ಕಲಬುರ್ಗಿ ಹತ್ಯೆ ಪ್ರಕರಣ: ಸ್ಕಾಟ್‌ಲ್ಯಾಂಡ್ ತಜ್ಞರ ಮೊರೆ ಹೋದ ಸಿಬಿಐ
ಬೆಂಗಳೂರು, ಆ.31: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆಗೆ ಬಳಸಲಾಗಿದ್ದ ಗುಂಡುಗಳ ಮಾದರಿಯನ್ನು ರಾಜ್ಯದ ಸಿಐಡಿ ಅಧಿಕಾರಿಗಳಿಂದ ಪಡೆದಿ ರುವ ಸಿಬಿಐ, ಅಂತಾರಾಷ್ಟ್ರೀಯ ತಜ್ಞರ ಪರಿಶೀಲನೆಗಾಗಿ ಸ್ಕಾಟ್‌ಲ್ಯಾಂಡ್ ಯಾರ್ಡ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದೆ ಎಂದು ತಿಳಿದು ಬಂದಿದೆ.
ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಹಾಗೂ ಕಲಬುರ್ಗಿ ಅವರ ಹತ್ಯೆಗೆ ಒಂದೇ ಮಾದರಿಯ ದೇಸಿ ನಿರ್ಮಿತ 7.56 ಎಂ.ಎಂ. ಪಿಸ್ತೂಲ್ ಬಳಸಲಾಗಿದೆ. ಈ ಮೂರು ಪ್ರಕರಣಗಳಲ್ಲಿ ಸಾಮ್ಯತೆಯನ್ನು ಹೋಲಿಸಿರುವ ತನಿಖಾಧಿಕಾರಿಗಳು, ಗುಂಡುಗಳ ಮಾದರಿಯ ಪರೀಕ್ಷೆಗಾಗಿ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸ್ ಪಡೆಯ ಅಪರಾಧ ವಿಧಿವಿಧಾನ ತಜ್ಞರ ಮೊರೆ ಹೋಗಿದ್ದಾರೆ.
ದಾಭೋಲ್ಕರ್ ಹಾಗೂ ಪನ್ಸಾರೆ ಅವರ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದೆ. ಆದರೆ, ಕಲಬುರ್ಗಿ ಅವರ ಹತ್ಯೆ ಕುರಿತು ರಾಜ್ಯದ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ನಗರದಲ್ಲಿ ವಾಸ್ತವ್ಯ ಹೂಡಿರುವ ಸಿಬಿಐ ಎಸ್ಪಿ ಎಂ.ವಿ.ಸಿಂಗ್ ನೇತೃತ್ವದ ಸಿಐಡಿ ಅಧಿಕಾರಿಗಳ ತಂಡವು ಗುಂಡುಗಳ ಮಾದರಿಯನ್ನು ಸಂಗ್ರಹಿಸಿದೆ.
2015ರ ಆ.30ರಂದು ಕಲಬುರ್ಗಿ, ಫೆ.20ರಂದು ಗೋವಿಂದ ಪನ್ಸಾರೆ ಹಾಗೂ 2013ರ ಆ.20ರಂದು ನರೇಂದ್ರ ದಾಭೋಲ್ಕರ್‌ರನ್ನು ಹತ್ಯೆ ಮಾಡಲಾಗಿತ್ತು. ಈ ಮೂರು ಹತ್ಯೆ ಪ್ರಕರಣಗಳಲ್ಲಿ ಸಾರಂಗ್ ಅಕೋಲ್ಕರ್, ವಿನಯ್‌ಪವಾರ್ ಹಾಗೂ ರುದ್ರಪಾಟೀಲ್ ಕೈವಾಡವಿರುವ ಕುರಿತು ಸಿಬಿಐ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಮೂವರು ಆರೋಪಿಗಳಿಗೆ ಸನಾತನ ಸಂಸ್ಥಾ ಸಂಘಟನೆಯೊಂದಿಗೆ ನಂಟಿದೆಯೆನ್ನಲಾಗಿದ್ದು, ಇವರುಗಳು ನೇಪಾಳದಲ್ಲಿನ ನಿರ್ಜನ ಪ್ರದೇಶದಲ್ಲಿ ಅಡಗಿಕೊಂಡಿರುವ ಕುರಿತು ಸಿಬಿಐ ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗೂ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.