇ ಇದ್ದೀರ. ಸಿಟ್ಟು ಮಾಡಿಕೊಂಡು ಬಂದುಬಿಟ್ರೆ ಇಂದಿರಾ ಕಾಂಗ್ರೆಸ್‌ಆಗಲ್ಲ. ಸಿದ್ಧಾಂತಾನೂ ಅರ್ಥ ಮಾಡಿಕೋಬೇಕು. ಇನ್ನುಮುಂದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಇಂಥ ಅವಕಾಶಗಳು ಬಂದಾಗ, ಇಷ್ಟು ದಿನ ನಿಮ್ಮ ಸೇವೆ ಮಾಡಿಕೊಂಡಿದ್ರಲ್ಲ, ನಿಮ್ಮ ಪರಿಚಾರಕರಾಗಿದ್ದರಲ್ಲ- ನಿಮ್ಮ ಬಟ್ಟೆ ಒಗೆದುಕೊಂಡು, ಕಾಲೊತ್ತ್ತಿಕೊಂಡು, ಕ್ಷೌರ ಮಾಡಿಕೊಂಡು, ಗಾಡಿ ಓಡಿಸಿಕೊಂಡು, ನೀವು ಹೇಳಿದ ಕೆಲಸ ಮಾಡಿಕೊಂಡಿದ್ದರಲ್ಲ, ಅವರೇ ಇನ್ನು ಮುಂದಕ್ಕೆ ಬರೋದು’’ ಎಂದರು. ಅಂತಹ ಜಾತಿ ಜನಾಂಗಗಳಿಂದ ಬಂದವರನ್ನೇ ಲೋಕಸಭೆಗೆ ಅಭ್ಯರ್ಥಿಗಳನ್ನಾಗಿ ಮಾಡಿದರು.
ದೇವರಾಜ ಅರಸರ ಮಾತಿನಲ್ಲಿದ್ದ ಖಚಿತತೆ, ಬಹುಸಂಖ್ಯಾತ ಜಾತಿಗಳಿಂದ ಬಂದ ನಾಯಕರೆದುರು ತೋರಿದ ದಿಟ್ಟತೆ, ಅಕಾರಕ್ಕೆ ಏರುವ ಮೊದಲೇ ತೋರಿದ ದೃಢತೆ... ಅವರ ಮುಂದಿನ ಮಾರ್ಗವನ್ನು, ಮುಂದಾಲೋಚನಾ ಕ್ರಮವನ್ನು ಅನಾವರಣಗೊಳಿಸಿತ್ತು.